ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಆರೋಗ್ಯ ತಪಾಸಣೆ ಶಿಬಿರ: 10,122 ಕೂಲಿಕಾರರಿಗೆ ಆರೋಗ್ಯ ಸಮಸ್ಯೆ!

ಜಿಲ್ಲಾ ಪಂಚಾಯಿತಿಯಿಂದ ನಡೆಸಿದ ಶಿಬಿರದಲ್ಲಿ ಹೊರಬಿದ್ದ ಮಾಹಿತಿ
Published 21 ಜುಲೈ 2023, 7:11 IST
Last Updated 21 ಜುಲೈ 2023, 7:11 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ 10,122 ಕೂಲಿಕಾರ್ಮಿಕರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಗುರುತಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಿಂದ ಕೈಗೊಂಡಿರುವ ‘ಗ್ರಾಮ ಆರೋಗ್ಯ’ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಜಿಲ್ಲಾ ಪಂಚಾಯಿತಿಯಿಂದ ಆರೋಗ್ಯ ತಪಾಸಣೆ ಶಿಬಿರವನ್ನು ಗ್ರಾಮ ಪಂಚಾಯಿತಿವಾರು ನಡೆಸಲಾಗುತ್ತಿದೆ.

ಜಿಲ್ಲೆಯಲ್ಲಿ 256 ಗ್ರಾಮ ಪಂಚಾಯಿತಿಗಳಿದ್ದು, ಉದ್ಯೋಗ ಖಾತರಿ ಯೋಜನೆಯಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡುವ ಉದ್ದೇಶದಿಂದ ಉದ್ಯೋಗ ಚೀಟಿಗಳನ್ನು ನೀಡಲಾಗುತ್ತಿದೆ. ಈವರೆಗೆ 3.30 ಲಕ್ಷ ಉದ್ಯೋಗ ಚೀಟಿಗಳನ್ನು ವಿತರಿಸಲಾಗಿದೆ. ಇವರಲ್ಲಿ, ಪರಿಶಿಷ್ಟ ಜಾತಿಯ 1,51,539, ಪರಿಶಿಷ್ಟ ಪಂಗಡದ 94,344 ಹಾಗೂ 5,85,292 ಮಂದಿ ಇತರರು ಸೇರಿದಂತೆ ಒಟ್ಟು 8,31,175 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 4,00,474 ಮಹಿಳೆಯರಿದ್ದಾರೆ. ನಿಯಮಿತವಾಗಿ ಕೆಲಸಕ್ಕೆ ಬರುವವರು 1.51 ಲಕ್ಷ ಮಂದಿ ಇದ್ದಾರೆ. ಇವರ ಆರೋಗ್ಯದ ಸ್ಥಿತಿಗತಿ ಅರಿಯಲು ಗ್ರಾಮ ಪಂಚಾಯಿತಿಗಳ ಮೂಲಕ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

ಏನಿದು ಕಾರ್ಯಕ್ರಮ?: ಮೇ 22ರಿಂದ ಆರಂಭವಾದ ಈ ಕಾರ್ಯಕ್ರಮದಲ್ಲಿ 1.10 ಲಕ್ಷ ಮಂದಿಯನ್ನು ತಪಾಸಣೆಗೆ ಒಳಪಡಿಸುವ ಗುರಿ ಹೊಂದಲಾಗಿತ್ತು. ಈವರೆಗೆ, 94,961 ಮಂದಿ ತಪಾಸಣೆಗೆ ಒಳಗಾಗಿದ್ದಾರೆ. ಶೇ 86.27ರಷ್ಟು ಗುರಿ ಸಾಧನೆಯಾಗಿದೆ. 10,122 ಕೂಲಿಕಾರ್ಮಿಕರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವುದನ್ನು ವೈದ್ಯಕೀಯ ತಂಡದವರು ಗುರುತಿಸಿದ್ದಾರೆ. ಸೂಕ್ತ ಚಿಕಿತ್ಸೆಗಾಗಿ ಶಿಫಾರಸನ್ನೂ ಮಾಡಿದ್ದಾರೆ.

‘ಗ್ರಾಮಗಳಲ್ಲಿ ಅಥವಾ ಕೆಲಸದ ಸ್ಥಳದಲ್ಲಿಯೇ ಮಧುಮೇಹ, ರಕ್ತದೊತ್ತಡ, ತೂಕ, ಎತ್ತರ, ಶೀತ, ಜ್ವರ, ರಕ್ತಪರೀಕ್ಷೆ ಮೊದಲಾದವುಗಳನ್ನು ನಡೆಸಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದವರನ್ನು ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ. ಅವರಿಗೆ ಉಚಿತವಾಗಿ ಆರೋಗ್ಯ ಸೇವೆ ದೊರೆಯುವಂತೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ಕೃಷ್ಣಂರಾಜು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಹಲವರಲ್ಲಿ ಉಸಿರಾಟದ ತೊಂದರೆ, ಮಧುಮೇಹ ನ್ಯೂನತೆ, ಅಧಿಕ ರಕ್ತದೊತ್ತಡ, ಬೆನ್ನುನೋವು, ಮೂಳೆನೋವು ಮೊದಲಾದವುಗಳು ಇರುವುದು ಕಂಡುಬಂದಿದೆ. ದೃಷ್ಟಿದೋಷ, ಶ್ರವಣದೋಷ, ಅರೆ ತಲೆನೋವು ಮತ್ತಿತರ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಮಧುಮೇಹ ನ್ಯೂನತೆ ಕಾಣಿಸಿಕೊಂಡಿರುವುದು ಹಾಗೂ ಅಧಿಕ ರಕ್ತದೊತ್ತಡದ ಸಮಸ್ಯೆ ಇರುವುದು ಅವರಿಗೆ ಗೊತ್ತೇ ಆಗಿರುವುದಿಲ್ಲ. ಏಕೆಂದರೆ, ಅವರು ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾಗಿರುವುದಿಲ್ಲ. ಶಿಬಿರದಲ್ಲಿ ತಪಾಸಣೆಗೆ ಒಳಗಾದ್ದರಿಂದ ಗೊತ್ತಾಗಿದ್ದು, ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ಸಲಹೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಉಚಿತವಾಗಿಯೇ ಕೊಡಿಸಲಾಗುತ್ತಿದೆ. ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಮೇ 22ರಿಂದ ನಡೆಯುತ್ತಿರುವ ಶಿಬಿರ ಗ್ರಾಮ ಆರೋಗ್ಯ ಕಾರ್ಯಕ್ರಮದಲ್ಲಿ ವ್ಯವಸ್ಥೆ ಕೂಲಿಕಾರರ ನೆರವಿಗೆ ಉಪಕ್ರಮ

ಕೆಲಸದ ಸ್ಥಳದಲ್ಲೇ ತಪಾಸಣೆ ಮಾಡುವುದರಿಂದ ಕೂಲಿಕಾರ್ಮಿಕರು ಆ ದಿನದ ಕೂಲಿ ಕಳೆದುಕೊಳ್ಳುವ ಪ್ರಸಂಗ ಬರುವುದಿಲ್ಲ
ಕೃಷ್ಣರಾಜು ಉಪ ಕಾರ್ಯದರ್ಶಿ (ಅಭಿವೃದ್ಧಿ) ಜಿಲ್ಲಾ ಪಂಚಾಯಿತಿ ಮೈಸೂರು

ಕೆಲಸದ ಸ್ಥಳಗಳಲ್ಲೇ ಶಿಬಿರ ‘ಶಿಬಿರ ಆಯೋಜಿಸಲು ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ಸಹಕಾರ ನೀಡುತ್ತಿವೆ. ನರ್ಸಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳು ಕೈ ಜೋಡಿಸುತ್ತಿದ್ದಾರೆ. ಎಲ್ಲರ ನೆರವಿನಿಂದ ಶಿಬಿರ ಯಶಸ್ವಿಯಾಗಿ ನಡೆಯುತ್ತಿದೆ. ಕೂಲಿಕಾರ್ಮಿಕರಿಗೆ ಕೆಲಸ ಕೊಡುವುದರೊಂದಿಗೆ ಅವರ ಆರೋಗ್ಯದ ರಕ್ಷಣೆಗೂ ಗಮನ ನೀಡಬೇಕು ಎನ್ನುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಅಗತ್ಯವಿದ್ದವರಿಗೆ ಔಷಧಿಯನ್ನೂ ನೀಡಲಾಗುತ್ತಿದೆ. ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಅದರಂತೆ ಮೊದಲೇ ಮಾಹಿತಿ ನೀಡಿ ಶಿಬಿರ ನಡೆಸಲಾಗುತ್ತಿದೆ. ಇದು ಮುಂದುವರಿಯಲಿದೆ’ ಎನ್ನುತ್ತಾರೆ ಕೃಷ್ಣಂರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT