ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಸರ್ಕಾರಿ ವಾಹನಗಳಲ್ಲಿ ಕಾಣದ ಎಚ್ಎಸ್‌ಆರ್‌ಪಿ!

Published 1 ಫೆಬ್ರುವರಿ 2024, 6:09 IST
Last Updated 1 ಫೆಬ್ರುವರಿ 2024, 6:09 IST
ಅಕ್ಷರ ಗಾತ್ರ

ಮೈಸೂರು: ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸಿಕೊಳ್ಳಲು ಸಾರ್ವಜನಿಕರು ದುಂಬಾಲು ಬಿದ್ದಿದ್ದಾರೆ. ಫಲಕ ಅಳವಡಿಕೆಗೆ ಫೆ.17 ಕೊನೆಯ ದಿನವಾದರೂ ಸರ್ಕಾರಿ ವಾಹನಗಳಿಗೆ ಮಾತ್ರ ಫಲಕ ಅಳವಡಿಕೆ ಕಾರ್ಯ ನಡೆಯುತ್ತಿಲ್ಲ.

ಮೈಸೂರು ಸೇರಿದಂತೆ ರಾಜ್ಯದಾದ್ಯಂತ ಇದೇ ಪರಿಸ್ಥಿತಿ ಇದ್ದು, ಆ ವಾಹನಗಳಿಗೆ ಫಲಕ ಕಡ್ಡಾಯವಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

2019ರ ಏಪ್ರಿಲ್ 1ಕ್ಕೂ ಮುಂಚೆ ನೋಂದಣಿಯಾಗಿರುವ ಎಲ್ಲಾ ಮಾದರಿಯ ವಾಹನಗಳಿಗೆ ಫಲಕ ಅಳವಡಿಸಲು ನಿಗದಿಪಡಿಸಿರುವ ಗಡುವು ಸಮೀಪಿಸುತ್ತಿದ್ದು, ಕೆಲವೇ ದಿನಗಳು ಉಳಿದಿವೆ. ಹೀಗಿದ್ದರೂ ತಮ್ಮ ವಾಹನಗಳಿಗೆ ಹೊಸ ಫಲಕ ಹಾಕಿಸಲು ಇಲಾಖೆಗಳು, ನಿಗಮ–ಮಂಡಳಿಗಳು, ಪ್ರಾಧಿಕಾರಗಳು, ಪೊಲೀಸ್ ಇಲಾಖೆ, ನ್ಯಾಯಾಂಗ ಇಲಾಖೆ ಕ್ರಮ ವಹಿಸಿಲ್ಲ.

ದೊಡ್ಡ ಸಂಖ್ಯೆ:

‘ಹೊಸ ಫಲಕವಿಲ್ಲದ ವಾಹನಗಳಿಗೆ ಫೆ.17ರ ನಂತರ ದಂಡ ವಿಧಿಸಲಾಗುವುದು’ ಎಂದು ಸಾರಿಗೆ ಇಲಾಖೆ ಹೇಳಿದೆ. ಸಾರಿಗೆ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರು ಜಂಟಿಯಾಗಿ ದಂಡ ವಿಧಿಸಲಿದ್ದಾರೆ. 1950ರಿಂದ ನೋಂದಣಿಯಾಗಿರುವ 2.15 ಕೋಟಿ ಹಳೆಯ ವಾಹನಗಳು ರಾಜ್ಯದಲ್ಲಿವೆ. ರಾಜ್ಯದಲ್ಲಿ ಸಂಚರಿಸುತ್ತಿರುವ ಸರ್ಕಾರಿ ವಾಹನಗಳಲ್ಲಿ (ಜಿ ನೋಂದಣಿ) ಶೇ 90ರಷ್ಟು 2019ಕ್ಕಿಂತ ಮೊದಲೇ ನೋಂದಣಿಯಾಗಿವೆ. ‘ಇಷ್ಟು ದೊಡ್ಡ ಸಂಖ್ಯೆಯ ಸರ್ಕಾರಿ ವಾಹನಗಳಿಂದ ದಂಡ ವಸೂಲಿ ನಿಜಕ್ಕೂ ನಡೆಯುವುದೇ’ ಎಂಬ ಕುತೂಹಲವೂ ಜನರಲ್ಲಿದೆ.

ಹೊಸ ಫಲಕವಿಲ್ಲದ ವಾಹನಗಳಿಗೆ ಮೊದಲನೇ ಬಾರಿಗೆ ₹ 1ಸಾವಿರ ದಂಡ ವಿಧಿಸಲಾಗುತ್ತದೆ. 2ನೇ ಬಾರಿ ಸಿಕ್ಕಿಹಾಕಿಕೊಂಡರೆ ₹ 2ಸಾವಿರ ದಂಡ ವಿಧಿಸಲು ಅವಕಾಶವಿದೆ.

‘ಜಿಲ್ಲಾಡಳಿತ, ಪಾಲಿಕೆ, ನ್ಯಾಯಾಂಗ, ಸಾರಿಗೆ, ಪೊಲೀಸ್, ಕಂದಾಯ ಇಲಾಖೆಗಳು, ಕೃಷಿ ಅಧಿಕಾರಿ, ಅಗ್ನಿಶಾಮಕ ದಳ, ಅಬಕಾರಿ ಇಲಾಖೆ, ಆದಾಯ ತೆರಿಗೆ ಹಾಗೂ ಕೆಎಸ್‌ಆರ್‌ಟಿಸಿ ವಾಹನಗಳಿಗೆ ಹೊಸ ಫಲಕವನ್ನು ಈವರೆಗೂ ಅಳವಡಿಸಿಲ್ಲ. ಸಾರ್ವಜನಿಕರಿಗೆ ದಂಡ ವಸೂಲಿ ಮಾಡಲು ತುದಿಗಾಲಿನಲ್ಲಿ ನಿಂತಿರುವ ಅಧಿಕಾರಿಗಳು ತಮ್ಮದೇ ಇಲಾಖೆಯ ವಾಹನಗಳಿಗೆ ಹೊಸ ಫಲಕ ಅಳವಡಿಸದೇ ಇರುವ  ಉದ್ದೇಶವೇನು? ನಿಯಮವು ಸರ್ಕಾರಕ್ಕೆ ಅನ್ವಯಿಸುವುದಿಲ್ಲವೇ’ ಎಂದು ಕೇಳುತ್ತಾರೆ ವಕೀಲ ಪಿ.ಜೆ. ರಾಘವೇಂದ್ರ.

ಮೈಸೂರಿನ ಪೊಲೀಸ್ ವಾಹನದಲ್ಲಿ ಹಳೆಯ ಫಲಕ
ಮೈಸೂರಿನ ಪೊಲೀಸ್ ವಾಹನದಲ್ಲಿ ಹಳೆಯ ಫಲಕ
ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ವಾಹನದಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಸಿಲ್ಲ
ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ವಾಹನದಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಸಿಲ್ಲ
ಫಲಕ ಅಳವಡಿಸಲು ಕೆಲವೇ ದಿನ ಬಾಕಿ ಹೊಸ ಫಲಕ: ಇಲಾಖೆಗಳ ಮೌನ ಸಾರ್ವಜನಿಕರಲ್ಲಿ ಕುತೂಹಲ
ಸರ್ಕಾರಿ ವಾಹನಗಳಿಗೂ ಎಚ್‌ಎಸ್‌ಆರ್‌ಪಿ ಕಡ್ಡಾಯ. ಅವರಿಗೆಂದು ವಿಶೇಷ ಕಾರ್ಯಕ್ರಮ ನಡೆಸುವುದಿಲ್ಲ. ಎಲ್ಲರೂ ಆನ್‌ಲೈನ್‌ನಲ್ಲಿ ನೋಂದಾಯಿಸಿ ಪಡೆಯಬೇಕು
ಸಿ.ದೇವಿಕಾ ಆರ್‌ಟಿಒ ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT