ಮೈಸೂರು: ‘ಚುನಾವಣೆ ಸಮಯದಲ್ಲಿ ಸಿದ್ಧಾಂತದ ಹಾದಿ ಹಿಡಿದು ಹುಟ್ಟಿಕೊಳ್ಳುವ ಸ್ಥಳೀಯ ಪಕ್ಷಗಳು ರಾಷ್ಟ್ರೀಯ ಪಕ್ಷಗಳ ಮತವನ್ನು ಒಡೆದು, ಚುನಾವಣೆಗಳಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ’ ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರ ಮತ್ತು ಇಂಡಿಯನ್ ಪಾಲಿಟಿಯು ‘18ನೇ ಲೋಕಸಭಾ ಚುನಾವಣೆ: ಮುಂಬರುವ ಚುನಾವಣೆಗಳನ್ನು ಎದುರಿಸುತ್ತಿರುವ ರಾಜ್ಯಗಳ ಮೇಲಿನ ಪರಿಣಾಮ’ ಕುರಿತು ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
‘ರಾಷ್ಟ್ರೀಯ ಪಕ್ಷಗಳು ತಮ್ಮ ಆಡಳಿತಾವಧಿಯಲ್ಲಿ ಮಾಡಿದ ತಪ್ಪುಗಳನ್ನು ಸ್ಥಳೀಯ ಪಕ್ಷಗಳು ಸಮರ್ಪಕವಾಗಿ ಬಳಸುತ್ತವೆ. ಆ ವಿಚಾರಗಳು ಲೋಕಸಭೆಯಲ್ಲಿ ಸಣ್ಣದಾಗಿ ಸದ್ದು ಮಾಡಿದ್ದರೆ, ವಿಧಾನಸಭೆಯ ವೇಳೆ ದೊಡ್ಡ ಸಂಖ್ಯೆಯ ಮತವನ್ನು ಬಾಚಿಕೊಳ್ಳಲು ನೆರವಾಗುತ್ತವೆ’ ಎಂದರು.
‘ಕರ್ನಾಟಕದ ಚುನಾವಣಾ ಇತಿಹಾಸದಲ್ಲಿ ವಿಶಿಷ್ಟ ಸಂಸ್ಕೃತಿಯಿದ್ದು, ಮತದಾರ ವಿಧಾನ ಸಭೆ ಹಾಗೂ ಲೋಕಸಭೆಗೆ ಬೇರೆ, ಬೇರ ಪಕ್ಷಕ್ಕೆ ಮತ ಹಾಕುತ್ತಾನೆ. ಇದರ ಹಿಂದಿನ ಕಾರಣವೇನು ಎಂಬುದನ್ನು ತಿಳಿಯುವ ವಿಸ್ತೃತ ಅಧ್ಯಯನ ಅಗತ್ಯವಿದೆ. ಪಕ್ಷಗಳು ಮತದಾರರನ್ನು ಸೆಳೆಯುವಲ್ಲಿ ಯಾಕೆ ಸೋಲುತ್ತವೆ ಎಂಬುದರ ಪರಾಮರ್ಶೆ ಆಗಬೇಕಿದೆ’ ಎಂದು ಸಲಹೆ ನೀಡಿದರು.
‘18ನೇ ಲೋಕಸಭೆ ಚುನಾವಣೆಯ ಸಮಯದಲ್ಲಿ ಬಿಜೆಪಿ ಮಾಡಿದ ತಪ್ಪುಗಳಿಂದ ಅವರಿಗೆ ನಿರೀಕ್ಷಿತ ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ರೈತ ಹೋರಾಟಗಾರರನ್ನು ನಡೆಸಿಕೊಂಡ ವಿಧಾನ, ಸಂವಿಧಾನ ತಿದ್ದುಪಡಿಯ ಹೇಳಿಕೆಗಳು ಅವರಿಗೆ ಮುಳುವಾದವು. ಭಿನ್ನಾಭಿಪ್ರಾಯದ ಕೊರತೆಯಿಂದ ಇತರೆ ಪಕ್ಷಗಳೂ ಅದರ ಲಾಭ ಪಡೆಯುವಲ್ಲಿ ವಿಫಲವಾದವು’ ಎಂದು ಅಭಿಪ್ರಾಯಪಟ್ಟರು.
‘ನಿರುದ್ಯೋಗ ದೇಶದ ಜ್ವಲಂತ ಸಮಸ್ಯೆಯಾಗಿ ಉಳಿದುಬಿಟ್ಟಿದೆ. ಆರೋಗ್ಯ, ಸ್ವಚ್ಛತೆ ಮುಂತಾದ ಮೂಲ ಸೌಕರ್ಯ ಒದಗಿಸುವಲ್ಲಿ ಪಕ್ಷಗಳು ವಿಫಲವಾಗಿವೆ. ಈ ಬಗ್ಗೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಆಕ್ಷೇಪ ಕೇಳಿ ಬಂದಿವೆ. ಭಾರತದಲ್ಲಿ ಮಧ್ಯಮ ವರ್ಗಕ್ಕಿಂತ ಕೆಳಗಿರುವವರಿಗಾಗಿ ಯೋಜನೆಗಳನ್ನು ರೂಪಿಸಬೇಕಿದೆ’ ಎಂದು ನುಡಿದರು.
ಮೈಸೂರು ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಪ್ರೊ.ವಿ.ಕೆ.ನಟರಾಜ್, ಕೇಂದ್ರದ ನಿರ್ದೇಶಕ ಪ್ರೊ.ಸೋಮಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.