ಹಂಪಾಪುರ: ಗೌರಿ– ಗಣೇಶ ಹಬ್ಬದ ಅಂಗವಾಗಿ ಸಾಂಪ್ರದಾಯಿಕ ಬಿದಿರಿನ ಮೊರಕ್ಕೆ ಬೇಡಿಕೆ ಹೆಚ್ಚಿದೆ.
ಗೌರಿ ಹಬ್ಬದಲ್ಲಿ ಮಹಿಳೆಯರಿಗೆ ಬಾಗಿನ ನೀಡುವ ಸಂಪ್ರದಾಯ ಆಚರಣೆ ಬೇಡಿಕೆ ಹೆಚ್ಚಾಗಲು ಕಾರಣ. ಕಳೆದ ಮೂರ್ನಾಲ್ಕು ದಿನಗಳಿಂದ ಎಚ್. ಡಿ.ಕೋಟೆ ತಾಲ್ಲೂಕಿನಾದ್ಯಂತ ಪಟ್ಟಣ ಸೇರಿದಂತೆ ವಿವಿಧ ಹೋಬಳಿಗಳಲ್ಲಿ ನಡೆಯುವ ಸಂತೆಗಳಲ್ಲಿ ಬಿದಿರಿನ ಮೊರಗಳ ಮಾರಾಟ ಭರಾಟೆ ಜೋರಾಗಿದೆ.
ಹಬ್ಬದಲ್ಲಿ ಮಾತ್ರ ಬಿದಿರಿನ ಮೊರಕ್ಕೆ ಬೇಡಿಕೆ ಇದೆ, ಉಳಿದಂತೆ ಬೇರೆ ದಿನಗಳಲ್ಲಿ ಬೇಡಿಕೆ ಇರುವುದಿಲ್ಲ. ಸಾಮಾನ್ಯವಾಗಿ ಒಂದು ಜೊತೆ ಮೊರಕ್ಕೆ ₹ 150 ಇರುತ್ತದೆ. ಹಬ್ಬ ಇರುವುದರಿಂದ ಬೆಲೆ ₹ 200ರಿಂದ ₹300 ಆಗಿದೆ. ದರ ಹೆಚ್ಚಾಗಿದ್ದರೂ ಖರೀದಿ ಬಿರುಸಿನಿಂದಲೇ ನಡೆದಿದೆ.
ಮೊರ ತಯಾರಿಕೆಗೆ ಪೆಟ್ಟು: 'ಇತ್ತೀಚ್ಚಿನ ದಿನಗಳಲ್ಲಿ ಬಿದಿರು ಮಾಯವಾಗಿರುವುದರಿಂದ ಮತ್ತು ಪ್ಲಾಸ್ಟಿಕ್ ಮೊರಗಳ ಬಳಕೆಯಿಂದ ಮೊರಗಳ ತಯಾರಿಕೆಗೆ ಪೆಟ್ಟು ಬಿದ್ದಿದೆ. ಎಚ್.ಡಿ. ಕೋಟೆ ತಾಲ್ಲೂಕಿನ ಬಸವನಗಿರಿ ಹಾಡಿ, ಬೇಗೂರು ಹುಣಸೇಕುಪ್ಪೆ ಹಾಡಿಗಳಲ್ಲಿ ಆದಿವಾಸಿಗಳು ಮೊರಗಳನ್ನು ಹೆಣೆದು ಮಾರುತ್ತಿದ್ದರು. ಪ್ಲಾಸ್ಟಿಕ್ ಮೊರಗಳ ಹಾವಳಿಯಿಂದಾಗಿ ನಮ್ಮ ಆದಿವಾಸಿಗಳು ಬಿದಿರು ಉತ್ಪನ್ನಗಳ ತಯಾರಿಕೆಯನ್ನು ನಿಲ್ಲಿಸಿದ್ದಾರೆ’ ಎಂದು ಆದಿವಾಸಿ ಮುಖಂಡ ಕಾಳ ಕಲ್ಕರ್ ಬೇಸರ ವ್ಯಕ್ತಪಡಿಸಿದರು.
ಒಂದು ಬಿದಿರಿಗೆ ಆರು ಮೊರ: 1 ಬಿದಿರಿನ ಬೆಲೆ ₹ 300ರಿಂದ ₹350 ಇರುತ್ತದೆ. ಒಂದು ಬಿದಿರಿನಿಂದ ಆರೇಳು ಮೊರಗಳನ್ನು ತಯಾರಿಸಬಹುದಾಗಿದ್ದು, ಒಬ್ಬ ವ್ಯಕ್ತಿ ಒಂದು ದಿನದಲ್ಲಿ 6 ಮೊರಗಳನ್ನು ತಯಾರಿಸಬಹುದಾಗಿದೆ' ಎನ್ನುತ್ತಾರೆ ಬಿದಿರಿನ ಮೊರದ ತಯಾರಕಿ ಗೌರಮ್ಮ.
ಭಾಗಿನಕ್ಕೆ ಬೇಕು ಬಿದಿರಿನ ಮೊರ: 'ಬಿದಿರಿನ ಮರದ ಬಾಗಿನದಲ್ಲಿ ನಾರಾಯಣನ ಅಂಶವಿದೆ. ಮರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮೀಯರ ರೀತಿಯಲ್ಲಿ ಲಕ್ಷ್ಮೀ ನಾರಾಯಣರ ತರಹ ಇರಲಿ ಎನ್ನುವ ಕಾರಣಕ್ಕೆ ಇದನ್ನು ನೀಡಲಾಗುತ್ತದೆ.
'ಮುತ್ತೈದೆ ದೇವತೆಗಳು 16. ಅವರೆಂದರೇ ಗೌರಿದೇವಿ, ಮಹಾಲಕ್ಷ್ಮಿ, ಸರಸ್ವತಿ, ರೂಪಲಕ್ಷ್ಮೀ, ಶೃಂಗಾರಲಕ್ಷ್ಮೀ, ಲಬ್ಬಾಲಕ್ಷ್ಮಿ, ಶ್ರೀಲಕ್ಷ್ಮಿ, ವರಲಕ್ಷ್ಮಿ, ಸಿದ್ಧಲಕ್ಷ್ಮೀ, ಸಂತಾನಲಕ್ಷ್ಮೀ, ಧನಲಕ್ಷ್ಮೀ, ಇಷ್ಟಲಕ್ಷ್ಮಿ, ಜ್ಞಾನಲಕ್ಷ್ಮೀ, ರಸಲಕ್ಷ್ಮೀ, ವಸ್ತ್ರಲಕ್ಷ್ಮೀ ಹಾಗೂ ವಿದ್ಯಾಲಕ್ಷ್ಮೀ. ಈ ದೇವತೆಗಳು ನಿತ್ಯ ಸುಮಂಗಲಿಯರು. ಸಂಸಾರದಲ್ಲಿ ಯಾವುದೇ ನೋವುಗಳು ಬಂದರೂ ಸಹ ನಿವಾರಣೆಯಾಗಲಿ ಎಂದು ಬೇಡುವುದು ವಾಡಿಕೆಯಾಗಿದೆ’ ಎನ್ನುತ್ತಾರೆ ಸಂಸ್ಕೃತ ಅಧ್ಯಯನ ಮಾಡಿರುವ ರಾಘವಾರಾಧ್ಯ.
ಅರಣ್ಯದಲ್ಲಿ ಕಳೆದ ನಾಲ್ಕೈದು ವರ್ಷದ ಹಿಂದೆ ಬಿದಿರಿಗೆ ಕಟ್ಟೆ ಹಿಡಿದು ಒಣಗಿದ ಕಾರಣ ಬಿದಿರು ದೊರೆಯುತ್ತಿಲ್ಲ ಇದರಿಂದ ಮೊರ ತಯಾರಿಕೆ ಮೇಲೆ ಪರಿಣಾಮ ಬೀರಿದೆ.ಕಾಳ ಕಲ್ಕರ್, ಆದಿವಾಸಿ ಮುಖಂಡ
ಗೌರಿ ಹಬ್ಬಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಿದಿರಿನ ಮೊರದ ಬೇಡಿಕೆ ಇರುವುದರಿಂದ ವ್ಯಾಪಾರ ಜೋರಿದೆ.ಗೌರಮ್ಮ, ಮೊರ ತಯಾರಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.