ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಜಿಲ್ಲೆಯಾದ್ಯಂತ 77ನೇ ಸ್ವಾತಂತ್ರ್ಯೋತ್ಸವ: ರಾರಾಜಿಸಿದ ತ್ರಿವರ್ಣ ಧ್ವಜ

Published 16 ಆಗಸ್ಟ್ 2023, 5:18 IST
Last Updated 16 ಆಗಸ್ಟ್ 2023, 5:18 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಾದ್ಯಂತ ಮಂಗಳವಾರ 77ನೇ ಸ್ವಾತಂತ್ರ್ಯ ದಿನವನ್ನು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸಲಾಯಿತು. ಅಲ್ಲದೇ ವಿದ್ಯಾರ್ಥಿಗಳ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಗಮಸ ಸೆಳೆಯಿತು.

‘ದೇಶ ಕಟ್ಟಲು ಕೈಜೋಡಿಸಿ’

ಎಚ್.ಡಿ.ಕೋಟೆ: ‘ಪ್ರತಿಯೊಬ್ಬ ಪ್ರಜೆಯೂ ತನ್ನ ಕೈಲಾದ ಸೇವೆ ಮಾಡುವ ಮೂಲಕ ದೇಶ ಕಟ್ಟುವ ಕೆಲಸವನ್ನು ಮಾಡಬೇಕು’ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.

ಪಟ್ಟಣದ ಪದವಿ ಕಾಲೇಜು ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ದೇಶಕ್ಕಾಗಿ ಪ್ರಾಣಬಲಿದಾನ ಮಾಡಿದ ಸ್ವತಂತ್ರ ಹೋರಾಟಗಾರರನ್ನು ನೆನಪಿಸುವ ಕಾರ್ಯಕ್ರಮ ಇದಾಗಿದೆ’ ಎಂದರು.

‘ತಾಲ್ಲೂಕನ್ನು ಅಭಿವೃದ್ಧಿಪಡಿಸಿ ಮಾದರಿ ತಾಲ್ಲೂಕಾಗಿಸುವ ಮಾಡುವ ಕೆಲಸ ಮಾಡುತ್ತೇನೆ. ಮೂಲ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇನೆ’ ಎಂದರು.

ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ನಡೆದ ಸ್ವಾತಂತ್ರೋತ್ಸವ ಧ್ವಜಾರೋಹಣವನ್ನು ತಹಶೀಲ್ದಾರ್ ಸಣ್ಣರಾಮಪ್ಪ ನೆರವೇರಿಸಿದರು. ಹನುಗೋಡು ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ್ ಮುಖ್ಯ ಭಾಷಣಕಾರರಾಗಿದ್ದರು.

134 ರೈತರಿಗೆ ಸಾಗುವಳಿ ಪತ್ರ ವಿತರಣೆ ಮಾಡಲಾಯಿತು.

ಒಂದೇ ಇಲಾಖೆಯಿಂದ ವಸ್ತುಪ್ರದರ್ಶನ: ವಿವಿಧ ಇಲಾಖೆಗಳ ವತಿಯಿಂದ ವಸ್ತುಪ್ರದರ್ಶನ ನಡೆಸಬೇಕು ಎಂದು ಪೂರ್ವಭಾವಿ ಸಭೆಯಲ್ಲಿ ಶಾಸಕರು ಸೂಚಿಸಿದ್ದರೂ ಸಹ ಮೀನುಗಾರಿಕೆ ಇಲಾಖೆ ಹೊರತುಪಡಿಸಿ ಮತ್ಯಾವ ಇಲಾಖೆಗಳೂ ಯಾವುದೇ ವಸ್ತು ಪ್ರದರ್ಶನ ಮಾಡಿರಲಿಲ್ಲ.

ಸ್ವಾತಂತ್ರ್ಯ ಮಹೋತ್ಸವದ ಮಹತ್ವವನ್ನು ಸಾರುವ ಮೆರವಣಿಗೆ ಈ ಬಾರಿ ನಡೆಯದೆ ಇರುವುದು ಸಾರ್ವಜನಿಕರಲ್ಲಿ ನಿರಾಶೆ ಮೂಡಿಸಿತು.

ವಿಶೇಷ: ಪಟ್ಟಣದಲ್ಲಿ ಜೈ ಭೀಮ್ ಆಟೊ ಚಾಲಕರ ಸಂಘ, ಶ್ರೀ ಮಂಜುನಾಥ್ ಕಾರು ಮಾಲೀಕರ ಸಂಘ, ಶ್ರೀ ವಿನಾಯಕ ಆಟೊ ಚಾಲಕರ ಸಂಘ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳು ಸಂಭ್ರಮದಿಂದ ಸ್ವಾತಂತ್ರ್ಯೋತ್ಸವ ಆಚರಿಸಿದರು.

ಶಾಸಕ ಅನಿಲ್ ಚಿಕ್ಕಮಾದು ತಮ್ಮ ತಂದೆ ದಿ.ಚಿಕ್ಕಮಾದು ಅವರ ಸ್ಮರಣಾರ್ಥವಾಗಿ ತಾಲ್ಲೂಕಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪವಿತ್ರಾ, ಎಚ್.ಎಲ್.ಮೇಘನಾ ಮತ್ತು ಸುನೀತಾ ಮೂವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಅಭಿನಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದ ಶಾಲಾ ಮಕ್ಕಳಿಗೆ ಪೊಲೀಸ್ ಇಲಾಖೆ ವತಿಯಿಂದ ಬಹುಮಾನ ವಿತರಣೆ ಮಾಡಲಾಯಿತು. ಪ್ರಥಮ ಬಹುಮಾನ ₹ 25 ಸಾವಿರ ಪಟ್ಟಣದ ಆದಿಚುಂಚನಗಿರಿ ಪ್ರೌಢಶಾಲೆಗೆ, ಎರಡನೇ ಬಹುಮಾನ ₹ 15 ಸಾವಿರ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ತೃತೀಯ ಬಹುಮಾನ ₹ 10 ಸಾವಿರ ಸೆಂಟ್ ಮೇರಿಸ್ ಇಂಗ್ಲಿಷ್ ಶಾಲೆ ಹಾಗೂ ಸಮಾಧಾನಕರ ಬಹುಮಾನ ₹ 10 ಸಾವಿರ  ಬಿ.ಮಟಕೆರೆ ಖಾಸಗಿ ಶಾಲೆಗೆ ನೀಡಲಾಯಿತು.

ವರ್ತಕರ ಸಂಘದ ವತಿಯಿಂದ ಶಾಲಾ ಮಕ್ಕಳಿಗೆ ಸಿಹಿ ವಿತರಣೆ ಮಾಡಿದರು.

ಪುರಸಭಾ ಸದಸ್ಯರಾದ ಎಚ್.ಸಿ.ನರಸಿಂಹಮೂರ್ತಿ, ಮಧು ಕುಮಾರ್, ಸೋಮಶೇಖರ್, ಸಿಪಿಐ ಶಬ್ಬೀರ್ ಹುಸೇನ್, ಎಸ್ಐ ರಸೂಲ್ ಪಾಗವಾಲ, ಪುರಸಭಾ ಮುಖ್ಯಾಧಿಕಾರಿ ಸುರೇಶ್, ತೋಟಗಾರಿಕೆ ಬೆಳೆಗಾರರ ಸಂಘದ ಅಧ್ಯಕ್ಷ ನಂದೀಶ್ ಇದ್ದರು.

ಸಾಧಕರಿಗೆ ಸನ್ಮಾನ

ಕೆ.ಆರ್.ನಗರ: ‘ಗಾಂಧಿ ಸೇರಿದಂತೆ ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದಕ್ಕಿದೆ’ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಇಲ್ಲಿನ ರೇಡಿಯೊ ಮೈದಾನದಲ್ಲಿ ತಾಲ್ಲೂಕು ಆಡಳಿತದಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಮಹಿಳೆ ಮಧ್ಯರಾತ್ರಿಯಲ್ಲಿ ನಿರ್ಭೀತಿಯಿಂದ ಓಡಾಡುವ ಕಾಲ ಬರಬೇಕು ಎಂದು ಮಹಾತ್ಮ ಗಾಂಧಿ ಕನಸು ಕಂಡಿದ್ದರು. ಅವರು ಕಂಡ ಕನಸು ನನಸಾಗಬೇಕು’ ಎಂದು ಹೇಳಿದರು.

ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ ಧ್ವಜಾರೋಹಣ ನೆರವೇರಿಸಿದರು. ಮುಖಂಡ ಟಿ.ಕೆ.ಚಿನ್ನಸ್ವಾಮಿ ಮಾತನಾಡಿದರು.

ಪತ್ರಕರ್ತ ಎಂ.ಎಸ್.ರವಿಕುಮಾರ್, ಮುಖಂಡ ಜಿ.ಆರ್.ರಾಮೇಗೌಡ, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಡಾ.ದರ್ಶನ್, ಶಿಕ್ಷಕ ಪುಟ್ಟಣಯ್ಯ, ತಾಲ್ಲೂಕು ಕಚೇರಿ ಸಿಬ್ಬಂದಿ ರೂಪೇಶ್, ಬಿಎಲ್ಒ ಕಮಲಮ್ಮ, ಪೌರಕಾರ್ಮಿಕ ಶ್ರೀರಾಮ, ಪುರಸಭೆ ನೌಕರ ಕೃಷ್ಣ, ಯೋಗಪಟು ಪದ್ಮಾ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಡಿ.ರವಿಶಂಕರ್ ಧ್ವಜವಂದನೆ ಸ್ವೀಕರಿಸಿದರು. ವಿವಿಧ ಶಾಲಾ ಮಕ್ಕಳು ಸಾಮೂಹಿಕ ನೃತ್ಯ ‍ಪ್ರದರ್ಶಿಸಿದರು.

ಇದಕ್ಕೂ ಮೊದಲು ಇಲ್ಲಿನ ಶ್ರೀಕೃಷ್ಣರಾಜೇಂದ್ರ ಬಾಲಕರ ಪದವಿ ಪೂರ್ವ ಕಾಲೇಜಿನಿಂದ ಹೊರಟ ಮೆರವಣಿಗೆ ಮೈಸೂರು ರಸ್ತೆ, ಸಿ.ಎಂ.ರಸ್ತೆ, ಆಂಜನೇಯ ಬ್ಲಾಕ್, ಬಜಾರ್ ರಸ್ತೆ ಮೂಲಕ ಸಾಗಿ ರೇಡಿಯೊ ಮೈದಾನ ತಲುಪಿತು. ಮೆರವಣಿಗೆಯಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಗಮನ ಸೆಳೆದವು.

ಪುರಸಭೆ ಮುಖ್ಯಾಧಿಕಾರಿ ಸುಧಾರಾಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ್, ಸದಸ್ಯರಾದ ಕೋಳಿ ಪ್ರಕಾಶ್, ನಟರಾಜ್, ಶಂಕರ್, ಶಿವುನಾಯಕ್, ಮುಖಂಡರಾದ ಜಯರಾಮೇಗೌಡ, ಕೆ.ವಿನಯ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ನಗರ ಘಟಕದ ಅಧ್ಯಕ್ಷ ಎಂ.ಜೆ.ರಮೇಶ್, ಇಒ ಎಚ್.ಕೆ.ಸತೀಶ್, ಬಿಇಒ ಆರ್.ಕೃಷ್ಣಪ್ಪ, ಎಸ್.ಎಂ.ಅಶೋಕ್, ಟಿಎಚ್ಒ ಡಾ.ಕೆ.ಆರ್.ಮಹೇಂದ್ರಪ್ಪ, ಬಿಸಿಎಂ ಅಧಿಕಾರಿ ಚಂದ್ರಕಲಾ, ಇಸಿಒ ದಾಸಪ್ಪ ಇದ್ದರು.

ಕೆರೆ ದಡದಲ್ಲಿ ಧ್ವಜಾರೋಹಣ

ಜಯಪುರ: ಹೋಬಳಿಯ ಬರಡನಪುರದ ಬಣ್ಣದ ಕಟ್ಟೆ ಕೆರೆಯ ಹತ್ತಿರ ನಡೆದ ಸ್ವಾತಂತ್ರ್ಯ ದಿನದ ಧ್ವಜಾರೋಹಣವನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ನೆರವೇರಿಸಿದರು.

ಬರಡನಪುರದ ಮಹಾಂತೇಶ್ವರ ಮಠದ ಪರಶಿವಮೂರ್ತಿ ಸ್ವಾಮೀಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಯ್ಯ, ಉಪಾಧ್ಯಕ್ಷೆ ರೇಣುಕಾ, ಜಯಪುರ ಹೋಬಳಿ ವಿಕಾಸ ವೇದಿಕೆ ಅಧ್ಯಕ್ಷ ದಾರಿಪುರ ಡಿ.ಚಂದ್ರಶೇಖರ್, ಎಸ್.ಬಿ ಶಿವಣ್ಣ, ಪಿಡಿಒ ಬಸವಣ್ಣ, ಕಾರ್ಯದರ್ಶಿ ನಾಗವೇಣಿ, ಲೆಕ್ಕಸಹಾಯಕ ಆನಂದೇಗೌಡ, ಮುರುಡಪ್ಪ, ಮುಖಂಡರಾದ ಮರಿಸಿದ್ದೇಗೌಡ, ಬಸವಣ್ಣ, ನಾಗರಾಜು, ಅಬ್ದುಲ್ ಮುತಾಲಿಪ್, ಜವರನಾಯಕ, ಬರಡನಪುರ ಶಿವಣ್ಣ, ಅಜೀಜ್ ಇದ್ದರು.

‘ಸುಧಾರಿಸದ ಆರ್ಥಿಕ ಸ್ಥಿತಿ’

ಸಾಲಿಗ್ರಾಮ: ‘ದೇಶದ ಬಹುತೇಕ ಜನರ ಆರ್ಥಿಕ ಪರಿಸ್ಥಿತಿ ಮಾತ್ರ ಸುಧಾರಣೆ ಆಗದಿರುವುದು ದುರದೃಷ್ಟಕರ’ ಎಂದು ದೊಡ್ಡಕೊಪ್ಪಲು ಗ್ರಾಮದ ಸರ್ಕಾರಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಧನಂಜಯ ಬೇಸರ ವ್ಯಕ್ತಪಡಿಸಿದರು.

ದೊಡ್ಡಕೊಪ್ಪಲು ಸರ್ಕಾರಿ ಶಾಲೆಯಲ್ಲಿ ನಡೆದ ಸ್ವಾತಂತ್ರೋತ್ಸವದ ಧ್ವಜಾರೋಹಣ ಮಾಡಿ ಮಾತನಾಡಿದರು.

ದಾಸ್ಯ ಬದುಕಿನಿಂದ ಮುಕ್ತಿ ಹೊಂದಿದ್ದರೂ ದೇಶದ ಜನರು ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿರುವುದು ನೋಡಿದರೆ ಸ್ವತಂತ್ರ ಸಿಕ್ಕಿದ್ದು ಯಾರಿಗೆ ಎಂಬ ಜಿಜ್ಞಾಸೆ ಎದುರಾಗುತ್ತದೆ. ಸ್ವಾತಂತ್ರ್ಯಕ್ಕಾಗಿ ಜೀವನವನ್ನೇ ಮುಡುಪಿಟ್ಟ ಮಹನೀಯರ ಸ್ಮರಣೆ ಒಂದು ದಿನಕ್ಕೆ ಸಿಮೀತಗೊಳ್ಳುತ್ತಿರುವುದಕ್ಕೆ’ ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕರ್ಪೂರವಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ರಾಘವೇಂದ್ರ, ಕಾಳಮ್ಮ ರೇವಣ್ಣ, ಮುಖ್ಯಶಿಕ್ಷಕ ಯಶವಂತಕುಮಾರ್, ಸಾ.ರಾ.ರಮೇಶ್‌, ಡಿ.ಸಿ. ಶಿವರಾಜು, ಡಿ.ಟಿ. ಮಹೇಶ್, ಆನಂದ ಡಿ.ಎಸ್. ಚನ್ನಕೇಶವ ಡಿ.ಎಸ್. ಉಪಸ್ಥಿತರಿದ್ದರು.

ಧ್ವಜಾರೋಹಣ: ದೊಡ್ಡಕೊಪ್ಪಲು ಗ್ರಾಮದ ಆದಿಜಾಂಬವ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ವೆಂಕಟಯ್ಯ ಧ್ವಜಾರೋಹಣ ಮಾಡಿದರು.

‘ಗ್ರಾಮೀಣ ಪ್ರದೇಶಗಳಲ್ಲಿ ಜನರ ಬದುಕು ನಡೆಸುವುದು ತುಂಬಾ ಕಷ್ಟವಾಗುತ್ತಿದೆ ಇದನ್ನು ನೋಡಿಯೂ ನೋಡದಂತೆ ರಾಜಕಾರಣಿಗಳು ಇರುವುದು ಎಷ್ಟರ ಮಟ್ಟಿಗೆ ಸರಿ’ ಎಂದು ವೆಂಕಟಯ್ಯ ಎಂದರು.

ಕಾರ್ಯಕ್ರಮದಲ್ಲಿ ಶಿವಣ್ಣೇಗೌಡ, ದೇವರಾಜು, ಸುಬ್ಬೇಗೌಡ, ಸಂಘದ ಅಧ್ಯಕ್ಷ ಶಿವಕುಮಾರ್ ಡಿ.ವಿ. ಉಪಾಧ್ಯಕ್ಷ ಡಿ.ಟಿ.ಮಹೇಶ್, ಕಾರ್ಯದರ್ಶಿ ಆನಂದ ಡಿ.ಎಸ್. ಶಿವರಾಜು, ಡಿ.ಸಿ. ಕರುಣಾ.ಡಿ.ಡಿ. ಗ್ರಾ.ಪಂ. ಸದಸ್ಯೆ ಕಾಳಮ್ಮ ರೇವಣ್ಣ ಉಪಸ್ಥಿತರಿದ್ದರು.

ಕೆ.ಆರ್.ನಗರ ರೇಡಿಯೊ ಮೈದಾನದಲ್ಲಿ ತಾಲ್ಲೂಕು ಆಡಳಿತದಿಂದ ಮಂಗಳವಾರ ನಡೆದ 77ನೇ ಸ್ವಾತಂತ್ರ್ಯೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
ಕೆ.ಆರ್.ನಗರ ರೇಡಿಯೊ ಮೈದಾನದಲ್ಲಿ ತಾಲ್ಲೂಕು ಆಡಳಿತದಿಂದ ಮಂಗಳವಾರ ನಡೆದ 77ನೇ ಸ್ವಾತಂತ್ರ್ಯೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
ಜಯಪುರ ಹೋಬಳಿಯ ಬರಡನಪುರದ ಬಣ್ಣದ ಕಟ್ಟೆ ಕೆರೆಯ ಹತ್ತಿರ ನಡೆದ ಕಾರ್ಯಕ್ರಮದಲ್ಲಿ ತಾ.ಪಂ. ಇಒ ಗಿರೀಶ್ ಧ್ವಜಾರೋಹಣ ನೆರವೇರಿಸಿದರು
ಜಯಪುರ ಹೋಬಳಿಯ ಬರಡನಪುರದ ಬಣ್ಣದ ಕಟ್ಟೆ ಕೆರೆಯ ಹತ್ತಿರ ನಡೆದ ಕಾರ್ಯಕ್ರಮದಲ್ಲಿ ತಾ.ಪಂ. ಇಒ ಗಿರೀಶ್ ಧ್ವಜಾರೋಹಣ ನೆರವೇರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT