ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಕಬಿನಿ ಜಲಾಶಯಕ್ಕೆ ಒಳಹರಿವು ಆರಂಭ

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆ, ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಳ
Published 22 ಮೇ 2024, 16:04 IST
Last Updated 22 ಮೇ 2024, 16:04 IST
ಅಕ್ಷರ ಗಾತ್ರ

ಮೈಸೂರು/ಮಂಗಳೂರು : ಮೈಸೂರು ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆಯಿಂದ ರಾತ್ರಿವರೆಗೆ ಸುರಿದ ‌ಜಿಟಿಜಿಟಿ ಮಳೆ ತಂಪಿನ ಅನುಭವ ನೀಡಿತು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ  ಸಾಧಾರಣ ಮಳೆಯಾಗಿದೆ.

ಮೈಸೂರು ಜಿಲ್ಲೆಯ ಎಚ್‌.ಡಿ. ಕೋಟೆ, ಹಂಪಾಪುರ, ಹುಣಸೂರು ತಾಲ್ಲೂಕಿನ ಧರ್ಮಪುರದಲ್ಲೂ ಕಡೆಗಳಲ್ಲೂ ಮಳೆ ಸುರಿಯಿತು. ಕೇರಳದ ವಯನಾಡಿನಲ್ಲಿ ಮಳೆಯಾಗುತ್ತಿರುವುದರಿಂದ  ಎಚ್‌.ಡಿ. ಕೋಟೆ ತಾಲ್ಲೂಕು ಕಬಿನಿ ಜಲಾಶಯಕ್ಕೆ ಒಳಹರಿವು ಆರಂಭವಾಗಿದ್ದು, ನೀರಿನ ಪ್ರಮಾಣ ಒಂದು ದಿನದಲ್ಲಿ ಒಂದು ಅಡಿ ಏರಿಕೆಯಾಗಿದೆ.

2,284 ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯ ಮಟ್ಟ ಮಂಗಳವಾರ 2,256.96 ಅಡಿ ಇತ್ತು. ಅದು ಬುಧವಾರ 2,257.32 ಅಡಿಗೆ ಏರಿಕೆಯಾಗಿತ್ತು. 1,861 ಕ್ಯುಸೆಕ್‌ ಒಳಹರಿವು ಇತ್ತು.

ಮಂಡ್ಯ ನಗರದಲ್ಲಿ ಬುಧವಾರ ಧಾರಾಕಾರ ಮಳೆ ಸುರಿದು, ಮಹಾವೀರ ವೃತ್ತದಲ್ಲಿರುವ ಅಂಚೆ ಕಚೇರಿ ಸೇರಿದಂತೆ ಹಲವು ಕಟ್ಟಡಗಳಿಗೆ ನೀರು ನುಗ್ಗಿತು. ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ, ವಿವಿ ರಸ್ತೆ, ಮಾರುಕಟ್ಟೆ ಕಡೆಯಿಂದ ನೀರು ಹರಿದು ಮಹಾವೀರ ವೃತ್ತ ಕೆರೆಯಂತಾಯಿತು. ಆ ಭಾಗದಲ್ಲಿ ಚರಂಡಿಗಳು ಹಾಳಾಗಿದ್ದು, ನೀರು ರಸ್ತೆ ಮೇಲೆ ಉಕ್ಕಿ ಅಂಚೆ ಕಚೇರಿಯೊಳಗೆ ನುಗ್ಗಿತು. ಅಕ್ಕಪಕ್ಕದ ಕಟ್ಟಡಗಳಿಗೂ ನೀರು ನುಗ್ಗಿದ್ದರಿಂದ ಜನ ಪರದಾಡಿದರು.

ಬೀಡಿ ಕಾರ್ಮಿಕರ ಕಾಲೊನಿ, ಕೆರೆಯಂಗಳ ಭಾಗದಲ್ಲಿ ಇಳಿಜಾರು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿತ್ತು. ಬೀಡಿ ಕಾರ್ಮಿಕರ ಕಾಲೊನಿಯಲ್ಲಿ ರಸ್ತೆಗಳೇ ಚರಂಡಿಯಂತಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಂಗಳೂರು ನಗರ, ಪುತ್ತಿಗೆ, ಮರೋಡಿ, ಉಡುಪಿ ಜಿಲ್ಲೆಯ ಕಾಂತಾವರದಲ್ಲಿ ಉತ್ತಮ ಸುರಿಯಿತು.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮೂರು ದಿನ ಉತ್ತಮ ಮಳೆಯಾಗಿದ್ದರಿಂದ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಮಂಗಳೂರು ನಗರಕ್ಕೆ ನೀರು ಪೂರೈಕೆ ಮೂಲವಾಗಿರುವ ತುಂಬೆ ಅಣೆಕಟ್ಟೆ ಬಹುತೇಕ ಭರ್ತಿಯಾಗಿದೆ. ನೀರಿನ ಕೊರತೆ ಕಾರಣ ಮಂಗಳೂರು ನಗರದಲ್ಲಿ ದಿನಬಿಟ್ಟು ದಿನ ನೀರು ಪೂರೈಸುವ ರೇಷನಿಂಗ್‌ ಪದ್ಧತಿಯನ್ನು ಬುಧವಾರದಿಂದ ಕೈಬಿಟ್ಟಿರುವ ಮಹಾನಗರ ಪಾಲಿಕೆ, ನಿತ್ಯವೂ ನೀರು ಪೂರೈಸಲು ನಿರ್ಧರಿಸಿದೆ.

ಒಟ್ಟಾರೆ 6 ಮೀಟರ್‌ ಸಂಗ್ರಹ ಸಾಮರ್ಥ್ಯದ ತುಂಬೆ ಅಣೆಕಟ್ಟೆಯಲ್ಲಿ ಬುಧವಾರ 5.91 ಮೀಟರ್‌ ವರೆಗೆ ನೀರಿನ ಸಂಗ್ರಹ ಇದ್ದು, ಗೇಟ್‌ಗಳನ್ನು ತೆರೆದು ನೀರು ಬಿಡಲಾಗುತ್ತಿದೆ.

ಯಾದಗಿರಿ ವರದಿ: ಜಿಲ್ಲೆಯ ಯರಗೋಳ ಸಮೀಪದ ಕಂಚಗಾರಹಳ್ಳಿ ತಾಂಡಾದಲ್ಲಿ ಬುಧವಾರ ಮಧ್ಯಾಹ್ನ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆ ಸುರಿದಿದೆ.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬಿರುಗಾಳಿ ಸಹಿತ ಮಳೆಯಾಗಿದ್ದು, ರಸ್ತೆ ಬದಿಯ ಹಾಗೂ ಹೊಲಗಳಲ್ಲಿನ ಹಲವು ಮರಗಳು ನೆಲಕ್ಕುರಳಿವೆ. ಮನೆಯ ಪತ್ರಾಸ್‌ ಬಿದ್ದು ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಕಾರ್ಗಲ್ ವರದಿ (ಶಿವಮೊಗ್ಗ ಜಿಲ್ಲೆ): ಶರಾವತಿ ಕೊಳ್ಳದ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಸುರಿಯುತ್ತಿರುವುದರಿಂದ, ಲಿಂಗನಮಕ್ಕಿ ಜಲಾನಯನ ಪ್ರದೇಶದ ಕೆಳದಂಡೆ ಭಾಗದಲ್ಲಿ ಮಳೆ ನೀರು ಹರಿಯುತ್ತಿದೆ. ಇದರಿಂದ ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ನೀರು ಹರಿದು ಬಂದಿದೆ. ಬತ್ತಿ ಹೋಗಿದ್ದ ರಾಜ, ರಾಣಿ, ರೋರರ್, ರಾಕೆಟ್ ಜಲಪಾತಗಳಲ್ಲಿ ಈಗ ನೀರು ಧುಮುಕಲು ಆರಂಭಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT