ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ, ರಂಗಭೂಮಿ ಆಸಕ್ತಿ ಕ್ಷೀಣ: ಪ್ರೊ.ಕೃಷ್ಣಮೂರ್ತಿ’

ಲಲಿತಕಲಾ ಕಾಲೇಜಿನಲ್ಲಿ ರಂಗ ಕಾರ್ಯಾಗಾರ: ಪ್ರೊ.ಕೃಷ್ಣಮೂರ್ತಿ ಚಂದರ್‌ ಬೇಸರ
Last Updated 21 ಫೆಬ್ರುವರಿ 2023, 10:58 IST
ಅಕ್ಷರ ಗಾತ್ರ

ಮೈಸೂರು: ‘ಯುವ ಸಮುದಾಯದಲ್ಲಿ ಸಾಹಿತ್ಯ ಹಾಗೂ ರಂಗಭೂಮಿ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ. ಅಭಿವ್ಯಕ್ತಿಯ ಈ ಉತ್ತಮ ಮಾದರಿಗಳನ್ನು ಉಳಿಸಿಕೊಳ್ಳುವುದು ಆದ್ಯತೆಯಾಗಬೇಕು’ ಎಂದು ಲೇಖಕ ಪ್ರೊ.ಕೃಷ್ಣಮೂರ್ತಿ ಚಂದರ್‌ ಹೇಳಿದರು.

ಮಾನಸಗಂಗೋತ್ರಿಯ ಲಲಿತಕಲಾ ಕಾಲೇಜಿನ ಗುಬ್ಬಿ ವೀರಣ್ಣ ಪೀಠವು ಮಂಗಳವಾರ ಆಯೋಜಿಸಿದ್ದ ಮೂರು ದಿನಗಳ ರಂಗ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ರಂಗಭೂಮಿ ಏಕಮುಖಯಲ್ಲ. ಅದು ಬಹುಮುಖಿ. ಕೊಡು– ಕೊಳ್ಳುವಿಕೆಯ ಮೂಲಕ ತಿಳಿಯುವುದು ಹಾಗೂ ಕಲಿಯುವ ಅವಕಾಶವಿದೆ. ರಂಗ ಕಾರ್ಯಾಗಾರಗಳ ಮೂಲಕ ನಮ್ಮೊಳಗಿನ ಪ್ರತಿಭೆ ಹಾಗೂ ಸಾಮರ್ಥ್ಯದ ಹುಡಕಾಟ ನಡೆಸಬಹುದು’ ಎಂದರು.

‘ಯಾವುದೇ ಕೃತಿ ಓದಿದಾಗ ಹಾಗೂ ನಾಟಕ ನೋಡಿದಾಗ ಕೃತಿಕಾರ ಹಾಗೂ ರಂಗ ನಿರ್ದೇಶಕನಿಗೆ ತಮ್ಮ ಅಭಿಪ್ರಾಯ ಹೇಳಬೇಕು. ಹಾಗಾದಾಗ ಮಾತ್ರವೇ ಸಾಹಿತ್ಯ ಹಾಗೂ ಸಂಸ್ಕೃತಿ ಬೆಳೆಸಲು ಸಾಧ್ಯವೆಂದು ಲೇಖಕ ಯು.ಆರ್‌.ಅನಂತಮೂರ್ತಿ ಹೇಳುತ್ತಿದ್ದರು’ ಎಂದು ಸ್ಮರಿಸಿದರು.

‘ಗುಬ್ಬಿ ವೀರಣ್ಣ ಅವರ ನಾಟಕಗಳಲ್ಲಿ ಆನೆಗಳು ವೇದಿಕೆಗೆ ಬರುತ್ತಿದ್ದವು. ಮಹಾಭಾರತದ ವಿಷ್ಣು ಚಕ್ರದ ಜಾದೂ ಪ್ರೇಕ್ಷಕರನ್ನು ಸೆಳೆಯುತ್ತಿತ್ತು. ಭವ್ಯವಾಗಿರುವ ಕನ್ನಡ ರಂಗಭೂಮಿಯ ಇತಿಹಾಸವನ್ನು‌ ತಿಳಿಯುವ ಪ್ರಯತ್ನವನ್ನು ಶಿಬಿರಾರ್ಥಿಗಳು ಮಾಡಬೇಕು’ ಎಂದು ಸಲಹೆ ನೀಡಿದರು.

‘ಮಾರ್ಕ್ಸ್‌ವಾದದಿಂದ ಪ್ರೇರಣೆ ಪಡೆದ ಜರ್ಮನಿಯ ಇರ್ವಿನ್‌ ಪಿಸ್ಕೆಟರ್‌ ಹಾಗೂ ಬರ್ಟೊಲ್ಟ್ ಬ್ರೆಕ್ಟ್‌ ಅವರ ನಾಟಕ ಶೈಲಿಗಳು ಆಧುನಿಕ ರಂಗಭೂಮಿಯನ್ನು ಪ್ರಭಾವಿಸಿವೆ. ರಷ್ಯಾದ ಸ್ಟಾನಿಸ್ಲಾವ್‌ಸ್ಕಿಯ ನಟನೆ ಪಾಠಗಳೂ ಪರಿಣಾಮ ಬೀರಿವೆ. ರಂಗ ಪರಂಪರೆಯ ಎಲ್ಲ ಮಾದರಿಯ ತಿಳಿವು ಕಲಾವಿದರಿಗೆ ಮುಖ್ಯ. ಅದರಿಂದ ಉತ್ತಮ ನಾಟಕ ಕೃತಿ ರೂಪಿಸಲು ಸಾಧ್ಯ’ ಎಂದು ಪ್ರತಿಪಾದಿಸಿದರು.

ರಂಗಕರ್ಮಿ ಪ್ರೊ.ಎಚ್‌.ಎಸ್‌.ಉಮೇಶ್‌ ಮಾತನಾಡಿ, ‘ಕನ್ನಡ ರಂಗಭೂಮಿಗೆ ಮೈಸೂರಿನ ಹವ್ಯಾಸಿ ರಂಗತಂಡಗಳ ಕೊಡುಗೆ ಮಹತ್ತರವಾಗಿದ್ದು, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗಿದ್ದವರು ರಂಗಭೂಮಿಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರು. ಮಹಾರಾಜ ಕಾಲೇಜಿನ ಪ್ರೊ.ಗುರುರಾಜರಾವ್, ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ವಿಶ್ವನಾಥ ಮಿರ್ಲೆ, ಬನುಮಯ್ಯ ಕಾಲೇಜಿನ ಸಿಂಧುವಳ್ಳಿ ಅನಂತಮೂರ್ತಿ ಪ್ರಮುಖರು’ ಎಂದು ಹೇಳಿದರು.

‘ಹವ್ಯಾಸಿ ರಂಗಭೂಮಿಯಲ್ಲಿ ಕಾಲೇಜು ಅಧ್ಯಾಪಕರು ಇತ್ತೀಚೆಗೆ ಕ್ರಿಯಾಶೀಲರಾಗಿಲ್ಲ. ಮತ್ತೆ ಆಸಕ್ತಿ ಹುಟ್ಟಿಸುವ ಕೆಲಸವಾಗಬೇಕಿದೆ’ ಎಂದರು.

ಲಲಿತಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಅನಿಟ ವಿಮ್ಲಾ ಬ್ರ್ಯಾಗ್ಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT