ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಟ್‌ಲೈಫ್‌ ಪರಿಚಯಿಸಿ, ದಿನವೂ ಜಂಬೂಸವಾರಿ

ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ಸಭೆಯಲ್ಲಿ ಸಲಹೆಗಳ ಮಹಾಪೂರ
Last Updated 20 ಜೂನ್ 2018, 10:47 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಅರಮನೆಯ ಆವರಣದಲ್ಲಿ ದಿನವೂ ಜಂಬೂ ಸವಾರಿ ನಡೆಯಲಿ, ಪ್ರತಿದಿನ ರಾತ್ರಿ 7 ರಿಂದ 9ರವರೆಗೆ ಅರಮನೆ ವಿದ್ಯುತ್‌ ದೀಪಾಲಂಕಾರದಿಂದ ಝಗಮಗಿಸಲಿ, ಕೆಆರ್‌ಎಸ್‌ ವೀಕ್ಷಣೆಯ ಅವಧಿಯನ್ನು ರಾತ್ರಿ 10ರ ವರೆಗೆ ವಿಸ್ತರಿಸಿ, ಮೈಸೂರಿಗೆ ಬರುವ ಪ್ರವಾಸಿಗರು ರಾತ್ರಿಯನ್ನು ನಗರದಲ್ಲೇ ಕಳೆಯುವಂತೆ ಮಾಡಲು ವಿವಿಧ ಯೋಜನೆ ರೂಪಿಸಿ... ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ನಡೆದ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ಸಭೆಯಲ್ಲಿ ಕೇಳಿಬಂದ ಕೆಲವು ಸಲಹೆಗಳು ಇವು.

ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಹೋಟೆಲ್‌ ಮತ್ತು ಟ್ರಾವೆಲ್ಸ್‌ ಸಂಸ್ಥೆಗಳ ಮಾಲೀಕರು, ಪ್ರವಾಸಿ ಗೈಡ್‌ಗಳ ಸಂಘಗಳ ಪದಾಧಿಕಾರಿಗಳು ಸಭೆಯಲ್ಲಿ ತಮ್ಮ ಅಭಿಪ್ರಾಯ, ಸಲಹೆಗಳ‌ನ್ನು ನೀಡಿದರು. ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಭೇಟಿ ನೀಡುವರಾದರೂ, ನಗರದಲ್ಲಿ ರಾತ್ರಿ ಕಳೆಯುವವರು ತುಂಬಾ ಕಡಿಮೆ. ಪ್ರವಾಸಿಗರು ಮೈಸೂರಿನಲ್ಲಿ ವಾಸ್ತವ್ಯ ಹೂಡುವಂತೆ ಮಾಡಲು ವಿವಿಧ ಯೋಜನೆಗಳನ್ನು ರೂಪಿಸಬೇಕಿದೆ ಎಂದರು.

ಅರಮನೆ ಆವರಣದಲ್ಲಿ ದಿನವೂ ಜಂಬೂ ಸವಾರಿ ನಡೆಸಬೇಕು. ಅಂಬಾರಿ ಯಲ್ಲಿ ಕುಳಿತುಕೊಳ್ಳುವವರನ್ನು ಹರಾಜಿನ ಮೂಲಕ ಆಯ್ಕೆ ಮಾಡಬೇಕು. ಇದರಿಂದ ಹೆಚ್ಚಿನ ಆದಾಯ ಬರಲಿದೆ ಎಂದು ಸಲಹೆ ನೀಡಿದರು. ‘ನೈಟ್‌ಲೈಫ್‌’ ಪರಿಚಯವಾಗಲಿ: ಬೆಂಗಳೂರು ರೀತಿಯಲ್ಲಿ ಮೈಸೂರಿನಲ್ಲೂ ‘ನೈಟ್‌ಲೈಫ್‌’ ಪರಿಚಯವಾಗಲಿ ಎಂಬ ಸಲಹೆ ಸಭೆಯಲ್ಲಿ ವ್ಯಕ್ತವಾಯಿತು.

ರಾತ್ರಿ 8 ಗಂಟೆಯಾದರೆ ಮೈಸೂರು ನಗರ ಕತ್ತಲೆಗೆ ಸರಿಯುತ್ತದೆ. ಇದರಿಂದ ಪ್ರವಾಸಿಗರು ಈ ನಗರದಲ್ಲಿ ರಾತ್ರಿ ತಂಗಲು ಇಷ್ಟಪಡುವುದಿಲ್ಲ ಎಂದು ಪೈ ವಿಸ್ತಾ ಹೋಟೆಲ್‌ನ ಮಹೇಶ್‌ ಕಾಮತ್ ಹೇಳಿದರು. ರಾತ್ರಿ 8–9 ಗಂಟೆಯಾಗುತ್ತಿದ್ದಂ ತೆಯೇ ಪೊಲೀಸರು ಪಬ್‌ ಮತ್ತು ಬಾರ್‌ಗಳನ್ನು ಮುಚ್ಚಿಸುವರು. ಪ್ರವಾಸಿಗರಿಗೆ ರಾತ್ರಿಯ ಮೋಜು ಅನುಭವಿಸಲು ಆಗುವುದಿಲ್ಲ. ವಿದೇಶಿಯರು ರಾತ್ರಿ ಮೋಜು ಇಷ್ಟಪಡುವರು ಎಂದು ನುಡಿದರು.

ರೇಸ್‌ ಕ್ಲಬ್‌ ಅಧ್ಯಕ್ಷರ ತರಾಟೆ: ಲೀಸ್‌ ಅವಧಿ ಕೊನೆಗೊಂಡರೂ ಸ್ಥಳವನ್ನು ಬಿಟ್ಟುಕೊಡದ್ದಕ್ಕೆ ಮೈಸೂರು ರೇಸ್‌ ಕ್ಲಬ್‌ ಅಧ್ಯಕ್ಷರನ್ನು ಸಚಿವರು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ರೇಸ್‌ ಕ್ಲಬ್‌ ಆವರಣದಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡ ಮತ್ತು ಕುದುರೆ ಸಾಕುವ ಕೇಂದ್ರವನ್ನು ನಿರ್ಮಿಸಲಾಗಿದೆ. ಇದರಿಂದ ಸುತ್ತಮುತ್ತಲಿನ ಪರಿಸರದ ಮೇಲೆ ಹಾನಿ ಉಂಟಾಗುತ್ತಿದೆ ಎಂದರು. ರೇಸ್‌ ಕ್ಲಬ್‌ಗೆ ನೀಡಿರುವ ನೀರು ಮತ್ತು ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿದರೆ ಏನು ಮಾಡುವಿರಿ ಎಂದು ಸಚಿವರು ಪ್ರಶ್ನಿಸಿದರು.

ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್‌ಕುಮಾರ್‌, ನಿರ್ದೇಶಕ ಬಿ.ರಾಮು, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ಪುಷ್ಕರ್, ವಿಧಾನಪರಿಷತ್‌ ಸದಸ್ಯ ಸಂದೇಶ್‌ ನಾಗರಾಜು, ಚಾಮರಾಜ ಕ್ಷೇತ್ರದ ಶಾಸಕ ಎಲ್‌.ನಾಗೇಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನ್, ಮೇಯರ್‌ ಬಿ.ಭಾಗ್ಯವತಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT