ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಕ್ಷೇತ್ರ ಕಸಿದುಕೊಳ್ಳಲು ಜೆಡಿಎಸ್‌ ಯೋಜನೆ: ಲಕ್ಷ್ಮಣ ಆರೋಪ

Published 9 ಜನವರಿ 2024, 15:39 IST
Last Updated 9 ಜನವರಿ 2024, 15:39 IST
ಅಕ್ಷರ ಗಾತ್ರ

ಮೈಸೂರು: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ‌ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮೈಸೂರು-ಕೊಡಗು ಕ್ಷೇತ್ರವನ್ನು ಕಸಿದುಕೊಳ್ಳಲು ಯೋಜನೆ ರೂಪಿಸಿದೆ. ಇದಕ್ಕಾಗಿ ಏನನ್ನಾರೂ ಮಾಡಲಿದೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ದೂರಿದರು.

‘ಈ ಯೋಜನೆಯ ಭಾಗವಾಗಿಯೇ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಸಂಸದ ಪ್ರತಾಪ ಸಿಂಹ ಅವರನ್ನು ಹೊಗಳುತ್ತಿದ್ದಾರೆ. ಅವರು ಯಾರಾನ್ನಾದರೂ ಹೊಗಳುತ್ತಿದ್ದಾರೆಂದರೆ ಏನಾದರೂ ಗ್ರಹಚಾರ ಕಾದಿದೆ ಎಂದೇ ಅರ್ಥ. ಅವರನ್ನು ಖೆಡ್ಡಾಕ್ಕೆ ಕೆಡವಲು ಮುಂದಾಗಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಆರೋಪಿಸಿದರು.

‘ಕುಮಾರಸ್ವಾಮಿ ಅವರು ಇತ್ತೀಚೆಗೆ ಬಿಜೆಪಿಯ ವಕ್ತಾರರಿಗಿಂತಲೂ ಹೆಚ್ಚಾಗಿ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಸಂಸದರ ಸಹೋದರ ಮರಗಳನ್ನು ಅಕ್ರಮವಾಗಿ ಕಡಿದ ಆರೋಪಕ್ಕೆ ಸಿಲುಕಿದ್ದು, ಆ ಪ್ರಕರಣವನ್ನು ಜೆಡಿಎಸ್ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದೆ’ ಎಂದು ದೂರಿದರು.

‘ಒಪ್ಪಂದದ ಪ್ರಕಾರ ಜೆಡಿಎಸ್‌ನವರು 4 ಕ್ಷೇತ್ರಗಳನ್ನು ಕೇಳಿದ್ದಾರೆ. ಆದರೆ, 3 ಕ್ಷೇತ್ರ ಕೊಡಲು ಬಿಜೆಪಿ ಒಪ್ಪಿದೆ. ಹೇಗಾದರೂ ಮಾಡಿ ಮೈಸೂರು ಕ್ಷೇತ್ರವನ್ನೂ ಪಡೆಯುವ ಪ್ಲಾನ್‌ ಜೆಡಿಎಸ್‌ನದ್ದಾಗಿದೆ. ಮಾಜಿ ಶಾಸಕ ಸಾ.ರಾ. ಮಹೇಶ್ ಅವರನ್ನು ಕಣಕ್ಕಿಳಿಸಲಾಗುತ್ತದೆ ಎಂಬ ಮಾಹಿತಿ ಇದೆ. ಜೆಡಿಎಸ್‌ ನೆಲೆ ಬಲಪಡಿಸಿಕೊಳ್ಳಲು ಮುಂದಾಗಿದೆ’ ಎಂದು ದೂರಿದರು.

‘ಗ್ಯಾರಂಟಿ ಕಾರ್ಯಕ್ರಮಗಳ ಅನುಷ್ಠಾನದೊಂದಿಗೆ ಉತ್ತಮ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ವಿರೋಧ ಪಕ್ಷದವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೇ ನಮ್ಮ ಪಕ್ಷ‌‌. ಹೀಗಾಗಿ, ಅವರಿಗೆ ಕಾಂಗ್ರೆಸ್ ನಾಯಕರನ್ನು ಟೀಕಿಸಲು ನೈತಿಕ ಹಕ್ಕಿಲ್ಲ’ ಎಂದು ಹೇಳಿದರು.

‘ಕೆಆರ್‌ಎಸ್ ಜಲಾಶಯದ ಸುತ್ತಮುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿರ್ಬಂಧಿಸಿ ಹೈಕೋರ್ಟ್ ಆದೇಶಿಸಿರುವುದು ಸ್ವಾಗತಾರ್ಹವಾದುದು. ಆ ಜಲಾಶಯಕ್ಕೆ ನೂರು ವರ್ಷ ಸಮೀಪಿಸುತ್ತಿದೆ. ಇನ್ನೂ ನೂರು ವರ್ಷ ಚೆನ್ನಾಗಿರಬಹುದು. ಸುತ್ತಮುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ ಮುಂದುವರಿದರೆ ಅಣೆಕಟ್ಟೆಗೆ ಅಪಾಯ ಎದುರಾಗುವ ಆತಂಕವಿತ್ತು. ಅದು ಒಡೆದರೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ನೀರು ಪೂರೈಕೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ರಾಜ್ಯ ಸರ್ಕಾರವು ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜಲಾಶಯಕ್ಕೆ ಧಕ್ಕೆಯಾಗುವ ಕಾಮಗಾರಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT