ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾಮೀಜಿಗಳಿಗೆ ಪವಾಡದ ಅವಶ್ಯಕತೆಯಿಲ್ಲ: ಸಿ.ಸೋಮಶೇಖರ

ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿ
Published : 21 ಸೆಪ್ಟೆಂಬರ್ 2024, 14:04 IST
Last Updated : 21 ಸೆಪ್ಟೆಂಬರ್ 2024, 14:04 IST
ಫಾಲೋ ಮಾಡಿ
Comments

ಮೈಸೂರು: ‘ಸ್ವಾಮೀಜಿಗಳಿಗೆ ಪವಾಡದ ಅವಶ್ಯಕತೆಯಿಲ್ಲ. ಹಸಿದ ಹೊಟ್ಟೆಗೆ ಅನ್ನ ನೀಡಿದರೂ ಅವರು ಸ್ಮರಣೀಯರಾಗಿ ಉಳಿಯುತ್ತಾರೆ’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಸಿ.ಸೋಮಶೇಖರ ತಿಳಿಸಿದರು.

ಜೆಎಸ್ಎಸ್ ತಾಂತ್ರಿಕ ವಿಶ್ವವಿದ್ಯಾಲಯವು ಜಯಚಾಮರಾಜೇಂದ್ರ ಎಂಜಿನಿಯರಿಂಗ್‌ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯ 109ನೇ ಜಯಂತಿ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.

‘ಸಮಾಜಕ್ಕೆ ಆರೋಗ್ಯ, ಅಭಯ, ಆಶ್ರಯ, ಜ್ಞಾನ, ದಾಸೋಹದ ಸೇವೆ ನೀಡುವ ಮೂಲಕ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಮಾದರಿಯಾಗಿದ್ದು, ಪ್ರಸ್ತುತ ಅವರ ಕಾರ್ಯಗಳನ್ನು ಅನುಸರಿಸುವ ಅಗತ್ಯವಿದೆ. ಸಣ್ಣ ಸಹಾಯಕ್ಕೆ ದೊಡ್ಡ ಪುರಸ್ಕಾರದ ಆಸೆ ಪಡುವವರ ನಡುವೆ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸಿದ ಸ್ವಾಮೀಜಿ ತಮ್ಮ ಗುಣದಿಂದ ದೊಡ್ಡವರಾಗುತ್ತಾರೆ’ ಎಂದು ಹೇಳಿದರು.

‘ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ತಮ್ಮ 12ನೇ ವಯಸ್ಸಿನಲ್ಲಿ ಪೀಠಾರೋಹಣ ಮಾಡುತ್ತಾರೆ. ಅವರ ಗುರುಗಳಾದ ಗೌರಿಶಂಕರ ಸ್ವಾಮೀಜಿ ಸೂಚನೆಯಂತೆ ಸಮಾಜದ ಜ್ಞಾನದ ಹಸಿವು ನೀಗಿಸುವ ಕೈಂಕರ್ಯದಲ್ಲಿ ತೊಡಗುತ್ತಾರೆ’ ಎಂದರು.

‘ಆರಂಭದಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸಲು ನಿರ್ಧರಿಸುತ್ತಾರೆ. ಹಿರಿಯ ಸ್ವಾಮೀಜಿ ಸಂಸ್ಥಾನದಲ್ಲಿ ಆರ್ಥಿಕ ಶಕ್ತಿಯ ಕೊರತೆ ಇರುವುದರ ಬಗ್ಗೆ ಕಿವಿಮಾತು ಹೇಳಿದಾಗ, ತನ್ನ ರುದ್ರಾಕ್ಷಿ ಮಾಲೆಯಲ್ಲಿದ್ದ ಚಿನ್ನದ ಅಂಚುಗಳನ್ನು ಮಾರಿ ಸಂಸ್ಥೆ ಆರಂಭಿಸಿದ್ದರು’ ಎಂದು ನೆನಪಿಸಿಕೊಂಡರು.

ಒಂದು ಬಾರಿ ಚಾಮರಾಜನಗರ ವಿದ್ಯಾರ್ಥಿನಿಲಯದಲ್ಲಿ ಊಟಕ್ಕೆ ತೊಂದರೆಯಾದಾಗ ರಾಜಮುದ್ರೆ ಉಂಗುರ ಒತ್ತೆಯಿಟ್ಟು ಸಾಮಾಗ್ರಿ ಖರೀದಿಸಿದ್ದರು. ತಮ್ಮ ಸಂಸ್ಥೆಯಲ್ಲಿ ಮುಸ್ಲಿಂ ಸಮುದಾಯದವರಿಗೂ ಶಿಕ್ಷಣಕ್ಕೆ ಅವಕಾಶ ನೀಡಿ ಜಾತ್ಯತೀತವಾಗಿ ಕೆಲಸ ಮಾಡಿದರು. ಹೀಗೆ ತನ್ನ ಸ್ವಂತದ ಬಗ್ಗೆ ಯೋಚಿಸದೆ ಸಮಾಜದ ಒಳಿತಿನ ಬಗ್ಗೆ ಯೋಚನೆ ಮಾಡುತ್ತಿದ್ದರು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಮಾತನಾಡಿ, ‘ಮಠದ ಪರಂಪರೆ ಮಾನವೀಯತೆಯನ್ನು ತನ್ನ ರಕ್ತಗತವಾಗಿ ರೂಢಿಸಿಕೊಂಡು ಬಂದಿದ್ದು, ಶಿಕ್ಷಣ ಧಾರ್ಮಿಕ ಕ್ಷೇತ್ರದಲ್ಲಿ ಸಮಾಜದ ಬೆನ್ನೆಲುಬಾಗಿ ನಿಂತಿದೆ’ ಎಂದು ಹೇಳಿದರು.

ಜೆಎಸ್‌ಎಸ್‌ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಎ.ಎನ್‌.ಸಂತೋಷ್‌ ಕುಮಾರ್‌, ಕುಲಸಚಿವ ಹರೀಶ್‌, ಪದಾಧಿಕಾರಿಗಳಾದ ನಟರಾಜು, ಧನರಾಜ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT