ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯದಿಂದ ಮೊಮ್ಮಗನ ಕರೆ ತಂದ ಸಿದ್ದರಾಮಯ್ಯ: ಪ್ರತಾಪ ಟೀಕೆ

Last Updated 20 ಏಪ್ರಿಲ್ 2023, 12:44 IST
ಅಕ್ಷರ ಗಾತ್ರ

ಮೈಸೂರು: ‘ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇನ್ನೂ 17 ವರ್ಷ ವಯಸ್ಸಿನ ಮೊಮ್ಮಗನನ್ನು (ಧವನ್ ರಾಕೇಶ್) ಕರೆ ತಂದು ಪೂಜೆ–ಪುನಸ್ಕಾರ ಮಾಡಿ ಭಾವನಾತ್ಮಕವಾಗಿ ಜನರ ಮುಂದೆ ಬರುತ್ತಿರುವುದನ್ನು ನೋಡಿದರೆ ಅವರಿಗೆ ಭಯ ಎಷ್ಟಿದೆ ಎನ್ನುವುದು ಗೊತ್ತಾಗುತ್ತದೆ’ ಎಂದು ಸಂಸದ ಪ್ರತಾಪ ಸಿಂಹ ಟೀಕಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರನ್ನು ನೋಡಿದರೆ ನಗು ಬರುತ್ತದೆ. 18 ವರ್ಷ ವಯಸ್ಸಿನೊಳಗಿನವರು ಪ್ರಚಾರಕ್ಕೆ ಬರುವಂತಿಲ್ಲ. ಆದರೆ, ಮೊಮ್ಮಗನೇ ಉತ್ತರಾಧಿಕಾರಿ ಎಂದು ಹೇಳಿ ಆತನೊಂದಿಗೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದಾರೆ. ಜನರಿಗೆ ಪರಿಚಯಿಸಿದ್ದಾರೆ’ ಎಂದು ಲೇವಡಿ ಮಾಡಿದರು.

‘ಮಗ, ಮೊಮ್ಮಗ ಮೊದಲಾದವರನ್ನು ಪ್ರಚಾರಕ್ಕೆ ಕರೆದುಕೊಂಡು ಬರುತ್ತಿರುವ ನಿಮಗೆ, ಕುಟುಂಬ ರಾಜಕಾರಣ ಕುರಿತು ಮಾತನಾಡುವ ನೈತಿಕತೆ ಇದೆಯೇ? ನಮ್ಮ ತತ್ವ–ಸಿದ್ಧಾಂತ ಸತ್ತು ಹೋಯಿತೇ? ಕಾಂಗ್ರೆಸ್‌ಗೆ ಹೋದ ಕೂಡಲೇ ನೈತಿಕತೆ ಅವವಿಟ್ಟಿದ್ದೀರಾ? ಮೊಮ್ಮಗನೇ ಉತ್ತರಾಧಿಕಾರಿ ಎಂಬ ಭಾವನಾತ್ಮಕ ಸಂದೇಶ ಕೊಡುತ್ತಿರುವ ಅವರಿಗೆ ಸೋಲಿನ ಭಯ ಕಾಡುತ್ತಿರುವುದು ಗೊತ್ತಾಗುತ್ತಿದೆ. ಇದರಲ್ಲಿ ಅವರ ಪುಕ್ಕಲುತನವೂ ಕಾಣಿಸುತ್ತಿದೆ’ ಎಂದು ಟೀಕಾಪ್ರಹಾರ ನಡೆಸಿದರು.

‘ಮುಖ್ಯಮಂತ್ರಿ ಆಗಿದ್ದಾಗಲೇ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಲ್ಲಿಲ್ಲ. ವರಣದಲ್ಲಿ ಪ್ರಬಲ ಅಭ್ಯರ್ಥಿ ವಿ. ಸೋಮಣ್ಣ ಕಣಕ್ಕಿಳಿಯುತ್ತಿದ್ದಂತೆಯೇ, ಮಗ–ಮೊಮ್ಮಗ ಎಂದೆಲ್ಲಾ ಭಾವನಾತ್ಮಕ ವಿಚಾರಗಳನ್ನು ಮಾತನಾಡುತ್ತಿದ್ದಾರೆ. ಎಂತಹ ಪುಕ್ಕಲತನ ನಿಮ್ಮದು?’ ಎಂದು ಕೇಳಿದರು. ‘ಮೇ 13ರವರೆಗೆ ಬಡಾಯಿ ಕೊಚ್ಚಿಕೊಳ್ಳುವುದನ್ನು ನಿಲ್ಲಿಸಲಿ’ ಎಂದರು.

‘ವರುಣದಲ್ಲಿ ಬಿಜೆಪಿ- ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಆದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್‌ ಮಾಡಿಕೊಂಡಿದ್ದು ಯಾರು?. 2018ಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆದ್ದಾಗ ಜನಾದೇಶಕ್ಕೆ ವಿರುದ್ಧವಾಗಿ ಜೆಡಿಎಸ್ ಜೊತೆ ಫಿಕ್ಸಿಂಗ್ ಮಾಡಿಕೊಂಡಿದ್ದು ಯಾರು?’ ಎಂದು ಕೇಳಿದರು.

‘ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗೂ ಆಗಮಿಸಲಿದ್ದಾರೆ. ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಮೊದಲಾದವರು ಕೂಡ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT