ಮೈಸೂರು: ‘ಮಳೆ ಕೊರತೆಯಿಂದ ಉಂಟಾಗಿರುವ ಸಂಕಷ್ಟದ ಪರಿಸ್ಥಿತಿಯನ್ನು ನಮ್ಮೊಂದಿಗೆ ತಮಿಳುನಾಡು ಕೂಡ ಹಂಚಿಕೊಳ್ಳಬೇಕಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.
‘ಜೂನ್ ತಿಂಗಳಿಗೆ ನಿಗದಿಪಡಿಸಿದ ನೀರನ್ನು ಕರ್ನಾಟಕವು ಹರಿಸಿಲ್ಲ’ ಎಂಬ ತಮಿಳುನಾಡು ಸರ್ಕಾರದ ಆರೋಪಕ್ಕೆ ನಗರದಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ‘ಈ ಬಾರಿ ಸರಿಯಾಗಿ ಮಳೆಯಾಗದೇ ನಮಗೆ ತೊಂದರೆಯಾಗಿದೆ. ಕೇರಳ ಹಾಗೂ ಕೊಡಗಿನಲ್ಲಿ ಮಳೆ ಕಡಿಮೆಯಾಗಿದ್ದು, ನಮ್ಮ ಜಲಾಶಯಗಳಿಗೆ ಒಳಹರಿವು ಕಡಿಮೆಯಾಗಿದೆ. ಹೆಚ್ಚುವರಿ ನೀರು ಬಂದಾಗಲೆಲ್ಲಾ ಹರಿಸುತ್ತಿದ್ದೆವು. ಈ ಬಾರಿ ಕೊಡಲಾಗಿಲ್ಲ. ಹೀಗಾಗಿ, ತಮಿಳುನಾಡು ತಗಾದೆ ತೆಗೆದಿದೆ. ನಮ್ಮ ಪರಿಸ್ಥಿತಿ ಹಾಗೂ ಬೆಳೆಗಳನ್ನೂ ನೋಡಬೇಕಲ್ಲಾ’ ಎಂದು ಕೇಳಿದರು.
‘ಶೇ 40 ಕಮಿಷನ್ ಬಗ್ಗೆ ತನಿಖೆ ನಡೆಸದೇ ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗದು. ಪ್ರಾಮಾಣಿಕವಾಗಿ ಕೆಲಸ ಮಾಡಿದ ಯಾರಿಗೂ ತೊಂದರೆ ಆಗುವುದಿಲ್ಲ. ಯಾರು ಭ್ರಷ್ಟಾಚಾರ ಮಾಡಿದ್ದಾರೆಯೋ, ಗುಣಮಟ್ಟದ ಕೆಲಸ ಮಾಡಿಲ್ಲವೋ ಅಂಥವರಿಗೆ ತೊಂದರೆ ಆಗುತ್ತದೆ. ನಾವು ಮಾಡಿದ್ದ ಆರೋಪ ಸಾಬೀತುಪಡಿಸಬೇಕಾಗಿದೆ’ ಎಂದರು.
‘ಶೇ 40 ಕಮಿಷನ್ ಪಡೆದಿರುವ ಬಿಜೆಪಿಯವರಿಗೆ ಹೋರಾಟ ನಡೆಸುವ ನೈತಿಕತೆ ಏನಿದೆ? ಭ್ರಷ್ಟಾಚಾರದ ಕಾರಣಕ್ಕಾಗಿಯೇ ಅವರನ್ನು ಜನ ತಿರಸ್ಕರಿಸಿದ್ದಾರೆ’ ಎಂದರು.
‘ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆ ವಿಷಯದಲ್ಲಿ ನ್ಯಾಯಾಲಯದ ನಿರ್ದೇಶನ ಪಾಲಿಸುತ್ತೇವೆ. ವಾರ್ಡ್‌ಗಳ ಪುನರ್ ವಿಂಗಡಣೆ ವಿಚಾರದಲ್ಲಿ ನ್ಯಾಯಾಲಯ ಗಡುವು ನೀಡಿದ್ದು, ಪ್ರಕ್ರಿಯೆ ನಡೆಯುತ್ತಿದೆ. ಚುನಾವಣೆ ವಿಚಾರದಲ್ಲಿ ನಾವು ಹಿಂದೆ ಬಿದ್ದಿಲ್ಲ, ಸದಾ ಸಿದ್ಧರಿದ್ದೇವೆ. ಮುಂದೂಡಿದ್ದವರು ಬಿಜೆಪಿಯವರು‘ ಎಂದು ಹೇಳಿದರು.
‘ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಹೊರಗಿಟ್ಟು ಚುನಾವಣಾ ಆಯುಕ್ತರ ನೇಮಕಕ್ಕೆ ಹೊರಟಿರುವುದರ ಹಿಂದೆ ಷಡ್ಯಂತ್ರವಿದೆ. ತಮಗೆ ಬೇಕಾದವರನ್ನು ನೇಮಿಸಿಕೊಳ್ಳಲು ಹೊರಟಿದ್ದಾರೆ. ಐಪಿಸಿ ಸೇರಿದಂತೆ ವಿವಿಧ ಕಾನೂನುಗಳಿಗೆ ಹೊಸ ರೂಪ ನೀಡಲು ಮುಂದಾಗಿದ್ದಾರೆ. ಏನೇನು ತೀರ್ಮಾನ ಮಾಡುತ್ತಾರೋ ನೋಡೋಣ. ಈ ದೇಶಕ್ಕೆ ಅನ್ವಯ ಆಗುವಂತಹ ಕಾನೂನುಗಳನ್ನು ಮಾಡಬೇಕು’ ಎಂದರು.
‘ಯುವ ನಿಧಿ ಯೋಜನೆಯನ್ನು ಜನವರಿಯಲ್ಲಿ ಜಾರಿಗೊಳಿಸಲಾಗುವುದು’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕಾಂಗ್ರೆಸ್ ಮುಖಂಡರಾದ ಕೆ.ಮರೀಗೌಡ, ಎಂ.ಕೆ.ಸೋಮಶೇಖರ್, ಎಂ.ಶಿವಣ್ಣ, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್ ಇದ್ದರು.
ಕೇಂದ್ರ ಸರ್ಕಾರ ತರಲು ಹೊರಟಿರುವ ಏಕರೂಪ ನಾಗರಿಕ ಸಂಹಿತೆಗೆ ನಮ್ಮ ವಿರೋಧವಿದೆಸಿದ್ದರಾಮಯ್ಯ ಮುಖ್ಯಮಂತ್ರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.