ಮೈಸೂರು: ಇಲ್ಲಿನ ಕೆ.ಜಿ.ಕೊಪ್ಪಲಿನಲ್ಲಿ ಆಯುಷ್ ಇಲಾಖೆಯಿಂದ ₹2 ಕೋಟಿ ವೆಚ್ಚದಲ್ಲಿ ನವೀಕರಿಸಲಾದ ಪ್ರಕೃತಿ ಚಿಕಿತ್ಸಾ ಸರ್ಕಾರಿ ಆಸ್ಪತ್ರೆ ಕಟ್ಟಡವನ್ನು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಶುಕ್ರವಾರ ಉದ್ಘಾಟಿಸಿದರು.
ನಂತರ ಮಾತನಾಡಿ, ‘ನಮ್ಮ ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈಗ ಆಧುನಿಕತೆ ಚಿಕಿತ್ಸೆಯ ಜತೆಗೆ ಪ್ರಾಕೃತಿಕ ಚಿಕಿತ್ಸೆಗೂ ಜನತೆ ಮುಂದಾಗುತ್ತಿದ್ದಾರೆ. ಯೋಗಾಭ್ಯಾಸ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪ್ರಕೃತಿ ಚಿಕಿತ್ಸಾ ಸರ್ಕಾರಿ ಆಸ್ಪತ್ರೆಯ ಸೌಲಭ್ಯವನ್ನು ಜನರು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಈ ಆಸ್ಪತ್ರೆಯಲ್ಲಿ 10 ಬಗೆಯ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ತಲೆನೋವು, ಮಂಡಿನೋವು ಸೇರಿ ಎಲ್ಲಾ ಬಗೆಯ ಸಮಸ್ಯೆಗಳಿಗೂ ಚಿಕಿತ್ಸಾ ಲಭ್ಯವಿದೆ. ಇಬ್ಬರು ವೈದ್ಯರು ಕೂಡ ಇದ್ದಾರೆ. ಪ್ರತಿ ದಿನ ಬೆಳಿಗ್ಗೆ 9.30ರಿಂದ ಸಂಜೆ 5ರವರೆಗೆ ತೆರೆದಿರುತ್ತದೆ’ ಎಂದರು.
‘ಈ ಆಸ್ಪತ್ರೆಯಲ್ಲಿ ಮುಂದಿನ ದಿನಗಳಲ್ಲಿ ಮಧುಮೇಹಿಗಳಿಗಾಗಿಯೇ ನಗರದಲ್ಲೇ ಪ್ರಥಮವಾಗಿ ಪ್ರತ್ಯೇಕ ಘಟಕ ಸ್ಥಾಪಿಸಲಾಗುವುದು’ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪಾ ತಿಳಿಸಿದರು.
ಮುಡಾ ಅಧ್ಯಕ್ಷ ಕೆ.ಮರೀಗೌಡ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಆಸ್ಪತ್ರೆಯ ವೈದ್ಯಾಧಿಕಾರಿಗಳು, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರವಿ, ಶ್ರೀನಿವಾಸ ಪಾಲ್ಗೊಂಡಿದ್ದರು.