ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್ ಭೀತಿ; ಕೆಎಸ್‌ಆರ್‌ಟಿಸಿ ವರಮಾನದಲ್ಲಿ ಇಳಿಕೆ

ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡ ಕೆಎಸ್‌ಆರ್‌ಟಿಸಿ; ಹಲವು ಮಾರ್ಗಗಳ ಬಸ್‌ ಸಂಚಾರ ರದ್ದು
Last Updated 18 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಮೈಸೂರು: ಕೊರೊನಾ ವೈರಸ್‌ ಸೋಂಕಿನ ಭೀತಿ ಎಲ್ಲೆಡೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವೈರಾಣು ಹರಡುವಿಕೆ ತಡೆಗಟ್ಟಲು ಸರ್ಕಾರ–ಜಿಲ್ಲಾಡಳಿತ ಹಲವು ಕಠಿಣ ಮುನ್ನೆಚ್ಚರಿಕೆ ಕ್ರಮ ಜಾರಿಗೊಳಿಸಿವೆ. ಇದರ ಪರಿಣಾಮ ಮೈಸೂರಿನಲ್ಲಿ ಜನರ ಸಂಚಾರ ವಿರಳವಾಗಿದೆ. ಪ್ರವಾಸೋದ್ಯಮ ತಾಣಗಳಿಗೆ ಪ್ರವಾಸಿಗರ ಭೇಟಿಗೆ ಅವಕಾಶವಿಲ್ಲದಂತಾಗಿದೆ.

ಇದರಿಂದಾಗಿ ಕೆಎಸ್‌ಆರ್‌ಟಿಸಿಯ ಮೈಸೂರು ವಿಭಾಗ ಹಾಗೂ ಮೈಸೂರು ಗ್ರಾಮಾಂತರ ವಿಭಾಗದ ವರಮಾನಕ್ಕೆ ಹೊಡೆತ ಬಿದ್ದಿದೆ. ಇದರ ಜತೆಯಲ್ಲೇ ಬಸ್‌ ನಿಲ್ದಾಣ ಮತ್ತು ಸುತ್ತಮುತ್ತಲಿನ ವ್ಯಾಪಾರ ವಲಯಕ್ಕೂ ಕೊರೊನಾ ಕರಿನೆರಳು ಕಾಡುತ್ತಿರುವ ಚಿತ್ರಣ ಬುಧವಾರ ಗೋಚರಿಸಿತು.

ಮೈಸೂರಿನ ಸಬ್‌ಅರ್ಬನ್‌, ನಗರ ಬಸ್‌ ನಿಲ್ದಾಣ ಸೇರಿದಂತೆ ಜಿಲ್ಲೆಯ ವಿವಿಧೆಡೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳು ಹಾಗೂ ಖಾಸಗಿ ಬಸ್‌ ನಿಲ್ದಾಣಗಳಲ್ಲಿ ಜನದಟ್ಟಣೆ ವಿರಳವಾಗಿತ್ತು. ನಿಲ್ದಾಣದೊಳಗೆ ಅರ್ಧ ತಾಸು ಬಸ್‌ ನಿಲ್ಲಿಸಿದ್ದರೂ; ಹೊರ ರಾಜ್ಯಗಳಿಗೆ ತೆರಳುವ ಬಸ್‌ಗೆ ಇಬ್ಬರು ಪ್ರಯಾಣಿಕರೂ ಹತ್ತಲಿಲ್ಲ.

ಅಂತರರಾಜ್ಯ ಬಸ್‌ಗಳ ಫ್ಲ್ಯಾಟ್‌ಫಾರಮ್‌ನಲ್ಲಿ ಜನರೇ ಗೋಚರಿಸಲಿಲ್ಲ. ಬಹುತೇಕ ಬಸ್‌ಗಳು ಖಾಲಿ ಖಾಲಿ ಸಂಚರಿಸಿದವು. ನಾಲ್ಕೈದು ಜನರಿದ್ದರೆ ಹೆಚ್ಚು ಎನ್ನುವಂತಿತ್ತು. ಇನ್ನೂ ಬಸ್‌ ನಿಲ್ದಾಣದೊಳಗಿರುವ ಹಾಗೂ ಆಸುಪಾಸಿನ ಅಂಗಡಿ ಮಳಿಗೆಗಳು, ಹೋಟೆಲ್‌, ಲಾಡ್ಜ್‌ಗಳು ಜನರಿಲ್ಲದೆ ಬಿಕೋ ಎನ್ನುವಂತಿದ್ದವು. ನಿತ್ಯದ ವಹಿವಾಟು ಅರ್ಧಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿದೆ.

ಬಾಡಿಗೆ ಕಟ್ಟುವುದು ಕಷ್ಟವಾಗಿದೆ: ‘ಕೊರೊನಾ ವೈರಸ್ ಭೀತಿಗೂ ಮುನ್ನ ನಿತ್ಯವೂ ಸಹಸ್ರ, ಸಹಸ್ರ ರೂಪಾಯಿ ವಹಿವಾಟು ನಡೆಯುತ್ತಿತ್ತು. ತಡರಾತ್ರಿಯಲ್ಲೂ ವ್ಯಾಪಾರ ಬಿರುಸಿರುತ್ತಿತ್ತು. ಆದರೆ, ಈಚೆಗಿನ ದಿನಗಳಲ್ಲಿ ಹಗಲು ವೇಳೆಯೇ ವ್ಯಾಪಾರ ಪೂರ್ತಿ ಡಲ್ಲಾಗಿದೆ. ಹಿಂದಿನ ವಹಿವಾಟಿನಲ್ಲಿ ಕಾಲು ಭಾಗವೂ ನಡೆಯುತ್ತಿಲ್ಲ’ ಎನ್ನುತ್ತಾರೆ ಬಸ್‌ ನಿಲ್ದಾಣದೊಗೆ ಮಳಿಗೆ ಹೊಂದಿರುವ ವ್ಯಾಪಾರಿಶಫಿ.

‘ವ್ಯಾಪಾರ ಇಲ್ಲವಾಗಿದೆ. ತಿಂಗಳ ಕೊನೆ ಸಮೀಪಿಸುತ್ತಿದೆ. ಮಾರ್ಚ್‌ ತಿಂಗಳ ಬಾಡಿಗೆ ಕಟ್ಟಬೇಕು ಎಂದರೆ ಕೈಯಿಂದ ಕಟ್ಟಬೇಕು. ಇಲ್ಲದಿದ್ದರೆ ಸಾಲ ಮಾಡಿಯಾದರೂ ಮಳಿಗೆಯ ಬಾಡಿಗೆ ಕಟ್ಟಬೇಕು ಎಂಬ ಸ್ಥಿತಿ ನಿರ್ಮಾಣವಾಗಿದೆ. ಬೇಕರಿ ಉತ್ಪನ್ನಗಳು ಮಾರಾಟವಾಗುತ್ತಿಲ್ಲ. ಇದರ ನಷ್ಟ ಯಾರಿಗೂ ಹೇಳಲಿಕ್ಕಾಗಲ್ಲ’ ಎಂದು ವ್ಯಾಪಾರಿ ಜಾವೀದ್ ತಿಳಿಸಿದರು.

ಮಾಸ್ಕ್‌ ವಿತರಣೆ; ರಾಸಾಯನಿಕ ಸಿಂಪಡಣೆ

‘ನಮ್ಮ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ಸಿಬ್ಬಂದಿಗೂ ಮಾಸ್ಕ್ ವಿತರಿಸಲಾಗಿದೆ. ಚಾಲಕ–ನಿರ್ವಾಹಕರಿಗೆ ಮಾಸ್ಕ್‌ ಧರಿಸಲು ಸೂಚನೆ ನೀಡಲಾಗಿದೆ. ಬಸ್‌ಗಳು ಡಿಪೊಗೆ ಬಂದಾಗ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ. ಕೊರೊನಾ ವೈರಸ್‌ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.

ಬಸ್‌ನಿಲ್ದಾಣ, ಡಿಪೊ, ಶೌಚಾಲಯಗಳಲ್ಲಿ ಸ್ಯಾನಿಟೈಸರ್ ಬಳಕೆ ಹೆಚ್ಚಿಸಲಾಗಿದೆ’ ಎಂದು ಕೆಎಸ್‌ಆರ್‌ಟಿಸಿಯ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌.ಪಿ.ನಾಗರಾಜ್, ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಆರ್‌.ಅಶೋಕ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ವಿಭಾಗೀಯ ಕಚೇರಿಯಿಂದ ಮಾಸ್ಕ್ ನೀಡಿಲ್ಲ. ಬಸ್‌ ನಿಲ್ದಾಣದ ಅಂಗಡಿಗಳಲ್ಲಿ ₹ 40ಕ್ಕೆ ಒಂದರಂತೆ ಮಾಸ್ಕ್‌ ಮಾರಾಟ ಮಾಡುತ್ತಿದ್ದಾರೆ. ಇಲ್ಲಿಯೇ ನಿಗದಿಗಿಂತ ಹೆಚ್ಚಿನ ಬೆಲೆ ತೆತ್ತು, ಮಾಸ್ಕ್‌ ಖರೀದಿಸಿ ಧರಿಸಿದ್ದೇವೆ’ ಎಂದು ಹೆಸರು ಬಹಿರಂಗ ಪಡಿಸಲಿಚ್ಚಿಸದ ಸಬರ್‌ಬನ್‌ ಬಸ್‌ನಿಲ್ದಾಣದ ಸಂಚಾರ ನಿಯಂತ್ರಕರೊಬ್ಬರು ಹೇಳಿದರು.

ಮೈಸೂರು ವಿಭಾಗದ ಚಿತ್ರಣ

* 425 ಮಾರ್ಗಗಳಲ್ಲಿ ಈ ಹಿಂದೆ ಮೈಸೂರು ನಗರದಲ್ಲಿ ಚಲಿಸುತ್ತಿದ್ದ ಬಸ್‌ಗಳು

*40 ಮಾರ್ಗಗಳ ಬಸ್‌ ಸಂಚಾರ ರದ್ದುಗೊಳಿಸುವಿಕೆ ಪ್ರಸ್ತುತ

*₹30 ಲಕ್ಷ ಈ ಹಿಂದಿನ ನಿತ್ಯದ ಸರಾಸರಿ ವರಮಾನ

* ₹3 ಲಕ್ಷ ವರಮಾನ ಕುಸಿತ ನಿತ್ಯವೂ ಪ್ರಸ್ತುತ

* 20% ಜನರ ಓಡಾಟ ಕಡಿಮೆ

ಮೈಸೂರು ಗ್ರಾಮಾಂತರ ವಿಭಾಗದ ಚಿತ್ರಣ

* 670 ಮಾರ್ಗಗಳಲ್ಲಿ ಮೈಸೂರು ಜಿಲ್ಲೆಯಿಂದ ಕಾರ್ಯಾಚರಿಸುತ್ತಿದ್ದ ಬಸ್‌ಗಳ ಸಂಖ್ಯೆ

* ಶೇ 50ರಷ್ಟು ವೋಲ್ವೊ ಬಸ್‌ಗಳ ಸಂಚಾರ ರದ್ದು

* ಶೇ 30ರಷ್ಟು ಸಾಮಾನ್ಯ ಬಸ್‌ಗಳ ಸಂಚಾರ ರದ್ದು

* ₹80 ಲಕ್ಷ ಈ ಹಿಂದಿನ ನಿತ್ಯದ ಸರಾಸರಿ ವರಮಾನ

* ಶೇ 25ರಷ್ಟು ವರಮಾನ ಕುಸಿತ ನಿತ್ಯವೂ ಪ್ರಸ್ತುತ

ಆಧಾರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT