ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕ್ಕಾಗಿ ಶಾಲೆ, ಹಸ್ತಪ್ರತಿಗೆ ಗ್ರಂಥಾಲಯ

Last Updated 25 ಜೂನ್ 2018, 10:51 IST
ಅಕ್ಷರ ಗಾತ್ರ

ಹತ್ತನೇ ಚಾಮರಾಜೇಂದ್ರ ಒಡೆಯರ್ ಆಡಳಿತದಲ್ಲಿ ಅನೇಕ ಖಾಸಗಿ ಶಾಲೆಗಳಿಗೆ ಸರ್ಕಾರ ನೆರವು ನೀಡಿತು. ಈ ಪೈಕಿ ಕೆಲವು ಶಾಲೆಗಳು ಸಂಸ್ಕೃತದಲ್ಲಿ ಶಿಕ್ಷಣ ನೀಡುತ್ತಿದ್ದವು. ಸಂಸ್ಕೃತ, ಕನ್ನಡ ಭಾಷೆಯ ಮಾಧ್ಯಮ ಶಿಕ್ಷಣ ನಿರಂತರವಾಗಿತ್ತು. ಈ ಪರೀಕ್ಷೆಗಳನ್ನು ಮೈಸೂರು ಲೋಕಲ್ ಎಕ್ಸಾಮಿನೇಶನ್ ಎಂದು ಕನ್ನಡ ಅಭ್ಯರ್ಥಿಗಳಿಗೆ ಸುಸೂತ್ರವಾಗಿ ನಡೆಸುವ ವ್ಯವಸ್ಥೆಯೂ ಬಂದಿತ್ತು. ಇಂಗ್ಲಿಷ್ ಸ್ಕೂಲುಗಳಲ್ಲಿ ಮಿಡ್ಲ್‌ಸ್ಕೂಲ್ ಎಕ್ಸಾಮಿನೇಶನ್ ಎಂದೂ ನಡೆಸಲಾಯಿತು. ಇದೇ ಲೋಕಲ್ ಪರೀಕ್ಷೆಗಳಲ್ಲಿ ಪಾಸಾದವರಿಗೆ ಸಾರ್ವಜನಿಕ ಸೇವೆಗೆ ನೇಮಕ ಮಾಡಿಕೊಳ್ಳಲು ಅರ್ಹತೆಯೂ ಇತ್ತು. ಕನ್ನಡ ಮತ್ತು ಸಂಸ್ಕೃತ ಕಲಿಯಲು ಮಹಾರಾಜರು ಪ್ರೇರಣೆ ನೀಡಿದರು. ಇದಕ್ಕಾಗಿಯೇ ಸಂಸ್ಕೃತ ಕಾಲೇಜನ್ನು ಸ್ಥಾಪಿಸಿ ಅದರ ಸುಧಾರಣೆಗೆ ಮನಸ್ಸು ಮಾಡಿದರು.

ಇಂಡಿಯಾದ ಎಲ್ಲ ಸಂಶೋಧನಾ ವಿದ್ಯಾರ್ಥಿಗಳಿಗೆ ಎಲ್ಲ ಸಂಸ್ಕೃತ ವಿಷಯದ ಶಾಖೆಗಳನ್ನು ಅಧ್ಯಯನ ಮಾಡಲು ಅವಕಾಶ ಮಾಡಿಕೊಡಲಾಯಿತು. ಅಂತೆಯೇ ಉತ್ತಮ ವಿದ್ಯಾರ್ಥಿಗಳಿಗೆ ಒಳ್ಳೆಯ ಬಹುಮಾನವನ್ನು ಕೊಡಲಾಯಿತು. ದಸರಾ ದರ್ಬಾರ್‌ನಲ್ಲಿ ವಿಶೇಷವಾಗಿ ಗೌರವಿಸಲಾಗುತ್ತಿತ್ತು. ಪ್ರಮಾಣಪತ್ರ ಮತ್ತು ಸ್ಮರಣಿಕೆಗಳನ್ನು ನೀಡಲಾಗುತ್ತಿತ್ತು. ಇನ್ನು ಕನ್ನಡವನ್ನೇ ವಿಶೇಷವಾಗಿ ಅಧ್ಯಯನ ಮಾಡಲು, ಸಾಹಿತ್ಯ ಅಭ್ಯಾಸ ಮಾಡಲು ಒಂದು ಸಭೆ ರಚಿಸಲಾಯಿತು. ಅದೇ ಹೆಸರಾಂತ ಕರ್ನಾಟಕ ಭಾಷೋಜ್ಜೀವಿ ಸಭಾ. ಇದರೊಂದಿಗೆ ಒಂದು ಪಾಠಶಾಲೆಯನ್ನೂ ಆರಂಭಿಸಲಾಯಿತು. ಈ ಸಭಾದಲ್ಲಿ ಪಂಡಿತರಾದ ಸೀತಾರಾಮಶಾಸ್ತ್ರಿ, ಕಸ್ತೂರಿ ರಂಗಾಚಾರ್, ವ್ಯಾಕರಣ ಶಾಮಾಚಾರ್ ಮತ್ತು ಸುಂದರ ಶಾಸ್ತ್ರಿಗಳೆಂಬ ಪಂಡಿತರು ಬೋಧಕರಾಗಿದ್ದರು. ಇದೇ ಸಮಯದಲ್ಲಿ ಕನ್ನಡದ ವಿದ್ವಾಂಸರಾಗಿದ್ದ ಬಸವಪ್ಪ ಶಾಸ್ತ್ರಿಯವರು ಸ್ವಂತ ಕೃತಿಗಳನ್ನು ತಂದರಲ್ಲದೆ ಸಂಸ್ಕೃತದಿಂದ ಕನ್ನಡಕ್ಕೆ ಅನುವಾದ ಸಾಹಿತ್ಯ ಕಾರ್ಯ ಮಾಡಿದರು.

ಕಾಳಿದಾಸನ ಶಾಕುಂತಲವನ್ನು ನಾಡಿಗೆ ಕೊಟ್ಟರಲ್ಲದೆ ಇತರ ನಾಟಕ ಕೃತಿಗಳನ್ನು ನೀಡಿದರು. ಇವರಲ್ಲದೆ ಮಹಮದೀಯ ವಿದ್ವಾಂಸರಾದ ಮೌಲ್ವಿ ಷಾಬುದ್ದೀನ್ ಅವರಿದ್ದರು. ಉರ್ದು ಮತ್ತು ಪರ್ಶಿಯನ್ ಭಾಷೆಯಲ್ಲಿ ಇವರದು ಎತ್ತಿದ ಕೈ. ಇವರೆಲ್ಲರನ್ನೂ ಮಹಾರಾಜರು ಸಾರ್ವಜನಿಕ ಶಿಕ್ಷಣಕ್ಕೆ ಬಳಸಿಕೊಂಡರು. ಇವರೆಲ್ಲರಿಗೂ ಬಿರುದುಗಳನ್ನು ನೀಡಿ ಗೌರವಿಸಲಾಗಿತ್ತು. ಚಾಮರಾಜೇಂದ್ರರ ಆಡಳಿತಕ್ಕೂ ಮುಂಚೆ ವ್ಯವಸ್ಥಿತವಾದ ಆಧುನಿಕ ರಂಗಭೂಮಿ ಇರಲಿಲ್ಲ. ಅರಮನೆಗೆ ಹೊಂದಿಕೊಂಡಂತೆ ನಾಟಕಶಾಲೆಯನ್ನು ರೂಪಿಸಿದರು. ಗಮನಾರ್ಹವಾದ ಪ್ರೋತ್ಸಾಹ ಕೊಟ್ಟು ರಂಗಭೂಮಿಯ ಮಹಾಪೋಷಕರೂ ಆಗಿದ್ದರು.

ಸ್ವಾಮಿ ವಿವೇಕಾನಂದರು ಷಿಕಾಗೋದಲ್ಲಿ ನಡೆದ ಧರ್ಮ ಸಂಸದ್‌ಗೆ ಹೋಗಲು ಭೌತಿಕವಾದ ನೆರವು ನೀಡಿದ ಹಿಂದೂ ಆಡಳಿತಗಾರರು ಈ ಮಹಾರಾಜರು. ನಂತರ ರಾಣಿ ವಿಕ್ಟೋರಿಯಾ ಆಡಳಿತದ ಗೋಲ್ಡನ್ ಜುಬಿಲಿಯ ನೆನಪಿಗಾಗಿ ಒಂದು ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯು ಸಾಧ್ಯವಾದ ಕನ್ನಡ ಮತ್ತು ಸಂಸ್ಕೃತದ ಪ್ರಾಚೀನ ಹಸ್ತಪ್ರತಿಗಳನ್ನು ತರಿಸಿ ಸಂಗ್ರಹಿಸಿ ವಿದ್ವಾಂಸರಿಗೆ ಜ್ಞಾನಪ್ರಸಾರ ಮಾಡಿತು. ಇದೇ ಪ್ರಸಿದ್ಧ ಓರಿಯಂಟಲ್ ಲೈಬ್ರರಿ.

ಮತ್ತೊಂದು ಸಾಧನೆಯೆಂದರೆ ರಾಜ್ಯದಲ್ಲಿ ಆರ್ಕಿಯಾಲಾಜಿಕಲ್ ಸರ್ವೆಯನ್ನು ವೈಜ್ಞಾನಿಕವಾಗಿ ವ್ಯವಸ್ಥಿತವಾಗಿ ರೂಪಿಸಿದರು. ಪಕ್ಕದ ರಾಜ್ಯಗಳಾದ ಬಾಂಬೆ, ಮದ್ರಾಸು ಸಂಸ್ಥಾನಗಳಲ್ಲಿ ಈ ಕಾರ್ಯ ಆರಂಭವಾಗಿತ್ತು. ಈ ಎರಡೂ ಸಂಸ್ಥಾನಗಳಿಗೆ ಕೇಂದ್ರವಾಗಬೇಕೆಂದು ಈ ಇಲಾಖೆಯನ್ನು ಆರಂಭಿಸಲಾಯಿತು. ಈ ಇಲಾಖೆಯ ನೇತೃತ್ವ ವಹಿಸಲು ಶಿಕ್ಷಣ ಇಲಾಖೆ ಕಾರ್ಯದರ್ಶಿಯಾಗಿದ್ದ ಬಿ.ಎಲ್.ರೈಸ್ ಅವರಿಗೆ ಜವಾಬ್ದಾರಿ ನೀಡಲಾಯಿತು. ಸ್ವಯಂ ವಿದ್ವಾಂಸರೂ ಆಗಿದ್ದ ಇವರು ಇಂಡಿಯಾದ ಪ್ರಾಚೀನತೆಯ ಅಧ್ಯಯನಕ್ಕೆ ಸಂಶೋಧನಾ ಕಾರ್ಯಕ್ಕೆ ಮುಖ್ಯರಾಗಿ ದುಡಿದರು.

ಇದಕ್ಕಿಂತ ಮುಖ್ಯವಾಗಿ ರಾಜ್ಯದಲ್ಲಿ ಇವರು ಮಾಡಿದ ಸಾಹಸ ಸಾಹಿತ್ಯ ಕಾರ್ಯವೆಂದರೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನಲ್ಲಿದ್ದ ಅಶೋಕನ ಶಾಸನಗಳನ್ನು ಪತ್ತೆ ಹಚ್ಚಿರುವುದು. ಈ ಸಂಬಂಧ ಪ್ರೌಢ ಸಂಶೋಧನೆ ಪ್ರಬಂಧಗಳು ಮೊದಲು ಪ್ರಕಟವಾಗಿದ್ದು ಪ್ಯಾರಿಸ್, ವಿಯೆಟ್ನಾಂ ಮತ್ತು ಲಂಡನ್‌ನಲ್ಲಿ. ಪ್ರತಿ ಶಾಸನದ ಕೊನೆಯಲ್ಲಿ ಇದ್ದ ಕೆಲವು ಅಕ್ಷರಗಳ ರಹಸ್ಯವನ್ನು ವಿಯೆಟ್ನಾಂ ಪ್ರೊಫೆಸರ್ ಬುಹ್ಲರ್ ಲಿಪಿಕರೇನ ಎನ್ನುವ ಹೆಸರಿನಲ್ಲಿ ಬಿಡಿಸಿದರು. ಈ ಲಿಪಿಗಳು ಖರೋಷ್ಠಿ ಅಥವಾ ಬಕ್ತ್ರೆಯನ್–ಪಾಳಿಯಿಂದ ಎನ್‌ಗ್ರೇವರ್‌ನಿಂದ ಎಡಗಡೆಯಿಂದ ಬಲಗಡೆಗೆ ಬರೆದವುಗಳಾಗಿದ್ದವು.

ಮಹಾರಾಜರು ಆಡಳಿತ ಮಾಡುತ್ತಿದ್ದಾಗ ನಾಲ್ಕು ಮಂದಿ ಅತಿ ಗಣ್ಯವ್ಯಕ್ತಿಗಳು ಮೈಸೂರು ರಾಜ್ಯಕ್ಕೆ ಭೇಟಿ ನೀಡಿದರು. ಅವರೆಂದರೆ ಲಾರ್ಡ್ ಡಫರಿನ್, ಪ್ರಿನ್ಸ್ ಆಲ್ಬರ್ಟ್ ವಿಕ್ಟರ್, ಲಾರ್ಡ್ ಲ್ಯಾನ್ಸ್‌ಡೌನ್, ಫೀಲ್ಡ್ ಮಾರ್ಷಲ್ ಸರ್ ಜಾರ್ಜ್ ವೆಲ್ಲೆಸ್ಲಿ. ರಾಜ್ಯವನ್ನು ಬ್ರಿಟಿಷ್ ಕಮಿಶನ್ ಆಳ್ವಿಕೆ ನಡೆಸುತ್ತಿದ್ದಾಗ ಕೊನೆಯ ಗಣ್ಯವ್ಯಕ್ತಿಯಾಗಿ ಲಾರ್ಡ್ ಲಿಟ್ಟನ್ ಬಂದು ಹೋಗಿದ್ದರು. ಆದರೆ, ಇವರು ಬಂದದ್ದು ಇಲ್ಲಿನ ಬರಗಾಲ ಸಮೀಕ್ಷೆಗಾಗಿ. ಇಂಗ್ಲಿಷರನ್ನು ಮುಕ್ತಗೊಳಿಸಿ ನಮ್ಮದೇ ಮಹಾರಾಜರು ಆಳ್ವಿಕೆ ಪ್ರಾರಂಭಿಸಿದಾಗ ಲಾರ್ಡ್ ರಿಪ್ಪನ್ ನಂತರ ವೈಸ್‌ರಾಯ್ ಆಗಿ ಬಂದ ಲಾರ್ಡ್ ಡಫರಿನ್ ರವರು ಮಹಾರಾಜ ಸ್ನೇಹಮಯ ಭೇಟಿ ಮಾಡಿದ್ದರು. ಇವರೊಂದಿಗೆ ಪತ್ನಿ ಡಫರಿನ್‌ರೂ ಬಂದಿದ್ದರು. ಡಫರಿನ್ ಅವರನ್ನು ಮಹಾರಾಜರು ಮತ್ತು ಅವರ ಅಧಿಕಾರ ವರ್ಗದವರು ಸಂತೋಷಭರಿತ ಸ್ವಾಗತ ನೀಡಿದರು.

ಇದೇ ದಿನ ಮರದ ಅರಮನೆಯನ್ನು ಅದ್ಭುತವಾಗಿ ವಿಶೇಷ ದೀಪಾಲಂಕರಗಳಿಂದ ಬೆಳಗಿಸಲಾಗಿತ್ತು. ರಾಜ್ಯದ ಪರವಾಗಿ ಭಾರಿ ಔತಣಕೂಟವನ್ನು ಅದೇ ದಿನ ಏರ್ಪಡಿಸಲಾಗಿತ್ತು. ಚಕ್ರವರ್ತಿನಿಯರ ಆರೋಗ್ಯ ಬಯಸಿ ಈ ಭೋಜನವನ್ನು ಆಯೋಜಿಸಲಾಗಿತ್ತು. ಡಫರಿನ್ ಮತ್ತು ಲೇಡಿ ಡಫರಿನ್ ಇಬ್ಬರೂ ಮಹಾರಾಜರನ್ನು ಕುರಿತು ಭಾವನಾತ್ಮಕ ಭಾಷಣ ಮಾಡಿದ್ದರು. ತಲತಲಾಂತರದಿಂದ ಬಂದಿದ್ದ ಮೈಸೂರು ರಾಜಮನೆತನ ತನ್ನ ಪಾರಂಪರಿಕ ಅಧಿಕಾರವನ್ನು 50 ವರ್ಷ ಕಳೆದುಕೊಂಡಿದ್ದಕ್ಕೆ ವ್ಯಥೆ ಪಟ್ಟರು. ನಂತರ ಇಂಗ್ಲಿಷ್ ಆಡಳಿತ ಮುಕ್ತ ದೇಶೀಯ ಆಡಳಿತ ಸಿಕ್ಕಿರುವುದಕ್ಕೆ ಅಪಾರ ಸಂತೋಷದಿಂದ ಸಮರ್ಥನೆ ಮಾಡಿದರು. ಈ ನೂತನ ಮಹಾರಾಜರ ಕಾಲದಲ್ಲಿ ರಾಜ್ಯ ಸರ್ವತೋಮುಖವಾಗಿ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು. ಇಂಡಿಯಾದ ಸಂಸ್ಥಾನಗಳಲ್ಲೇ ಸುಧಾರಿತ ರಾಜ್ಯವಾಗಲಿ ಎಂದು ಶುಭ ಕೋರಿದರು. ಚಕ್ರವರ್ತಿನಿ ಮತ್ತು ಗ್ರೇಟ್ ಬ್ರಿಟನ್ ಸರ್ಕಾರವು ಈ ದೃಷ್ಟಿಯಿಂದಲೇ ನಿಮ್ಮನ್ನು ಅಭಿನಂದಿಸುತ್ತದೆ ಎಂದು ಹೇಳಿದರು.

ಭೋಜನ–ಭಾಷಣದ ನಂತರ ಅರಮನೆ ಕೋಟೆ ಬಳಿ ಬಾಣಬಿರುಸಿನ ಚಿತ್ತಾರವೂ ಇತ್ತು. ಈ ಸಂದರ್ಭದಲ್ಲಿ ಇನ್ನೊಂದು ವಿಶೇಷ ಕಾರ್ಯಕ್ರಮ ಎಂದರೆ ಮಂಜರಾಬಾದಿನ (ಸಕಲೇಶಪುರ) ಗೌಡರು ಯುದ್ಧ ನೃತ್ಯ ಪ್ರದರ್ಶಿಸಿದುದು ರೋಮಾಂಚಕವಾಗಿತ್ತು. ಪ್ರತಿಯೊಬ್ಬ ನೃತ್ಯಗಾರರಿಗೆ ವಿಶೇಷ ಬಣ್ಣದ ಬೆಳಕು ಬೀಳುವಂತೆ ಸಂಯೋಜನೆ ಮಾಡಲಾಗಿತ್ತು. ನಿಜವಾದ ಯುದ್ಧವೇ ನಡೆದಂತೆ ಭಾಸವಾಗುವಂತೆ ಖಡ್ಗ ಝಳಪಿಸಿದ್ದು ಈ ಬೆಳಕಿನಲ್ಲಿ ಕಂಡ ಒಂದು ಅದ್ಭುತವೇ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT