ಮಂಗಳವಾರ, ಜನವರಿ 31, 2023
19 °C
‘ಅಣಕು ಕಾರ್ಯಾಚರಣೆ’: ಎನ್‌ಡಿಆರ್‌ಎಫ್‌, ಅಗ್ನಿಶಾಮಕ ಸಿಬ್ಬಂದಿ ಭಾಗಿ

ಅನಿಲ ದುರಂತ, ಕಾರ್ಮಿಕರ ರಕ್ಷಣೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಟ್ಯಾಂಕರ್‌ ಶನಿವಾರ ಬೆಳಿಗ್ಗೆ 11ರ ವೇಳೆಗೆ ಚಾಲಕನ ನಿಯಂತ್ರಣ ತಪ್ಪಿ ಕೊಳವೆ ಮಾರ್ಗ ನಿರ್ಮಿಸುತ್ತಿದ್ದ ಕಾರ್ಮಿಕರೆಡೆಗೆ ನುಗ್ಗಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆಯಿತು. ಆರು ಮಂದಿ ಗಾಯಗೊಂಡರು. ಮಿಂಚಿನ ವೇಗದಲ್ಲಿ ಧಾವಿಸಿದ ರಕ್ಷಣಾ ಪಡೆಯು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ಗಾಯಾಳು ಕಾರ್ಮಿಕರನ್ನು ರಕ್ಷಿಸಿತು! ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ನೇತೃತ್ವದಲ್ಲಿ ಹೆಬ್ಬಾಳ ಕೈಗಾರಿಕಾ ಪ್ರದೇಶದ ರಾಣೆ ಮದ್ರಾಸ್‌ ಕಾರ್ಖಾನೆ ಬಳಿ ನಡೆದ ‘ಅಣಕು ಕಾರ್ಯಾಚರಣೆ’ಯ ದೃಶ್ಯಗಳು ಇವು.

ಕಾರ್ಯಾಚರಣೆಯು ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಹಾಗೂ ಎಜಿ ಅಂಡ್ ಪಿ ಸಿಟಿ ಗ್ಯಾಸ್ ಪೈವೇಟ್‌ ಲಿಮಿಟೆಡ್‌ ಸಹಯೋಗದಲ್ಲಿ ನಡೆಯಿತು. 

ದ್ರವೀಕೃತ ನೈಸರ್ಗಿಕ ಅನಿಲ ಹೊತ್ತಿದ್ದ ಟ್ಯಾಂಕರ್‌ ಎಜಿ ಅಂಡ್‌ ಪಿ ಸಿಟಿ ಗ್ಯಾಸ್ ಪೈವೇಟ್‌ ಲಿಮಿಟೆಡ್‌ನ ಸ್ಟೇಷನ್‌ಗೆ ಬಂದಾಗ ಕೊಳವೆ ಕಾಮಗಾರಿ ನಡೆಸುತ್ತಿದ್ದ ಕಡೆಗೆ ನುಗ್ಗಿತು. ಕಂಬಕ್ಕೆ ಡಿಕ್ಕಿ ಹೊಡೆದು ಅನಿಲ ಸೋರಿಕೆಯಾಯಿತು. ನೇರಳೆ ಬಣ್ಣ ಮೋಡ ನಿರ್ಮಾಣವಾಯಿತು. ರಾಸಾಯನಿಕ ದುರಂತ ತಪ್ಪಿಸಲು ಕಾರ್ಯಪಡೆ ಧಾವಿಸಿತು.

ವಿದ್ಯುತ್‌ ವಿಭಾಗವು ವಿದ್ಯುತ್‌ ಸರಬರಾಜಿಗೆ ತಡೆಯಿಡ್ಡಿತು. ಅಗ್ನಿಶಾಮಕ ‍ದಳದವರು ಟ್ಯಾಂಕರ್‌ ತಂಪಾಗಿಸಲು ನೊರೆ ಸಿಂಪಡಣೆ ಮಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಆಂಬುಲೆನ್ಸ್‌ ಸ್ಥಳಕ್ಕೆ ಧಾವಿಸಿತು. ಪೊಲೀಸ್‌ ಹಾಗೂ ಸಂಚಾರ ಪೊಲೀಸರು ರಸ್ತೆಯತ್ತ ಬರದಂತೆ ಬ್ಯಾರಿಕೇಡ್‌ ಹಾಕಿದರು. ಹೂಟಗಳ್ಳಿ ನಗರಸಭೆಯು ಜಾಗೃತಿ ಕರೆಯನ್ನು ನಿವಾಸಿಗಳಿಗೆ ನೀಡಿತು. 12.50ರ ಸುಮಾರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು.

ಅಣಕು ಪ್ರದರ್ಶನ ಸಹಕಾರಿ: ‘ರಾಸಾಯನಿಕ ದುರಂತ ಜಿಲ್ಲೆಯಲ್ಲಿ ಜರುಗದಂತೆ ತಡೆಗಟ್ಟಲು ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ತಿಳಿಯಲು ಅಣಕು ಪ್ರದರ್ಶನ ಸಹಕಾರಿಯಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.

‘ವಿಪತ್ತು ನಿರ್ವಹಣೆಯಲ್ಲಿ ಇಲಾಖೆಗಳ ಜವಾಬ್ದಾರಿ ಏನು? ಸಾರ್ವಜ ನಿಕರು ಯಾವ ಕ್ರಮ ಅನುಸರಿಸಬೇಕು ಎಂಬುದಕ್ಕೆ ಪೂರಕ ಮಾಹಿತಿಯನ್ನು ಪ್ರದರ್ಶನಗಳು ನೀಡುತ್ತವೆ’ ಎಂದು
ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್‌.ಮಂಜುನಾಥಸ್ವಾಮಿ, ಕಾರ್ಖಾನೆಗಳ ಜಂಟಿ ನಿರ್ದೇಶಕ ಆರ್.ಕೆ.ಪಾರ್ಥಸಾರಥಿ, ಉಪ ನಿರ್ದೇಶಕ ಎಂ.ಎಸ್. ಮಹದೇವ್, ಸಹಾಯಕ ನಿರ್ದೇಶಕರಾದ ಉಮೇಶ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಾದ ಅರುಣ್ ನಾಯ್ಕ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು