ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಪಂಚ ಗ್ಯಾರಂಟಿ’ ಕಾಂಗ್ರೆಸ್‌ಗೆ ಶ್ರೀರಕ್ಷೆ: ತನ್ವೀರ್‌ ಸೇಠ್

Published : 23 ಮಾರ್ಚ್ 2024, 8:22 IST
Last Updated : 23 ಮಾರ್ಚ್ 2024, 8:22 IST
ಫಾಲೋ ಮಾಡಿ
Comments

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಎಲ್ಲ ವರ್ಗದವರ ಅನುಕೂಲಕ್ಕಾಗಿ ಜಾರಿಗಿಳಿಸಿರುವ ‘ಪಂಚ ಗ್ಯಾರಂಟಿ’ಗಳು ಈ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳಿಗೆ ಶ್ರೀರಕ್ಷೆಯಾಗಿವೆ’ ಎಂದು ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ಶನಿವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ಸರ್ವರ ಏಳಿಗೆ, ಅಭಿವೃದ್ಧಿಗೆ ಆದ್ಯತೆ ಹಾಗೂ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಆದ್ಯತೆ’ ಎಂದು ತಿಳಿಸಿದರು.

‘ಜನರೊಂದಿಗೆ ಒಡನಾಟವಿರುವ ಸಾಮಾನ್ಯ ಕಾರ್ಯಕರ್ತ ಎಂ.ಲಕ್ಷ್ಮಣ ಅವರಿಗೆ ಹೈಕಮಾಂಡ್‌ ಟಿಕೆಟ್ ನೀಡಿದೆ. ನಾಮಪತ್ರ ಸಲ್ಲಿಕೆ ಬಳಿಕ ಪ್ರಚಾರ ತೀವ್ರಗೊಳಿಸಲಿದ್ದೇವೆ. ಅಗತ್ಯ ಸಿದ್ಧತೆ ಮತ್ತು ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದೇವೆ. ನಾವು ಗೆಲುವಿನ ಹಾದಿಯಲ್ಲಿದ್ದೇವೆ’ ಎಂದು ಹೇಳಿದರು.

‘ಜನರ ಸಮಸ್ಯೆಗಳನ್ನು ಪರಿಹರಿಸುವುದು ಹಾಗೂ ಅವರಿಗೆ ಲಭ್ಯವಾಗುವುದು ನಮ್ಮ ಆದ್ಯತೆ. ಇದಕ್ಕಾಗಿ ಕಾರ್ಯಕರ್ತನನ್ನು ಜನರ ನಡುವೆ ಬಿಟ್ಟಿದ್ದೇವೆ. ಜಾತ್ಯತೀತ ನಿಲುವು ಮುಂದುವರಿಸುವುದು, ಸಂವಿಧಾನದ ರಕ್ಷಣೆಯ ಸಂಕಲ್ಪ ನಮ್ಮದು. ಮೌಲ್ಯಧಾರಿತ ಚುನಾವಣೆಯನ್ನು ನಡೆಸಲಿದ್ದೇವೆ. ಪಕ್ಷದ ಅಭ್ಯರ್ಥಿಗೆ ನನ್ನ ಸಂಪೂರ್ಣ ಬೆಂಬಲವಿದೆ’ ಎಂದು ತಿಳಿಸಿದರು.

ದತ್ತು ಪುತ್ರ ಅಷ್ಟೆ:

ಚಾಮರಾಜ ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ‘ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಐವರು ಶಾಸಕರು ಕಾಂಗ್ರೆಸ್‌ನವರಾಗಿದ್ದು, ನಮ್ಮ ಬಲ ಜಾಸ್ತಿ ಇದೆ. ಕೇಂದ್ರದಲ್ಲಿ ಬಿಜೆಪಿ ನಡೆಸಿದ ದುರಾಡಳಿತವನ್ನು ಜನರಿಗೆ ತಿಳಿಸುವ ಕೆಲಸ ಮಾಡಲಿದ್ದೇವೆ. ಸಿದ್ದರಾಮಯ್ಯ ಅವರು ಮೈಸೂರಿಗೆ ನೀಡಿರುವ ಕೊಡುಗೆಗಳನ್ನು ತಿಳಿಸಲಿದ್ದೇವೆ. ಕೇವಲ 9 ತಿಂಗಳಲ್ಲಿ ಮೈಸೂರಿಗೆ ₹ 900 ಕೋಟಿಗೂ ಹೆಚ್ಚಿನ ಅನುದಾನವನ್ನು ಮುಖ್ಯಮಂತ್ರಿ ನೀಡಿದ್ದು, ಇದೆಲ್ಲವನ್ನೂ ಮನವರಿಕೆ ಮಾಡಿಕೊಟ್ಟು ಮತ ಕೇಳಲಿದ್ದೇವೆ’ ಎಂದು ತಿಳಿಸಿದರು.

ಮಾಜಿ ಶಾಸಕ ಎಚ್.ಪಿ.‌ ಮಂಜುನಾಥ್ ಮಾತನಾಡಿ, ‘ಬಿಜೆಪಿ ಅಭ್ಯರ್ಥಿ ಯದುವೀರ್ ರಾಜವಂಶಸ್ಥ ಅಲ್ಲ; ಅವರ ರಾಜವಂಶಸ್ಥರ ದತ್ತು ಪುತ್ರ ಅಷ್ಟೆ’ ಎಂದರು.

‘ಸಿದ್ದರಾಮಯ್ಯ ಅವರು ತಮಗೆ ಸನ್ಮಾನ ಸಂದರ್ಭದಲ್ಲಿ ನೀಡಿದ ಒಟ್ಟು 700 ಕೆ.ಜಿ. ಬೆಳ್ಳಿಯ ಪದಾರ್ಥಗಳನ್ನು ಮಲೆಮಹದೇಶ್ವರ ಬೆಟ್ಟಕ್ಕೆ ನೀಡಿದರು. ನಮಗೆ ಭಕ್ತಿ ಮನಸ್ಸಿನಲ್ಲಿದೆ. ಬಿಜೆಪಿಯವರಂತೆ ಬೀದಿಯಲ್ಲಿ ನಿಂತು ತೋರಿಸಿಕೊಳ್ಳುವುದಿಲ್ಲ’ ಎಂದು ಹೇಳಿದರು.

ಅಭ್ಯರ್ಥಿ ಎಂ. ಲಕ್ಷ್ಮಣ ಮಾತನಾಡಿ, ‘ಚುನಾವಣೆಯಲ್ಲಿ ‍ಪಕ್ಷದ ಎಲ್ಲರೂ ಗಂಭೀರವಾಗಿ ಪರಿಗಣಿಸಿದ್ದೇವೆ. ಜನರು ಬಿಜೆಪಿಯ ಕುತಂತ್ರಕ್ಕೆ ಬಲಿಯಾಗಬಾರದು. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲ ಶಾಸಕರು, ಪರಾಜಿತ ಅಭ್ಯರ್ಥಿಗಳು, ಟಿಕೆಟ್ ಆಕಾಂಕ್ಷಿ ಆಗಿದ್ದವರೆಲ್ಲರೂ ಒಗ್ಗೂಡಿ ಕೆಲಸ ಮಾಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್‌, ನಗರ ಜಿಲ್ಲಾ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಮುಖಂಡರಾದ ಎಂ.ಕೆ.ಸೋಮಶೇಖರ್‌, ಎಂ. ಪ್ರದೀಪ್ ಕುಮಾರ್, ಎಚ್‌ಎ. ವೆಂಕಟೇಶ್, ಮಾವಿನಹಳ್ಳಿ ಸಿದ್ದೇಗೌಡ ಪಾಲ್ಗೊಂಡಿದ್ದರು.

ಚುನಾವಣಾ ರಾಜಕಾರಣವೇ ಬೇರೆ: ಸೇಠ್
‘ಈಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ. ಆದ್ದರಿಂದ ಪ್ರತಿಸ್ಪರ್ಧಿಯನ್ನು ಪ್ರತಿಸ್ಪರ್ಧಿಯಾಗಿಯೇ ನೋಡುತ್ತೇವೆ. ಗೆಲ್ಲುವುದು ನಮ್ಮ ಆದ್ಯತೆಯಾಗಿದೆ. ರಾಜವಂಶದವರ ಬಗ್ಗೆ ಗೌರವವಿದೆ. ಆದರೆ, ಚುನಾವಣಾ ರಾಜಕಾರಣವೇ ಬೇರೆ’ ಎಂದು ತನ್ವೀರ್‌ ಪ್ರತಿಕ್ರಿಯಿಸಿದರು. ‘‍ಪ್ರತಾಪ ಸಿಂಹ ಅವರಿಗೆ ಟಿಕೆಟ್ ಕೊಡದಿದ್ದಕ್ಕೆ ನಮಗೆ ಅನುಕಂಪವಿದೆ. ಟಿಕೆಟ್ ತಪ್ಪಿಸಿದ್ದೇಕೆ ಎಂಬ ಕಾರಣವೇನು ಎಂಬುದನ್ನು ಬಿಜೆಪಿಯವರೇ ಹೇಳಬೇಕು. ಬಿಜೆಪಿ–ಜೆಡಿಎಸ್‌ ಹಿಂದಿನಿಂದಲೂ ಒಳಒಪ್ಪಂದ ಮಾಡಿಕೊಳ್ಳುತ್ತಲೇ ಬಂದಿತ್ತು. ಆದರೆ, ಈಗ ಬಹಿರಂಗವಾಗಿ ಮಾಡಿಕೊಂಡಿದೆ. ಇದರಿಂದ ಲಾಭವಾದರೆ ಸ್ವೀಕರಿಸಲು ಸಿದ್ಧ’ ಎಂದರು.

‘ಕಾಂಗ್ರೆಸ್‌ ಅಭ್ಯರ್ಥಿಗೆ ಕ್ಲೀನ್ ಇಮೇಜ್’

‘ನಮ್ಮ ಅಭ್ಯರ್ಥಿ ಕ್ಲೀನ್ ಇಮೇಜ್ ಇರುವಂಥವರು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಹೇಳಿ ಮತ ಕೇಳಲಿದ್ದೆವೆ’ ಎಂದು ಕೆ.ಹರೀಶ್‌ಗೌಡ ಹೇಳಿದರು.

‘ಒಕ್ಕಲಿಗರಿಗೆ ಕಾಂಗ್ರೆಸ್‌ ಸಾಕಷ್ಟು ಆದ್ಯತೆ ನೀಡಿದೆ. ಆದರೆ, ಈ ಸಮಾಜದವರಿಗೆ ಬಿಜೆಪಿಯಲ್ಲಿ ಅತಿ ಹೆಚ್ಚು ಅನ್ಯಾಯ ಆಗುತ್ತಿದೆ ಎಂಬುದು ಜಗಜ್ಜಾಹೀರಾಗಿದೆ’ ಎಂದು ಹೇಳಿದರು. ‘ಬಿಜೆಪಿ, ಜೆಡಿಎಸ್‌ನ ಹಲವರು ಮಾರ್ಚ್‌ 27ರಂದು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ’ ಎಂದು ತಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT