ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಲೋಕಸಭೆ: ಕುತೂಹಲ ಮೂಡಿಸಿದ ಪಕ್ಷಾಂತರ ಪರ್ವ

Published 23 ಮಾರ್ಚ್ 2024, 6:44 IST
Last Updated 23 ಮಾರ್ಚ್ 2024, 6:44 IST
ಅಕ್ಷರ ಗಾತ್ರ

ಮಂಡ್ಯ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ ಪಕ್ಷಾಂತರ ಪರ್ವ ಆರಂಭವಾಗಿದೆ. ಎರಡೂ ಪಕ್ಷಗಳ ನಾಯಕರು ಸಣ್ಣಪುಟ್ಟ ಕಾರ್ಯಕರ್ತರನ್ನೂ ಬಿಡದಂತೆ ಸೆಳೆಯುತ್ತಿರುವುದು ಕುತೂಹಲ ಮೂಡಿಸಿದೆ.

ಪಕ್ಷಾಂತರ ಪರ್ವಕ್ಕೆ ಪೀಠಿಕೆ ಎಂಬಂತೆ ಮಾಜಿ ವಿಧಾನ ಪರಿಷತ್‌ ಸದಸ್ಯರಾದ ಮರಿತಿಬ್ಬೇಗೌಡ, ಎನ್‌.ಅಪ್ಪಾಜಿಗೌಡ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್‌, ಮಾಜಿ ಶಾಸಕ ಎಂ.ಶ್ರೀನಿವಾಸ್‌ ಅವರ ಅಳಿಯ ಎಚ್‌.ಎನ್‌.ಯೋಗೇಶ್‌ ಅವರು ಜೆಡಿಎಸ್‌ ತ್ಯಜಿಸಿ ಶುಕ್ರವಾರ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ.

ಈ ನಾಲ್ವರು ಮುಖಂಡರೂ ಮೊದಲೇ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದರು, ಹೀಗಾಗಿ ಇವರ ಕಾಂಗ್ರೆಸ್‌ ಸೇರ್ಪಡೆಯಿಂದ ಏನೂ ವಿಶೇಷವಿಲ್ಲ. ಆದರೆ, ಮುಂದೆ ನಡೆಯಲಿದೆ ಎನ್ನಲಾಗುತ್ತಿರುವ ಪಕ್ಷಾಂತರದಲ್ಲಿ ವಿಶೇಷವಿದ್ದು ಯಾರು ಯಾವ ಪಕ್ಷ ಸೇರುತ್ತಾರೆ ಎಂಬುದು ಚರ್ಚೆಯಾಗುತ್ತಿದೆ. ಮುಂದಿನ ಪಕ್ಷಾಂತರ ಪರ್ವದಲ್ಲಿ ಹಣವೇ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಲಾಗುತ್ತಿದ್ದು ಕುತೂಹಲ ಮೂಡಿಸಿದೆ.

ಪ್ರತಿ ಚುನಾವಣೆಯಂತೆ ಈ ಬಾರಿಯೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ತೀವ್ರ ಪೈಪೋಟಿ ಇದೆ. ಈ ವಿಷಯದಲ್ಲಿ ಬಿಜೆಪಿ ಗೌಣವಾಗಿದ್ದು ಅಷ್ಟೊಂದು ಉತ್ಸಾಹ ಕಾಣುತ್ತಿಲ್ಲ. ಕಾರ್ಯಕರ್ತರು, ಮುಖಂಡರನ್ನು ಸೆಳೆಯುವಲ್ಲಿ ಜೆಡಿಎಸ್‌ಗಿಂತ ಕಾಂಗ್ರೆಸ್‌ ಪಕ್ಷವೇ ಒಂದು ಹೆಜ್ಜೆ ಮುಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌, ಬಿಜೆಪಿ ಮುಖಂಡರನ್ನು ಸೆಳೆಯಲಾಗುತ್ತಿದೆ.

ಕ್ಷೇತ್ರದ ಕಣಕ್ಕೆ ಎಚ್‌.ಡಿ.ಕುಮಾರಸ್ವಾಮಿ ಅವರೇ ರಂಗಪ್ರವೇಶ ಮಾಡುತ್ತಿರುವ ಕಾರಣ ಜೆಡಿಎಸ್‌ ಕೂಡ ಹಲವು ಕಾಂಗ್ರೆಸ್‌ ಮುಖಂಡರನ್ನು ಸಂಪರ್ಕಿಸಲು ಮುಂದಾಗಿದೆ. ಕುಮಾರಸ್ವಾಮಿಯವರೇ ನೇರವಾಗಿ ಮುಖಂಡರ ಮನೆಗಳಿಗೆ ಭೇಟಿ ನೀಡಿ ಬೆಂಬಲ ಕೋರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಧಾನ ಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು 4 ಬಾರಿ ಪ್ರತಿನಿಧಿಸಿರುವ ಮರಿತಿಬ್ಬೇಗೌಡ ಪ್ರಭಾವಿ ಮುಖಂಡರಾಗಿದ್ದಾರೆ. ಮೊದಲ ಬಾರಿ ಕಾಂಗ್ರೆಸ್‌ನಿಂದ, ಒಮ್ಮೆ ಪಕ್ಷೇತರವಾಗಿ, 2 ಬಾರಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದಾರೆ.

ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಮರಿತಿಬ್ಬೇಗೌಡರು ಕಳೆದ ಪದವೀಧರ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು. ವಿಧಾನ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಅವರು ಈಗ ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.

2015ರಲ್ಲಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಜೆಡಿಎಸ್‌ನಿಂದ ಗೆದ್ದು 2021ರಲ್ಲಿ ಸೋತಿದ್ದ ಎನ್‌.ಅಪ್ಪಾಜಿಗೌಡ ಈಗ ಕಾಂಗ್ರೆಸ್‌ ಸೇರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ನಂತರ ಜೆಡಿಎಸ್‌ ಜೊತೆ ಮುನಿಸಿಕೊಂಡಿದ್ದ ಅವರು ಚಲುವರಾಯಸ್ವಾಮಿ ಅವರೊಂದಿಗೆ ಸ್ನೇಹದಿಂದಿದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಸಡ್ಡು ಒಡೆದು ಪಕ್ಷೇತರವಾಗಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ತಗ್ಗಹಳ್ಳಿ ವೆಂಕಟೇಶ್‌ ಕೂಡ ಈಗ ಕಾಂಗ್ರೆಸ್‌ ಸೇರಿದ್ದಾರೆ. ಜೆಡಿಎಸ್‌ ಕಡೆಗಣನೆಯಿಂದ ಮುನಿಸಿಕೊಂಡಿದ್ದ ಅವರು ಕೊತ್ತತ್ತಿ ಹೋಬಳಿ ವ್ಯಾಪ್ತಿಯಲ್ಲಿ ಪ್ರಭಾವಿ ಮುಖಂಡರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಅವರನ್ನು ಸ್ವಾಗತಿದೆ.

‘ಮೊದಲೇ ಜೆಡಿಎಸ್‌ನಿಂದ ದೂರವಾಗಿದ್ದವರು ಈಗ ಅಧಿಕೃತವಾಗಿ ಪಕ್ಷ ತೊರೆದಿದ್ದಾರೆ. ಇದರಿಂದ ನಮ್ಮ ಪಕ್ಷಕ್ಕೇನೂ ನಷ್ಟವಾಗುವುದಿಲ್ಲ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌ ಹೇಳಿದರು.

Highlights - ಯಾರು, ಯಾವ ಪಕ್ಷ ಸೇರುತ್ತಾರೆ?; ಚರ್ಚೆ ಎಚ್‌ಡಿಕೆ ಪ್ರವೇಶ ನಂತರ ಮತ್ತಷ್ಟು ಪಕ್ಷಾಂತರ ಪಕ್ಷಾಂತರ ಪರ್ವದಲ್ಲಿ ಹಣಕ್ಕೇ ಪ್ರಮುಖ ಸ್ಥಾನ

ಛಿದ್ರವಾದ ಸ್ವಾಭಿಮಾನಿ ಪಡೆ

ಜೆಡಿಎಸ್‌ ವಿರುದ್ಧ ಬಂಡಾಯ ಸಾರಿದ್ದ ಮಾಜಿ ಶಾಸಕ ಎಂ.ಶ್ರೀನಿವಾಸ್‌ ಅವರು ಕಳೆದ ವಿಧಾನಸಭಾ ಚುನಾವಣೆ ವೇಳೆ‘ಸ್ವಾಭಿಮಾನಿ ಪಡೆ’ ಹೆಸರಿನಲ್ಲಿ ಪಿಇಟಿ ಅಧ್ಯಕ್ಷ ಕೆ.ಎಸ್‌.ವಿಜಯ್‌ ಆನಂದ್‌ ಅವರನ್ನು ಪಕ್ಷೇತರವಾಗಿ ಕಣಕ್ಕಿಳಿಸಿದ್ದರು. ಕಡೇ ಕ್ಷಣದಲ್ಲಿ ಟಿಕೆಟ್‌ ವಂಚಿತರಾದ ವಿಜಯ್‌ ಆನಂದ್‌ ಕೂಡ ಜೆಡಿಎಸ್‌ಗೆ ತಿರುಗಿ ಬಿದ್ದಿದ್ದರು.

ಜೆಡಿಎಸ್‌ನಿಂದ 3 ಬಾರಿ ಶಾಸಕರಾಗಿದ್ದ ಎಂ.ಶ್ರೀನಿವಾಸ್‌ ಈಗ ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಸಖ್ಯ ಬೆಳೆಸಿದ್ದಾರೆ. ಅವರ ಅಳಿಯ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಎನ್‌.ಯೋಗೇಶ್‌ ಅಧಿಕೃತವಾಗಿ ಕಾಂಗ್ರೆಸ್‌ ಸೇರಿದ್ದಾರೆ. ಇನ್ನೊಂದೆಡೆ ಕೆ.ಎಸ್‌.ವಿಜಯ್‌ ಆನಂದ್‌ ಶನಿವಾರ (ಮಾರ್ಚ್‌ 23) ಬೆಂಬಲಿಗರ ಸಭೆ ನಡೆಸುತ್ತಿದ್ದು ಜೆಡಿಎಸ್‌ಗೆ ಮರಳುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಸ್ವಾಭಿಮಾನಿ ಪಡೆ ಈಗ ಛಿದ್ರಗೊಂಡಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT