ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ಶಿಕ್ಷಕರಿಗಾಗಿ ದುಡಿದಿರುವುದೇ ಶ್ರೀರಕ್ಷೆ: ಮರಿತಿಬ್ಬೇಗೌಡ

ಈಗ ನಮ್ಮದೇ ಸರ್ಕಾರ ಇರುವುದರಿಂದ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಅನುಕೂಲ ಆಗಲಿದೆ
Published 26 ಮೇ 2024, 5:07 IST
Last Updated 26 ಮೇ 2024, 5:07 IST
ಅಕ್ಷರ ಗಾತ್ರ

ಮೈಸೂರು: ‘ಶಿಕ್ಷಕರು, ಉಪನ್ಯಾಸಕರು ಮತ್ತು ವಿಶ್ವವಿದ್ಯಾಲಯಗಳ ಬೋಧಕರ ಪರವಾಗಿ ಹಾಗೂ ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಸತತ 24 ವರ್ಷಗಳಿಂದ ದುಡಿದಿರುವುದು ನನಗೆ ನೆರವಾಗಲಿದೆ’ ಎಂದು ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮರಿತಿಬ್ಬೇಗೌಡ ವಿಶ್ವಾಸ ವ್ಯಕ್ತ‍ಪಡಿಸಿದರು.

ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿರುವ ಕ್ಷೇತ್ರದಲ್ಲಿ ಸತತ 5ನೇ ಬಾರಿಗೆ ಸ್ಪರ್ಧಿಸಿರುವ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

* ಮತದಾರರು ನಿಮ್ಮನ್ನೇ ಏಕೆ ಆಯ್ಕೆ ಮಾಡಬೇಕು?

ವಿದ್ಯಾರ್ಥಿ ಚಳವಳಿಯಿಂದ ಬಂದು ರಾಜಕೀಯ ಪ್ರವೇಶಿಸಿದ ನಾನು ಮೊದಲ ಬಾರಿ ಗೆದ್ದಾಗಿನಿಂದಲೂ ಶಿಕ್ಷಕರ ಪರವಾಗಿ ಕೆಲಸ ಮಾಡಿದ್ದೇನೆ. ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ಶ್ರಮಿಸುತ್ತಾ ಬಂದಿದ್ದೇನೆ. ಇದೆಲ್ಲವೂ ನಾನು ಸತತವಾಗಿ 4 ಬಾರಿ ಗೆಲ್ಲಲು ಸಾಧ್ಯವಾಯಿತು. ನನ್ನ ಅನುಭವ ಹಾಗೂ ಬದ್ಧತೆಯನ್ನು ಮತದಾರರು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ.

* 4 ಬಾರಿ ಆಯ್ಕೆಯಾಗಿ ಏನು ಮಾಡಿದ್ದೀರಿ?

ಅತಿಥಿ ಉಪನ್ಯಾಸಕರು, ಗುತ್ತಿಗೆ ಶಿಕ್ಷಕರ ಪರವಾಗಿಯೂ ಕೆಲಸ ಮಾಡಿದ್ದೇನೆ. ಅವರನ್ನು ಸಕ್ರಮಗೊಳಿಸುವಲ್ಲಿ ನನ್ನ ಪಾತ್ರವೂ ಸಾಕಷ್ಟಿದೆ. ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ಹಾಗೂ ಪಿಯು ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆಗೆ ಶ್ರಮಿಸಿದ್ದೇನೆ. 24 ವರ್ಷಗಳಿಂದ 20 ವರ್ಷಗಳ ಕಾಲ ವಿರೋಧ ಪಕ್ಷದಲ್ಲಿದ್ದೆ. ಯಾವುದೇ ಸರ್ಕಾರವಿರಲಿ, 4 ಅವಧಿಯಲ್ಲೂ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ವ್ಯವಸ್ಥೆಯ ಧ್ವನಿಯಾಗಿ ಕೆಲಸ ಮಾಡಿದ್ದೇನೆ.

* ಶಿಕ್ಷಕರ ಸಮಸ್ಯೆಗಳೇನಿವೆ?

ಪ್ರಾಥಮಿಕ, ಪ್ರೌಢಶಿಕ್ಷಣದಲ್ಲಿ 42ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ವಿವಿಗಳಲ್ಲಿ ಶೇ 68ರಷ್ಟು ಬೋಧಕರ ಹುದ್ದೆ ಖಾಲಿ ಇವೆ. 12 ವರ್ಷಗಳಿಂದ ವಿವಿಗಳಲ್ಲಿ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಿಲ್ಲ. ಎನ್‌ಪಿಎಸ್ ಬೇಡ, ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗೊಳಿಸಬೇಕು ಎಂಬ ಬೇಡಿಕೆ ಇದೆ. ಬಡ್ತಿ ಪಡೆದ ಶಿಕ್ಷಕರಿಗೆ ವೇತನ ಕಡಿಮೆ ಇದೆ. ಬಡ್ತಿ ಪಡೆದಿಲ್ಲದವರಿಗೇ ಜಾಸ್ತಿ ಇದೆ. ಇದನ್ನು ಸರಿಪಡಿಸಲು ಇರುವ ಕಾನೂನು ತೊಡಕನ್ನು ನಿವಾರಿಸಬೇಕಾಗಿದೆ.

ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2015ರ ನಂತರ ನಿವೃತ್ತಿಯಿಂದ ಖಾಲಿ ಇರುವ ಹುದ್ದೆ ಭರ್ತಿಗೆ ಅನುಮತಿ ಕೊಡಿಸುವ ಪ್ರಯತ್ನ ಮಾಡುವೆ. ಅನುದಾನಿತ ಶಾಲೆಗಳ ಶಿಕ್ಷಕರು ಹಾಗೂ ಕುಟುಂಬದವರನ್ನು ‘ಜ್ಯೋತಿ ಸಂಜೀವಿನಿ’ ಆರೋಗ್ಯ ವಿಮೆ ಯೋಜನೆಗೆ ಸೇರಿಸಲು ಪ್ರಯತ್ನಿಸುವೆ. ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2006ರ ಏ.1ರ ನಂತರ ನೇಮಕಗೊಂಡ ಶಿಕ್ಷಕರಿಗೆ ಪಿಂಚಣಿ ಕೊಡಿಸಬೇಕಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಕನ್ನಡ ಮಾಧ್ಯಮ ಶಾಲೆಗಳಿಗೆ (1995ರ ನಂತರ ಪ್ರಾರಂಭವಾದವು) ವೇತನಾನುದಾನ ಕೊಡಿಸಲು ಹೋರಾಡುವೆ.

* ಈ ಬಾರಿ ಏನು ನೆರವಾಗಲಿದೆ?

ಕಾಂಗ್ರೆಸ್ ಪಕ್ಷದ ಶಕ್ತಿಯೊಂದಿಗೆ ವೈಯಕ್ತಿಕ ವರ್ಚಸ್ಸು ಕೂಡ ನೆರವಾಗಲಿದೆ. ಆಡಳಿತ ಪಕ್ಷದ ಅಭ್ಯರ್ಥಿ ಗೆದ್ದರೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಕ್ಕೀತು ಎಂಬ ನಿರೀಕ್ಷೆ ಶಿಕ್ಷಕರದ್ದು.

ಕ್ಷೇತ್ರದ ಒಟ್ಟು 29 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಬಲವೇ ಜಾಸ್ತಿ ಇದೆ. ಪಂಚ ಗ್ಯಾರಂಟಿ ಯೋಜನೆಗಳಿಂದಲೂ ನೆರವಾಗಲಿದೆ. ‘ಶಕ್ತಿ’ ಯೋಜನೆಯಲ್ಲಿ ಶಿಕ್ಷಕಿಯರೂ ಫಲಾನುಭವಿಗಳಾಗಿದ್ದಾರೆ. ಅದೆಲ್ಲವೂ ಶ್ರೀರಕ್ಷೆಯಾಗಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಎನ್‌ಇಪಿ–2020 ನ್ಯೂನತೆ ಸರಿಪಡಿಸಿ ಎಸ್‌ಇಪಿಗೆ ಕ್ರಮ ವಹಿಸಿದ್ದಾರೆ. ಈ ಬಜೆಟ್‌ನಲ್ಲಿ ಸರ್ಕಾರಿ ಶಾಲೆಗಳ ಶೌಚಾಲಯ, ಕೊಠಡಿಗಳ ದುರಸ್ತಿಗೆ ₹ 960 ಕೋಟಿ ಕೊಟ್ಟಿದ್ದಾರೆ. ಮಹಾರಾಣಿ ಮಹಿಳಾ ಕಾಲೇಜುಗಳ ಅಭಿವೃದ್ಧಿಗೆ ₹ 170 ಕೋಟಿ ನೀಡಿದ್ದಾರೆ. ಮಂಡ್ಯದಲ್ಲಿ ಕೃಷಿ ವಿವಿ ಸ್ಥಾಪನೆಗೆ ಕ್ರಮ ಕೈಗೊಂಡಿದ್ದಾರೆ.

* ನಿಮ್ಮ ಪ್ರತಿ ಸ್ಪರ್ಧಿ ಯಾರು?

ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಕೆ.ವಿವೇಕಾನಂದ ಪ್ರತಿಸ್ಪರ್ಧಿ. ನನಗೆ ಶಿಕ್ಷಕರ ಒಡನಾಟ ಬಿಟ್ಟರೆ ಬೇರಾವುದೇ ವ್ಯವಹಾರ ವ್ಯಾಪಾರ ಇಲ್ಲ. ಯಾರು ಸೂಕ್ತ ಎನ್ನುವುದನ್ನು ಮತದಾರರು ತೀರ್ಮಾನಿಸುತ್ತಾರೆ.

* ಎನ್‌ಡಿಎ ಅಭ್ಯರ್ಥಿ ಘೋಷಣೆ ವಿಷಯದಲ್ಲಿ ಉಂಟಾದ ಗೊಂದಲದಿಂದ ನಿಮಗೆ ಅನುಕೂಲ ಆಗಲಿದೆಯೇ?

ಖಂಡಿತ ಆಗುತ್ತದೆ. ಅಭ್ಯರ್ಥಿಗಳಿಗೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಪರಿಚಯ ಇದೆಯೇ ಅನುಭವ ಇದೆಯೇ ಎಂಬುದನ್ನು ಪ್ರಜ್ಞಾವಂತ ಮತದಾರರು ಪರಿಗಣಿಸುತ್ತಾರೆ.

* ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್ ಪ್ರಕರಣ ಪರಿಣಾಮ ಬೀರಬಹುದೇ?

ಕ್ಷೇತ್ರದ ಪ್ರಜ್ಞಾವಂತ ಮತದಾರರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ನೋಡೋಣ. ನಾನು ಆ ಬಗ್ಗೆ ಗಮನಹರಿಸಿಲ್ಲ.

* ಪಕ್ಷಾಂತರಿ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದಾರಲ್ಲಾ?

ನಾನು ಮೊದಲ ಚುನಾವಣೆಯಲ್ಲಿ ಆಯ್ಕೆಯಾಗಿದ್ದು ಕಾಂಗ್ರೆಸ್‌ ಪಕ್ಷದಿಂದಲೇ. 2ನೇ ಬಾರಿಗೆ ಟಿಕೆಟ್‌ ಸಿಗದಿದ್ದರಿಂದ ಪಕ್ಷೇತರ ಆಗಿ ಸ್ಪರ್ಧಿಸಿದ್ದೆ. ನಂತರದ 2 ಬಾರಿ ಜೆಡಿಎಸ್‌ನವರು ಕರೆದು ಟಿಕೆಟ್ ಕೊಟ್ಟಿದ್ದರು. ಮೂರು ವರ್ಷ ಉಪ ಸಭಾಪತಿಯನ್ನಾಗಿ ಮಾಡಿದ್ದರು. ಆ ಪಕ್ಷ ತೊರೆಯಲು ಹಲವು ಕಾರಣಗಳಿವೆ. ಅಲ್ಲಿ ನೊಂದು ಹೊರಬಂದಿದ್ದೇನೆ. ಆದರೆ ಶಿಕ್ಷಕರು–ವಿದ್ಯಾರ್ಥಿಗಳ ಪರವಾದ ಆದ್ಯತೆ ಮತ್ತು ಗುರಿಯಲ್ಲಿ ಬದಲಾವಣೆ ಅಥವಾ ರಾಜಿ ಮಾಡಿಕೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT