ಮಂಗಳವಾರ, ಮಾರ್ಚ್ 21, 2023
20 °C
‘ಮೀಸಲಾತಿಯ ಒಳನೋಟ’ ಕೃತಿ ಬಿಡುಗಡೆ ಮಾಡಿ ಪ್ರೊ.ರವಿವರ್ಮಕುಮಾರ್

ವಿರೋಧ ಮಾಡಿದ್ದವರೇ ಈಗ ಮೀಸಲಾತಿ ಕೇಳುತ್ತಿದ್ದಾರೆ: ರವಿವರ್ಮಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಹಿಂದೆ ಮೀಸಲಾತಿಯನ್ನು ‌ವಿರೋಧಿಸಿದ್ದವರು, ಪ್ರೊ.ಎಲ್.ಜಿ.ಹಾವನೂರು ವರದಿಯ ಪ್ರತಿಯನ್ನು ಸುಟ್ಟಿದ್ದವರೇ ಈಗ ನಮಗೂ ಮೀಸಲಾತಿ ಕೊಡಿ ಎಂದು ಕೇಳುತ್ತಿದ್ದಾರೆ. ಇದು ವಿಪರ್ಯಾಸ’ ಎಂದು ವಕೀಲ ಪ್ರೊ.ರವಿವರ್ಮ ಕುಮಾರ್ ಹೇಳಿದರು.

ಕೆಎಸ್‌ಒಯು ಕಾವೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅಭಿರುಚಿ ಪ್ರಕಾಶನ ಪ್ರಕಟಿಸಿರುವ, ನಿವೃತ್ತ ಕೆಎಎಸ್ ಅಧಿಕಾರಿ ಕೆ.ಎನ್.ಲಿಂಗಪ್ಪ ವಿರಚಿತ ‘ಮೀಸಲಾತಿಯ ಒಳನೋಟ’ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಜಾತಿ ಜನಗಣತಿಗೆ ಸಂಬಂಧಿಸಿದಂತೆ ಎಚ್.ಕಾಂತರಾಜು ನೀಡಿರುವ ವರದಿಯನ್ನು ಬಹಿರಂಗಗೊಳಿಸಲು ಮೆಲ್ಜಾತಿಯವರಿಗೆ ಭಯವಿದೆ. ಹೀಗಾಗಿ, ಮುಚ್ಚಿಡಲಾಗುತ್ತಿದೆ. ಎಲ್ಲಿ ನಾವು, ಉಂಡಿರುವ–ತಿಂದಿರುವ ಲೆಕ್ಕ ಸಿಕ್ಕಿಬಿಡುತ್ತದೆಯೋ ಎಂಬ ಭಯ ಅವರಿಗಿದೆ. ಜನಸಂಖ್ಯೆಗೆ ಅನುಗುಣವಾಗಿ ಇತರರಿಗೆ ಸಲ್ಲಬೇಕಾದ್ದನ್ನು ನಾವು ಕಬಳಿಸಿದ್ದೇವೆ ಎಂಬ ಕಾರಣದಿಂದ, ಜಾತಿ ಜನಗಣತಿಯ ವರದಿ ಪ್ರಕಟಗೊಳ್ಳದಂತೆ ನೋಡಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

ಪರಿಕಲ್ಪನೆ ಕೊಟ್ಟಿದ್ದೇ ನಾವು:

‘ಭಾರತದಲ್ಲಿ ಸರ್ಕಾರಿ ಹುದ್ದೆಗಳನ್ನು ಬ್ರಾಹ್ಮಣರೇ ಅಲಂಕರಿಸಿದ್ದರು. ಮೈಸೂರು ಸಂಸ್ಥಾನದ ಉನ್ನತ ಹುದ್ದೆಗಳಿಗೆ  ಮದ್ರಾಸ್‌ನಿಂದ ಬರುತ್ತಿದ್ದ ದಿವಾನರು, ಇತರ ಕೆಲಸಗಳಿಗೆ ತಮ್ಮೊಂದಿಗೆ ಬ್ರಾಹ್ಮಣರನ್ನೇ ಕರೆದುಕೊಂಡು ಬರುತ್ತಿದ್ದರು. ಬ್ರಾಹ್ಮಣರ ಜನಸಂಖ್ಯೆ ಕೂಡ ಗೊತ್ತಿರಲಿಲ್ಲ. ಅವರೇ ಎಲ್ಲ ಪ್ರಮುಖ ಹುದ್ದೆಗಳಲ್ಲಿ ಕಾಣಿಸುತ್ತಿದ್ದುದ್ದರಿಂದ ಬ್ರಾಹ್ಮಣರೇ ಬಹುಸಂಖ್ಯಾತರು ಎಂದುಕೊಂಡಿದ್ದರು. ಈ ನಂಬಿಕೆಗೆ ಬಿದ್ದ ಕೊಡಲಿ ಪೆಟ್ಟು ಎಂದರೆ ಅದೇ ಭಾರತದ ಮೊದಲ ಜನಗಣತಿ’ ಎಂದು ತಿಳಿಸಿದರು.

‘ಇಡೀ ಪ್ರಪಂಚಕ್ಕೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಕೊಟ್ಟಿದ್ದೇ ಮೈಸೂರು ಸಂಸ್ಥಾನ. 1874ರಲ್ಲಿ ಪ್ರಥಮ ಬಾರಿಗೆ ಮೀಸಲಾತಿಯನ್ನು ಪರಿಚಯಿಸಲಾಯಿತು. ಆದರೆ, ಇದೆಲ್ಲವೂ ಎಲ್ಲೂ ದಾಖಲಾಗಿಲ್ಲ. ಇಂದು ಪ್ರಪಂಚದ 21 ದೇಶಗಳಲ್ಲಿ ಭಾರತದ ಮಾದರಿಯಲ್ಲಿ ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಮೀಸಲಾತಿ ನೀತಿಯನ್ನು ಅನುಸರಿಸಲಾಗುತ್ತಿದೆ’ ಎಂದು ಹೇಳಿದರು.

ರಕ್ತಪಾತ ತಡೆಯಿತು

‘ಬಹುರೂಪಿ ಸಮಾಜದಲ್ಲೂ ಸಹಬಾಳ್ವೆ ನಡೆಸುವುದು ಹೇಗೆ ಸಾಧ್ಯ ಎನ್ನುವುದನ್ನು ತೋರಿಸಿದ್ದು ಸಾಮಾಜಿಕ ನ್ಯಾಯದ ಪರಿಕಲ್ಪನೆ. ಇದರಲ್ಲಿ ನಮ್ಮ ದೇಶ ವಿಶ್ವಗುರು ಹಾಗೂ ನಾಯಕ. ಇಲ್ಲದಿದ್ದರೆ ರಕ್ತಪಾತವಾಗುತ್ತಿತು. ಹಿಂಸೆ, ರಕ್ತಪಾತವಿಲ್ಲದೆ ಸಾಮಾಜಿಕ ಕ್ರಾಂತಿಯನ್ನು ಮಾಡಿದ್ದೇ ಸಾಮಾಜಿಕ ನ್ಯಾಯದ ಪರಿಕಲ್ಪನೆ. ಸಾರ್ವಜನಿಕ ಆಡಳಿತದಲ್ಲಿ ಬ್ರಾಹ್ಮಣರ ಪ್ರಾಧಾನ್ಯತೆಯನ್ನು ತಡೆಯುವುದಕ್ಕಾಗಿ ತಂದದ್ದೇ ಮೀಸಲಾತಿ’ ಎಂದು ಪ್ರತಿಪಾದಿಸಿದರು.

ಪತ್ರಕರ್ತ ಡಿ.ಉಮಾಪತಿ ಮಾತನಾಡಿ, ‘ವಸಾಹತುಶಾಹಿ ಹಾಗೂ ವರ್ಣ ತಾರತಮ್ಯ ಸಂಗಮಿಸಿದ ಸ್ಥಿತಿ ಭಾರತದ್ದು. ಒಬಿಸಿ ವರ್ಗದವರು ಬ್ರಾಹ್ಮಣರ ಸಾಂಸ್ಕೃತಿಕ ಒತ್ತೆಯಾಳುಗಳ ರೀತಿ ಬದುಕುತ್ತಿದ್ದಾರೆ. ಬ್ರಾಹ್ಮಣ ಧರ್ಮವು ಸದ್ದಿಲ್ಲದೇ ದೊಡ್ಡ ಮತಾಂತರದಲ್ಲಿ ತೊಡಗಿದೆ. ಇತರ ಜಾತಿಯವರ ನಂಬಿಕೆಗಳನ್ನು ಮತಾಂತರ ಮಾಡುತ್ತಿದ್ದಾರೆ. ಬ್ರಾಹ್ಮಣರು ಹಕ್ಕು, ಸ್ಥಾನಮಾನ ಕೊಡದೇ, ತಮ್ಮ ಮನೆಗೆ ಬಿಟ್ಟುಕೊಳ್ಳದೇ ಮತಾಂತರ ಮಾಡುತ್ತಿದ್ದಾರೆ. ಮರೆಮಾಚಿದ ಕಾರ್ಯಾಚರಣೆ ಇದಾಗಿದೆ’ ಎಂದು ಆರೋಪಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜ್, ಮೈಸೂರು ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಪ್ರೊ.ಮುಜಾಫರ್ ಅಸ್ಸಾದಿ, ಲೇಖಕ ಕೆ.ಎನ್.ಲಿಂಗಪ್ಪ, ಪ್ರಕಾಶಕ ಅಭಿರುಚಿ ಗಣೇಶ್, ಮುಖಂಡ ಜೋಗನಹಳ್ಳಿ ಗುರುಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು