ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನರ ಸಮಸ್ಯೆ ನಿವಾರಣೆಗೆ ಸ್ಪಂದಿಸಿ: ಶಾಸಕ ಹರೀಶ್‌ಗೌಡ

Published 22 ಜೂನ್ 2024, 7:40 IST
Last Updated 22 ಜೂನ್ 2024, 7:40 IST
ಅಕ್ಷರ ಗಾತ್ರ

ಮೈಸೂರು: ‘ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸಬೇಕು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ ಬಗೆಹರಿಸಬೇಕು’ ಎಂದು ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ನಗರಪಾಲಿಕೆಯಲ್ಲಿ ಶುಕ್ರವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ‘ಮಳೆಯಿಂದ ಆಗಬಹುದಾದ ಅನಾಹುತ ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಮಳೆ ನೀರು ಚರಂಡಿಯಲ್ಲಿ ಹೂಳೆತ್ತಬೇಕು. ಚರಂಡಿ ಸ್ವಚ್ಛಗೊಳಿಸಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇರಬೇಕು ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚಬೇಕು’ ಎಂದು ನಿರ್ದೇಶನ ನೀಡಿದರು.

‘ಕೆಲವು ಪ್ರದೇಶಗಳಲ್ಲಿ ಸೊಳ್ಳೆ ಕಾಟ ಜಾಸ್ತಿಯಾಗಿದೆ. ಪ್ರತಿ ವಾರ್ಡ್‌ನಲ್ಲೂ ಧೂಮೀಕರಣ (ಫಾಗಿಂಗ್) ಮಾಡಬೇಕು. ಮಳೆ–ಗಾಳಿಯಿಂದ ಬೀಳಬಹುದಾದ ಸಾಧ್ಯತೆ ಇದ್ದಲ್ಲಿ ಅಂತಹ ಮರಗಳ ರೆಂಬೆ–ಕೊಂಬೆಗಳನ್ನು ಕತ್ತರಿಸಬೇಕು. ಶುದ್ಧ ಕುಡಿಯುವ ನೀರು ಪೂರೈಕೆಗೆ ಆದ್ಯತೆ ಕೊಡಬೇಕು. ಕೆಟ್ಟಿರುವ ಕೊಳವೆ ಬಾವಿಗಳನ್ನು ದುರಸ್ತಿ ಪಡಿಸಬೇಕು. ಅವಶ್ಯವಿದ್ದಲ್ಲಿ ಹೊಸದಾಗಿ ಕೊರೆಸಬೇಕು. ಶುದ್ಧ ನೀರಿನ ಘಟಕಗಳು ಕೆಲವೆಡೆ ಕೆಟ್ಟಿದ್ದು ಅವುಗಳನ್ನು ದುರಸ್ತಿ ಪಡಿಸಿ ಬಳಕೆಗೆ ಮುಕ್ತಗೊಳಿಸಬೇಕು. ನೀರು ಪೂರೈಕೆಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ಬಾಕಿ ಕಾಮಗಾರಿಗಳನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಬೇಕು’ ಎಂದು ಗಡುವು ನೀಡಿದರು.

ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ‍ಪಡಿಸಿದ ಶಾಸಕರು, ‘ಅಗತ್ಯವಿದ್ದಷ್ಟು ಪೌರ ಕಾರ್ಮಿಕರನ್ನು ನಿಯೋಜಿಸಬೇಕು. ಆರೋಗ್ಯ ಇನ್‌ಸ್ಪೆಕ್ಟರ್‌ ವಾರ್ಡ್‌ಗಳಿಗೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಪರಿಶೀಲಿಸಬೇಕು. ವಾರ್ಡ್‌ಗಳಲ್ಲಿ ಸ್ವಚ್ಛತೆಯ ವಿಷಯದಲ್ಲಿ ಲೋಪವಾದರೆ–ದೂರುಗಳು ಬಂದರೆ ಆರೋಗ್ಯ ಇನ್‌ಸ್ಪೆಕ್ಟರ್‌ಗಳನ್ನೆ ಹೊಣೆ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಪಾಲಿಕೆಯಿಂದ ಶೇ 24.10 ಹಾಗೂ ಶೇ7.25ರ ಯೋಜನೆಯ ಸೌಲಭ್ಯಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಹೀಗಾಗಬಾರದು. ಫಲಾನುಭವಿಗಳ ಆಯ್ಕೆಯಲ್ಲಿ ತಾರತಮ್ಯ ಮಾಡದೇ ಸಹಾಯಧನ, ಪ್ರೋತ್ಸಾಹಧನ ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

‘ಕ್ಷೇತ್ರದಲ್ಲಿನ ಕೆಲವು ಇಂದಿರಾ ಕ್ಯಾಂಟೀನ್‌ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲದ ಬಗ್ಗೆ ದೂರುಗಳು ಬಂದಿವೆ. ಸಂಬಂಧಿಸಿದ ಅಧಿಕಾರಿ ನಿತ್ಯವೂ ಭೇಟಿ ನೀಡಿ ಸಮರ್ಪಕ ನಿರ್ವಹಣೆಗೆ ನಿಗಾ ವಹಿಸಬೇಕು. ಜನರಿಗೆ ತೊಂದರೆ ಆಗದಂತೆ ಆಹಾರ ಒದಗಿಸಲು  ಕ್ರಮ ವಹಿಸಬೇಕು’ ಎಂದು ತಿಳಿಸಿದರು.

‘ಮೇಟಗಳ್ಳಿಯ ಕರಕುಶಲ ನಗರ, ಮೇದರ ಬ್ಲಾಕ್‌, ರಾಜರಾಜೇಶ್ವರಿ ನಗರ ಹಾಗೂ ಗೋಕುಲಂನಲ್ಲಿ ಕೊಳೆಗೇರಿ ನಿರ್ಮೂಲನಾ ಮಂಡಳಿಯಿಂದ ನಿರ್ಮಿಸಿರುವ ಮನೆಗಳನ್ನು ಪಾಲಿಕೆಗೆ ಹಸ್ತಾಂತರಿಸಿಕೊಂಡು, ಫಲಾನುಭವಿಗಳಿಗೆ ಖಾತೆ ಮಾಡಿಕೊಡಬೇಕು’ ಎಂದು ಸೂಚಿಸಿದರು.

ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ಖಾತೆ ಮಾಡಿಕೊಡಲು ಜನರನ್ನು ಅಲೆದಾಡಿಸಬಾರದು. ನಿಗದಿತ ಅವಧಿಯಲ್ಲಿ ಅವರ ಕೆಲಸಗಳನ್ನು ಮಾಡಿಕೊಡಬೇಕು. ಅಧಿಕಾರಿಗಳು ನೀತಿಸಂಹಿತೆ ಗುಂಗಿನಿಂದ ಹೊರಬರಬೇಕು.
ಕೆ.ಹರೀಶ್‌ಗೌಡ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT