ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೆ ಖಾಲಿ ಚೊಂಬು ಕೊಟ್ಟಿರುವ ಮೋದಿ: ಸಿದ್ದರಾಮಯ್ಯ

Published 20 ಏಪ್ರಿಲ್ 2024, 7:35 IST
Last Updated 20 ಏಪ್ರಿಲ್ 2024, 7:35 IST
ಅಕ್ಷರ ಗಾತ್ರ

ಮೈಸೂರು: ‘ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಖಾಲಿ ಚೊಂಬು ಕೊಟ್ಟಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರವು ಈ ದೇಶದ ಜನರಿಗೆ ಖಾಲಿ ಚೊಂಬು ಕೊಟ್ಟಿದೆ. ಅದನ್ನೇ ನಾವು ಜಾಹೀರಾತು ಕೊಟ್ಟಿದ್ದೇವೆ’ ಎಂದು ಹೇಳಿದರು.

‘ಮೋದಿ ಜನರಿಗೆ ₹15 ಲಕ್ಷ ಕೊಟ್ರಾ? 100 ದಿನಗಳಲ್ಲಿ ವಿದೇಶದಿಂದ ಕಪ್ಪು ಹಣ ತೆಗೆದುಕೊಂಡು ಬಂದು ಎಲ್ಲರ ಖಾತೆಗೂ ಹಾಕುತ್ತೇವೆ ಎಂದು ಹೇಳಿದ್ರಲ್ಲಾ, ಹಾಕಿದರಾ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸಿದರಾ? ರೈತರ ಆದಾಯ ದ್ವಿಗುಣ ಮಾಡಿದರಾ? ಒಳ್ಳೆಯ ದಿನಗಳು ಬಂದ್ವಾ? ಈ ಕಾರಣದಿಂದಲೇ ಖಾಲಿ ಚೊಂಬು ಕೊಟ್ಟಿದ್ದಾರೆ ಎಂದು ನಾವು ಹೇಳುತ್ತಿರುವುದು’ ಎಂದು ಸಮರ್ಥಿಸಿಕೊಂಡರು.

‘ಒಂದು ಆಶ್ವಾಸನೆಯನ್ನೂ ಮೋದಿ ಈಡೇರಿಸಿಲ್ಲ. ಎಚ್‌.ಡಿ. ಕುಮಾರಸ್ವಾಮಿ ಈಗ ಏನಾದರೂ ಹೇಳಿಕೊಳ್ಳಲಿ. ಆದರೆ, ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿಲ್ಲ. ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಅಭಿವೃದ್ಧಿ ಕೆಲಸಗಳನ್ನೂ ಮುಂದುವರಿಸುತ್ತಿದ್ದೇವೆ’ ಎಂದು ಹೇಳಿದರು.

‘ಸಿದ್ದರಾಮಯ್ಯ ಅವರು ಹತ್ತಿದ ಏಣಿಯನ್ನೇ ಸರ್ವನಾಶ ಮಾಡುತ್ತಾರೆ’ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಬಿಜೆಪಿ ಜತೆ ಸೇರಿ ಅವರೂ ಈಗ ಕೋಮುವಾದಿ ಆಗಿದ್ದಾರೆ. ಜೆಡಿಎಸ್‌ ಈಗ ಜಾತ್ಯತೀತ ಪಕ್ಷವಾಗಿ ಉಳಿದಿಲ್ಲ. ಅದೀಗ ಕೋಮುವಾದಿ ಪಕ್ಷ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಅವರು ಜೆಡಿಎಸ್‌ ಪಕ್ಷವನ್ನು ವಿಸರ್ಜಿಸಬೇಕು’ ಎಂದರು.

‘ಭಯ ಇದ್ದಿದ್ದರೆ ನಾವು ಸ್ವತಂತ್ರವಾಗಿ ಬಿಜೆಪಿ–ಜೆಡಿಎಸ್‌ ವಿರುದ್ಧ ಹೋರಾಟ ಮಾಡುತ್ತಿದ್ದೆವಾ? ಭಯ ಇರುವುದು ಅವರಿಗೆ. ಅದಕ್ಕಾಗಿಯೇ ಅವರು ಮೈತ್ರಿ ಆಗಿರುವುದು’ ಎಂದು ತಿರುಗೇಟು ನೀಡಿದರು.

‘ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ ಲವ್ ಜಿಹಾದ್ ಅಲ್ಲ. ಆ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಆರೋಪಿಯನ್ನು ಕೂಡಲೇ ಬಂಧಿಸಿದ್ದೇವೆ. ತನಿಖೆಯನ್ನು ಗಂಭೀರವಾಗಿ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

‘ಎಲ್ಲ ಸರ್ಕಾರದ ಕಾಲದಲ್ಲೂ ಕೊಲೆಗಳು ನಡೆದಿವೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದನ್ನು ನಾವು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಬೇರೆ ರಾಜ್ಯಗಳಿಗಿಂತ ನಮ್ಮಲ್ಲಿ ಶಾಂತಿ–ಸುವ್ಯವಸ್ಥೆ ಚೆನ್ನಾಗಿದೆ. ನಾವು ಯಾವುದೇ ಕುಕೃತ್ಯ ನಡೆದರೂ ಖಂಡಿಸುತ್ತೇವೆ. ಆದರೆ, ಬಿಜೆಪಿ–ಜೆಡಿಎಸ್‌ನವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಖಂಡನೀಯ’ ಎಂದರು.

‘ಇಂಥ ಪ್ರಕರಣಗಳಿಂದ ನಮಗೆ ಯಾವುದೇ ವ್ಯತಿರಿಕ್ತ ಪರಿಣಾಮ ಆಗುವುದಿಲ್ಲ’ ಎಂದು ಹೇಳಿದರು.

‘ಕರ್ನಾಟಕ ಅಥವಾ ದೇಶದಲ್ಲಿ ಮೋದಿ ಅಲೆ ಇಲ್ಲ. ಮೋದಿ ಸರ್ಕಾರದ ವಿರುದ್ಧದ ಅಲೆಯೇ ಜಾಸ್ತಿ ಇದೆ. ಐಎನ್‌ಡಿಐಎ ಪರವಾದ ವಾತಾವರಣವಿದೆ’ ಎಂದರು.

ಶಾಸಕ ಕೆ.ಹರೀಶ್‌ ಗೌಡ, ‘ಮುಡಾ’ ಅಧ್ಯಕ್ಷ ಕೆ. ಮರೀಗೌಡ, ಮುಖಂಡರಾದ ಜಿ.ವಿ. ಸೀತಾರಾಂ, ಎಂ.ಕೆ. ಸೋಮಶೇಖರ್‌, ಮಾರ್ಬಳ್ಳಿ ಕುಮಾರ್‌, ಎನ್.ಆರ್. ನಾಗೇಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT