ಶುಕ್ರವಾರ, ಮಾರ್ಚ್ 31, 2023
33 °C

2024, 2029ರಲ್ಲೂ ಮೋದಿಯೇ ಗೆಲ್ಲಬೇಕು: ಎಸ್.ಎಲ್.ಭೈರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘2024 ಹಾಗೂ 2029ರ ಲೋಕಸಭಾ ಚುನಾವಣೆಯಲ್ಲೂ ನರೇಂದ್ರ ಮೋದಿ ಹೆಚ್ಚೆಚ್ಚು ಬಹುಮತದಿಂದ ಗೆಲ್ಲಬೇಕು. ನಂತರ ನಿವೃತ್ತಿಗೊಳ್ಳಬೇಕು. ಅಲ್ಲಿಯವರೆಗೆ, ಅವರಂತೆಯೇ ಇರುವವರನ್ನು ತಯಾರು ಮಾಡಬೇಕು’ ಎಂದು ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಹೇಳಿದರು.

ಪದ್ಮಭೂಷಣ ಪುರಸ್ಕಾರ ದೊರೆತಿದ್ದಕ್ಕೆ, ಇಲ್ಲಿನ ಕುವೆಂಪುನಗರದ ತಮ್ಮ ನಿವಾಸದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಅಭಿನಂದನೆ ಸ್ವೀಕರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.

‘ಮೋದಿ ಕಾರಣದಿಂದಲೇ ನನಗೆ ಪುರಸ್ಕಾರ ದೊರೆತಿದೆ. ಇಲ್ಲದಿದ್ದರೆ ಬರುತ್ತಿರಲಿಲ್ಲ. ಇದರಿಂದ ಖುಷಿಯಾಗಿದೆ. ಪ್ರಶಸ್ತಿ ಕೊಟ್ಟರೆಂಬ ಕಾರಣಕ್ಕೆ ಅವರ ಸರ್ಕಾರವನ್ನು ಹೊಗಳುವುದಿಲ್ಲ. ದೇಶದಲ್ಲಿ ಮೋದಿ ಸರ್ಕಾರದಂತಹ ಸರ್ಕಾರ ಇದುವರೆಗೆ ಬಂದಿರಲಿಲ್ಲ. ಸೇವೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡವರು, ಧೈರ್ಯ ಇರುವಂಥವರು ಇದುವರೆಗೆ ಯಾರೂ ಬಂದಿರಲಿಲ್ಲ’ ಎಂದರು.

‘ಪದ್ಮಭೂಷಣ ‍ಪುರಸ್ಕಾರ ಸಿಕ್ಕಿದ್ದಕ್ಕಿಂತಲೂ, ನನ್ನ ಪುಸ್ತಕಗಳನ್ನು ಲಕ್ಷಾಂತರ ಮಂದಿ ಓದಿ ಸಂತೋಷಪಟ್ಟಿರುವುದು ಹೆಚ್ಚಿನ
ಖುಷಿ ಕೊಡುತ್ತದೆ. ನನಗೀಗ 92 ವರ್ಷ. ನಾನು ಸತ್ತ ಮೇಲೂ ನನ್ನ ಪುಸ್ತಕಗಳು ಬದುಕುತ್ತವೆಯೇ,
ಪ್ರಸ್ತುತವಾಗಿರುತ್ತವೆಯೇ? ಪ್ರಸ್ತುತ ವಾದರೆ ಅದೇ ನಿಜವಾದ ಪ್ರಶಸ್ತಿ’ ಎಂದು ಹೇಳಿದರು.

‘ಈಗ ದೇಶ ಬಹಳ ಪ್ರಗತಿ ಸಾಧಿಸಿದೆ. ಅಂತೆಯೇ ಸವಾಲುಗಳೂ ಇವೆ. ವಿದೇಶದಲ್ಲಿ ಸೋತವರು ಗೆದ್ದವರನ್ನು ಅಭಿನಂದಿಸುತ್ತಾರೆ. ಆದರೆ, ನಮ್ಮಲ್ಲಿ ಆ ರೀತಿ ಇಲ್ಲ. ವಿರೋಧ ಪಕ್ಷದಲ್ಲಿರುವವರು ಜವಾಬ್ದಾರಿ ತಿಳಿಯದೇ ಸದಾ ಬೈಗುಳದಲ್ಲಿ ತೊಡಗುತ್ತಿದ್ದಾರೆ’ ಎಂದು ವಿಷಾದಿಸಿದರು.

‘ಬೈಗುಳ ಬಿಟ್ಟು ಅಧ್ಯಯನ ಮಾಡಿ, ಅಂಕಿ–ಅಂಶಗಳನ್ನು ಇಟ್ಟುಕೊಂಡು, ಸರ್ಕಾರವು ಯಾವ್ಯಾವುದನ್ನು ಮಾಡಿಲ್ಲ ಎಂದು ಚರ್ಚಿಸಲಿ, ಆಗ, ಉತ್ತಮ ಪ್ರಜಾಪ್ರಭುತ್ವ ಸಾಧ್ಯವಾಗುತ್ತದೆ’ ಎಂದರು.

ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿ: ‘ಏಕರೂಪ ನಾಗರಿಕ ಸಂಹಿತೆಯನ್ನು ಖಂಡಿತ ಜಾರಿಗೊಳಿಸಬೇಕು. ಎಲ್ಲ ಕಾನೂನು ಎಲ್ಲರಿಗೂ ಅನ್ವಯವಾಗಬೇಕು. ಮತಕ್ಕೋಸ್ಕರ ಒಂದು ವರ್ಗದ ಓಲೈಕೆ ಸರಿಯಲ್ಲ. ಅಲ್ಪಸಂಖ್ಯಾತರು ಬೇರೆ ಎಂದು ಮಾಡಿದ್ದೇಕೆ? ಸ್ವಾತಂತ್ರ್ಯ ಬಂದ ನಂತರ ದೇಶಕ್ಕೆ ಸರಿಯಾದ ಅಡಿಪಾಯ ಹಾಕಲಿಲ್ಲ. ಇದರಿಂದ ಹಲವು ಸಮಸ್ಯೆಗಳಾಗಿವೆ’ ಎಂದು ಅವರು ಹೇಳಿದರು.

‘ಬಿಬಿಸಿ ಸಾಕ್ಷ್ಯಚಿತ್ರ ಈಗ ಹೊರಬಂದಿದ್ದೇಕೆ?’

‘2002ರ ಗುಜರಾತ್‌ ಗಲಭೆಯಲ್ಲಿ ನರೇಂದ್ರ ಮೋದಿ ಪಾತ್ರವಿತ್ತು’ ಎಂದು ಆರೋಪಿಸಿ ಬಿಬಿಸಿ ಹೊರತಂದಿರುವ ಸಾಕ್ಷ್ಯಚಿತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಈಗ ಅದು ಹೊರಬಂದಿದ್ದೇಕೆ? ಜಿ–20 ಶೃಂಗಸಭೆಗೆ ಉತ್ತಮ ಅರ್ಥಶಾಸ್ತ್ರಜ್ಞರನ್ನು ಆಯ್ಕೆ ಮಾಡಿದ್ದನ್ನು ತಡೆಯಲಾಗದೇ ಇಂಥದ್ದೆಲ್ಲ ಶುರು ಮಾಡಿಕೊಂಡಿದ್ದಾರೆ. ಹಳೆಯದ್ದನ್ನೆಲ್ಲಾ ಈಗ ತೆಗೆದಿದ್ದಾರೆ’ ಎಂದು
ಸಾಹಿತಿ ಎಸ್‌.ಎಲ್‌. ಭೈರಪ್ಪ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು