ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಜಿಲ್ಲೆಯಲ್ಲಿ 26.99 ಲಕ್ಷ ಮತದಾರರು

Published 22 ಜನವರಿ 2024, 12:53 IST
Last Updated 22 ಜನವರಿ 2024, 12:53 IST
ಅಕ್ಷರ ಗಾತ್ರ

ಮೈಸೂರು: ‘ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದ್ದು, ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 26,99,835 ಮತದಾರರಿದ್ದಾರೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

‘2023ರ ಅ.27ರಂದು ಪ್ರಕಟಿಸಲಾಗಿದ್ದ ಕರಡು ಮತದಾರರ ಪಟ್ಟಿಯಲ್ಲಿ 26,87,773 ಮತದಾರರಿದ್ದರು. ಪರಿಷ್ಕರಣೆ ಪ್ರಕ್ರಿಯೆ ಬಳಿಕ 12,062 ಮಂದಿ ಸೇರ್ಪಡೆಯಾಗಿದ್ದಾರೆ. ಪರಿಷ್ಕರಣೆ ಮುಂದುವರಿಯಲಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು.

‘13,31,772 ಪುರುಷರು, 13,67,843 ಮಹಿಳೆಯರು ಹಾಗೂ 220 ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ. 50,969 ಯುವ ಮತದಾರರಿದ್ದಾರೆ. ಕರಡು ಪಟ್ಟಿಯ ಪ್ರಕಾರ 34,070 ಯುವ ಮತದಾರರಿದ್ದರು. ಸ್ವೀಕೃತವಾದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲಾಗಿದ್ದು, 54,766 ಹೆಸರು ಸೇರ್ಪಡೆಯಾಗಿದೆ. 42,704 ಮಂದಿ ಹೆಸರು ತೆಗೆಯಲಾಗಿದೆ. ಮರಣ (16,726), ಸ್ಥಳಾಂತರ (19,482) ಹಾಗೂ ಪುನರಾವರ್ತನೆ (6,495) ಕಾರಣದಿಂದ ಹೆಸರುಗಳನ್ನು ತೆಗೆಯಲಾಗಿದೆ. 25,769 ಹೆಸರುಗಳನ್ನು ತಿದ್ದುಪಡಿ ಮಾಡಲಾಗಿದೆ’ ಎಂದು ವಿವರಿಸಿದರು.

‘31,631 ವಿಶೇಷ, 1,148 ಸೇವಾ ಹಾಗೂ 2,862 ಗಣ್ಯ ಮತದಾರರು ಇದ್ದಾರೆ. ಒಟ್ಟು 2,915 ಮತಗಟ್ಟೆಗಳಿದ್ದು, ಶೇ 125ರಷ್ಟು ವಿದ್ಯುನ್ಮಾನ ಮತ ಯಂತ್ರಗಳನ್ನು ಒದಗಿಸಲಾಗಿದೆ. ಮೊದಲ ಹಂತದ ಪರಿಶೀಲನೆ ನಡೆದಿದ್ದು, ಅವುಗಳಲ್ಲಿ ಶೇ 10ರಷ್ಟನ್ನು ತರಬೇತಿ ಹಾಗೂ ಮತದಾರರ ಜಾಗೃತಿಗೆ ಬಳಸಲಾಗುತ್ತಿದೆ. ಪಟ್ಟಿಯ ಪ್ರತಿಗಳನ್ನು ರಾಜಕೀಯ ಪಕ್ಷಗಳಿಗೂ ಒದಗಿಸಲಾಗಿದೆ. ಕಾಲಕಾಲಕ್ಕೆ ಸಭೆ ನಡೆಸಿ, ಮಾಹಿತಿ ಕೊಡಲಾಗುತ್ತಿದೆ. ಗುಣಾತ್ಮಕ ಹಾಗೂ ದೋಷರಹಿತವಾದ ಪಟ್ಟಿ ಸಿದ್ಧಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

‘ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಸೇರ್ಪಡೆ, ತಿದ್ದುಪಡಿ ಮಾಡುವ ವಿವರಗಳ ಮತದಾರರ ಗುರುತಿನ ಚೀಟಿಯನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿಕೊಡಲಾಗುತ್ತದೆ. ವೋಟರ್ಸ್‌ ಹೆಲ್ಪ್‌ಲೈನ್ ಆ್ಯಪ್‌ ಮೂಲಕವೇ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. 1950 ಸಹಾಯವಾಣಿ ಚಾಲ್ತಿಯಲ್ಲಿದ್ದು, ಮಾಹಿತಿ ಪಡೆದುಕೊಳ್ಳಬಹುದು’ ಎಂದು ತಿಳಿಸಿದರು.

‘2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಜಿಲ್ಲೆಯಲ್ಲಿ 6 ಲಕ್ಷ ಮತದಾರರು ಹೆಚ್ಚಾಗಿದ್ದಾರೆ’ ಎಂದು ಹೇಳಿದರು.

ಮನೆಗಳಿಗೆ ಭೇಟಿ ನೀಡಿ

‘ಯುವ ಮತದಾರರು, ಅರ್ಹ ಮತದಾರರ ನೋಂದಣಿ, ಮೃತ, ಪುನರಾವರ್ತಿತ ಅಥವಾ ಸ್ಥಳಾಂತರಗೊಂಡ ಮತದಾರರನ್ನು ತೆಗೆದುಹಾಕುವುದು ಮತ್ತು ಇತರ ಅಂಶಗಳ ಹಿನ್ನೆಲೆಯಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿಯೂ ಬಿಎಲ್‌ಒಗಗಳು ಮನೆ-ಮನೆಗೆ ಭೇಟಿ ನೀಡಿ ಗುಣಾತ್ಮಕ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಕ್ರಮ ವಹಿಸಿದ್ದಾರೆ’ ಎಂದು ರಾಜೇಂದ್ರ ಹೇಳಿದರು.

‘ಅರ್ಹ ಮತದಾರರು ಪಟ್ಟಿಗೆ ಅವರ ಹೆಸರನ್ನು ಚುನಾವಣಾ ಆಯೋಗವು ನಿಗದಿಪಡಿಸುವ ದಿನಾಂಕದವರೆಗೂ ಸೇರಿಸಿಕೊಳ್ಳಲು ಅವಕಾಶವಿದೆ. ನಮೂನೆ-6–ಸೇರ್ಪಡೆ, ನಮೂನೆ-6ಎ– ಅನಿವಾಸಿ ಭಾರತೀಯರು ಅವರ ಹೆಸರನ್ನು ನೋಂದಾಯಿಸಿಕೊಳ್ಳಲು, ನಮೂನೆ-6ಬಿ– ಮತದಾರರ ಪಟ್ಟಿಯೊಂದಿಗೆ ಆಧಾರ್ ಜೋಡಣೆ ಮಾಡಿಕೊಳ್ಳಲು, ನಮೂನೆ-7– ತೆಗೆದುಹಾಕುವುದು (ಮರಣ, ಸ್ಥಳಾಂತರ, ಪುನರಾವರ್ತನೆ), ನಮೂನೆ-8– ಮತದಾರರ ಹೆಸರು, ವಿಳಾಸ ಮತ್ತು ಭಾವಚಿತ್ರಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ, ಒಂದು ವಿಧಾನಸಭಾ ಕ್ಷೇತ್ರದಿಂದ ಬೇರೆ ಕ್ಷೇತ್ರಕ್ಕೆ ವರ್ಗಾವಣೆ, ಒಂದು ವಿಧಾನಸಭಾ ಕ್ಷೇತ್ರದಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವರ್ಗಾವಣೆ, ಬದಲಿ ಎಪಿಕ್‍ಗಾಗಿ ಮನವಿ ಹಾಗೂ ಅಂಗವೈಕಲ್ಯ ಹೊಂದಿರುವ ಮತದಾರರ ಅವರ ಅಂಗವೈಕಲ್ಯ ದಾಖಲಿಸಲು ಸಲ್ಲಿಸಬಹುದಾಗಿದೆ’ ಎಂದು ವಿವರ ನೀಡಿದರು.

ಜಾಲತಾಣದಲ್ಲೂ ವೀಕ್ಷಿಸಬಹುದು

‘ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿ ಅಧಿಕೃತ ಜಾಲತಾಣದಲ್ಲಿ (https://ceo.karnataka.gov.in) ಲಭ್ಯವಿದೆ. ಸಾರ್ವಜನಿಕರು ತಮ್ಮ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾದ ಬಗ್ಗೆ ಪರಿಶೀಲಿಸಿಕೊಳ್ಳಬಹುದಾಗಿದೆ. ಸರಿಯಾದ ಹೆಸರನ್ನು ನಮೂದುಗಳೊಂದಿಗೆ ನೋಂದಾಯಿಸಿದ ಬಗ್ಗೆ ಖಚಿತಪಡಿಸಿಕೊಳ್ಳಬಹುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಪಟ್ಟಿಯಲ್ಲಿರುವ ಯಾವುದೇ ಮತದಾರರ ಭಾವಚಿತ್ರ ಹಾಕದಿದ್ದಲ್ಲಿ, ಫೋಟೊ ಅಸ್ಪಷ್ಟವಾಗಿದ್ದಲ್ಲಿ ಅಥವಾ ಆಯೋಗವು ನಿಗದಿಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿಲ್ಲದಿದ್ದರೆ ಅಥವಾ ಇನ್ನಿತರ ದೋಷವಿದ್ದರೆ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಹಕ್ಕುದಾರರು ಅದನ್ನು ಬಳಸಿಕೊಳ್ಳಬಹುದು. ಅರ್ಹರು ಹಾಗೂ ಯುವ ಮತದಾರರು ಪಟ್ಟಿಯಲ್ಲಿ ಹೆಸರು ಕೈಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು’ ಎಂದು ಕೋರಿದರು.

ಲೋಕಸಭೆ ಚುನಾವಣೆಗೆ ಸಿದ್ಧತೆ

‘ಲೋಕಸಭಾ ಸಾರ್ವತ್ರಿಕ ಚುನಾವಣೆಯ ಪೂರ್ವ ಸಿದ್ಧತೆ ಪ್ರಗತಿಯಲ್ಲಿದೆ. 241 ಸೆಕ್ಟರ್ ಅಧಿಕಾರಿಗಳು, 51 ಫ್ಲೈಯಿಂಗ್ ಸ್ಕ್ವಾಡ್ ತಂಡ, 49 ಸ್ಟಾಟಿಕ್ ಸರ್ವೆಯಲನ್ಸ್‌ ತಂಡ, 23 ವಿಡಿಯೊ ಸರ್ವೆಯಲನ್ಸ್ ತಂಡ, 11 ಲೆಕ್ಕ ತಂಡಗಳನ್ನು ರಚಿಸಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ರಾಜೇಂದ್ರ ತಿಳಿಸಿದರು.

‘ಜಿಲ್ಲಾಧಿಕಾರಿ ಕಚೇರಿಯಲ್ಲಿ ಇವಿಎಂ ಪ್ರಾತ್ಯಕ್ಷಿಕೆ ಕೇಂದ್ರ ಸ್ಥಾಪಿಸಲಾಗಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಸಂಚಾರ ಪ್ರಾತ್ಯಕ್ಷಿಕೆ ಕೇಂದ್ರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ವಿಧಾನಸಭಾ ಕ್ಷೇತ್ರವಾರು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ದೂರವಾಣಿ ಸಂಖ್ಯೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು’ ಎಂದು ಹೇಳಿದರು.

ಜಿಲ್ಲೆಯ ಮತದಾರರ ವಿವರ

ವಿಧಾನಸಭಾ ಕ್ಷೇತ್ರ;ಪುರುಷರು;ಮಹಿಳೆಯರು;ಲಿಂಗತ್ವ ಅಲ್ಪಸಂಖ್ಯಾತರು;ಒಟ್ಟು

ಪಿರಿಯಾಪಟ್ಟಣ;97942;98090;4;196036

ಕೃಷ್ಣರಾಜನಗರ;107404;109903;12;217319

ಹುಣಸೂರು;121800;123495;17;245312

ಎಚ್‌.ಡಿ.ಕೋಟೆ;113178;113525;13;226716

ನಂಜನಗೂಡು;109144;110906;7;220057

ಚಾಮುಂಡೇಶ್ವರಿ;169237;171845;34;341116

ಕೃಷ್ಣರಾಜ;123735;130250;28;254013

ಚಾಮರಾಜ;124035;128953;31;253019

ನರಸಿಂಹರಾಜ;145297;156283;48;301628

ವರುಣ;117815;119348;13;237176

ತಿ.ನರಸೀಪುರ;102185;105245;13;207443

ಒಟ್ಟು;1,33,1772;1,36,7843;220;26,99,835

(ಜ.22ರಂದು ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿ ಪ್ರಕಾರ)

ಕರಡು–ಅಂತಿಮ ಮತದಾರರ ಪಟ್ಟಿಯ ವ್ಯತ್ಯಾಸ

ವಿಧಾನಸಭಾ ಕ್ಷೇತ್ರ;ಅಂತಿಮ ಮಟ್ಟಿ;ಕರಡು;ಏರಿಕೆ/ಇಳಿಕೆ

ಪಿರಿಯಾಪಟ್ಟಣ;196036;197060;-1024

ಕೃಷ್ಣರಾಜನಗರ;217319;218081;-762

ಹುಣಸೂರು;245312;244581;731

ಎಚ್‌.ಡಿ.ಕೋಟೆ;226716;227493;-777

ನಂಜನಗೂಡು;220057;221428;-1371

ಚಾಮುಂಡೇಶ್ವರಿ;341116;335677;5439

ಕೃಷ್ಣರಾಜ;254013;253459;554

ಚಾಮರಾಜ;253019;250963;2056

ನರಸಿಂಹರಾಜ;301628;296014;5614

ವರುಣ;237176;236360;816

ತಿ.ನರಸೀಪುರ;207443;206657;786

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT