ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ | ವರ್ಷದಲ್ಲಿ ಕೇವಲ ಐವರಿಗೆ 3.15 ಲಕ್ಷ ಚ.ಅಡಿ ಜಾಗ: ಶಾಸಕ ಟಿ.ಎಸ್.ಶ್ರೀವತ್ಸ

Published 11 ಜುಲೈ 2024, 12:32 IST
Last Updated 11 ಜುಲೈ 2024, 12:32 IST
ಅಕ್ಷರ ಗಾತ್ರ

ಮೈಸೂರು: ‘ಮುಡಾದಿಂದ 2023 ಮಾರ್ಚ್‌ನಿಂದ ಈವರೆಗೆ ಒಟ್ಟು 3.15 ಲಕ್ಷ ಚದರ ಅಡಿ ಜಾಗವನ್ನು ಕೇವಲ ಐವರಿಗಷ್ಟೆ ನೀಡಲಾಗಿದೆ’ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಆರೋಪಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಕ್ರಮವಾಗಿ 81ಸಾವಿರ, 98ಸಾವಿರ, 55ಸಾವಿರ, 35ಸಾವಿರ ಹಾಗೂ 70ಸಾವಿರ ಚದರ ಅಡಿ ಜಾಗವನ್ನು ಕೊಡಲಾಗಿದೆ. ಇದರಲ್ಲಿ ನಿವೇಶನ ಮಾಡಿ ಹಂಚಿದ್ದರೆ (20X30 ಅಡಿ) 545 ಮಂದಿ ಬಡವರಿಗೆ ನೀಡಬಹುದಾಗಿತ್ತು’ ಎಂದು ತಿಳಿಸಿದರು.

‘1969ರಲ್ಲಿ ಭೂಮಿ ಸ್ವಾಧೀನಪಡಿಸಿಕೊಂಡಿದ್ದೇವೆ, ಅವರಿಗೆ ಈಗ ಭೂಪರಿಹಾರ ಕೊಡುತ್ತಿದ್ದೇವೆ ಎಂದು ತೋರಿಸಿದ ಉದಾಹರಣೆಯೂ ಇದೆ. 1978ರಲ್ಲಿ ಗೋಕುಲಂ ಬಡಾವಣೆಯಲ್ಲಿ ಪಡೆದಿದ್ದಕ್ಕೆ ಈಗ ಜಾಗ ಕೊಡಲಾಗಿದೆ ಎಂದು ತಿಳಿಸಿದ್ದಾರೆ. ಆ ಹಗರಣವೀಗ ಮುಖ್ಯಮಂತ್ರಿ ಮನೆಯ ಬಾಗಿಲಿನವರೆಗೂ ಬಂದಿದೆ. ಮುಖ್ಯಮಂತ್ರಿಯು ₹ 62 ಕೋಟಿ ಹಣ ಕೇಳುತ್ತಿದ್ದಾರೆ. ಮೈಸೂರಿನಲ್ಲಿ ಒಂದು ಎಕರೆಗೆ ₹20 ಕೋಟಿ ಮೌಲ್ಯ ಎಲ್ಲಿದೆ?’ ಎಂದು ಕೇಳಿದರು.

‘ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ 2023ರ ನವೆಂಬರ್‌ನಲ್ಲೇ ತಾಂತ್ರಿಕ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ, ಅದನ್ನು ಆಧರಿಸಿ ಸರ್ಕಾರವು ಯಾವುದೇ ಕ್ರಮವನ್ನೂ ಜರುಗಿಸಿಲ್ಲ’ ಎಂದು ದೂರಿದರು.

‘ಮುಡಾದಲ್ಲಿ ನಡೆದಿರುವ ಹಗರಣಗಳ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಜುಲೈ 12ರಂದು ಬೆಳಿಗ್ಗೆ 10.30ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಸೇರಿದಂತೆ ರಾಜ್ಯದ ನಾಯಕರು ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ಮೈಸೂರು, ಚಾಮರಾಜನಗರ ಹಾಗೂ ಮಂಡ್ಯದಿಂದ 10 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ಪಕ್ಷದ ನಗರ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT