ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಡಾ | ಕಡತಕ್ಕೆ ಅನುಮೋದನೆ: ಆಗ ಕಾರ್ಯದರ್ಶಿ, ಈಗ ವಿಶೇಷ ತಹಶೀಲ್ದಾರ್‌ಗೆ ಹೊಣೆ

ಬದಲಿ ಆದೇಶ: ಚರ್ಚೆ, ಅನುಮಾನಕ್ಕೆ ಗ್ರಾಸ!
Last Updated 3 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಎಲ್ಲ ಕಡತಗಳೂ ಕಾರ್ಯದರ್ಶಿ ಮೂಲಕವೇ ಬರಬೇಕು ಎಂದು ಹೋದ ವರ್ಷ ಆದೇಶಿಸಿದ್ದ ಆಯುಕ್ತರು, ಈಚೆಗೆ ವಿಶೇಷ ತಹಶೀಲ್ದಾರ್ ಅವರಿಂದಲೇ ಬರಬೇಕು ಎಂದು ವ್ಯತಿರಿಕ್ತ ಆದೇಶ ಹೊರಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಕೆಲವೇ ತಿಂಗಳಲ್ಲಿ ಆದೇಶವನ್ನು ಬದಲಿಸಿರುವುದು ಅನುಮಾನಗಳಿಗೂ ಕಾರಣವಾಗಿದೆ.

2022ರ ಸೆ.6ರಂದು ಹೊರಡಿಸಿದ್ದ ‘ಅಧಿಕೃತ ಜ್ಞಾಪನ’ದಲ್ಲಿ ನಿವೇಶನ ಶಾಖೆಯ ಎಲ್ಲ ಕೆಲಸಗಳನ್ನು ಸರಳೀಕರಣಗೊಳಿಸಲಾಗಿದೆ ಎಂದು ತಿಳಿಸಿದ್ದರು.

‘ಇ–ಖಾತಾ, ಖಾತೆ ನೋಂದಣಿ, ಖಾಗೆ ವರ್ಗಾವಣೆ, ಪೌತಿ ವರ್ಗಾವಣೆ, ಕ್ರಯದ ಮೂಲಕ ಖಾತೆ ವರ್ಗಾವಣೆ, ಕ್ರಯಪತ್ರ ನೋಂದಣಿ ಆದೇಶಗಳನ್ನು ತಹಶೀಲ್ದಾರರಿಂದ ಅನುಮೋದನೆಗಾಗಿ ಕಾರ್ಯದರ್ಶಿಗೆ ಸಲ್ಲಿಸಲಾಗುತ್ತಿದೆ. ಆದರೆ, ಜನರ ಕೆಲಸಗಳು ತ್ವರಿತವಾಗಿ ಆಗಲೆಂಬ ಉದ್ದೇಶದಿಂದ ಅಧ್ಯಕ್ಷರು ಟಿಪ್ಪಣಿ ಸಲ್ಲಿಸಿದ ಕಾರಣ ತಹಶೀಲ್ದಾರ್‌ ಹಂತದಲ್ಲಿಯೇ ನಿರ್ವಹಿಸಲು ಆದೇಶಿಸಲಾಗಿತ್ತು. ನಂತರ ವಿಶೇಷ ತಹಶೀಲ್ದಾರರು, ಸಹಾಯಕ ಕಾರ್ಯದರ್ಶಿಗಳು, ತಮ್ಮ ಹಂತದಲ್ಲಿ ತ್ವರಿತವಾಗಿ ವಿಲೇವಾರಿ ಮಾಡದ ಕಾರಣ ಅನಗತ್ಯವಾಗಿ ಕಡತಗಳು ಬಾಕಿ ಉಳಿಯುತ್ತಿರುವುದು ಹಾಗೂ ಎಲ್ಲ ಕಡತಗಳನ್ನೂ ಕಾನೂನು ಅಭಿಪ್ರಾಯ ಕೋರಿ ಸಲ್ಲಿಸುತ್ತಿರುವುದು ಕಂಡುಬರುವುದಲ್ಲದೇ, ದಿನನಿತ್ಯ ಸಾರ್ವಜನಿಕರು ಈ ಸಂಬಂಧ ಪ್ರಕ್ರಿಯೆಗೆ ಆಯುಕ್ತರನ್ನು ಭೇಟಿ ನೀಡುತ್ತಿರುವುದು ನಡೆಯುತ್ತಿದೆ. ಆದ್ದರಿಂದ ಆಯಾ ವಲಯದ ವಿಶೇಷ ತಹಶೀಲ್ದಾರ್ ಅಥವಾ ಸಹಾಯಕ ಕಾರ್ಯದರ್ಶಿ ಕಾರ್ಯದರ್ಶಿಗೆ ಸಲ್ಲಿಸಿ ಅನುಮೋದನೆ ಅಥವಾ ಆದೇಶ ಪಡೆದುಕೊಂಡು ನಿರ್ವಹಿಸಲು ಆದೇಶಿಸಿದೆ. ಒಂದು ವೇಳೆ ಕಾರ್ಯದರ್ಶಿಯಿಂದ ಆದೇಶ ಪಡೆಯದೇ ನಿರ್ವಹಿಸಿದಲ್ಲಿ ಅಂತಹ ವಿಶೇಷ ತಹಶೀಲ್ದಾರ್ ಅಥವಾ ಸಹಾಯಕ ಕಾರ್ಯದರ್ಶಿ ಮೇಲೆ ಶಿಸ್ತುಕ್ರಮ ಜರುಗಿಸಲು ಹಿರಿಯ ಅಧಿಕಾರಿಗಳಿಗೆ ಕೋರಲಾಗುವುದು’ ಎಂದು ಆಯುಕ್ತರು ಹೋದ ವರ್ಷ ಹೇಳಿದ್ದರು.

ಆದರೆ, ಈ ವರ್ಷ ಫೆ.10ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಬದಲಾವಣೆ ಮಾಡಿದ್ದಾರೆ. ‘ಪ್ರಾಧಿಕಾರದಿಂದ ವಿವಿಧ ಬಡಾವಣೆಗಳಲ್ಲಿ ಹಂಚಿಕೆಯಾಗಿರುವ ನಿವೇಶನಗಳಿಗೆ ನಿಯಮಾನುಸಾರ ಮಂಜೂರಾತಿ ಪತ್ರ, ಸ್ವಾಧೀನ ಪತ್ರ, ನಿವೇಶನ ಅಥವಾ ಮನೆ ಕಂದಾಯ, ಕ್ರಯಪತ್ರಗಳಿಗೆ ಸಂಬಂಧಿಸಿದಂತೆ ನಿವೇಶನಗಳ ಖಾತಾ ಅಥವಾ ಕಂದಾಯ ಹಾಗೂ ಸ್ವಾಧೀನಪತ್ರಗಳನ್ನು ವಿಶೇಷ ತಹಶೀಲ್ದಾರ್ ಹಂತದಲ್ಲೇ ಕ್ರಮ ವಹಿಸಬೇಕು. ಪ್ರಾಧಿಕಾರದಿಂದ ನೀಡಲಾಗುವ ಮಂಜೂರಾತಿ ಪತ್ರ ಹಾಗೂ ಕ್ರಯಪತ್ರಗಳಿಗೆ ಸಂಬಂಧಪಟ್ಟ ಕಡತಗಳನ್ನು ವಿಶೇಷ ವಿಶೇಷ ತಹಶೀಲ್ದಾರ್ ಅವರಿಂದ ನೇರವಾಗಿ ಆಯುಕ್ತರಿಗೆ ಮಂಡಿಸಿ ಅನುಮೋದನೆ ಪಡೆದುಕೊಂಡು ಮುಂದಿನ ಕ್ರಮ ವಹಿಸುವುದು’ ಎಂದು ಆಯುಕ್ತ ಬಿ.ಟಿ.ದಿನೇಶ್‌ಕುಮಾರ್‌ ಸುತ್ತೋಲೆ ಹೊರಡಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆಯುಕ್ತರು, ‘ಆಡಳಿತಾತ್ಮಕ ಕೆಲಸಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರ ಕೆಲಸ ಮಾಡಿಕೊಡುವಲ್ಲಿ ವಿಳಂಬ ಆಗಬಾರದು ಎಂಬ ಉದ್ದೇಶವಷ್ಟೇ ಇದೆ. ಯಾವುದೇ ದುರುದ್ದೇಶವಿಲ್ಲ. ಕಾರ್ಯದರ್ಶಿಯು ಸಹಾಯಕ ಚುನಾವಣಾ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ. ಅವರನ್ನು ಪಿರಿಯಾ‍ಪಟ್ಟಣ ಕ್ಷೇತ್ರಕ್ಕೆ ನಿಯೋಜಿಸಲಾಗಿದೆ. ಎಲ್ಲ ಕೆಲಸಕ್ಕೂ ಕಡತಗಳನ್ನು ಪಿರಿಯಾಪಟ್ಟಣಕ್ಕೆ ಕಳುಹಿಸಲಾಗುವುದಿಲ್ಲ. ಇದಕ್ಕಾಗಿ ಬದಲಾವಣೆ ಮಾಡಲಾಗಿದೆ. ಅನಗತ್ಯ ವಿಳಂಬ ಆಗಬಾರದು ಎನ್ನುವುದು ನಮ್ಮ ಕಾಳಜಿ’ ಎಂದು ಸ್ಪಷ್ಟಪಡಿಸಿದರು.

‘ಕಾರ್ಯದರ್ಶಿಯು ಚುನಾವಣೆ ಅಧಿಸೂಚನೆ ಪ್ರಕಟವಾದ ನಂತರ ಮತ್ತಷ್ಟು ಬ್ಯುಸಿಯಾಗುತ್ತಾರೆ. ಎಲ್ಲರೂ ಚುನಾವಣಾ ಕೆಲಸದಲ್ಲಿ ಮುಳುಗಿದ್ದಾರೆ, ಮುಡಾದಲ್ಲಿ ನಮ್ಮ ಕೆಲಸಗಳೇನು ನಡೆಯುತ್ತಿಲ್ಲ ಎಂದು ಸಾರ್ವಜನಿಕರಿಂದ ದೂರುಗಳು ಬಾರದಿರಲೆಂದು ಈ ಕ್ರಮ ಕೈಗೊಂಡು ಸುತ್ತೋಲೆ ಹೊರಡಿಸಲಾಗಿದೆ’ ಎಂದು ಹೇಳಿದರು.

ಪ್ರತಿಕ್ರಿಯೆಗೆ ಕಾರ್ಯದರ್ಶಿ ಕುಸುಮಾ ಕುಮಾರಿ ಲಭ್ಯವಾಗಲಿಲ್ಲ.

ಶೀಘ್ರದಲ್ಲೇ ಮತ್ತೊಂದು ಸುತ್ತೋಲೆ
ಸುತ್ತೋಲೆಯ ಬಗ್ಗೆ ಚರ್ಚೆಯಾಗಿದೆ. ಹೀಗಾಗಿ, ಲಭ್ಯ ಹಿರಿಯ ಅಧಿಕಾರಿಗಳಿಂದ ಅನುಮೋದನೆ ಪಡೆಯಲು ಅವಕಾಶ ಕಲ್ಪಿಸಿ ಪರಿಷ್ಕೃತ ಸುತ್ತೋಲೆಯನ್ನು ಶೀಘ್ರದಲ್ಲೇ ಹೊರಡಿಸಲಾಗುವುದು.
–ಜಿ.ಟಿ.ದಿನೇಶ್‌ಕುಮಾರ್, ಆಯುಕ್ತ, ಮುಡಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT