ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ: ಒಂದೇ ದಿನ 848 ನಿವೇಶನ ಹಂಚಿಕೆ?

ಮಾಜಿ ಅಧ್ಯಕ್ಷ ಎಚ್‌.ವಿ. ರಾಜೀವ್ ವಿರುದ್ಧ ಪ್ರಭಾವ ಬಳಸಿದ ಆರೋಪ
Published : 9 ಸೆಪ್ಟೆಂಬರ್ 2024, 0:28 IST
Last Updated : 9 ಸೆಪ್ಟೆಂಬರ್ 2024, 0:28 IST
ಫಾಲೋ ಮಾಡಿ
Comments

ಮೈಸೂರು: ತಾವು ಅಧ್ಯಕ್ಷರಾಗಿರುವ ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ, ಪ್ರಭಾವ ಬೀರಿ ಒಂದೇ ದಿನದಲ್ಲಿ ಬರೋಬ್ಬರಿ 848 ನಿವೇಶನಗಳ ಹಂಚಿಕೆಗೆ ಮುಡಾದಿಂದ ಅನುಮೋದನೆ ಪಡೆದುಕೊಂಡಿದ್ದಾರೆ ಎಂಬ ಆರೋಪ ಇಲ್ಲಿನ ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಅವರ ವಿರುದ್ಧ ಕೇಳಿಬಂದಿದೆ. 

2022ರಲ್ಲಿ ಜರುಗಿದ ಮುಡಾ ಸಭೆಯಲ್ಲಿ ಈ ಪ್ರಕ್ರಿಯೆ ನಡೆದಿದೆ. ಆಗ ರಾಜೀವ್ ಬಿಜೆಪಿಯಲ್ಲಿದ್ದರು. ವಿಧಾನಸಭೆ ಚುನಾವಣೆಯ ನಂತರ ಅವರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ.

‘ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದ್ದರೂ ಆ ಸಂಘಕ್ಕೆ ಮುಡಾದಿಂದ ಅಕ್ರಮವಾಗಿ 848 ನಿವೇಶನಗಳ ಹಕ್ಕನ್ನು ವರ್ಗಾವಣೆ ಮಾಡಲಾಗಿದೆ’ ಎಂದು ತಾಂತ್ರಿಕ ಸಮಿತಿಯ ವರದಿಯೂ ಹೇಳಿತ್ತು.

‘ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘದಿಂದ ತಾಲ್ಲೂಕಿನ ಕೇರ್ಗಳ್ಳಿ, ನಗರ್ತಳ್ಳಿ ಮತ್ತು ಬಲ್ಲಹಳ್ಳಿ ಗ್ರಾಮದ ಒಟ್ಟು 252 ಎಕರೆ 10 ಗುಂಟೆ ಪ್ರದೇಶದಲ್ಲಿ ಬಡಾವಣೆ ನಿರ್ಮಾಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ 2018ರ ಆದೇಶದ ವಿರುದ್ಧವಾಗಿ ಅನುಮೋದನೆ ಪಡೆದುಕೊಳ್ಳಲಾಗಿದೆ’ ಎನ್ನಲಾಗಿದೆ. ಈ ಜಾಗದ ಕೆಲವು ಸರ್ವೆ ನಂಬರ್‌ಗಳ ವ್ಯಾಜ್ಯ ನ್ಯಾಯಾಲಯದಲ್ಲಿದೆ. ಹೀಗಾಗಿ ಈ ಬಡಾವಣೆಗಳ ನಿವೇಶನ ಹಕ್ಕುಗಳನ್ನು ವರ್ಗಾವಣೆ ಮಾಡಬಾರದೆಂದು ಆದೇಶವಿದೆ. ಹೀಗಿದ್ದರೂ 848 ನಿವೇಶನಗಳನ್ನ ಒಂದೇ ದಿನದಲ್ಲಿ ಬಿಡುಗಡೆ ಮಾಡಿಸಿ, ಖಾತೆಯನ್ನೂ ಮಾಡಿಸಿಕೊಂಡಿದ್ದಾರೆ. ಆಗಿನ ಆಯುಕ್ತರ ಅನುಮೋದನೆ ಇಲ್ಲದಿದ್ದರೂ ನಿವೇಶನಗಳನ್ನು ಬಿಡುಗಡೆ ಮಾಡಿಸಿದ್ದಾರೆ ಎಂದು ದೂರಲಾಗುತ್ತಿದೆ. ಈ ಬಗ್ಗೆ ಆಗ ಮುಡಾ ಆಯುಕ್ತರಾಗಿದ್ದ ಡಿ.ಬಿ. ನಟೇಶ್ ಸರ್ಕಾರಕ್ಕೆ ಪತ್ರ ಬರೆದಿದ್ದರು ಎಂದು ಹೇಳಲಾಗಿದೆ.

ರಕ್ಷಣೆಗಾಗಿಯೇ:

‘ಇಂತಹ ಹಗರಣಗಳಿಂದ ರಕ್ಷಣೆ ಮಾಡಿಕೊಳ್ಳುವ ಸಲುವಾಗಿಯೇ ರಾಜೀವ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇಲ್ಲದಿದ್ದರೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಪಕ್ಷ ಬಿಡಬಹುದಿತ್ತು. ಸರ್ಕಾರ ಬದಲಾದ ಕಾರಣಕ್ಕೆ ರಕ್ಷಣೆಗೆ ಕಾಂಗ್ರೆಸ್ ಮೊರೆ ಹೋಗಿದ್ದಾರೆ’ ಎಂದು ಬಿಜೆಪಿ ಶಾಸಕ ಟಿ.ಎಸ್ ಶ್ರೀವತ್ಸ ದೂರಿದ್ದಾರೆ. 

‘ಜ್ಞಾನಗಂಗಾ ಹೌಸಿಂಗ್ ಸೊಸೈಟಿಗೆ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಿವೇಶನಗಳನ್ನು ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಬಡಾವಣೆಯ ಅಭಿವೃದ್ಧಿ ಕಾಮಗಾರಿ ಸಂಪೂರ್ಣ ಆಗದಿರುವುದು, ಸ್ಥಳೀಯ ಸಂಸ್ಥೆ ಎನ್‌ಒಸಿ ಪಡೆಯದೆ ನಿವೇಶನ ಬಿಡುಗಡೆ ಮಾಡಿಸಿಕೊಂಡಿರುವುದು ಅಕ್ರಮ. ಈ ಬಗ್ಗೆ ಆಗಿನ ಆಯುಕ್ತರೇ 2022ರಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆ ಅಧಿಕಾರಿ ಕೇವಲ ಪತ್ರ ಬರೆದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಕೆಲಸ ಮಾಡಿದ್ದಾರೆ. ಇದಾಗಿ ಎರಡು ವರ್ಷವಾದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಲಾದರೂ ತಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಈ ವಿಷಯದ ಬಗ್ಗೆ ನನಗೆ ಗೊತ್ತಿಲ್ಲ. ಪಿ.ಎನ್.ದೇಸಾಯಿ ಆಯೋಗ ತನಿಖೆ ನಡೆಸುತ್ತಿದೆ. ವರದಿ ಬಂದ ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ‌. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ.
ಬೈರತಿ ಸುರೇಶ್, ನಗರಾಭಿವೃದ್ಧಿ ಸಚಿವ

‘ನಿವೇಶನ ಬಿಡುಗಡೆಗೆ ಸಂಬಂಧಿಸಿದ ಸಹಕಾರ ಸಂಘಕ್ಕೆ ಅನುಮೋದನೆ ಕೊಡಿಸಿದ್ದರಲ್ಲಿ ಯಾವುದೇ ಅಕ್ರಮವಿಲ್ಲ. ಅದೆಲ್ಲವೂ ನಿಯಮಬದ್ಧವಾಗಿಯೇ ನಡೆದಿದೆ. ಆ ಸಂಘದವರು ಬಹಳ ವರ್ಷದಿಂದ ನಿವೇಶನಕ್ಕಾಗಿ ಸಂಘಕ್ಕೆ ಹಣ ಕಟ್ಟಿ ಕಾಯುತ್ತಿದ್ದರು’ ಎಂದು ರಾಜೀವ್ ಸ್ಪಷ್ಟಪಡಿಸಿದ್ದಾರೆ.

‘ಆಗ ನಡೆದ ಮುಡಾ ಸಭೆಯ ಅಧ್ಯಕ್ಷತೆಯನ್ನು ನಾನು ವಹಿಸಿರಲಿಲ್ಲ. ಆಗಿನ ಶಾಸಕ ಎಸ್.ಎ. ರಾಮದಾಸ್ ಅಧ್ಯಕ್ಷತೆಯಲ್ಲಿ ಸಭೆ ಜರುಗಿತ್ತು. ಸಂಘದ ಅಧ್ಯಕ್ಷನಾದ್ದರಿಂದ ನಾನು ದೂರ ಉಳಿದಿದ್ದೆ. ಎಲ್ಲವೂ ಸಕ್ರಮವಾಗಿಯೇ ಆಗಿದೆ.  ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಮಾಡುತ್ತಿದ್ದಾರೆ. ಅ ಸಂಘದ ವಿಚಾರ ಸಭೆಗೆ ಬಂದಿತ್ತು; ಅನುಮೋದನೆ ದೊರೆತಿದೆಯಷ್ಟೆ. ಈ ಸಂಬಂಧ ಟೀಕಿಸುತ್ತಿರುವವರಿಗೆ ಕೆಲವೇ ದಿನಗಳಲ್ಲಿ ದಾಖಲೆ ಸಹಿತ ಉತ್ತರ ಕೊಡುತ್ತೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಒಂದು ನೋಟ. ಪ್ರಜಾವಾಣಿ ಚಿತ್ರ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಒಂದು ನೋಟ. ಪ್ರಜಾವಾಣಿ ಚಿತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT