ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನುಬಾಹಿರ ಕೆಲಸ ಮಾಡಿದರೆ ಕ್ರಮ: ‘ಮುಡಾ’ ಅಧ್ಯಕ್ಷ ಕೆ.ಮರೀಗೌಡ ಎಚ್ಚರಿಕೆ

Published 4 ಮಾರ್ಚ್ 2024, 14:52 IST
Last Updated 4 ಮಾರ್ಚ್ 2024, 14:52 IST
ಅಕ್ಷರ ಗಾತ್ರ

ಮೈಸೂರು: ‘ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ)ದಲ್ಲಿ ಕಾನೂನು ಬಾಹಿರ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇದು ಮುಂದುವರಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಅಧ್ಯಕ್ಷ ಕೆ.ಮರೀಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪ್ರಾಧಿಕಾರದಲ್ಲಿ ಸೋಮವಾರ ನಡೆದ ಅಧಿಕಾರಿಗಳು ಹಾಗೂ ನೌಕರರ ಸಭೆಯಲ್ಲಿ ಅವರು ಮಾತನಾಡಿದರು.

‘ಮೈಸೂರಿನವೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮೇಲೆ ವಿಶ್ವಾಸ ಇಟ್ಟು ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಅವರ ಹೆಸರಿಗೆ ಕಳಂಕ ಬಾರದಂತೆ ನಾವು ಕೆಲಸ ಮಾಡಬೇಕಾಗಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ’ ಎಂದರು.

‘ಮುಡಾ ಆಸ್ತಿ ಸಾರ್ವಜನಿಕರೆಲ್ಲರಿಗೂ ಸೇರಿದ್ದಾಗಿದೆ. ಅಕ್ರಮವಾಗಿ ವಶಪಡಿಸಿಕೊಂಡಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಪ್ರಾಧಿಕಾರಕ್ಕೆ ಸೇರಿದ ಆಸ್ತಿ ಎಲ್ಲೆಲ್ಲಿ ಇದೆ ಎಂಬುದನ್ನು ಪತ್ತೆ ಮಾಡಬೇಕು’ ಎಂದು ಸೂಚಿಸಿದರು.

‘ನಗರದ ಬಡವರಿಗೆ ಸೂರು ನೀಡುವ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡಬೇಕು. ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಕೆರೆಗಳು ಒತ್ತುವರಿಯಾಗಿದ್ದು, ಅದನ್ನು ತೆರೆವುಗೊಳಿಸಬೇಕು’ ಎಂದು ತಾಕೀತು ಮಾಡಿದರು.

‘ಸಾರ್ವಜನಿಕರಿಂದ ಬರುವ ಅರ್ಜಿಗಳನ್ನು ನಮೂದಿಸುವುದರೊಂದಿಗೆ ಅರ್ಜಿ ಎಲ್ಲಿಗೆ ಹೋಗಿದೆ ಎಂಬುದನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿರಬೇಕು. ಮಧ್ಯವರ್ತಿಗಳಿಗೆ ಅವಕಾಶ ಕೊಡಬೇಡಿ. ನನ್ನ ಗಮನಕ್ಕೆ ಬಾರದೇ ಯಾವುದೇ ಕಡತ ವಿಲೇವಾರಿ ಆಗಬಾರದು’ ಎಂದು ತಿಳಿಸಿದರು.

‘ನ್ಯಾಯಾಲಯದಲ್ಲಿ ಖಾಸಗಿ ವ್ಯಕ್ತಿಗಳ ವಿರುದ್ಧ ಮೇಲ್ಮನವಿ ಸಲ್ಲಿಸದೆ ಮುಡಾ ಆಸ್ತಿಯು ಖಾಸಗಿ ವ್ಯಕ್ತಿಗಳ ಪಾಲಾಗಿ ನಷ್ಟ ಆಗುತ್ತಿರುವುದನ್ನು ತಪ್ಪಿಸಬೇಕಾಗಿದೆ’ ಎಂದರು.

ಸಿಎ ನಿವೇಶನ, ‘ಎಚ್‌’ ಪ್ರವರ್ಗದಡಿ ನಿವೇಶನ ಹಂಚಿಕೆ, ಶೇ. 50:50ರಡಿ ರೈತರ ಸಹಭಾಗಿತ್ವದಡಿ ಬಡಾವಣೆ ನಿರ್ಮಿಸುವ ಯೋಜನೆ, ಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ಖಾಸಗಿ ಬಡಾವಣೆ ಸಮಸ್ಯೆ ಬಗ್ಗೆ ಚರ್ಚಿಸಿದರು.

‘ಕಾನೂನಿಗೆ ವಿರುದ್ಧವಾಗಿ ಯಾವುದೇ ಕೆಲಸ ಮಾಡಬೇಡಿ. ಯಾರ ಬೆದರಿಕೆಗೂ ಹೆದರಬೇಡಿ’ ಎಂದ ಅವರು, ‘ಸ್ಥಗಿತವಾಗಿರುವ ಯೋಜನೆಗಳು ಹಾಗೂ ಸರ್ಕಾರದಿಂದ ಅನುಮೋದನೆ ಆಗಬೇಕಾಗಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರೆ ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು. ಅನುಷ್ಠಾನವಾಗುವಂತೆ ನೋಡಿಕೊಳ್ಳಲಾಗುವುದು’ ಎಂದರು.

ಕಾರ್ಯದರ್ಶಿ ಶೇಖರ್, ನಗರ ಯೋಜಕ ಸದಸ್ಯ ಆರ್.ಶೇಷ, ಎಸ್ಇ ಚನ್ನಕೇಶವ, ಮುಖ್ಯಲೆಕ್ಕಾಧಿಕಾರಿ ಕವಿತಾ ಹಾಜರಿದ್ದರು.

ಪಿಪಿಪಿ ಯೋಜನೆಯಡಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಪ್ರಾಧಿಕಾರಕ್ಕೆ ಹಣ ಬರುವಂತೆ ಮಾಡಬೇಕು
-ಕೆ.ಮರೀಗೌಡ, ಅಧ್ಯಕ್ಷ ಮುಡಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT