ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮವನ್ನು ಖಂಡಿಸಿ ಮೈಸೂರಿನಲ್ಲಿ ಬೃಹತ್ ಪ್ರಮಾಣದ ಪ್ರತಿಭಟನೆಯು ಆರಂಭಗೊಂಡಿದೆ.
ನಗರದ ಗಾಂಧಿ ವೃತ್ತ ಸಮೀಪ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕರು, ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರ ನಡೆಯನ್ನು ಖಂಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ‘ ದೇಶದಲ್ಲಿ ಬಿಜೆಪಿ ಜೊತೆಗೆ ಇಲ್ಲದೇ ಇರುವ ಸರ್ಕಾರಗಳನ್ನು ಕಿತ್ತುಹಾಕುವ ಪ್ರಯತ್ನ ನಡೆದಿದೆ’ ಎಂದು ಆರೋಪಿಸಿದರು.
‘ಕರ್ನಾಟಕದಲ್ಲಿ ಬಿಜೆಪಿ–ಜೆಡಿಎಸ್ ಎಂದೂ ಸ್ವಂತ ಬಲದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಎರಡು ಬಾರಿ ಅಧಿಕಾರ ಹಿಡಿದಿದ್ದಾರೆ. ಅವರಿಗೆ ಸಂವಿಧಾನದ ಮೇಲೆ ನಂಬಿಕೆಯೇ ಇಲ್ಲ. ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ಬಳಸಿಕೊಂಡು ರಾಜಕೀಯ ಪಿತೂರಿ ಮೂಲಕ ಕರ್ನಾಟಕದಲ್ಲಿನ ಚುನಾಯಿತ ಸರ್ಕಾರವನ್ನು ವಜಾಗೊಳಿಸುವ ಹುನ್ನಾರ ನಡೆಸಿದೆ. ರಾಜಭವನವನ್ನು ರಾಜಕೀಯದ ಅಂಗಳವನ್ನಾಗಿ ಮಾಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘ ಸಂವಿಧಾನದ ರಕ್ಷಣೆ ಹೊತ್ತ ರಾಜ್ಯಪಾಲರು ರಾಜಕೀಯ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ’ ಎಂದು ದೂರಿದರು.
ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ನಜರ್‌ಬಾದ್ ಮಾರ್ಗವಾಗಿ ಹೊಸ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಲಿರುವ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ.
ಶಾಸಕರಾದ ತನ್ವೀರ್ ಸೇಠ್, ಕೆ. ಹರೀಶ್ ಗೌಡ, ರವಿಶಂಕರ್, ದರ್ಶನ್ ಧ್ರುವನಾರಾಯಣ, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯ ಡಿ. ತಿಮ್ಮಯ್ಯ, ಮಾಜಿ ಸಚಿವೆ ಉಮಾಶ್ರೀ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಸಮಿತಿ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್, ನಗರ ಸಮಿತಿ ಅಧ್ಯಕ್ಷ ಆರ್. ಮೂರ್ತಿ, ಮುಡಾ ಅಧ್ಯಕ್ಷ ಕೆ. ಮರೀಗೌಡ, ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್, ಮುಖಂಡರಾದ ಎಂ. ಲಕ್ಷ್ಮಣ, ಕೋಟೆ ಶಿವಣ್ಣ, ಎಂ.ಕೆ. ಸೋಮಶೇಖರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.