ಮೈಸೂರು: ರಾಜ್ಯ ಸರ್ಕಾರದ ಹಗರಣಗಳ ವಿರುದ್ಧ ಬಿಜೆಪಿ-ಜೆಡಿಎಸ್‌ನಿಂದ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ ಮೊಟಕಾಗುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ಇಲ್ಲಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಶನಿವಾರ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಪಾದಯಾತ್ರೆ ಯಶಸ್ಸಿಗೆ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. ನಮ್ಮ ಪಾದಯಾತ್ರೆಗೆ ಬಿ.ಎಸ್. ಯಡಿಯೂರಪ್ಪ ಹಾಗೂ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಕಾಂಗ್ರೆಸ್ ಅಹಿಂದ ಹೆಸರು ಹೇಳಿಕೊಂಡು ಅಧಿಕಾರ ಹಿಡಿದಿದೆ. ಆದರೆ, ಅಹಿಂದ ವರ್ಗಕ್ಕೆ ದ್ರೋಹ ಬಗೆದಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ನೇತೃತ್ವದ ಈ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿ ಹೋಗಿದೆ. ತುಳಿತಕ್ಕೆ ಒಳಗಾದ ವರ್ಗಕ್ಕೆ ನ್ಯಾಯ ಸಿಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಮುಡಾ, ವಾಲ್ಮೀಕಿ ನಿಗಮದ ಹಗರಣ, ಪರಿಶಿಷ್ಟರ ಹಣ ದುರ್ಬಳಕೆ ಸೇರಿದಂತೆ ಹಲವು ವಿಚಾರಗಳನ್ನು ನಾವು ಇಟ್ಟುಕೊಂಡು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮನ್ನು ಏಕವಚನದಲ್ಲಿ ಟೀಕಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಅಧಿಕಾರ ಬಂದಾಗ ಕಾಂಗ್ರೆಸ್‌ನವರಿಗೆ ಈ ರೀತಿ ಆಗುತ್ತದೆ. ಅದರ ಬಗ್ಗೆ ನಾನು ಹೆಚ್ಚಾಗಿ ಮಾತನಾಡುವುದಿಲ್ಲ ಎಂದರು.
ಕಾಂಗ್ರೆಸ್‌ನವರದ್ದು ಪಶ್ಚಾತ್ತಾಪದ ಯಾತ್ರೆಯಷ್ಟೆ. ಕೊಟ್ಟ ಭರವಸೆಗಳನ್ನು ಈಡೇರಿಸಲು ಆಗಲಿಲ್ಲ ಎಂಬ ಪಶ್ಚಾತ್ತಾಪದಲ್ಲಿ ಅವರು ಕಾರ್ಯಕ್ರಮ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅದರ ಸಮರ್ಥನೆಗೆ ಇಳಿದಿದ್ದಾರೆ ಎಂದು ಟೀಕಿಸಿದರು.