ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ದಸರಾ ವಸ್ತುಪ್ರದರ್ಶನ: 15 ದಿನ ವಿಸ್ತರಿಸಲು ಪ್ರಸ್ತಾವ

Published 5 ಜನವರಿ 2024, 8:25 IST
Last Updated 5 ಜನವರಿ 2024, 8:25 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ದಸರಾ ಅಂಗವಾಗಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದಿಂದ ಹಮ್ಮಿಕೊಂಡಿದ್ದ ದಸರಾ ವಸ್ತುಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 15 ದಿನಗಳವರೆಗೆ ವಿಸ್ತರಿಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ನಾಡಹಬ್ಬದ ಉದ್ಘಾಟನೆ ಯಂದು ತೆರೆದುಕೊಂಡಿದ್ದ ವಸ್ತು ಪ್ರದರ್ಶನವನ್ನು 90 ದಿನಗಳವರೆಗೆ ನಡೆಸಲು ಉದ್ದೇಶಿಸ ಲಾಗಿತ್ತು. ಅದರಂತೆ, ಜ.12ರವರೆಗೆ ಇರಲಿದೆ. ಪ್ರವಾಸಿಗರಿಂದ ಪ್ರತಿಕ್ರಿಯೆ ಕಂಡು ಬರುತ್ತಿರುವುದರಿಂದ, ಮಕರ ಸಂಕ್ರಾಂತಿ ಹಾಗೂ ಗಣರಾಜ್ಯೋತ್ಸವ ಅಂಗವಾಗಿ ವಿಸ್ತರಿಸಿದರೆ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಬಹುದು ಎಂದು ಯೋಜಿಸಲಾಗಿದೆ.

ಹೋದ ವರ್ಷ ಒಟ್ಟು 17 ಲಕ್ಷ ಮಂದಿ ಬಂದಿದ್ದರು. ಈ ಬಾರಿ ಇನ್ನೂ ಕೆಲವು ದಿನಗಳು ಬಾಕಿ ಉಳಿದಿರುವಾಗಲೇ 16 ಲಕ್ಷ ಜನರು ಭೇಟಿ ನೀಡಿದ್ದಾರೆ. ನಗರದಲ್ಲಿ ಪ್ರವಾಸೋದ್ಯಮ ಗರಿಗೆದರಲು ತನ್ನದೇ ಕೊಡುಗೆ ನೀಡಿದೆ.

‘ಸರ್ಕಾರ ಅನುಮತಿ ನೀಡಿದರೆ ವಸ್ತುಪ್ರದರ್ಶನದ ಅವಧಿಯನ್ನು ವಿಸ್ತರಿಸಲಾಗುವುದು. ಸಂದರ್ಶಕರ ಭೇಟಿ ಪ್ರಮಾಣ ಹೋದ ವರ್ಷಕ್ಕಿಂತ ಈ ಬಾರಿ ಜಾಸ್ತಿಯಾಗುವ ನಿರೀಕ್ಷೆ ಇದೆ. ಈ ಬಾರಿ 24 ಗಂಟೆಯೂ ಅಗ್ನಿಶಾಮಕ ದಳದ ವಾಹನವನ್ನು ನಿಯೋಜಿಸ ಲಾಗಿತ್ತು. ಹೋದ ಬಾರಿ ಮಧ್ಯರಾತ್ರಿ ಬೆಂಕಿ ಅವಘಡ ಸಂಭವಿಸಿದ್ದರಿಂದ ಈ ಬಾರಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಎಲ್ಲ ಕಡೆಯೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಸರ ಕಳವಿನಂತಹ ಪ್ರಕರಣಗಳು ಈವರೆಗೆ ವರದಿ ಯಾಗಿಲ್ಲ’ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಸಿಇಒ ರಾಜೇಶ್‌ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಹಲವು ಆಕರ್ಷಣೆ: ‘ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ‘ಶಕ್ತಿ’ ಯೋಜನೆಯೂ ನೆರವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಬರುತ್ತಿ ದ್ದಾರೆ. ಕಾಳಿಂಗರಾವ್ ಸಭಾಂಗಣದಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತಿದೆ. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಈ ಬಾರಿ ವಿಶೇಷವಾಗಿ, ಪ್ರವೇಶ ದ್ವಾರದ ಬಳಿ ಲಗೇಜ್‌ ಕೌಂಟರ್‌ ತೆರೆಯಲಾಗಿತ್ತು. ಅದನ್ನು ಬಹಳಷ್ಟು ಮಂದಿ ಬಳಸಿಕೊಳ್ಳುತ್ತಿದ್ದಾರೆ. ಸೆಲ್ಫಿ ಪಾಯಿಂಟ್ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತಿದೆ’ ಎಂದು ಹೇಳಿದರು.

ಕ್ರಿಸ್‌ಮಸ್‌ ಮೊದಲಾದ ಕಾರಣದಿಂದ ಸಾಲು ಸಾಲು ರಜೆಗಳಿದ್ದ ದಿನಗಳಲ್ಲಿ, ವರ್ಷಾಂತ್ಯ ಹಾಗೂ ಹೊಸ ವರ್ಷದ ದಿನದಂದು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ್ದರು. ದೊಡ್ಡಕೆರೆ ಮೈದಾನದ ವಾಹನ ನಿಲುಗಡೆ ತಾಣ ಭರ್ತಿಯಾಗಿತ್ತು. ಎಂ.ಜಿ. ರಸ್ತೆ ಕಡೆಯಿಂದ ಇರುವ ಪ್ರವೇಶ ದ್ವಾರದ ಪಾರ್ಕಿಂಗ್‌ ಲಾಟ್‌ನಲ್ಲೂ ನೂರಾರು ವಾಹನಗಳು ಕಂಡುಬಂದಿದ್ದವು.

ಮರಳು ಶಿಲ್ಪಗಳು ಪ್ರಮುಖ ಆಕರ್ಷಣೆ

ಅ.15ರಂದು ನಾಡಹಬ್ಬಕ್ಕೆ ಚಾಲನೆ ನೀಡಲಾಯಿತು. ಅಂದೇ ಸಂಜೆ ದಸರಾ ವಸ್ತುಪ್ರದರ್ಶವನ್ನೂ ಉದ್ಘಾಟಿಸಲಾಗಿತ್ತು. ಮೊದಲ 3 ದಿನಗಳವರೆಗೆ ಸರಾಸರಿ 20 ಸಾವಿರದಿಂದ 22 ಸಾವಿರ ಮಂದಿ ಭೇಟಿ ನೀಡಿದ್ದರು. ಅ.20ರಿಂದ 23ರವರೆಗೆ ಸರಾಸರಿ 30 ಸಾವಿರದಿಂದ 35 ಸಾವಿರ ಪ್ರವಾಸಿಗರು ಭೇಟಿ ಕೊಟ್ಟಿದ್ದರು. ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆ (ಜಂಬೂಸವಾರಿ) ಜರುಗಿದ ಅ.24ರಂದು (ಮಂಗಳವಾರ) 50 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು.

ಹೋದ ವರ್ಷ ₹8 ಕೋಟಿಗೆ ಖಾಸಗಿ ಕಂಪನಿಗೆ ಟೆಂಡರ್ ನೀಡಲಾಗಿತ್ತು. ಈ ಬಾರಿ ₹11.52 ಕೋಟಿಗೆ ನೀಡಲಾಗಿದ್ದು, ಪ್ರಾಧಿಕಾರಕ್ಕೆ ಹೆಚ್ಚುವರಿ ಆದಾಯ ಬಂದಿದೆ. ವಯಸ್ಕರಿಗೆ ₹30 ಹಾಗೂ ಮಕ್ಕಳಿಗೆ ₹20 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಉಚಿತ ಪ್ರವೇಶವಿದೆ. ವಿವಿಧ ಇಲಾಖೆಗಳ ಮಳಿಗೆಗಳನ್ನು ಹಾಕಲಾಗಿದೆ. ಮರಳು ಶಿಲ್ಪಗಳು ಪ್ರಮುಖ ಆಕರ್ಷಣೆಯಾಗಿವೆ. 145 ವಾಣಿಜ್ಯ ಮಳಿಗೆ, 60 ಫುಡ್‌ ಕೋರ್ಟ್, ವಿವಿಧ ಇಲಾಖೆಗಳ 40 ಮಳಿಗೆ, 46 ಅಮ್ಯೂಸ್‌ಮೆಂಟ್ ಆಟಗಳು ಗಮನಸೆಳೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT