ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ವಿಶ್ವವಿದ್ಯಾಲಯ | ಬಾರದ ಸಂಭಾವನೆ; ‘ಅತಿಥಿ’ಗಳಿಗೆ ಸಂಕಷ್ಟ

Published 29 ಜುಲೈ 2023, 18:29 IST
Last Updated 29 ಜುಲೈ 2023, 18:29 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯ ನಿರ್ವಹಿಸಿದ ಕಾಯಂ ಹಾಗೂ ಅತಿಥಿ, ತಾತ್ಕಾಲಿಕ, ಗುತ್ತಿಗೆ ನೌಕರರಿಗೆ ಬಾಕಿ ಇರುವ ಸಂಭಾವನೆಯನ್ನು ಕೂಡಲೇ ಪಾವತಿಸಬೇಕು’ ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ಸರ್ಕಾರದ ಸುತ್ತೋಲೆಯಂತೆ, ಪಾವತಿಯನ್ನು ಮುಂದಿನ ಆದೇಶದವರೆಗೆ ತಡೆ ಹಿಡಿಯಲಾಗಿರುವುದು ಶೋಚನೀಯ ಸಂಗತಿ’ ಎಂದು ಹೇಳಿದ್ದಾರೆ.

‘ಪರೀಕ್ಷೆ ಹಾಗೂ ಮೌಲ್ಯಮಾಪನ ಕಾರ್ಯಕ್ಕೆ ಬರುವವರಿಗೆ ಟಿ.ಎ. ಹಾಗೂ ಡಿ.ಎ. ಕಡ್ಡಾಯವಾಗಿ ಪಾವತಿಸಬೇಕಾಗಿರುತ್ತದೆ. ಯುಜಿಸಿ ವೇತನ ಪಡೆಯುತ್ತಿರುವ ಪ್ರಾಧ್ಯಾಪಕರಿಗೆ ಉತ್ತರ ಪತ್ರಿಕೆ ಮೌಲ್ಯಾಪನ ದರ ಹೊರತುಪಡಿಸಿ ಟಿ.ಎ. ಮತ್ತು ಡಿ.ಎ. ನೀಡಲಾಗುತ್ತಿದೆ. ಅತಿಥಿ, ತಾತ್ಕಾಲಿಕ, ಗುತ್ತಿಗೆ ಉಪನ್ಯಾಸಕರಿಗೆ ಉತ್ತರ ಪತ್ರಿಕೆ ಮೌಲ್ಯಾಪನ ದರ, ಟಿ.ಎ. ಮತ್ತು ಡಿ.ಎ.ಯನ್ನು ಹಿಂದಿನಿಂದಲೂ ಕೊಡಲಾಗುತ್ತಿತ್ತು. ವಿ.ವಿ.ಗಳಲ್ಲಿ ಕಾಯಂ ಸಿಬ್ಬಂದಿ ಕೊರತೆ ಇರುವುದರಿಂದ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯಕ್ಕೆ ಅತಿಥಿ ಶಿಕ್ಷಕರನ್ನು ಬಳಸದಿದ್ದರೆ ಪರೀಕ್ಷೆ ಮತ್ತು ಮೌಲ್ಯಮಾಪನವನ್ನು ನಿಗದಿತ ಸಮಯದಲ್ಲಿ ಮಾಡಲು ಸಾಧ್ಯವೇ ಇಲ್ಲವೆಂಬುದನ್ನು ಮನಗಂಡು ಭತ್ಯೆಗಳನ್ನು ನೀಡುತ್ತಾ ಬರಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

‘ಇದಕ್ಕೆ ಬೇಕಾದ ಹಣವನ್ನು ವಿದ್ಯಾರ್ಥಿಗಳ ಶುಲ್ಕಗಳಿಂದ ಭರಿಸಲಾಗುತ್ತಿದೆಯೇ ಹೊರತು, ಸರ್ಕಾರದಿಂದ ಅನುದಾನ ನೀಡಲಾಗುತ್ತಿಲ್ಲ. ಇದನ್ನು ಉನ್ನತ ಶಿಕ್ಷಣ ಸಚಿವರು ಗಮನಿಸಬೇಕು. ಬಾಕಿಯನ್ನು ಕೂಡಲೇ ಕೊಡಬೇಕು ಹಾಗೂ ಪಾವತಿ ತಡೆಹಿಡಿಯುವಂತೆ ಹೊರಡಿಸಿರುವ ಸುತ್ತೋಲೆ ವಾಪಸ್ ಪಡೆಯಬೇಕು’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಪರೀಕ್ಷಾ ಕಾರ್ಯದಿಂದ ದೂರ ಉಳಿಯುವುದಾಗಿ ಪತ್ರ: ಈ ನಡುವೆ, ಅತಿಥಿ ಉಪನ್ಯಾಸಕರು ಆಗಸ್ಟ್‌ನಲ್ಲಿ ಬರಲಿರುವ ಪರೀಕ್ಷಾ ಕಾರ್ಯದಿಂದ ದೂರ ಉಳಿಯುವುದಾಗಿ ತಮ್ಮ ಕಾಲೇಜುಗಳ ಪ್ರಾಂಶುಪಾಲರ ಮೂಲಕ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಿಗೆ ಪತ್ರ ರವಾನಿಸುತ್ತಿದ್ದಾರೆ. ಸರಗೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವರು ಬರೆದ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿರುವ ನಾವು ಗೌರವಧನ ಬಾರದೇ ಇರುವುದರಿಂದ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಪರೀಕ್ಷಾ ಕಾರ್ಯನಿರ್ವಹಿಸಿದ ಪ್ರಾಧ್ಯಾಪಕರು/ಸಿಬ್ಬಂದಿಗೆ ಸಂಭಾವನೆ ಅಥವಾ ವಿಶೇಷ ಭತ್ಯೆಗಳನ್ನು ಸರ್ಕಾರದಿಂದ ಉತ್ತರ ಬರುವವರೆಗೂ ಸ್ಥಗಿತಗೊಳಿಸಲಾಗಿದೆ ಎಂದು ವಿಶ್ವವಿದ್ಯಾಲಯದಿಂದ ಸುತ್ತೋಲೆ ಹೊರಡಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಈ ಮಧ್ಯೆ, ಆಗಸ್ಟ್‌ನಲ್ಲಿ ಬರಲಿರುವ ಸ್ನಾತಕ ಪದವಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಯಬೇಕಿರುವುದರಿಂದ ಕಳೆದ ಸಾಲಿನ ಬಾಕಿಯನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಪರೀಕ್ಷಾಂಗ ಕುಲಸಚಿವರು ಪತ್ರ ಬರೆದಿದ್ದಾರೆ. ಇವೆರಡರ ಭಿನ್ನತೆಯ ಮಾಹಿತಿಗಳು ಅತಿಥಿ ಉಪನ್ಯಾಸಕರಾದ ನಮ್ಮನ್ನು ಗೊಂದಲಕ್ಕೆ ತಳ್ಳಿವೆ. ಮೊದಲೇ ಅರೆಕಾಸಿಗೆ ದುಡಿಯುವ ನಮಗೆ ಪರೀಕ್ಷಾ ಕಾರ್ಯದ ಸಂಭಾವನೆಯನ್ನು ಸ್ಥಗಿತಗೊಳಿಸಿದಲ್ಲಿ ಅನ್ಯಾಯಕ್ಕೆ ಒಳಗಾಗುತ್ತೇವೆ. ಕೂಡಲೇ ಸ್ಪಷ್ಟವಾದ ಆದೇಶವನ್ನು ಹೊರಡಿಸಬೇಕು. ಸಂಭಾವನೆ ಕೊಡಬೇಕು. ಅಲ್ಲಿಯವರೆಗೂ ನಾವು ಪರೀಕ್ಷಾ ಕಾರ್ಯವನ್ನು ನಿರ್ವಹಿಸುವುದಿಲ್ಲ’ ಎಂದು ಅತಿಥಿ ಉಪನ್ಯಾಸಕರು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆಗೆ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT