ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಅಯೋಧ್ಯೆಗೆ ನಂಟು ಬೆಸೆದ ಶಿಲೆ, ಶಿಲ್ಪಿ

ರಾಮನೂರಿನ ಗುಡಿಯಲ್ಲಿ ಮೈಸೂರಿನ ಬಾಲರಾಮನ ‘ಪಟ್ಟ’ಕ್ಕೆ ಕ್ಷಣಗಣನೆ; ಸಂಭ್ರಮ
Published 22 ಜನವರಿ 2024, 5:46 IST
Last Updated 22 ಜನವರಿ 2024, 5:46 IST
ಅಕ್ಷರ ಗಾತ್ರ

ಮೈಸೂರು: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಸೋಮವಾರ (ಜ.22) ‘ಬಾಲರಾಮ’ನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದ್ದು, ಸಾಂಸ್ಕೃತಿಕ ನಗರಿಯಲ್ಲೂ ಸಂಭ್ರಮ ಮೇಳೈಸಿದೆ. ಆ ಮೂರ್ತಿಗೆ ಬಳಸಲಾದ ಕೃಷ್ಣಶಿಲೆ ಹಾಗೂ ಕೆತ್ತಿದ ಶಿಲ್ಪಿಗೆ ಮೈಸೂರಿನ ನಂಟಿರುವುದು ಸಡಗರದ ಮೇರೆ ಮೀರಲು ಕಾರಣವಾಗಿದೆ.

ಮೂರ್ತಿ ಕೆತ್ತನೆಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಯ್ಕೆ ಮಾಡಿರುವ ಶಿಲೆಯು ಮೈಸೂರು ತಾಲ್ಲೂಕಿನ ಹಾರೋಹಳ್ಳಿಯ ದಲಿತ ಮುಖಂಡ ರಾಮದಾಸ್‌ ಎನ್ನುವವರ ಜಮೀನಿನಲ್ಲಿ ದೊರೆತದ್ದಾಗಿದೆ. ಟ್ರಸ್ಟ್‌ನವರು ತಮ್ಮ ಜಾಲದ ಮೂಲಕ ಇದನ್ನು ತರಿಸಿಕೊಂಡಿದ್ದರು. ತಮ್ಮದೇ ರೀತಿಯಲ್ಲಿ ಪರೀಕ್ಷೆಗೆ ಒಳಪಡಿಸಿದ್ದರು. ಬಳಿಕ ಆ ಶಿಲೆಯನ್ನು ಆಯ್ಕೆ ಮಾಡಿಕೊಂಡಿದ್ದರು.

ಆ ಮಂದಿರದಲ್ಲಿ ಪ್ರತಿಷ್ಠಾಪಿಸಲು ಅಗತ್ಯವಾಗಿದ್ದ ಮೂರ್ತಿ ಕೆತ್ತನೆಯ ಕಾರ್ಯವನ್ನು ಮೂವರು ಶಿಲ್ಪಿಗಳಿಗೆ ವಹಿಸಲಾಗಿತ್ತು. ಅದರಲ್ಲಿ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿದ ಪ್ರತಿಮೆಯು ಪ್ರಾಣ ಪ್ರತಿಷ್ಠಾಪನೆಗೆ ಆಯ್ಕೆಯಾಗಿರುವುದು ಮೈಸೂರಿನವರ ಸಂಭ್ರಮ ಹೆಚ್ಚಾಗಲು ಕಾರಣವಾಗಿದೆ. ಇಡೀ ಜಗತ್ತು ಗಮನಿಸುತ್ತಿರುವ ಪ್ರಮುಖ ಬೆಳವಣಿಗೆಯೊಂದಿಗೆ ಮೈಸೂರಿನ ನಂಟು ಮಹತ್ವದ್ದಾಗಿ ಬೆಸೆದುಕೊಂಡಿರುವುದು ವಿಶೇಷ.

ಇಲ್ಲಿನ ಹಳ್ಳಿಯೊಂದರ ಭೂಮಿಯಲ್ಲಿ ಹುದುಗಿದ್ದ ಶಿಲೆಯು ‘ಬಾಲರಾಮ’ನ ಮೂರ್ತಿಯಾಗಿ ಪಟ್ಟಕ್ಕೇರುತ್ತಿದೆ. ವಿಶ್ವವ್ಯಾಪಿ ಭಕ್ತರ ಪ್ರಶಂಸೆಗೂ ಪಾತ್ರವಾಗುತ್ತಿದೆ. ಈ ಮೂಲಕ ಇಡೀ ದೇಶ ಹಾಗೂ ಹಲವು ರಾಷ್ಟ್ರಗಳು ಮೈಸೂರಿನತ್ತ ತಿರುಗಿ ನೋಡುತ್ತಿವೆ. ಕೆತ್ತಿದ ಯುವ ಶಿಲ್ಪಿಗೂ ಜಾಗತಿಕವಾಗಿ ಹೆಸರು ಬಂದಿದೆ ಹಾಗೂ ಇಲ್ಲಿನ ಕೃಷ್ಣಶಿಲೆಯತ್ತ ಎಲ್ಲರ ನೋಟ ಹರಿದಿದೆ. ಈ ಬೆಳವಣಿಗೆಯು ಕರ್ನಾಟಕದ ಹೆಮ್ಮೆಯನ್ನೂ ಹೆಚ್ಚಿಸಿದೆ.

ದಕ್ಷಿಣದ ಶಿಲೆ ಮೂರ್ತಿಯಾಗಿ ಉತ್ತರಕ್ಕೆ:

ರಾಮದಾಸ್ ಅವರು ತಮ್ಮ ಜಮೀನಿನಲ್ಲಿ ಕೃಷಿಗೆ ಅಡ್ಡಿಯಾಯಿತೆಂದು ಕಲ್ಲುಗಳನ್ನು ತೆಗೆಸಿ ಸಮತಟ್ಟು ಮಾಡಿಸುತ್ತಿದ್ದರು. ಅದೇ ಹೊಲದಲ್ಲಿ ಸಿಕ್ಕ ಕಲ್ಲು ಮೂರ್ತಿಯಾಗಿ ಸಿದ್ಧಗೊಂಡು ಪೂಜೆಗೆ ಪಾತ್ರವಾಗುತ್ತದೆ ಎಂದು ಅವರು ತಿಳಿದಿರಲಿಲ್ಲ. ಅಂತೆಯೇ, ನಾವು ತೆಗೆಯುತ್ತಿರುವ ಶಿಲೆಯು ಅಯೋಧ್ಯೆಯ ಶ್ರೀರಾಮಂದಿರದಲ್ಲಿ ಬಾಲರಾಮನಾಗಿ ಪ್ರಾಣ ಪ್ರತಿಷ್ಠಾಪನೆಗೆ ಒಳಗಾಗುತ್ತದೆ ಎನ್ನುವುದು ಗುತ್ತಿಗೆದಾರ ಶ್ರೀನಿವಾಸ ನಟರಾಜು ಅವರೂ ಕನಸು ಕಂಡಿರಲಿಲ್ಲ. ಆದರೆ, ಮಹತ್ವದ ಬೆಳವಣಿಗೆಯಲ್ಲಿ ಅದೆಲ್ಲವೂ ನಡೆದಿರುವುದು ಈ ಇಬ್ಬರ ಪುಳಕಕ್ಕೆ ಕಾರಣವಾಗಿದೆ.

ಶಿಲೆ ಸಿಕ್ಕ ಜಯಪುರ ಸಮೀಪದ ಹಾರೋಹಳ್ಳಿಯ ಜಾಗವೀಗ ತೀರ್ಥಕ್ಷೇತ್ರದಂತಾಗಿ ಹೋಗಿದ್ದು, ಜನರ ಗಮನಸೆಳೆಯುತ್ತಿದೆ.

ಅಯೋಧ್ಯೆಯ ಶ್ರೀರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರತಿನಿಧಿಗಳು ಕೂಡ ಇಲ್ಲಿಗೆ ಭೇಟಿ ನೀಡಿದ್ದರು. ಬಾಲರಾಮನ ಮೂರ್ತಿಗೆ ಬಳಸಲಾದ ಶಿಲೆಯು ಇಲ್ಲಿನದ್ದು ಎಂಬುದು ವ್ಯಾಪಕ ಪ್ರಚಾರ ಪಡೆದುಕೊಳ್ಳುತ್ತಿದ್ದಂತೆಯೇ, ಸಾಕಷ್ಟು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಅದನ್ನು ಮತ್ತಷ್ಟು ವಿಶೇಷವಾಗಿಸಲು ಆ ಸ್ಥಳದಲ್ಲಿ ಶ್ರೀರಾಮಮಂದಿರವನ್ನೇ ನಿರ್ಮಿಸಲು ಯೋಜಿಸಲಾಗಿದೆ. ಅದಕ್ಕೆ ಶಾಸಕ ಜಿ.ಟಿ. ದೇವೇಗೌಡ ಅವರು ನೇತೃತ್ವ ವಹಿಸಿದ್ದಾರೆ. ಮಾಲೀಕರು ಧನ್ಯತಾ ಭಾವದೊಂದಿಗೆ ಅವರು ಜಾಗ ನೀಡಲು ಸಮ್ಮತಿಯನ್ನೂ ಸೂಚಿಸಿದ್ದಾರೆ.

ಬಾಲರಾಮನ ಮೂರ್ತಿ ಕೆತ್ತನೆಗೆ ಬಳಸಲಾದ ಹಾರೋಹಳ್ಳಿಯಲ್ಲಿ ದೊರೆತ ಕೃಷ್ಣಶಿಲೆ
ಬಾಲರಾಮನ ಮೂರ್ತಿ ಕೆತ್ತನೆಗೆ ಬಳಸಲಾದ ಹಾರೋಹಳ್ಳಿಯಲ್ಲಿ ದೊರೆತ ಕೃಷ್ಣಶಿಲೆ

ವಿಶೇಷವೆಂದರೆ, ಇಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ಮೂರ್ತಿಯನ್ನೂ ಅರುಣ್‌ ಅವರಿಂದಲೇ ಕೆತ್ತಿಸಲು ಯೋಜಿಸಲಾಗಿದೆ. ಹಾರೋಹಳ್ಳಿ ಹಾಗೂ ಗುಜ್ಜೇಗೌಡನಪುರ ಗ್ರಾಮಸ್ಥರು ಇದಕ್ಕೆ ಕೈಜೋಡಿಸಿದ್ದಾರೆ. ಜನರಿಂದ ದೇಣಿಗೆ ಸಂಗ್ರಹಿಸಿ ಈ ಕಾರ್ಯ ನೆರವೇರಿಸಲು ಉದ್ದೇಶಿಸಲಾಗಿದೆ. ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ದಿನದಂದೇ ಇಲ್ಲಿ  ಭೂಮಿಪೂಜೆ ನೆರವೇರಿಸುತ್ತಿರುವುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT