ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಕಾಯಕ ಶರಣರ ಜಯಂತಿ: ಫೋಟೊ ‘ನಮನ’ಕ್ಕಷ್ಟೆ ಸೀಮಿತವಾದ ಕಾರ್ಯಕ್ರಮ

Published 10 ಫೆಬ್ರುವರಿ 2024, 13:29 IST
Last Updated 10 ಫೆಬ್ರುವರಿ 2024, 13:29 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇಲ್ಲಿನ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಕಾಯಕ ಶರಣರ ಜಯಂತಿ ಆಚರಣೆ ಕಾರ್ಯಕ್ರಮ ಫೋಟೊಗಳಿಗೆ ಪುಷ್ಪನಮನಕ್ಕಷ್ಟೆ ಸೀಮಿತವಾಯಿತು.

‘ಸಮುದಾಯದವರನ್ನು ಒಳಗೊಳಿಸಿಕೊಳ್ಳಲಿಲ್ಲ’ ಎಂದು ಆರೋಪಿಸಿ ಮುಖಂಡರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಲಾಯಿತು.

ಕಾಯಕ ಶರಣರಾದ ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಮಾದಾರ ಧೂಳಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಅವರನ್ನು ಸ್ಮರಿಸುವ ಉದ್ದೇಶದ ಕಾರ್ಯಕ್ರಮದಲ್ಲಿ ಕೆಲವೇ ಮಂದಿಯಷ್ಟೆ ಭಾಗವಹಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಮುದಾಯದ ಮುಖಂಡರು, ‘ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಹೀಗಾಗಿದೆ. ಜನರಿಗೆ ಸರಿಯಾಗಿ ಮಾಹಿತಿ ನೀಡಿಲ್ಲದ ಕಾರಣ ಹೆಚ್ಚಿನ ಮಂದಿ ಸೇರಿಲ್ಲ. ಕೆಲವರನ್ನಷ್ಟೆ ವಿಶ್ವಾಸಕ್ಕೆ ತೆಗೆದುಕೊಂಡಿದ್ದು ಸರಿಯಲ್ಲ ಎಂದು ದೂರಿದರು. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಾರ್ಯಕ್ರಮಕ್ಕೆ ಬಂದಿದ್ದ ವಿಧಾನಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ ಅವರೂ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿಲ್ಲದ ಕಾರಣದಿಂದ ಅಸಮಾಧಾನ ವ್ಯಕ್ತಪಡಿಸಿ ಅಲ್ಲಿಂದ ತೆರಳಿದ್ದರು.

ಜನ, ಜನಪ್ರತಿನಿಧಿಗಳು ಇರಲಿಲ್ಲ:

ಅತಿಥಿಯಾಗಿ ಪಾಲ್ಗೊಂಡಿದ್ದ ಮಾಜಿ ಮೇಯರ್‌ ಪುರುಷೋತ್ತಮ ಸಲಹೆಯ ಮೇರೆಗೆ, ಫೋಟೊಗಳಿಗೆ ಪುಷ್ಪನಮನ ಸಲ್ಲಿಸುವ ಕೆಲಸವಷ್ಟೆ ನಡೆಯಿತು. ಅಹಿಂದ ಮುಖಂಡರ ಜವರಪ್ಪ, ಹೋರಾಟಗಾರರಾದ ಬಾಲಕೃಷ್ಣ, ಮೋಹನ್‌ಕುಮಾರ್‌ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್‌, ಉಪನ್ಯಾಸಕರಾಗಿ ಆಗಮಿಸಿದ್ದ ಕೆಎಸ್‌ಒಯು ಸಹಾಯಕ ಪ್ರಾಧ್ಯಾಪಕ ಕೃಷ್ಣಮೂರ್ತಿ ಚಮರಂ ಪಾಲ್ಗೊಂಡಿದ್ದರು. ಜನಪ್ರತಿನಿಧಿಗಳು ಬಂದಿರಲಿಲ್ಲ.

ಡಿಸಿ ವಿರುದ್ಧ ಕ್ರಮಕ್ಕೆ ಆಗ್ರಹ:

‘ದಲಿತ ಸಮುದಾಯದ ಶಿವ ಶರಣರ ಜಯಂತಿ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಮಾಡದೇ ರದ್ದುಪಡಿಸಿರುವ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್‌ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಒತ್ತಾಯಿಸಿದರು.

‘ಕಾರ್ಯಕ್ರಮದ ಕುರಿತು ಜಿಲ್ಲಾಡಳಿತದಿಂದ ದಲಿತ ಸಮುದಾಯದ ಶಾಸಕರು, ಜನ‍ಪ್ರತಿನಿಧಿಗಳು, ಸಮುದಾಯದ ಮುಖಂಡರಿಗೆ ತಿಳಿಸಿರಲಿಲ್ಲ. ಪೂರ್ವಭಾವಿ ಸಭೆ ನಡೆಸಿರಲಿಲ್ಲ. ಶುಕ್ರವಾರ ಸಂಜೆಯಷ್ಟೆ ಆಹ್ವಾನಪತ್ರಿಕೆ ಮುದ್ರಿಸಿ ಹಂಚಲಾಗಿದೆ. ಆದ್ದರಿಂದ ಜನರು ಬಂದಿರಲಿಲ್ಲ. ಇಂತಹ ದಲಿತ ವಿರೋಧಿ ಅಧಿಕಾರಿಗಳ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಮುಖಂಡರಾದ ರಾಚಪ್ಪ ಸಿ. ಜೆಟ್ಟಿಹುಂಡಿ, ಕೆ.ಪ್ರಸನ್ನ ಚಕ್ರವರ್ತಿ, ವೆಂಕಟರಾಮು, ರಾಮಸ್ವಾಮಿ ಸಿ., ಈಶ್ವರ ಚಕ್ಕಡಿ, ಮಹೇಶ್, ಯಶವಂತ್ ಮೊದಲಾದವರು ಆಗ್ರಹಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಎಂ.ಡಿ. ಸುದರ್ಶನ್‌, ‘ಶಿಷ್ಟಾಚಾರದಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪೂರ್ವಭಾವಿ ಸಭೆಯನ್ನೂ ನಡೆಸಲಾಗಿತ್ತು. ಇದರಲ್ಲಿ ಯಾವುದೇ ಲೋಪವಾಗಿಲ್ಲ. ಹೆಚ್ಚು ಜನರನ್ನು ಸೇರಿಸುತ್ತೇವೆ, ದೊಡ್ಡ ಪ್ರಮಾಣದಲ್ಲಿ ಆಯೋಜಿಸೋಣ ಎಂದು ಸಮುದಾಯದ ಕೆಲವು ಮುಖಂಡರು ಕೋರಿದ್ದರಿಂದಾಗಿ ಮುಂದೂಡಲಾಯಿತು. ಜಿಲ್ಲಾಧಿಕಾರಿ ಜೊತೆ ಸಭೆ ನಡೆಸಿ, ದಿನಾಂಕ ನಿಗದಿಪಡಿಸಲಾಗುವುದು. ಇದೆಲ್ಲವನ್ನೂ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT