ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಮುಕ್ತ ಚಾಮುಂಡಿಬೆಟ್ಟ: ದಸರಾ ಗಡುವು

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷ ಸುಭಾಷ್ ಅಡಿ ತಾಕೀತು
Published 14 ಜುಲೈ 2023, 12:34 IST
Last Updated 14 ಜುಲೈ 2023, 12:34 IST
ಅಕ್ಷರ ಗಾತ್ರ

ಮೈಸೂರು: ‘ಪರಿಸರ ಸೂಕ್ಷ್ಮ ಪ್ರದೇಶವಾದ ಚಾಮುಂಡಿ ಬೆಟ್ಟವನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸಬೇಕು. ಇದು ದಸರೆಗೂ ಮುನ್ನ ನಡೆಯಬೇಕು’ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷ ಹಾಗೂ ನಿವೃತ್ತ ನ್ಯಾಯಾಧೀಶ ಸುಭಾಷ್ ಅಡಿ ತಾಕೀತು ಮಾಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಚಾಮುಂಡಿ ಬೆಟ್ಟದ ಮಹತ್ವವನ್ನು ಒತ್ತಿ ಹೇಳಿದ ಅವರು, ‘ಅಲ್ಲಿನ ಜೀವವೈವಿಧ್ಯ ಕಾಪಾಡಿಕೊಳ್ಳಲು ಜನಪ್ರತಿನಿಧಿಗಳಾಗಲಿ, ಸಂಘ–ಸಂಸ್ಥೆಗಳಾಗಲಿ ವಿರೋಧಿಸುವುದಿಲ್ಲ’ ಎಂದು ಹೇಳಿದರು.

‘ಅಲ್ಲಿ ಈಗಲೂ ಪ್ಲಾಸ್ಟಿಕ್ ಬಳಕೆ ಕಂಡುಬರುತ್ತಿದೆ. ಅಲ್ಲಿನ ಅಂಗಡಿಗಳವರು ನನಗೂ ಪ್ಲಾಸ್ಟಿಕ್ ಬ್ಯಾಗ್ ಕೊಟ್ಟಿದ್ದರು. ಇದಕ್ಕೆ ಕಡಿವಾಣ ಹಾಕಬೇಕು. ಅಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ‌ನಿಷೇಧವಾಗಬೇಕು. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬ್ಯಾಗ್ ಅಥವಾ ಬಾಟಲಿ ಮೊದಲಾದವುಗಳನ್ನು (ಏಕ ಬಳಕೆ ಅಥವಾ ಯಾವುದೇ ಇರಲಿ) ಮೇಲಕ್ಕೆ ಒಯ್ಯಲು ಅವಕಾಶ ಕೊಡಬಾರದು. ಪ್ರವೇಶ ದ್ವಾರದಲ್ಲೇ ತಡೆಯಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬೆಟ್ಟದ ಮೇಲೆ ಘಟಕ ಬೇಡ: ‘ಘನ ತ್ಯಾಜ್ಯ ನಿರ್ವಹಣಾ ಘಟಕವನ್ನು ಬೆಟ್ಟದ ಮೇಲೆ ಮಾಡಿರುವುದು ಸರಿಯಲ್ಲ. ಬೆಟ್ಟದಲ್ಲಿದ್ದರೆ ಪರಿಸರದ ಮೇಲೆ ಪರಿಣಾಮ ಉಂಟಾಗುತ್ತದೆ. ದುರ್ವಾಸನೆಯೂ ಬರುತ್ತದೆ. ಹೀಗಾಗಿ, ಅದನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಪಂಚಾಯಿತಿ ವ್ಯಾಪ್ತಿಯ ಬೇರೆ ಕಡೆ ನಿರ್ವಹಿಸಬಹುದು’ ಎಂದು ಪಿಡಿಒ ರೂಪೇಶ್ ಅವರಿಗೆ ಸೂಚಿಸಿದರು.

‘ಬೆಟ್ಟದಲ್ಲಿರುವ ಅಂಗಡಿಗಳಿಗೆ ಪರವಾನಗಿ ಇಲ್ಲ. ದಾರಿಯಲ್ಲಿ ನಿಂತು ವ್ಯಾಪಾರ ಮಾಡುತ್ತಿದ್ದಾರೆ’ ಎಂದು ಅಧಿಕಾರಿಗಳು ನೀಡಿದ ಮಾಹಿತಿಗೆ ಅಚ್ಚರಿ ವ್ಯಕ್ತಪಡಿಸಿದ ಅವರು, ‘ಪರವಾನಗಿ ಇಲ್ಲದಿದ್ದರೂ ಅವಕಾಶ ಕೊಟ್ಟಿರುವುದೇಕೆ? ಅವರಿಗೆ ಹೊಣೆಗಾರಿಕೆ ಎಲ್ಲಿರುತ್ತದೆ?’ ಎಂದು ಕೇಳಿದರು.

‘ಅಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಅದು ಮೂಲೆಯಲ್ಲಿದೆ; ವ್ಯಾಪಾರಕ್ಕೆ ಸೂಕ್ತವಾಗಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಅಲ್ಲಿಗೇ ಹೋಗುವಂತೆ ಮನವರಿಕೆ ಮಾಡಿಕೊಡಲಾಗುವುದು. ತ್ವರಿತವಾಗಿ ಪೂರ್ಣಗೊಳಿಸಿ ದಸರೆಗೂ ಮುಂಚೆಯೇ ಸ್ಥಳಾಂತರಿಸಲಾಗುವುದು. ರಸ್ತೆಯಲ್ಲಿ ವ್ಯಾಪಾರಕ್ಕೆ ಬಿಡುವುದಿಲ್ಲ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

ಕ್ರಮ ಜರುಗಿಸಿ: ‘ಈಗಾಗಲೇ ಇರುವವರಿಗೆ ಅಂಗಡಿಗಳನ್ನು ಹಂಚಿಕೆ ಮಾಡಬೇಕೇ ಹೊರತು, ಹೊಸದಾಗಿ ಬರುವವರಿಗೆ ಅವಕಾಶ ಕೊಡಬಾರದು. ಅಂಗಡಿದಾರರಿಗೆ ಷರತ್ತು ವಿಧಿಸಬೇಕು. ಉಲ್ಲಂಘಿಸಿದರೆ ಪರವಾನಗಿ ರದ್ದುಪಡಿಸಬೇಕು. ಪ್ಲಾಸ್ಟಿಕ್ ಬಳಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಸುಭಾಷ್‌ ಆಡಿ ಸೂಚಿಸಿದರು.

‘ಬೆಟ್ಟದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿ, ಜನರು ಪ್ಲಾಸ್ಟಿಕ್ ಬಾಟಲಿ ತಾರದಂತೆ ತಡೆಯಬೇಕು. ಅಲ್ಲಿ ನಿರ್ಮಾಣ ಚಟುವಟಿಕೆ ನಿರ್ಬಂಧಿಸಬೇಕು. ತೀರಾ ಅಗತ್ಯವಿದ್ದರೆ ಮಾತ್ರ ಅವಕಾಶವಿರಬೇಕು. ತ್ಯಾಜ್ಯ ರಹಿತವಾಗಿ ಇರುವಂತೆಯೂ ನೋಡಿಕೊಳ್ಳಬೇಕು. ಇದಕ್ಕೆ ಸಾರ್ವಜನಿಕರೂ ಸಹಕಾರ ಕೊಡಬೇಕಾಗುತ್ತದೆ’ ಎಂದು ಹೇಳಿದರು.

‘ಹೋಟೆಲ್‌ಗಳಲ್ಲೂ ಪ್ಲಾಸ್ಟಿಕ್ ಬಾಟಲಿ ಇರದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೂ ಹೇಳಲಾಗುವುದು. ಎಲ್ಲ ಸರ್ಕಾರಿ ಕಚೇರಿ, ಶಿಕ್ಷಣ ಸಂಸ್ಥೆಗಳಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು’ ಎಂದು ತಿಳಿಸಿದರು.

‘ಬೆಟ್ಟದಲ್ಲಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಯುವ ನಿಟ್ಟಿನಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ. ಎತ್ತರದ ಚೈನ್‌ಲಿಂಕ್ ಮೆಸ್ (ಬೇಲಿ) ಹಾಕಲಾಗುವುದು. ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವುದಕ್ಕೂ ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ, ಎಸ್ಪಿ ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಬಿ.ಜಿ. ಹಾಗೂ ಡಿಸಿಎಫ್‌ ಬಸವರಾಜ್‌ ಇದ್ದರು.

ಏಕಬಳಕೆ ಪ್ಲಾಸ್ಟಿಕ್‌ ನಿಷೇಧ ಜಾರಿ ವಿಷಯದಲ್ಲಿ ಅಧಿಕಾರಿಗಳು ‘ಹೇಗೋ ನಡೆಯುತ್ತದೆ’ ಎಂಬ ಮನೋಭಾವ ಬಿಡಬೇಕು. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು
-ಸುಭಾಷ್ ಅಡಿ ಅಧ್ಯಕ್ಷ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಾಜ್ಯ ಮಟ್ಟದ ಸಮಿತಿ

‘ಕಟ್ಟಡ ನಿರ್ಮಾಣ ತ್ಯಾಜ್ಯ ನಿರ್ವಹಣೆಗೆ ಕ್ರಮ’

‘ಕಟ್ಟಡ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಸಮಗ್ರ ಯೋಜನಾ ವರದಿಯನ್ನು ಸರ್ಕಾರಕ್ಕೆ ‌ಕಳುಹಿಸಲಾಗಿದೆ. ಸದ್ಯಕ್ಕೆ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲೇ ಹಾಕಲಾಗುತ್ತಿದೆ’ ಎಂದು ನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು. ‘ನರಸಿಂಹರಾಜ ಕ್ಷೇತ್ರದ ಕೆಲವೆಡೆ ಹಾಗೂ ಕೊಳೆಗೇರಿಗಳಲ್ಲಿನ ಜನರು ಕಸ ಬೇರ್ಪಡಿಸಿ ಕೊಡಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರಿಗೂ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಹೇಳಿದರು.  ‘ಮೂಲದಲ್ಲೇ ಕಸ ಬೇರ್ಪಡಿಸುವ ಕಾರ್ಯ ಶೇ 100ರಷ್ಟು ನಡೆಯಬೇಕು’ ಎಂದು ಸುಭಾಷ್ ಸೂಚಿಸಿದರು.

‘ಸೌಂದರ್ಯ ಹಾಳಾಗದಂತೆ ನೋಡಿಕೊಳ್ಳಿ’

‘ನಗರದಲ್ಲಿ ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸಬೇಕು. ಅಲ್ಲಿ ಯಾವುದೇ ಅಂಗಡಿಗಳು ಇರಬಾರದು. ಎಲ್ಲ ರೀತಿಯ ಜಾಹೀರಾತು ಕೂಡ ಡಿಜಿಟಲ್ (ನಿಗದಿತ ಸ್ಥಳಗಳಲ್ಲಿ) ಆಗಬೇಕು‌. ಪೋಸ್ಟರ್ ಅಂಟಿಸಲು ಬಂಟಿಂಗ್ ಹಾಗೂ ಕಟೌಟ್‌ಗಳನ್ನು ಹಾಕಲು ಅವಕಾಶ ಇರಬಾರದು. ನಗರದ ಸಹಜ ಸೌಂದರ್ಯ ಹಾಳಾಗದಂತೆ ನೋಡಿಕೊಳ್ಳಬೇಕು’ ಎಂದು ಸುಭಾಷ್ ಅಡಿ ತಾಕೀತು ಮಾಡಿದರು.

ಅಧ್ಯಕ್ಷರ ಸೂಚನೆಗಳು

ಮೈಸೂರು ಈ ಹಿಂದೆ ನಂಬರ್ 1 ಸ್ವಚ್ಛ ನಗರವಾಗಿತ್ತು. ಶುಚಿತ್ವ ಇದ್ದರೆ ಎಲ್ಲ ಪ್ರಗತಿಯೂ ಸಾಧ್ಯ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಮುಂಬರುವ ದಸರಾ ಮಹೋತ್ಸವವನ್ನು ಪ್ಲಾಸ್ಟಿಕ್ ಮುಕ್ತವಾಗಿ ನಡೆಸಬೇಕು. ಪ್ರತಿ ಸರ್ಕಾರಿ ಕಚೇರಿಯಲ್ಲೂ ತ್ಯಾಜ್ಯ ನಿರ್ವಹಣೆ ಕಾರ್ಯ ಕಡ್ಡಾಯವಾಗಿ ನಡೆಯಬೇಕು. ಕಸವನ್ನು ಮೂಲದಲ್ಲೇ ಬೇರ್ಪಡಿಸಬೇಕು. ಸ್ವಚ್ಛ ಹಾಗೂ ಹಸಿರು ವಿವಾಹ ಕಾರ್ಯಕ್ರಮ ಉತ್ತೇಜಿಸಬೇಕು. ಅಂಥವರಿಗೆ ಪ್ರೋತ್ಸಾಹಕರ ಬಹುಮಾನ ಕೊಡಬೇಕು. ಆಹಾರ ವ್ಯರ್ಥ ಮಾಡದಂತೆ ಜಾಗೃತಿ ಮೂಡಿಸಬೇಕು. ಬಟ್ಟೆ ಬ್ಯಾಗ್ ಬಳಕೆ ಉತ್ತೇಜಿಸಬೇಕು. ಇ–ತ್ಯಾಜ್ಯ ಸಂಗ್ರಹಿಸಲು 2-3 ವಾರ್ಡ್‌ಗೊಂದು ಘಟಕ ಮಾಡಬೇಕು.‌ ಅಧಿಕೃತ ಮರುಬಳಕೆದಾರರ ಮೂಲಕ ಮಾತ್ರವೇ ಸಂಸ್ಕರಣೆಗೆ ಕ್ರಮ ಕೈಗೊಳ್ಳಬೇಕು. ಮಲಿನ ‌ನೀರು ಸಂಸ್ಕರಣೆ ಘಟಕ ನಿರ್ಮಾಣವಾದ ನಂತರ ಮಾತ್ರವೇ ಬಡಾವಣೆ ಅಭಿವೃದ್ಧಿಪಡಿಸಲು ಅನುಮತಿ ಕೊಡಬೇಕು. ವೈದ್ಯಕೀಯ ತ್ಯಾಜ್ಯ ನಿರ್ವಹಣೆಯೂ ಪರಿಣಾಮಕಾರಿಯಾಗಿ ನಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT