ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ | ಕಣಕ್ಕೆ ರಂಗು ತುಂಬಿದ ನಾಯಕರು

ಕಾಂಗ್ರೆಸ್‌ ಪರ ರಾಷ್ಟ್ರೀಯ ಲೀಡರ್‌ಗಳು ಬರಲಿಲ್ಲ! ಕೆಲವೆಡೆಯಷ್ಟೇ ಕಾಣಿಸಿಕೊಂಡ ಪ್ರತಾಪ ಸಿಂಹ!
ಎಂ. ಮಹೇಶ
Published 25 ಏಪ್ರಿಲ್ 2024, 6:41 IST
Last Updated 25 ಏಪ್ರಿಲ್ 2024, 6:41 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಕಣದಲ್ಲಿರುವ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾದ ಕಾಂಗ್ರೆಸ್‌ನ ಎಂ.ಲಕ್ಷ್ಮಣ ಮತ್ತು ಬಿಜೆಪಿಯ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ಪರವಾಗಿ ಘಟಾನುಘಟಿ ನಾಯಕರು ಬಹಿರಂಗ ಪ್ರಚಾರ ನಡೆಸಿ ಮತ ಯಾಚಿಸಿದರು. ಇದರಿಂದ ಕಣ ರಂಗೇರಿತು.

ಕಾಂಗ್ರೆಸ್ ಪರವಾಗಿ ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಮೊದಲಾದವರ‍್ಯಾರೂ ಬಹಿರಂಗ ಪ್ರಚಾರಕ್ಕೆ ಬರಲಿಲ್ಲ. ರಾಹುಲ್‌ ಗಾಂಧಿ ಕೇರಳದ ವಯನಾಡಿಗೆ ತೆರಳುವ ಮಾರ್ಗಮಧ್ಯೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಈ ಭಾಗದ ಕ್ಷೇತ್ರಗಳ ಚುನಾವಣೆಯ ಬಗ್ಗೆ ಮಾಹಿತಿ ಪಡೆದರಷ್ಟೆ. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ನಗರಕ್ಕೆ ಬಂದಿದ್ದರಾದರೂ ಬಹಿರಂಗ ಪ್ರಚಾರ ಮಾಡಲಿಲ್ಲ. ಪತ್ರಿಕಾಗೋಷ್ಠಿ ಹಾಗೂ ಪಕ್ಷದ ನಾಯಕರೊಂದಿಗೆ ‘ಕಿರು ಸಭೆ’ಗೆ ಅವರ ಪ್ರವಾಸ ಸೀಮಿತವಾಯಿತು.

ಈ ಕ್ಷೇತ್ರದಲ್ಲಿ ಸತತ ಎರಡು ಬಾರಿಗೆ ಗೆದ್ದಿದ್ದ, ಹಾಲಿ ಸಂಸದ ಬಿಜೆಪಿಯ ಪ್ರತಾಪ ಸಿಂಹ ಅವರಿಗೆ ಈ ಬಾರಿ ಟಿಕೆಟ್ ಸಿಗಲಿಲ್ಲ. ಇದರಿಂದಾಗಿ ಅವರು ಕಣದಲ್ಲಿಲ್ಲ. ಅಲ್ಲದೇ, ಇಲ್ಲಿ ಅವರು ಕೆಲವೇ ಬಹಿರಂಗ ಪ್ರಚಾರ ಕಾರ್ಯಕ್ರಮಗಳಲ್ಲಿ ಮಾತ್ರವೇ ಪಾಲ್ಗೊಂಡರು. ‘ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದ ಸಮಾವೇಶದಲ್ಲಿ ಅವರು ಭಾಗವಹಿಸಿದ್ದರು. ಪಕ್ಷದ ಸ್ಟಾರ್‌ ಪ್ರಚಾರಕರ’ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿರುವ ಅವರು ರಾಜ್ಯದ ಇತರ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದರು.

ಯಾರ‍್ಯಾರು ಪ್ರಚಾರ ಮಾಡಿದರು?: ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಮಾಡಿದರು. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಆ ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರ್‌ವಾಲ್‌, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ. ಕುಮಾರಸ್ವಾಮಿ, ಡಿ.ವಿ. ಸದಾನಂದ ಗೌಡ, ಮಾಜಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಮಂಡ್ಯದ ಸಂಸದೆ ಸುಮಲತಾ, ಶಾಸಕರಾದ ಟಿ.ಎಸ್. ಶ್ರೀವತ್ಸ, ಜಿ.ಟಿ. ದೇವೇಗೌಡ, ಜಿ.ಡಿ. ಹರೀಶ್‌ಗೌಡ, ವಿಧಾನಪರಿಷತ್‌ ಸದಸ್ಯ ಎಚ್. ವಿಶ್ವನಾಥ್, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ, ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷ ಡಾ.ಅನಿಲ್ ಥಾಮಸ್, ಮುಖಂಡರಾದ ಸಿ.ಟಿ.ರವಿ, ಎನ್.ಮಹೇಶ್, ನಾರಾಯಣಸ್ವಾಮಿ ನಿಗಮ–ಮಂಡಳಿಗಳ ಮಾಜಿ ಅಧ್ಯಕ್ಷರು, ಮಾಜಿ ಶಾಸಕರು, ಸಂಸದರು, ವಿಧಾನಪರಿಷತ್ ಮಾಜಿ ಸದಸ್ಯರು, ಪಕ್ಷದ ಮುಂಚೂಣಿ ಘಟಕಗಳ ಪದಾಧಿಕಾರಿಗಳು ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಮಾಳವಿಕಾ ಅವಿನಾಶ್ ಬಿಜೆಪಿ ಪರ ಪ್ರಚಾರ ಮಾಡಿದರು.

ಕಾಂಗ್ರೆಸ್‌ ಪರವಾಗಿ ರಾಜ್ಯ ನಾಯಕರಷ್ಟೆ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ದೊಡ್ಡ ದೊಡ್ಡ ಸಮಾವೇಶಗಳಲ್ಲಿ ಮತ ಯಾಚಿಸಿದರು. ಅವರೊಂದಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ, ಎನ್.ಚಲುವರಾಯಸ್ವಾಮಿ, ಕೆ.ವೆಂಕಟೇಶ್, ಸತೀಶ ಜಾರಕಿಹೊಳಿ, ಕೆ.ಎಚ್‌. ಮುನಿಯಪ್ಪ, ಶಾಸಕರಾದ ತನ್ವೀರ್‌ ಸೇಠ್, ಕೆ.ಹರೀಶ್‌ಗೌಡ, ಎ.ಎಸ್. ಪೊನ್ನಣ್ಣ, ಡಾ.ಮಂಥರ್‌ಗೌಡ, ವಿಧಾನಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಸದಸ್ಯೆ ತೇಜಸ್ವಿನಿ ಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಾಧಿಕಾರದ ಉಪಾಧ್ಯಕ್ಷರಾದ ಪುಷ್ಪಾ ಅಮರನಾಥ್, ಸೂರಜ್‌ ಹೆಗ್ಡೆ, ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ, ನಿಗಮ– ಮಂಡಳಿಗಳ ಅಧ್ಯಕ್ಷರಾದ ಕೆ.ಮರೀಗೌಡ, ಅಯೂಬ್‌ ಖಾನ್‌, ಮರಿತಿಬ್ಬೇಗೌಡ ಸೇರಿದಂತೆ ವಿಧಾನಪರಿಷತ್‌ ಮಾಜಿ ಸದಸ್ಯರು, ಮಾಜಿ ಶಾಸಕರು ಹಾಗೂ ಪಕ್ಷದ ಮುಂಚೂಣಿ ಘಟಕಗಳ ಪದಾಧಿಕಾರಿಗಳು ಮತ ಯಾಚಿಸಿದರು.

ಈ ಬಾರಿ ಚುನಾವಣೆಯಲ್ಲಿ ‘ಸಿನಿಮಾ ತಾರೆಯರ ದಂಡು’ ಪ್ರಚಾರದಲ್ಲಿ ಕಾಣಿಸಿಕೊಳ್ಳಲಿಲ್ಲ.

ಪ್ರಮುಖ ಪಕ್ಷಗಳು ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ ಪ್ರಚಾರ ನಡೆಸಿವೆ. ಮತದಾರರ ಕೃಪೆ ಯಾರಿಗೆ ಸಿಗಲಿದೆ ಎಂಬುದು ಏ.26ರಂದು ನಿರ್ಧಾರವಾಗಲಿದೆ.

ಎಚ್‌.ಡಿ. ದೇವೇಗೌಡ
ಎಚ್‌.ಡಿ. ದೇವೇಗೌಡ
ಸಿದ್ದರಾಮಯ್ಯ
ಸಿದ್ದರಾಮಯ್ಯ
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್

ನಡೆದದ್ದು ಒಂದೇ ವಿಭಾಗೀಯ ಸಮಾವೇಶ ಎಲ್ಲ ವಿಧಾನಸಭಾ ಕ್ಷೇತ್ರದಲ್ಲೂ ಪ್ರಚಾರ ನಡೆಸಿದ ಸಿದ್ದರಾಮಯ್ಯ ಎರಡೂ ಪಕ್ಷಗಳಿಗೂ ವಿವಿಧ ಸಂಘಟನೆಗಳ ಬೆಂಬಲ

ಪ್ರಚಾರದಲ್ಲಿ ಕಾಣಿಸಿಕೊಳ್ಳದ ಪ್ರಸಾದ್ 50 ವರ್ಷಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದ ಹಿರಿಯ ದಲಿತ ನಾಯಕ ಚಾಮರಾಜನಗರದ ಹಾಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಚುನಾವಣಾ ರಾಜಕಾರಣಕ್ಕೆ ವಿದಾಯ ಹೇಳಿದ್ದರಿಂದ ಪ್ರಚಾರದಲ್ಲಿ ಕಾಣಿಸಿಕೊಳ್ಳಲಿಲ್ಲ. ಅವರು ಈ ವರ್ಷಗಳಲ್ಲಿ ಪ್ರಚಾರದಲ್ಲಿ ಕಾಣಿಸಿಕೊಳ್ಳದ ಮೊದಲ ಚುನಾವಣೆ ಇದು ಎಂದೇ ಹೇಳಬಹುದು. ಪ್ರಧಾನಿ ಮೋದಿ ಸಮಾವೇಶದಲ್ಲೂ ಕಾಣಿಸಿಕೊಳ್ಳಲಿಲ್ಲ. ಅವರು ಯಾವುದೇ ಪಕ್ಷದ ಪರವಾಗಿಯೂ ಅಧಿಕೃತವಾಗಿ ಬೆಂಬಲ ಘೋಷಿಸಿಲ್ಲ. ಆದರೆ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮೊದಲಾದವರು ಭೇಟಿಯಾಗಿ ಬೆಂಬಲ ಯಾಚಿಸಿದ್ದರು. ಪ್ರಸಾದ್ ಅವರೀಗ ಅನಾರೋಗ್ಯದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

‘ಕೈ’ ಬೆಂಬಲಿಸಿದ ಎಎಪಿ ಪ್ರಗತಿಪರರು ಆಮ್‌ ಆದ್ಮಿ ಪಕ್ಷದ (ಎಎಪಿ) ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಪ್ರಗತಿಪರ ಚಿಂತಕರು ರೈತ ಸಂಘದವರು ಸಾಹಿತಿಗಳು ವಿವಿಧ ಸಂಘಟನೆಗಳ ಮುಖಂಡರು ಕಾಂಗ್ರೆಸ್‌ನ ಲಕ್ಷ್ಮಣ ಪರವಾಗಿ ಮತ ಯಾಚಿಸಿದರು. ದೇವನೂರ ಮಹಾದೇವ ಅರವಿಂದ ಮಾಲಗತ್ತಿ ಪ್ರೊ.ಕಾಳೇಗೌಡ ನಾಗವಾರ ಸಿ.ಬಸವಲಿಂಗಯ್ಯ ಎಚ್‌.ಜನಾರ್ಧನ್ (ಜನ್ನಿ) ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹಿಂದುಳಿದ ವರ್ಗದವರು ದಲಿತರು ಹಾಗೂ ಶೋಷಿತರ ವರ್ಗಗಳ ಜಿಲ್ಲಾ ಘಟಕಗಳ ಅಧ್ಯಕ್ಷರು ಪ್ರಚಾರ ನಡೆಸಿದರು.

ರೋಡ್ ಶೋ ಸಭೆ–ಸಮಾವೇಶ ಈ ಬಾರಿ ನಡೆದದ್ದು ಒಂದೇ ‘ವಿಭಾಗಮಟ್ಟದ ಸಮಾವೇಶ’. ಅದನ್ನು ಬಿಜೆಪಿಯವರು ಆಯೋಜಿಸಿದ್ದರು. ಉಳಿದಂತೆ ಉಭಯ ಪಕ್ಷಗಳಲ್ಲೂ ರೋಡ್‌ ಶೋಗಳು ಹೆಚ್ಚಿನ ಪ್ರಮಾಣದಲ್ಲಿ ನಡೆದವು. ಎರಡೂ ಪಕ್ಷಗಳ ಪರವಾಗಿ ಜಾತಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಕೂಡ ಪ್ರಚಾರ ಮಾಡಿದರು. ಬೆಂಬಲಿಸಿ ಪತ್ರಿಕಾಗೋಷ್ಠಿ ಹಾಗೂ ಸಭೆ–ಸಮಾವೇಶಗಳನ್ನು ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT