ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನನ್ನ ಹೆಂಡತಿಗೊಂದು ನ್ಯಾಯ, ಸಿದ್ದರಾಮಯ್ಯ ಹೆಂಡತಿಗೊಂದು ನ್ಯಾಯವೇ: ವಿಶ್ವನಾಥ್‌

ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಕಿಡಿ
Published 9 ಜುಲೈ 2024, 12:46 IST
Last Updated 9 ಜುಲೈ 2024, 12:46 IST
ಅಕ್ಷರ ಗಾತ್ರ

ಮೈಸೂರು: ‘ಮುಡಾ ನಿವೇಶನ ಹಂಚಿಕೆಯಲ್ಲಿ ನನ್ನ ಹೆಂಡತಿಗೊಂದು ನ್ಯಾಯ, ಸಿ.ಎಂ ಸಿದ್ದರಾಮಯ್ಯ ಹೆಂಡತಿಗೊಂದು ನ್ಯಾಯವೇ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಪ್ರಶ್ನಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನನಗೂ, ಸಿದ್ದರಾಮಯ್ಯಗೂ ಒಂದೇ ಅವಧಿಯಲ್ಲಿ ನಿವೇಶನ ಮಂಜೂರಾದರೂ ತಾರತಮ್ಯ ಮಾಡಲಾಗಿದೆ. ಅವರಿಗೆ ಮೊದಲೇ ಕೊಟ್ಟಂತೆ ನಮ್ಮ ಕುಟುಂಬಕ್ಕೂ ವಿಜಯನಗರ ಬಡಾವಣೆಯಲ್ಲೇನೂ ನಿವೇಶನ ಕೊಟ್ಟಿಲ್ಲ’ ಎಂದು ದೂರಿದರು.

‘ಮುಡಾ ಅಧ್ಯಕ್ಷ ಮರೀಗೌಡ ಅವರು ವಿಶ್ವನಾಥ್‌ ಕೂಡ ಬದಲಿ ನಿವೇಶನ ಪಡೆದಿದ್ದಾರೆಂದು ಆರೋಪಿಸಿದ್ದಾರೆ. ಆದರೆ, ದೇವನೂರು ಮೂರನೇ ಹಂತದ ಬಡಾವಣೆಯಲ್ಲಿ ವರುಣ ಕಾಲುವೆ ಪಕ್ಕ ಮೊದಲು ನಿವೇಶನ ಸಿಕ್ಕಿತ್ತು. ಕಾಲುವೆ ಇದ್ದರಿಂದ ಮನೆ ಕಟ್ಟಲು ಯೋಗ್ಯವಲ್ಲವೆಂದು ಪ್ರಾಧಿಕಾರವೇ ಮತ್ತೆ ಅದೇ ಬಡಾವಣೆಯ ಎತ್ತರದ ಜಾಗದಲ್ಲಿ ಕೊಟ್ಟಿತ್ತು. ಇದು ಬದಲಿ ನಿವೇಶನವೇ’ ಎಂದು ತಿರುಗೇಟು ನೀಡಿದರು. 

‘2001ರಲ್ಲಿ ಪತ್ನಿ ಶಾಂತಮ್ಮ ಹೆಸರಲ್ಲಿ ನಿವೇಶನಕ್ಕೆ ಅರ್ಜಿ ಹಾಕಿದ್ದು, ಅದು 20 ವರ್ಷದ ನಂತರ ಮಂಜೂರಾಗಿದೆ. ಆದರೆ, ಸಿದ್ದರಾಮಯ್ಯ ಅವರಿಗೆ ದೇವನೂರು ಬಡಾವಣೆಯಲ್ಲಿ ನಿವೇಶನ ಖಾಲಿ ಇರಲಿಲ್ಲವೆಂದು ವಿಜಯನಗರದಲ್ಲಿ ಕೊಡಲಾಗಿದೆ. ನಮಗೆ ಮಾತ್ರ ನಿವೇಶನ ಖಾಲಿ ಇತ್ತೇ? ಈಗಲೂ ಅಲ್ಲಿ 800 ನಿವೇಶನ ಖಾಲಿ ಇವೆ’ ಎಂದು ವಾಗ್ದಾಳಿ ನಡೆಸಿದರು.

‘ಮುಡಾ ನಿವೇಶನ ಹಂಚಿಕೆ ಕಾನೂನುಬದ್ದವಾಗಿದೆಯೆಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಕಾಂಗ್ರೆಸ್‌ ಶಾಸಕರು ದಿಕ್ಕುತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ಕಾನೂನುಬದ್ಧವಾಗಿದ್ದರೆ ತನಿಖೆಯೇಕೆ ನಡೆಸಬೇಕಿತ್ತು. ಮೊದಲು ಸಿದ್ದರಾಮಯ್ಯ ತಮ್ಮ ಸಚಿವರ ಬಾಯಿಗೆ ಬೀಗಹಾಕಲಿ’ ಎಂದು ಕಿಡಿಕಾರಿದರು.   

‘ಅಭಿವೃದ್ಧಿ ಪಡಿಸಿದ ಬಡಾವಣೆಯಲ್ಲಿ ಮೀಸಲಿರಿಸಿದ್ದ ಸಿ.ಎ ಹಾಗೂ ಉದ್ಯಾನದ ಜಾಗವನ್ನು  ನಿವೇಶನವಾಗಿ ಮಾಡಿ ವಿಧಾನ ಪರಿಷತ್‌ ಸದಸ್ಯ ಸಿ.ಎನ್‌.ಮಂಜೇಗೌಡ ಮಾರಾಟ ಮಾಡಿದ್ದಾರೆ. ಅವರ ವಿರುದ್ಧವೂ ತನಿಖೆಯಾಗಬೇಕು’ ಎಂದು ಆಗ್ರಹಿಸಿದರು. 

ಮುಡಾದಲ್ಲಿ ನಡೆದಿರುವುದು ₹ 10 ಸಾವಿರ ಕೋಟಿ ಹಗರಣ. ಇಲ್ಲಿನ ಪೊಲೀಸರಿಂದ ತನಿಖೆಯು ಅಸಾಧ್ಯ. ಸಿಬಿಐಗೆ ವಹಿಸಲಿ

-ಅಡಗೂರು ಎಚ್‌.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ

‘ಡೆವಲಪರ್‌ಗಳಿಗೆ ಅಕ್ರಮ ಹಂಚಿಕೆ’ 

‘ಡೆವಲಪರ್‌ಗಳಿಗೆ ಮುಡಾ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದೆ’ ಎಂದು ವಿಶ್ವನಾಥ್ ಆರೋಪಿಸಿದರು. ‘ದಟ್ಟಗಳ್ಳಿಯಲ್ಲಿ ಡೆವಲಪರ್‌ ಮಂಜುನಾಥ್ ಎಂಬುವರಿಗೆ ಮುಡಾ 31 ನಿವೇಶನ ನೀಡಿದೆ. ಅದೂ ನಿವೇಶನಕ್ಕೆ ಕೇವಲ ₹ 3 ಸಾವಿರ ಪಡೆದು. ಇಷ್ಟು ಕಡಿಮೆ ದರದಲ್ಲಿ ನಿವೇಶನ ಪಡೆಯಲು ಸಾಧ್ಯವೇ’ ಎಂದು ಪ್ರಶ್ನಿಸಿದರು. ‘ನಿವೇಶನಕ್ಕಾಗಿ ನನ್ನ ಬಳಿ ಬಂದಿದ್ದರೆಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಹೇಳಿದ್ದಾರೆ. ಹೌದು ನಾನು ಹೋಗಿದ್ದು ನಿಜ. ಆದರೆ ಅದು ನನಗಾಗಿಯಲ್ಲ. ಬೇರೆಯವರಿಗೆ ನಿವೇಶನ ಕೇಳಲು ಹೋಗಿದ್ದೆ. ಡೆವಲಪರ್‌ ಬಳಿ ನಿವೇಶನ ಕೇಳಲು ಹೋಗಬಾರದೇ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT