ಮಂಗಳವಾರ, ಜನವರಿ 31, 2023
19 °C

ಮೀಸಲಾತಿ ಹೆಚ್ಚಳ ಸರ್ಕಾರದಿಂದ ಐತಿಹಾಸಿಕ ನಿರ್ಣಯ: ಮೇಯರ್ ಶಿವಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಪರಿಶಿಷ್ಟ ಪಂಗಡಕ್ಕೆ ನೀಡುತ್ತಿರುವ ಮೀಸಲಾತಿಯನ್ನು ಶೇ.3ರಿಂದ ಶೇ 7ಕ್ಕೆ ಹೆಚ್ಚಿಸಬೇಕೆಂಬ ಸಮಾಜದ ಬೇಡಿಕೆಯನ್ನು ಈಡೇರಿಸಲು ರಾಜ್ಯ ಸರ್ಕಾರವು ಐತಿಹಾಸಿಕ ನಿರ್ಣಯ ಮಾಡಿರುವುದು ಸ್ವಾಗತಾರ್ಹವಾಗಿದೆ’ ಎಂದು ಮೇಯರ್ ಶಿವಕುಮಾರ್ ಹೇಳಿದರು.

ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಕ್ರಮ ವಹಿಸಿದ ಹಿನ್ನೆಲೆಯಲ್ಲಿ ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸುಣ್ಣದಕೇರಿಯ ಮಲೆಮಹದೇಶ್ವರ ದೇವಸ್ಥಾನದ ಎದುರು ಶನಿವಾರ ನಾಯಕ ಸಮಾಜದವರು ನಡೆಸಿದ ಸಂಭ್ರಮಾಚರಣೆ ವೇಳೆ ಸಾರ್ವಜನಿಕರಿಗೆ ಸಿಹಿ ವಿತರಿಸಿ ಅವರು ಮಾತನಾಡಿದರು.

‘ಬೇಡಿಕೆ ಈಡೇರಿಸುವ ಕುರಿತು ಸರ್ವ ಪಕ್ಷಗಳ ಸಭೆಯಲ್ಲಿ ಹೆಚ್ಚಿಸುವ ನಿರ್ಧಾರ ಮಾಡಿದಲ್ಲದೆ, ಸಚಿವ ಸಂಪುಟ ಸಭೆಯಲ್ಲೂ ಅಸ್ತು ಎಂದಿರುವುದು ಸ್ವಾಗತಾರ್ಹವಾಗಿದೆ. ವಾಲ್ಮೀಕಿ ಮಠದ ಸ್ವಾಮೀಜಿಯ ಹೋರಾಟ ಮತ್ತು ಇಡೀ ನಾಯಕ ಸಮಾಜಕ್ಕೆ ಬಿಜೆಪಿ ಸರ್ಕಾರವು ದೊಡ್ಡ ಕೊಡುಗೆಯನ್ನು ನೀಡಿದೆ. ಇದು ಸಮಾಜದವರಲ್ಲಿ ಹರ್ಷ ಉಂಟು ಮಾಡಿದೆ’ ಎಂದು ಹೇಳಿದರು.

‘ಪರಿವಾರ, ತಳವಾರ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದ ಸರ್ಕಾರವು ಈಗ ಮತ್ತೊಂದು ನಿರ್ಧಾರ ಕೈಗೊಂಡಿರುವುದು ನಮ್ಮ ಸರ್ಕಾರವು ಸಮಾಜದ ಮೇಲೆ ಇಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ. ಸ್ವಾಮೀಜಿ ಹೋರಾಟಕ್ಕೆ ಇಡೀ ನಾಯಕ ಸಮಾಜವೇ ಬೆನ್ನಿಗೆ ನಿಂತಿತ್ತು. ಸಚಿವ ಬಿ.ಶ್ರೀರಾಮುಲು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ’ ಎಂದರು.

ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮುಖಂಡರು, ಸ್ವಾಮೀಜಿ ಪರವಾಗಿ ಜೈಕಾರ ಹಾಕಿದರು.

ಮುಖಂಡರಾದ ಸುಂದರರಾಜ್, ನಾಗೇಶ್, ಲಕ್ಷ್ಮಣ್, ಕೃಷ್ಣನಾಯಕ, ವಿಜಯಕುಮಾರ ನಾಯಕ ‍ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು