ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಡಿಒಗಳಿಗೆ ಚೆಕ್‌ಪೋಸ್ಟ್‌ ಹೊಣೆ ಇಲ್ಲ

ಬರಗಾಲ– ಲೋಕಸಭೆ ಚುನಾವಣೆ ಸಲುವಾಗಿ ಮೈಸೂರು ಜಿಲ್ಲಾಡಳಿತ ನಿರ್ಧಾರ
ಕೆ.ನರಸಿಂಹಮೂರ್ತಿ
Published 10 ಮಾರ್ಚ್ 2024, 6:15 IST
Last Updated 10 ಮಾರ್ಚ್ 2024, 6:15 IST
ಅಕ್ಷರ ಗಾತ್ರ

ಮೈಸೂರು: ಬರಗಾಲ ಮತ್ತು ಲೋಕಸಭೆ ಚುನಾವಣೆ ಕರ್ತವ್ಯವನ್ನು ಒಟ್ಟಿಗೇ ಸಮರ್ಥವಾಗಿ ನಿರ್ವಹಿಸುವ ಕುರಿತು ಜಿಲ್ಲೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿ ನೀಡಿ ಜಿಲ್ಲಾಡಳಿತವು ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಇದೇ ಮೊದಲ ಬಾರಿಗೆ ಚುನಾವಣೆ ಚೆಕ್‌ಪೋಸ್ಟ್‌, ಸೆಕ್ಟರ್‌ ಅಧಿಕಾರಿ ಕರ್ತವ್ಯದಿಂದಲೂ ಈ ಅಧಿಕಾರಿಗಳಿಗೆ ವಿನಾಯಿತಿ ನೀಡಿದೆ.

ಜಿಲ್ಲೆಯ ಚುನಾವಣಾ ಇತಿಹಾಸದಲ್ಲಿ, ಈ ಅಧಿಕಾರಿಗಳಿಗೆ ಹೀಗೆ ಪ್ರತ್ಯೇಕ ತರಬೇತಿ ನೀಡಿದ ನಿದರ್ಶನವಿಲ್ಲ. ರಾಜ್ಯದಲ್ಲೂ ಇದು ಮೊಟ್ಟ ಮೊದಲ ಪ್ರಯತ್ನ.

ಚೆಕ್‌ಪೋಸ್ಟ್‌ಗಳಿಗೆ ನಿಯೋಜಿ ಸಿದರೆ ಹಗಲು–ರಾತ್ರಿ ಪಾಳಿಯಲ್ಲಿ ಅಭಿವೃದ್ಧಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲೇಬೇಕಾಗುತ್ತದೆ. ಹಾಗಾದಾಗ, ಕುಡಿಯುವ ನೀರು ಪೂರೈಕೆ ಸೇರಿದಂತೆ ಬರಗಾಲ ನಿರ್ವಹಣೆ ಹಾಗೂ ದೈನಂದಿನ ಆಡಳಿತಾತ್ಮಕ ಕೆಲಸಗಳಿಗೆ ತೊಡಕಾಗುತ್ತದೆ ಎಂಬ ಕಾರಣಕ್ಕೆ ಅವರನ್ನು ಚೆಕ್‌ಪೋಸ್ಟ್‌ಗಳಿಗೆ ಹಾಗೂ ಸೆಕ್ಟರ್‌ ಅಧಿಕಾರಿಗಳ ತಂಡಕ್ಕೆ ನಿಯೋಜಿಸದಿರಲು ಜಿಲ್ಲಾಡಳಿತ ನಿರ್ಧರಿಸಿದೆ.

‘ಚೆಕ್‌ಪೋಸ್ಟ್‌ಗಳಿಂದ ನಿಯೋಜಿ ಸುವುದರಿಂದ ಆಗುವ ಸಮಸ್ಯೆಗಳ ಕುರಿತು, ಹಿಂದಿನ ಚುನಾವಣೆ ಸಂದರ್ಭದಲ್ಲಿ ಅಧಿಕಾರಿಗಳು ಜಿಲ್ಲಾಡಳಿತದ ಗಮನವನ್ನೂ ಸೆಳೆದಿದ್ದರು’ ಎಂದು ಮೂಲಗಳು ತಿಳಿಸಿವೆ.

ಮತಗಟ್ಟೆಗಳಿಗೆ ಕುಡಿಯುವ ನೀರು, ವಿದ್ಯುತ್‌, ರ್‍ಯಾಂಪ್‌ ಸೇರಿದಂತೆ ಕನಿಷ್ಠ ಮೂಲಸೌಕರ್ಯಗಳನ್ನು ಕಲ್ಪಿಸುವುದು, ಮತದಾನ ಪ್ರಮಾಣ ಹೆಚ್ಚಿಸುವಲ್ಲಿ ಶ್ರಮಿಸುವ ಸ್ವೀಪ್‌ ಚಟುವಟಿಕೆಗಳು ಮತ್ತು ಮಾದರಿ ನೀತಿ ಸಂಹಿತೆ ಪಾಲನೆಯ ಕರ್ತವ್ಯಗಳನ್ನು ಈ ಅಧಿಕಾರಿಗಳು ನಿಭಾಯಿಸಲಿದ್ದಾರೆ. ಈ ಮೂರೂ ಚಟುವಟಿಕೆಗಳ ನಿರ್ವಹಣೆ ಸಲುವಾಗಿ ಅವರು ಅವರ ಪಂಚಾಯಿತಿ ಕಾರ್ಯವ್ಯಾಪ್ತಿಯಲ್ಲೇ ನಿರಂತರ ಸಂಚರಿಸಬೇಕಾಗುತ್ತದೆ. ಹೀಗಾಗಿ ಅವರು ಸ್ಥಳೀಯ ಜನಸಾಮಾನ್ಯರ ಸಂಪರ್ಕಕ್ಕೂ ಸುಲಭವಾಗಿ ಸಿಗುವಂತಾಗುತ್ತದೆ ಎಂಬುದು ಜಿಲ್ಲಾಡಳಿತದ ನಿಲುವು.

‘ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಚುನಾವಣೆ ಕರ್ತವ್ಯ ನಿರ್ವಹಣೆ ಕುರಿತು ಸೂಕ್ತ ತರಬೇತಿ ಅಗತ್ಯವಿರುವ ಕುರಿತು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರ ಗಮನ ಸೆಳೆದಿದ್ದೆ. ಅವರೂ ಸ್ಪಂದಿಸಿ, ತರಬೇತಿ ಏರ್ಪಡಿಸಿದರು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ’ಪ್ರಜಾವಾಣಿ’ಗೆ ಶುಕ್ರವಾರ ತಿಳಿಸಿದರು.

‘ಚುನಾವಣೆಯ ಕರ್ತವ್ಯಗಳ ಕುರಿತು ಆಯೋಗದ ಆದೇಶಗಳನ್ನು ರವಾನಿಸುವ ಕೆಲಸ ನಿರಂತರವಾಗಿ ನಡೆಯುತ್ತದೆ. ಆದರೆ, ಕರ್ತವ್ಯ ನಿರ್ವಹಣೆ ಹೇಗೆ ಎಂಬ ಬಗ್ಗೆ ಸ್ಪಷ್ಟ ಸೂಚನೆ, ಮಾರ್ಗದರ್ಶನ ನೀಡುವ ಪ್ರಯತ್ನಗಳೂ ಬೇಕೆಂಬ ಕಾರಣಕ್ಕೆ ತರಬೇತಿಯನ್ನು ಆಯೋಜಿಸಲಾಯಿತು’ ಎಂದರು.

ಭರದಿಂದ ತರಬೇತಿ: ಚುನಾವಣೆ ಸಿಬ್ಬಂದಿಗೆ ವಿವಿಧ ತರಬೇತಿಗಳನ್ನು ನೀಡುವ ಕಾರ್ಯವೂ ಜಿಲ್ಲೆಯಲ್ಲಿ ಭರದಿಂದ ನಡೆಯುತ್ತಿದೆ. ಮಾದರಿ ನೀತಿ ಸಂಹಿತೆ ಪಾಲನೆ, ಚುನಾವಣೆ ವೆಚ್ಚ ಪರಿಶೀಲನೆ,‌ ವಿಡಿಯೋ ವೀಕ್ಷಣೆ ತಂಡ, ಫ್ಲೈಯಿಂಗ್‌ ಸ್ಕ್ವಾಡ್‌, ಸೆಕ್ಟರ್‌ ಅಧಿಕಾರಿಗಳ ತಂಡಗಳಿಗೆ ತರಬೇತಿ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT