ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಜೆಡಿಎಸ್‌ಗೆ ‘ಆದ್ಯತೆ’, ಮತ ಗಳಿಕೆ ತಂತ್ರ

ಮೈತ್ರಿ ಧರ್ಮ ಪಾಲನೆಯಲ್ಲಿ ಲೋಪವಾಗದಂತೆ ಎಚ್ಚರಿಕೆಯ ಸಂದೇಶ ರವಾನಿಸಿದ ಪ್ರಧಾನಿ!
Published 16 ಏಪ್ರಿಲ್ 2024, 5:32 IST
Last Updated 16 ಏಪ್ರಿಲ್ 2024, 5:32 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಜೆಡಿಎಸ್‌ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ, ‘ಮೈತ್ರಿ ಧರ್ಮ ಪಾಲನೆ’ಯಲ್ಲಿ ಲೋಪವಾಗದಂತೆ ನೋಡಿಕೊಳ್ಳಬೇಕು ಎಂಬ ಎಚ್ಚರಿಕೆಯ ಸಂದೇಶವನ್ನು ಸ್ವಪಕ್ಷೀಯರಿಗೆ ರವಾನಿಸಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ. ಈ ಭಾಗದ 4 ಲೋಕಸಭಾ ಕ್ಷೇತ್ರಗಳಲ್ಲಿ ತಲಾ 2 ಸೀಟುಗಳನ್ನು (ಮೈಸೂರು–ಕೊಡಗು (ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್), ಚಾಮರಾಜನಗರ (ಎಸ್. ಬಾಲರಾಜ್‌)–ಬಿಜೆಪಿಗೆ ಹಾಗೂ ಮಂಡ್ಯ (ಎಚ್‌.ಡಿ. ಕುಮಾರಸ್ವಾಮಿ), ಹಾಸನ (ಪ್ರಜ್ವಲ್ ರೇವಣ್ಣ)– ಜೆಡಿಎಸ್‌ಗೆ) ಹಂಚಿಕೆ ಮಾಡಿಕೊಂಡಿವೆ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಉದ್ದೇಶದ ಭಾಗವಾಗಿ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮೋದಿ, ಸ್ವಪಕ್ಷೀಯರಿಗಿಂತಲೂ ಜೆಡಿಎಸ್‌ನವರ ಮೇಲೆಯೇ ಹೆಚ್ಚಿನ ‘ಪ್ರೀತಿ’ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಹಲವು ರೀತಿಯ ವಿಶ್ಲೇಷಣೆಗೆ ಗ್ರಾಸವಾಗಿದೆ.

ವೇದಿಕೆಯಲ್ಲೂ ಆದ್ಯತೆ:

ವೇದಿಕೆಯಲ್ಲಿ ಬಿಜೆಪಿ ನಾಯಕರೊಂದಿಗೆ ಜೆಡಿಎಸ್‌ ನಾಯಕರಿಗೂ ಸಮಾನ ಆದ್ಯತೆ ನೀಡಲಾಗಿತ್ತು. ಮೋದಿಯವರು ತಮ್ಮ ಪಕ್ಕದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರನ್ನು ಕೂರಿಸಿಕೊಂಡಿದ್ದರು. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಭಾಷಣದ ವೇಳೆ ಅವರ ಆಸನದಲ್ಲಿ ಕುಳಿತಿದ್ದ ಎಚ್‌.ಡಿ.ಕುಮಾರಸ್ವಾಮಿ ಜತೆ ಪ್ರಧಾನಿಯು ಹೆಚ್ಚಿನ ಸಮಯ ಮಾತುಕತೆ ನಡೆಸಿದರು. ಹಲವು ಬಾರಿ ಜೋರಾಗಿ ನಗುತ್ತಲೇ ಅವರು ಸಂಭಾಷಣೆ ನಡೆಸಿದರು.

ತಮ್ಮ ಭಾಷಣದಲ್ಲೂ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನು ಹೊಗಳಿದರು. ಇಂತಹ ನೇತಾರರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಮುಂದುವರಿಯಬೇಕು ಎಂಬ ಸಂದೇಶವನ್ನು ಉಭಯ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ದಾಟಿಸಿದರು.

‘ಈ ಭಾಗದಲ್ಲಿ ಜೆಡಿಎಸ್‌ಗೆ ತನ್ನದೇ ಆದ ‘ಸಾಂಪ್ರದಾಯಿಕ ಮತ ಬ್ಯಾಂಕ್‌’ ಇದೆ. ದೇವೇಗೌಡರು ಮತ್ತು ಅವರ ಕುಟುಂಬದವರಿಗೆ ತೋರುವ ಗೌರವವು, ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹಾಗೂ ಅನುಕಂಪವುಳ್ಳ ಮತದಾರರ ಮೇಲೆ ಪರಿಣಾಮ ಬೀರುತ್ತದೆ. ಅದು ಮತವಾಗಿ ಪರಿವರ್ತನೆಯಾದರೆ ಚುನಾವಣೆಯಲ್ಲಿ ಅನುಕೂಲ ಆಗುತ್ತದೆ ಎನ್ನುವುದು ಅವರ ಲೆಕ್ಕಾಚಾರವಾಗಿದೆ’ ಎಂದು ವಿಶ್ಲೇಷಿಸಲಾಗುತ್ತಿದೆ.

‘ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ, ಒಕ್ಕಲಿಗ ಸಮಾಜಕ್ಕೆ ಸೇರಿದ ಪ್ರತಾಪ ಸಿಂಹ ಅವರಿಗೆ ಟಿಕೆಟ್ ತಪ್ಪಿಸಿ ಹಿಂದುಳಿದ ವರ್ಗವಾದ ಅರಸು ಸಮಾಜಕ್ಕೆ ಸೇರಿದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಗೆ ಬಿಜೆಪಿ ಮಣೆ ಹಾಕಿದೆ. ಕಾಂಗ್ರೆಸ್‌ನಲ್ಲಿ ಒಕ್ಕಲಿಗರಾದ ಎಂ.ಲಕ್ಷ್ಮಣ ಅಭ್ಯರ್ಥಿ. ಈ ಸನ್ನಿವೇಶದಲ್ಲಿ ಒಕ್ಕಲಿಗರ ಮತಗಳು ಕೈಬಿಟ್ಟು ಹೋಗದಂತೆ ನೋಡಿಕೊಳ್ಳುವ ತಂತ್ರಗಾರಿಕೆಯ ಭಾಗವಾಗಿಯೇ ಮೋದಿ ಅವರು ಜೆಡಿಎಸ್‌ ನಾಯಕರಿಗೆ ಗರಿಷ್ಠ ಮಟ್ಟದ ಗೌರವ ಕೊಡುವ ಕೆಲಸ ಮಾಡಿದ್ದಾರೆ’ ಎಂದು ಹೇಳಲಾಗುತ್ತಿದೆ.

ಮೋದಿಯವರಿಗೆ ದೇವೇಗೌಡರೂ ‘ಗರಿಷ್ಠ ಗೌರವ’ದ ಮಾತುಗಳನ್ನು ಆಡಿರುವುದು ‘ಪರಸ್ಪರರಲ್ಲಿ ಬೆಂಬಲದ ಅಗತ್ಯವಿದೆ’ ಎಂಬ ಸಂದೇಶವನ್ನು ರವಾನಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಭಿನ್ನಮತೀಯರಿಗೆ ಎಚ್ಚರಿಕೆ...

‘ಮೈತ್ರಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಹಿಂದೇಟು ಹಾಕುವುದು ಸಲ್ಲದು– ಎಲ್ಲರೂ ಸಮನ್ವಯದಿಂದ ಜೊತೆ–ಜೊತೆಯಲ್ಲಿ ಮುನ್ನಡೆಯಬೇಕು ಎಂಬ ಎಚ್ಚರಿಕೆಯ ಸಂದೇಶವನ್ನು ಕೆಲವು ‘ಭಿನ್ನಮತೀಯ ನಾಯಕ’ರಿಗೆ ಸೂಚ್ಯವಾಗಿ ತಲುಪಿಸಿದರು’ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ವೇದಿಕೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಹಿರಿತನಕ್ಕೆ ಗರಿಷ್ಠ ಮನ್ನಣೆ ನೀಡಿದ ಅವರು ಉಭಯ ಪಕ್ಷಗಳ ಮೈತ್ರಿ ಗಟ್ಟಿಯಾಗಿದೆ ಎಂಬುದನ್ನು ತಳಮಟ್ಟದ ಕಾರ್ಯಕರ್ತರಿಗೆ ತಿಳಿಸಿಕೊಡುವ ಪ್ರಯತ್ನವನ್ನು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT