ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರ ಆರೋಗ್ಯ ತಪಾಸಣೆ 

ಪೌರಕಾರ್ಮಿಕರ ಕುಂದುಕೊರತೆ ಸಭೆ: ಶಿಬಿರ ನಡೆಸಲು ಡಿಸಿ ಸೂಚನೆ
Last Updated 30 ನವೆಂಬರ್ 2022, 14:49 IST
ಅಕ್ಷರ ಗಾತ್ರ

ಮೈಸೂರು: ‘ನಗರದ ಸ್ವಚ್ಛತಾ ಸೇನಾನಿಗಳಾದ ಪೌರಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರವನ್ನು ನಿಯಮಿತವಾಗಿ ನಡೆಸಬೇಕು. ಅವರು ಆರೋಗ್ಯವಾಗಿರುವಂತೆ ನೋಡಿಕೊಳ್ಳಬೇಕಿರುವುದು ನಮ್ಮ ಹೊಣೆಯಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

ಇಲ್ಲಿ ಬುಧವಾರ ನಡೆದ ಪೌರಕಾರ್ಮಿಕರ ಕುಂದುಕೊರತೆ ಆಲಿಕೆ ಸಭೆಯಲ್ಲಿ ಮಾತನಾಡಿದ ಅವರು, ‘ಕೆಲವು ಆಸ್ಪತ್ರೆಗಳನ್ನು ಗುರುತಿಸಿ ಅವುಗಳ ಮೂಲಕ ಚಿಕಿತ್ಸೆ ಕೊಡಿಸಬೇಕು’ ಎಂದು ಸೂಚಿಸಿದರು.

‘ಕೆಲ ಕಾರ್ಮಿಕರು ಧೂಮಪಾನ, ಮದ್ಯಪಾನದಂತಹ ಚಟಗಳಿಗೆ ಒಳಗಾಗಿದ್ದಾರೆ. ಅವರ ಚಟಗಳನ್ನು ಬಿಡಿಸುವ ಕೆಲ ಕೇಂದ್ರಗಳಿದ್ದು ಅಲ್ಲಿಗೆ ಸೇರಿಸುವ ಮೂಲಕ ಆರೋಗ್ಯವಂತರನ್ನಾಗಿ ಮಾಡಲು ಸ್ಥಳೀಯ ಸಂಸ್ಥೆಗಳು ಹಾಗೂ ಕಾರ್ಮಿಕ ಸಂಘಗಳು ಪ್ರಯತ್ನಿಸಬೇಕು’ ಎಂದರು.

ಮಾಹಿತಿ ನೀಡಬೇಕು: ‘ಈ ಕಾರ್ಮಿಕರಿಗೆ ಪ್ರತಿ ತಿಂಗಳು ನೀಡುವ ವೇತನಕ್ಕೆ ಸಂಬಂಧಿಸಿದ ರಸೀದಿ ಕೊಡಬೇಕು. ಅದು ಕನ್ನಡದಲ್ಲಿರಬೇಕು. ಪ್ರತಿ ತಿಂಗಳು ಅವರ ಇಎಸ್‌ಐ, ಪಿ.ಎಫ್. ಕಡಿತಗೊಂಡಿರುವ ಮಾಹಿತಿಯನ್ನು ಕಾರ್ಮಿಕರಿಗೆ ಸಂದೇಶದ ಮೂಲಕ ಕಳುಹಿಸಬೇಕು. ಇದನ್ನು ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಬೇಕು. ಕೆಲವರ ದಾಖಲೆ ಸರಿ ಇಲ್ಲ ಎಂಬ ಕಾರಣಕ್ಕೆ, ವೇತನ ನೀಡಿಲ್ಲದ ದೂರುಗಳಿವೆ. ಅಧಿಕಾರಿಗಳೇ ದಾಖಲೆಗಳನ್ನು ಸರಿಪಡಿಸಿಕೊಡಬೇಕು’ ಎಂದು ನಿರ್ದೇಶನ ನೀಡಿದರು.

ಸಮಸ್ಯೆ ಪರಿಹರಿಸಿ: ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು ಮಾತನಾಡಿ, ‘ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಮೈಸೂರು ತಾಲ್ಲೂಕು ಕಸಬಾ ಹೋಬಳಿ ಮಳಲವಾಡಿಯಲ್ಲಿ 1.20 ಎಕರೆ ಜಾಗದಲ್ಲಿ ನಿವೇಶನ ನೀಡುವುದಾಗಿ ಹೇಳಿದ್ದರು. ಆದರೆ, ಏಕಾಏಕಿ ಆ ಸ್ಥಳವನ್ನು ಬದಲಾಯಿಸಿ ಹೊರವಲಯದಲ್ಲಿ ನಿವೇಶನ ನೀಡುವುದಾಗಿ ಹೇಳುತ್ತಿದ್ದಾರೆ. ಪೌರಕಾರ್ಮಿಕರು ಅಷ್ಟು ದೂರದಿಂದ ಬೆಳಿಗ್ಗೆ ಬಂದು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಸಮಯಕ್ಕೆ ಸರಿಯಾಗಿ ಬರದಿದ್ದರೆ ಗೈರು ಹಾಜರಿ ಎಂದು ನಮೂದಿಸಲಾಗುತ್ತದೆ. ಈ ಸಮಸ್ಯೆ ಪರಿಹರಿಸಬೇಕು’ ಎಂದು ಕೋರಿದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಸಮಯಕ್ಕೆ ಸರಿಯಾಗಿ ಬರುವುದು ನಮ್ಮ ಜವಾಬ್ದಾರಿ’ ಎಂದರು.

‘ಮೂರ್ನಾಲ್ಕು ದಿನಗಳ ಹಿಂದೆ ಅಧಿಕಾರಿಗಳ ಕಿರುಕುಳದಿಂದ ಪೌರಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.

‘ಅಧಿಕಾರಿಗಳು ನೌಕರರನ್ನು ಚೆನ್ನಾಗಿ ನೋಡಿಕೊಂಡರೆ ಯಾವುದೇ ಪ್ರತಿಭಟನೆಗಳಾಗುವುದಿಲ್ಲ’ ಎಂದರು.

ಮಹಾನಗರ ಪಾಲಿಕೆಯ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ, ಉಪ ಆಯುಕ್ತೆ ರೂಪಾ, ರಾಜ್ಯ ಪೌರಕಾರ್ಮಿಕರ ಸಂಘದ ಕಾರ್ಯಾಧ್ಯಕ್ಷ ಮಂಚಯ್ಯ, ಕಾರ್ಯದರ್ಶಿ ದಿನೇಶ್ ಕುಮಾರ್, ಉಪಾಧ್ಯಕ್ಷ ಜಿ.ಎನ್. ಚಾಮ ಇದ್ದರು.

ಬೇಡಿಕೆಗಳೇನು?

* 700 ಜನಸಂಖ್ಯೆಗೆ ಅನುಗುಣವಾಗಿ ಖಾಲಿ ಇರುವ ಪೌರಕಾರ್ಮಿಕರ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು.

* ಮಹಾನಗರ ಪಾಲಿಕೆಯಲ್ಲಿ 562 ಕಾಯಂ, ನೇರ ಪಾವತಿಯಲ್ಲಿ 839 ಮತ್ತು 734 ಹೆಚ್ಚುವರಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 10.30 ಲಕ್ಷ ಜನಸಂಖ್ಯೆ ಇದ್ದು, ಪ್ರವಾಸಿಗರು ದಿನೇ ದಿನೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಪೌರಕಾರ್ಮಿಕರ ಸೇವೆ ಅಗತ್ಯವಿದೆ. ಹೀಗಾಗಿ, ಹೆಚ್ಚಿನ ಮಂದಿಯನ್ನು ನೇಮಿಸಿಕೊಳ್ಳಬೇಕು. ಉದ್ಯೋಗ ಭದ್ರತೆ, ನಿವೃತ್ತಿ ಅಥವಾ ಮೃತರಾದರೆ ಅನುಕಂಪದ ಕೆಲಸ ಮತ್ತು ಉಪದಾನ ನೀಡಬೇಕು.

* ಪೌರಕಾರ್ಮಿಕರ ಹಾಜರಾತಿಗೆ ಹೊಸ ವಿಧಾನ (ಫೇಸ್ ರಿಕಗ್ನಿಷನ್‌ ಸಿಸ್ಟಂ) ವ್ಯವಸ್ಥೆಯನ್ನು ರದ್ದುಪಡಿಸಬೇಕು.

* ಪಾಲಿಕೆಯಲ್ಲಿ ಕ್ಷಿಪ್ರ ಕಾರ್ಯಪಡೆಯ 3 ವಾಹನಗಳಲ್ಲಿ ಕೆಲಸ ಮಾಡುತ್ತಿರುವ ಮೂವರು ಚಾಲಕರು, 12 ಮಂದಿ ನೌಕರರಿಗೆ ಕನಿಷ್ಠ ವೇತನ ಹಾಗೂ ಪಿ.ಎಫ್., ಇ.ಎಸ್.ಐ ಮತ್ತು ಬ್ಯಾಂಕ್‌ನ ಮೂಲಕ ವೇತನ ಸೌಲಭ್ಯಗಳನ್ನು ನೀಡಬೇಕು.

* ಜಿಲ್ಲೆಯ 13 ನಗರ ಸ್ಥಳೀಯ ಸಂಸ್ಥೆಗಳಲ್ಲಿ 700 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕರಂತೆ ಮಂಜೂರಾಗಿರುವ 622 ಹುದ್ದೆಗಳ ಅವಶ್ಯಕತೆ ಇದೆ. ಬಾಕಿ ಇರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕು. ಹೂಟಗಳ್ಳಿ ನಗರಸಭೆ, ಶ್ರೀರಾಂಪುರ ಪಟ್ಟಣ ಪಂಚಾಯಿತಿ, ಬೋಗಾದಿ ಪಟ್ಟಣ ಪಂಚಾಯಿತಿ, ಕಡಕೋಳ ಪಟ್ಟಣ ಪಂಚಾಯಿತಿ, ರಮನಹಳ್ಳಿ ಪಟ್ಟಣ ಪಂಚಾಯಿತಿಗಳಲ್ಲಿ 176 ಜನ ಪೌರಕಾರ್ಮಿಕರಿಗೂ ಎಫ್‌ಬಿಎಎಸ್‌ ನಿಧಿ ಆಧರಿತ ಲೆಕ್ಕ ಪದ್ಧತಿ ವೇತನ ಅಳವಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT