ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಲಬ್ಬರದ ವರ್ಷಧಾರೆ: ತಂಪಾದ ಇಳೆ

ಧರೆಗುರುಳಿದ ವಿದ್ಯುತ್ ಕಂಬಗಳು, ಬುಡಮೇಲಾದ ಮರಗಳು
Last Updated 26 ಮೇ 2020, 2:19 IST
ಅಕ್ಷರ ಗಾತ್ರ

ಮೈಸೂರು: ಸಿಡಿಲಬ್ಬರದ ವರ್ಷಧಾರೆಯು ಬಿರುಗಾಳಿ ಸಹಿತವಾಗಿ ನಗರದಲ್ಲಿ ಸೋಮವಾರ ರಾತ್ರಿ ಆರ್ಭಟಿಸಿತು. ಭಾರಿ ಮಳೆಗೆ ಇಡೀ ನಗರದ ತಾಪಮಾನ ಇಳಿಕೆಯಾಯಿತು. ಸೆಖೆಯ ಬೇಗೆಯಿಂದ ಜನರು ಹೊರಬರುವಂತಾಯಿತು.

ತಾಲ್ಲೂಕಿನ ವರುಣಾ ಮತ್ತು ಜಯಪುರ ಹೋಬಳಿಯಲ್ಲಿ ಸುರಿದಿರುವ ಮಳೆಯಿಂದ ಮುಂಗಾರುಪೂರ್ವ ಬೆಳೆ ಸೊಂಪಾಗಿ ಬೆಳೆಯಲು ಸಹಾಯವಾಗಿದೆ. ಹಲವು ಗ್ರಾಮಗಳಲ್ಲಿ ಬತ್ತಿ ಹೋದ ಕೆರೆಗಳಿಗೆ ನೀರು ಹರಿದು ಬಂದಿದ್ದು, ಕೊಳವೆಬಾವಿಗಳು ಮರುಪೂರಣಗೊಳ್ಳುವ ನಿರೀಕ್ಷೆ ಮೂಡಿದೆ. ಗ್ರಾಮಾಂತರ ಭಾಗದಲ್ಲಿ ಬಿದ್ದ ಮಳೆಯಿಂದ ರೈತರು ಸಂತಸಗೊಂಡಿದ್ದಾರೆ.

ಪಿರಿಯಾಪಟ್ಟಣವೂ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಳೆ ಸುರಿದಿದೆ. ಹನಗೋಡು ಭಾಗದಲ್ಲಿ ಆಲಿಕಲ್ಲು ಮಳೆ ಬಿದ್ದಿದೆ. ನಂಜನಗೂಡಿನಲ್ಲಿ ಮಳೆಗಿಂತ ಗಾಳಿಯ ಅಬ್ಬರವೇ ಹೆಚ್ಚಿತ್ತು. ಕೆ.ಆರ್.ನಗರದಲ್ಲಿ ಗುಡುಗಿನ ಅಬ್ಬರ ಜೋರಿತ್ತು. ಸಾಧಾರಣ ಮಳೆಯಾಗಿದೆ.

ಕತ್ತಲಲ್ಲಿ ಮುಳುಗಿದ ನಗರಿ:

ನಗರದ ಹಲವು ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಬಹಳಷ್ಟು ಬಡಾವಣೆಗಳು ಹಲವು ಗಂಟೆಗಳ ಕಾಲ ಕತ್ತಲಲ್ಲಿ ಮುಳುಗಿತು. ವಿದ್ಯಾರಣ್ಯಪುರಂನ 1ನೇ ಮುಖ್ಯರಸ್ತೆಯ 4ನೇ ಅಡ್ಡರಸ್ತೆಯಲ್ಲಿ ಬಿರುಗಾಳಿ ಸಿಲುಕಿದ ತೆಂಗಿನಮರ ವಿದ್ಯುತ್ ಕಂಬದ ಮೇಲೆ ಬಿದ್ದಿದೆ. ಕಂಬ ರಸ್ತೆಗೆ ಉರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಅನಾಹುತ ಸಂಭವಿಸಲಿಲ್ಲ.

ಇದಲ್ಲದೇ, ಗೋಕುಲಂ, ಸರಸ್ವತಿಪುರಂ ಸೇರಿದಂತೆ ಹಲವೆಡೆ ಮರಗಳು ಉರುಳಿವೆ. ಲಕ್ಷ್ಮೀಪುರಂ, ಕೃಷ್ಣಮೂರ್ತಿಪುರಂ, ಉದಯಗಿರಿ, ಸರಸ್ವತಿಪುರಂ, ರಾಮಾನುಜ ರಸ್ತೆ, ಅಗ್ರಹಾರ ಸೇರಿದಂತೆ ಹಲವು ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಮನೆಗಳಿಗೆ ನುಗ್ಗಿದ ನೀರು: ರಾಮಾನುಜ ರಸ್ತೆ, ಕಲ್ಯಾಣಗಿರಿ, ಶಾರದಾದೇವಿ ನಗರ, ಬಸವೇಶ್ವರನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಒಳಚರಂಡಿ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತು. ಒಮ್ಮೆಗೆ ಸುರಿದ ವರ್ಷಧಾರೆಯಿಂದ ನೀರು ರಸ್ತೆಗಳಲ್ಲಿ ಕಾಲುವೆಯಂತೆ ಹರಿಯಿತು. ದ್ವಿಚಕ್ರ ವಾಹನ ಸವಾರರು ಸಂಚರಿಸಲು ಪರದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT