ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಥಸಪ್ತಮಿ: 108 ಸೂರ್ಯ ನಮಸ್ಕಾರ

ನಿಯಮಿತ ಯೋಗಾಭ್ಯಾಸಕ್ಕೆ ಮೇಯರ್ ಶಿವಕುಮಾರ್ ಸಲಹೆ
Last Updated 28 ಜನವರಿ 2023, 13:00 IST
ಅಕ್ಷರ ಗಾತ್ರ

ಮೈಸೂರು: ‘ಸದೃಢ ಸಮಾಜ ನಿರ್ಮಾಣಕ್ಕೆ ಯೋಗ ಸಹಕಾರಿಯಾಗಿದೆ’ ಎಂದು ಮೇಯರ್ ಶಿವಕುಮಾರ್ ಹೇಳಿದರು.

ರಥಸಪ್ತಮಿ ಹಾಗೂ ಮೈಸೂರು ಯೋಗ ಒಕ್ಕೂಟದ 22ನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ಅಂಬಾವಿಲಾಸ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಮೈಸೂರು ಯೋಗ ಒಕ್ಕೂಟದಿಂದ ಶನಿವಾರ ಆಯೋಜಿಸಿದ್ದ ವಿಶೇಷ ಸಾಮೂಹಿಕ 108 ಸೂರ್ಯ ನಮಸ್ಕಾರ ಮತ್ತು ಸೂರ್ಯಯಜ್ಞ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಯೋಗ ದೇಹಕ್ಕೆ ಮಾತ್ರವಲ್ಲ, ಒತ್ತಡಗಳನ್ನೂ ನಿಯಂತ್ರಿಸಲಿದೆ’ ಎಂದರು.

‘ದೇಶದಲ್ಲಿ ಹೆಚ್ಚು ಮಾನವ ಸಂಪನ್ಮೂಲವಿದೆ ನಿಜ. ಆದರೆ, ಎಲ್ಲರೂ ಆರೋಗ್ಯವಾಗಿರುವುದು ಮುಖ್ಯವಾಗುತ್ತದೆ. ಜನರು ಸದೃಢವಾಗಿರದೆ ರೋಗ–ರುಜಿನಗಳಿಂದ ಕೂಡಿದ್ದರೆ ದೇಶಕ್ಕೂ ಮಾರಕವಾಗುತ್ತದೆ. ಆದ್ದರಿಂದ, ನಮ್ಮಲ್ಲಿರುವ ಮಾನವ ಸಂಪನ್ಮೂಲ ಸತ್ವಭರಿತ ಮತ್ತು ಆರೋಗ್ಯವಂತರಾಗಿರುವಂತೆ ನೋಡಿಕೊಳ್ಳುವುದು ಎಲ್ಲರ ಹೊಣೆಯಾಗಿದೆ’ ಎಂದು ತಿಳಿಸಿದರು.

‘ಮೈಸೂರು ಯೋಗ ನಗರಿಯಾಗಿಯೂ ಗುರುತಿಸಿಕೊಂಡಿದೆ. ಯೋಗ ಕಲಿಯುವುದಕ್ಕೆ ವಿದೇಶಿಯರೂ ಬರುತ್ತಿದ್ದಾರೆ. ಮಹಾರಾಜರ ಕಾಲದಿಂದಲೂ ಯೋಗಕ್ಕೆ ಒತ್ತು ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಯೋಗ ದಿನದಂದು ಇಲ್ಲಿಗೆ ಬಂದು ಹೋದ ಮೇಲೆ ಮೈಸೂರಿಗೆ ವಿಶ್ವಮನ್ನಣೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಯೋಗ ನಗರಿ ಎನ್ನುವ ಹೆಸರನ್ನು ಹೊಂದಲಿದೆ. ಇಲ್ಲಿನ ಯೋಗ ಪರಂಪರೆಯನ್ನು ಉಳಿಸಬೇಕಾಗಿದೆ’ ಎಂದರು.

ನಗರದ ವಿವಿಧೆಡೆಯಿಂದ ಚಳಿಯ ನಡುವೆಯೂ ಬಂದಿದ್ದ ನೂರಾರು ಯೋಗಪಟುಗಳು ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರಿಗೆ ಪ್ರಮಾಣಪತ್ರ ನೀಡಲಾಯಿತು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪಾ, ಮೈಸೂರು ಯೋಗ ಒಕ್ಕೂಟದ ಗೌರವಾಧ್ಯಕ್ಷ ಡಾ.ಎ.ಎಸ್.ಚಂದ್ರಶೇಖರ್, ಅಧ್ಯಕ್ಷ ಟಿ.ಜಲೇಂದ್ರಕುಮಾರ್, ಕಾರ್ಯಾಧ್ಯಕ್ಷರಾದ ಡಾ.ಬಿ.ಪಿ.ಮೂರ್ತಿ, ಶಾಂತರಾಮ, ಉಪಾಧ್ಯಕ್ಷರಾದ ಎಂ.ಎಸ್.ರಮೇಶ್, ಎಂ.ಎಸ್.ಶಿವಪ್ರಕಾಶ್, ಕಾರ್ಯದರ್ಶಿ ಕೆ.ಜಿ.ದೇವರಾಜು ಇದ್ದರು.

ಅರಮನೆ ಆವರಣದಲ್ಲಿ ರಥಸಪ್ತಮಿ ಆಚರಿಸಲಾಯಿತು. ಅಲ್ಲಿನ ಎಂಟು ರಥಗಳಿಗೆ ರಾಜವಂಶಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಭುವನೇಶ್ವರಿ, ತ್ರಿನೇಶ್ವರ ಸ್ವಾಮಿ, ಲಕ್ಷ್ಮೀರಮಣಸ್ವಾಮಿ, ಮಹಾಲಕ್ಷ್ಮೀದೇವಿ, ಪ್ರಸನ್ನ ಕೃಷ್ಣ, ವೇದವರಹಸ್ವಾಮಿ, ಖಿಲ್ಲೆವೆಂಕಟರಮಣಸ್ವಾಮಿ ಹಾಗೂ ಗಾಯಿತ್ರಿ ಅಮ್ಮನವರ ಉತ್ಸವ ಮೂರ್ತಿಗಳ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಯಿತು. ನಗರದ ವಿವಿಧೆಡೆಯಿಂದ ಬಂದಿದ್ದ ಭಕ್ತರು ಉತ್ಸವ ಮೂರ್ತಿಗಳ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT