ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಪರಿವರ್ತಕ: ಬೇಕಿದೆ ಸುರಕ್ಷತಾ ಕ್ರಮ

ಜೀವಹಾನಿಗೆ ಕಾರಣವಾಗದಿರಲಿ; ಅನಾಹುತ ನಡೆಯುವ ಮುನ್ನ ಸೆಸ್ಕ್‌ ಎಚ್ಚೆತ್ತುಕೊಳ್ಳಲಿ: ಸಾರ್ವಜನಿಕರ ಒತ್ತಾಯ
Last Updated 25 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಮೈಸೂರು: ಪಾದಚಾರಿ ಮಾರ್ಗದಲ್ಲೇ ವಿದ್ಯುತ್‌ ಪರಿವರ್ತಕ (ಟಿ.ಸಿ.)ಗಳು, ಅದರ ಪಕ್ಕದಲ್ಲೇ ತಳ್ಳುಗಾಡಿಗಳನ್ನು ಇಟ್ಟುಕೊಂಡು ನಡೆಯುವ ವ್ಯಾಪಾರ. ಸಮೀಪದಲ್ಲೇ ಆಟವಾಡುತ್ತಿರುವ ಮಕ್ಕಳು. ಕೆಲವು ಕಡೆ ಟಿ.ಸಿ.ಗಳಿಗೆ ಹಬ್ಬಿರುವ ಬಳ್ಳಿಗಳು. ಇನ್ನು ಕೆಲವೆಡೆ ಅಪಾಯಕಾರಿ ಸ್ಥಿತಿಯಲ್ಲಿರುವ ಬೀದಿ ದೀಪಗಳ ಸ್ವಿಚ್‌ಬೋರ್ಡ್‌ಗಳು...

ಇವು ಸ್ವಚ್ಛನಗರ ಮೈಸೂರಿನ ಪಾದಚಾರಿ ಮಾರ್ಗಗಳಲ್ಲಿ, ಜನವಸತಿ ಬಡಾವಣೆಗಳಲ್ಲಿ ಕಂಡು ಬರುವ ಸ್ಥಿತಿ.

ನಗರದ ಬಹು ತೇಕ ಕಡೆಗಳಲ್ಲಿ ಇರುವ ವಿದ್ಯುತ್‌ ಪರಿವರ್ತಕ ಗಳಿಗೆ ರಕ್ಷಣೆಯೇ ಇಲ್ಲ. ಕೆಲವು ಕಡೆ ಅವುಗಳ ಸುತ್ತ ಹಾಕಿರುವ ಬೇಲಿಯೂ ಮುರಿದುಬಿದ್ದಿದೆ. ಮತ್ತೆ ಕೆಲವೆಡೆ ರಕ್ಷಣಾ ಬೇಲಿಯೇ ಇಲ್ಲ. ಅವುಗಳಲ್ಲಿ ಅಳವಡಿಸಿರುವ ಸ್ವಿಚ್‌ಗಳು, ವೈರ್‌ ನೆಲ ಮುಟ್ಟುತ್ತಿವೆ. ವಿದ್ಯುತ್‌ ಪರಿ ವರ್ತಕಗಳ ಆಸುಪಾಸಲ್ಲಿ ಕಸ ಸುರಿಯಲಾಗುತ್ತಿದೆ.

ಎನ್‌.ಆರ್‌.ಮೊಹ ಲ್ಲಾದಲ್ಲಂತೂ ವಿದ್ಯುತ್‌ ಪರಿವರ್ತಕದ ಬುಡದಲ್ಲೇ ಕಸದ ಡಬ್ಬಗಳನ್ನು ಇರಿಸ ಲಾಗಿದೆ. ಡಬ್ಬಗಳಲ್ಲಿ ಕಸ ತುಂಬಿ ತುಳುಕಿ ಅಲ್ಲೆಲ್ಲ ಚೆಲ್ಲಪಿಲ್ಲಿಯಾಗಿ ಬಿದ್ದಿರುತ್ತವೆ. ಅವುಗಳನ್ನು ಹಸುಗಳು, ಬೀದಿನಾಯಿಗಳು.

ಕೆಲವು ಕಡೆ ಕಸ ವಿಲೇವಾರಿ ಮಾಡದೇ ಅಲ್ಲಿಯೇ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ವಿದ್ಯುತ್ ವೈರ್‌ಗಳು ಸುಡುವ ಅಪಾಯವಿದೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ ಎನ್ನುವುದು ಎನ್‌.ಆರ್‌.ಮೊಹಲ್ಲಾದ ವಿಕಾಸ್‌ ಕುಮಾರ್‌ ಅವರ ಆತಂಕ.

ನಗರದ ಕೆಲವು ಶಾಲೆಗಳ ಅಕ್ಕಪಕ್ಕದಲ್ಲಿ ಪರಿವರ್ತಕಗಳಿದ್ದು, ಮಕ್ಕಳನ್ನು ಆ ಕಡೆ ತೆರಳದಂತೆ ಶಿಕ್ಷಕರು ಎಚ್ಚರಿಸಬೇಕಾದ ಸ್ಥಿತಿಯೂ ಇದೆ‌. ಅರಿವಿಲ್ಲದೆ ವೈರ್ ಮುಟ್ಟಿದರೆ ಆಘಾತಕ್ಕೆ ಒಳಗಾಗುವ ಸಾಧ್ಯತೆಯೂ ಇದೆ.

ಆವರಿಸಿದ ಬಳ್ಳಿ, ಪೊದೆ: ಜಯನಗರದ ಚಿಕ್ಕ ಹರದನಹಳ್ಳಿ ಬಳಿ ವಿದ್ಯುತ್ ಪರಿವರ್ತಕವನ್ನು ಬಳ್ಳಿ ಆವರಿಸಿದೆ. ಪಕ್ಕದಲ್ಲೇ ಪೊದೆಗಳೂ ಇವೆ. ಮಳೆ ಬಂದಾಗ ವೈರ್‌ ಗಿಡಗಂಟಿಗಳಿಗೆ ಸ್ಪರ್ಶಿಸಿ, ಅದನ್ನು ಪಾದಚಾರಿಗಳು ಸ್ಪರ್ಶಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಬಳ್ಳಿ, ಗಿಡಗಳ ಮೂಲಕ ಶಾರ್ಟ್ ಸರ್ಕ್ಯೂಟ್ ಆಗುವ ಸಂಭವವೂ ಅಧಿಕವಾಗಿದೆ.

ಅವೈಜ್ಞಾನಿಕ ಅಳವಡಿಕೆ: ವಿದ್ಯುತ್ ಪರಿವರ್ತಕಗಳನ್ನು ಅವೈಜ್ಞಾನಿಕವಾಗಿ ಅಳವಡಿಸಲಾಗಿದೆ.

ಪಾದಚಾರಿ ಮಾರ್ಗದಲ್ಲಿ ಅಳವಡಿಸಿರುವುದು ಸರಿಯಲ್ಲ. ಇದರಿಂದಾಗಿ ಪಾದಚಾರಿಗಳ ಸಂಚಾ ರಕ್ಕೂ ಅಡ್ಡಿಯಾಗುತ್ತಿದೆ. ಕೆಲವು ಕಡೆಗಳಲ್ಲಂತೂ ಟಿ.ಸಿ ಅಳವಡಿಸಿರುವ ಜಾಗದಲ್ಲಿ ನಡೆದಾಡಲೂ ಸಾಧ್ಯವಾಗುತ್ತಿಲ್ಲ. ರಸ್ತೆಗೆ ಇಳಿದೇ ಸಾಗಬೇಕಾದ ಸ್ಥಿತಿ ಇದೆ. ಇದರಿಂದಾಗಿ ವಾಹನ ದಟ್ಟಣೆ ಇರುವ ಕಡೆ ರಸ್ತೆ ಬದಿ ನಡೆದಾಡುವುದೂ ಅಪಾಯಕಾರಿ ಎಂಬಂತಾಗಿದೆ. ಕೆಲವೆಡೆ ವಿದ್ಯುತ್‌ ಪರಿವರ್ತಕಗಳ ಸುತ್ತ ಎಚ್ಚರಿಕೆ ಫಲಕಗಳೂ ಇಲ್ಲ. ಅವುಗಳ ಬಳಿ ಸಾರ್ವಜನಿಕರು ಬಾರದಂತೆ ಎಚ್ಚರಿಕೆ ಫಲಕ ಅಳವಡಿಸಬೇಕು ಎನ್ನುವುದು ರಾಮಕೃಷ್ಣನಗರದ ಮಾಲಾ ಅವರ ಒತ್ತಾಯ.

ಸೆಸ್ಕ್‌ ಎಚ್ಚೆತ್ತುಕೊಳ್ಳಲಿ: ಸೆಸ್ಕ್‌ ಸಿಬ್ಬಂದಿ ವಿದ್ಯುತ್ ಪರಿವರ್ತಕ ಅಳವಡಿಸುವ ವೇಳೆ ತಂತಿ ಬೇಲಿ ಅಳವಡಿಸುವುದು ಮರೆತಂತಿದೆ. ಹೀಗಾಗಿ ಅಪಾಯ ಸಂಭವಿಸುವ ಮುನ್ನವೇ ಎಚ್ಚೆತ್ತು ಕೊಂಡು ನಗರದಲ್ಲಿರುವ ಪರಿವರ್ತಕ ಗಳಿಗೆ ತಂತಿ ಬೇಲಿ ಅಳವಡಿಸಿ ಅಪಾಯ ತಪ್ಪಿಸಬೇಕು ಎಂದು ಖಾಸಗಿ ಸಂಸ್ಥೆ ಉದ್ಯೋಗಿ ಕೆ.ಎನ್‌. ವಿಜೇತ್‌ ಆಗ್ರಹಿಸುತ್ತಾರೆ.

ನಗರದ ಭೋಗಾದಿ ಟೋಲ್‌ ಗೇಟ್‌ನಿಂದ ಬಿಸಿಲು ಮಾರಮ್ಮ ದೇವಸ್ಥಾನ ರಸ್ತೆಯ ವಾಗ್ದೇವಿ ನಗರ ಸಂಪರ್ಕಿಸುವ ರಸ್ತೆ ಬಳಿ ಇರುವ ವಿದ್ಯುತ್‌ ಪರಿವರ್ತಕವೂ ಅಪಾಯಕಾರಿಯಾಗಿದೆ. ಪಾದಚಾರಿ ಮಾರ್ಗದಲ್ಲೇ ಇರುವ ಈ ಟಿ.ಸಿ.ಯ ಬಳಿ ಹಳ್ಳವೂ ಇದ್ದು, ಸಾರ್ವಜನಿಕರು ನಡೆದಾಡಲು ತೊಡಕಾಗುತ್ತಿದೆ. ರಮಾವಿಲಾಸ ರಸ್ತೆಯ ಬನುಮಯ್ಯ ಕಾಲೇಜಿನ ಹಿಂಭಾಗದಲ್ಲಿರುವ ವಿದ್ಯುತ್‌ ಪರಿವರ್ತಕದ ಸುತ್ತ ಅಳವಡಿಸಿರುವ ಬೇಲಿಯೂ ಶಿಥಿಲಗೊಂಡಿದೆ.

ಜಗನ್ಮೋಹನ ಅರಮನೆಯ ಬಳಿಯಲ್ಲಿ ಇರುವ ಟಿ.ಸಿ. ಚಿತ್ರಣವೂ ಇದಕ್ಕಿಂತ ಭಿನ್ನವಾಗಿಲ್ಲ. ಎನ್‌ಆರ್‌ ಮೊಹಲ್ಲಾದ ರಾಜೀವನಗರ ಮುಖ್ಯರಸ್ತೆ ಯಲ್ಲಿರುವ ವಿದ್ಯುತ್‌ ಪರಿವರ್ತಕದ ಬಳಿಯೂ ಇದೇ ಸ್ಥಿತಿ ಇದೆ.

ಚಾಮರಾಜ ಮೊಹಲ್ಲಾದ ಎಂ.ಎನ್.ಜೋಯಿಸ್‌ ಮುಖ್ಯ ರಸ್ತೆಯ ಬಳಿ, ಲಷ್ಕರ್‌ ಮೊಹಲ್ಲಾದಲ್ಲಿ, ಎನ್‌.ಆರ್‌.ಮೊಹಲ್ಲಾದ ಪಾರ್ಕ್‌ ಬಳಿ, ಸೇಂಟ್‌ ಮೇರಿಸ್‌ ರಸ್ತೆ ಬಳಿ, ಜಯನಗರದ ಚಿಕ್ಕ ಹರದನಹಳ್ಳಿ ಬಳಿ, ಅರವಿಂದ ನಗರ, ಡಿವಿಸಿ ಬಡಾವಣೆ, ರಾಮಕೃಷ್ಣನಗರ, ಮಲೈ ಮಹದೇಶ್ವರ ಸ್ವಾಮಿ ದೇವಸ್ಥಾನ ರಸ್ತೆಯ ಬಳಿ ಶಿಥಿಲ, ಅಪಾಯಕಾರಿ ವಿದ್ಯುತ್‌ ಪರಿವರ್ತಕ, ಅಪಾಯಕಾರಿ ಸ್ವಿಚ್‌ ಬಾಕ್ಸ್‌, ಫ್ಯೂಸ್‌ ಬಾಕ್ಸ್‌ಗಳಿವೆ.

ವಿದ್ಯುತ್‌ ಅವಘಡಗಳನ್ನು ತಪ್ಪಿಸಲು ಅಧುನಿಕ ವಿಧಾನ ಅನುಸರಿಸಬೇಕು. ವಿದ್ಯುತ್‌ ಪರಿವರ್ತಕಗಳ ಸುತ್ತ ಬೇಲಿ ಅಳವಡಿಸಬೇಕು. ಅನಾಹುತ ಸಂಭವಿಸುವ ಮುನ್ನವೇ ಕ್ರಮ ಕೈಗೊಳ್ಳ ಬೇಕು ಎನ್ನುತ್ತಾರೆ ಸರಸ್ವತಿಪುರಂ ನಿವಾಸಿ ಜಯೇಶ್‌ ಕುಮಾರ್‌.

ವಿದ್ಯುತ್‌ ಕಂಬದ ಬಳಿಯೇ ಕಸ ಎಸೆಯುತ್ತಿದ್ದಾರೆ. ಕಸ ಸ್ವಚ್ಛಗೊಳಿಸಲು ಬರುವ ಪೌರ ಕಾರ್ಮಿಕರಿಗೂ ಇದರಿಂದ ಅಪಾಯ ಕಾದಿದೆ. ಪೌರ ಕಾರ್ಮಿಕರು ಇಲ್ಲಿಯ ನಿವಾಸಿಗಳಿಗೆ ತಿಳಿವಳಿಕೆ ನೀಡಿದರೂ ಪ್ರಯೋಜನವಾಗಿಲ್ಲ. ಇಲ್ಲಿಯ ನಿವಾಸಿಗಳು ಸ್ವಚ್ಛತೆಗೆ ಸಹಕ ರಿಸುತ್ತಿಲ್ಲ ಎನ್ನುವ ಬೇಸರವನ್ನೂ ಅವರ ವ್ಯಕ್ತಪಡಿಸುತ್ತಾರೆ.

ಮಕ್ಕಳು ಓಡಾಡುವ ಪ್ರದೇಶವನ್ನು ಸೂಕ್ಷ್ಮವಲಯ ಎಂದು ಗುರುತಿಸಿ ಅಧಿಕಾರಿಗಳು ಬೇಲಿ ನಿರ್ಮಿಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬುದು ಹಲವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT