ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ: ಸಚಿವ ಸೋಮಶೇಖರ್

ಗಣರಾಜ್ಯೋತ್ಸವ: ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್
Last Updated 26 ಜನವರಿ 2023, 12:43 IST
ಅಕ್ಷರ ಗಾತ್ರ

ಮೈಸೂರು: ‘ಜಿಲ್ಲೆಯಲ್ಲಿ ಹೆಚ್ಚು ಒತ್ತಡವಿರುವ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಜಿಲ್ಲಾಡಳಿತದಿಂದ ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ನಗರಗಳ ವ್ಯಾಪ್ತಿಯ ಹೆಚ್ಚು ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಸಮಗ್ರ ಆರೋಗ್ಯ ಸೇವೆ ನೀಡಲು 2022-23ನೇ ಸಾಲಿನಲ್ಲಿ ಜಿಲ್ಲೆಗೆ 6 ನಮ್ಮ ಕ್ಲಿನಿಕ್‌ಗಳು ಮಂಜೂರಾಗಿದ್ದು, 5 ಕಾರ್ಯಾರಂಭಿಸಿವೆ. ಇನ್ನೊಂದರ ಸ್ಥಾಪನೆ ಪ್ರಗತಿಯಲ್ಲಿದೆ. ಅಮೃತ ಆರೋಗ್ಯ ಯೋಜನೆಯಡಿ ಜಿಲ್ಲೆಯ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಲಭ್ಯವನ್ನು ತಲಾ ₹ 20 ಲಕ್ಷ ವೆಚ್ಚದಲ್ಲಿ ಉನ್ನತೀಕರಿಸಲಾಗಿದೆ’ ಎಂದರು.

‘ಬೆಂಗಳೂರು–ಮೈಸೂರು ದಶಪಥ ನಿರ್ಮಾಣ ಕಾಮಗಾರಿ ಚುರುಕಾಗಿ ನಡೆದಿದೆ. ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು ನಗರಗಳ ಬೈಪಾಸ್ ಕಾಮಗಾರಿ ಮುಕ್ತಾಯಗೊಂಡಿದೆ. ಈ ಪಥ ಸಂಪೂರ್ಣ ಸಿದ್ಧಗೊಂಡರೆ ಬೆಂಗಳೂರಿನಿಂದ ಮೈಸೂರನ್ನು ಕೇವಲ 90 ನಿಮಿಷಗಳಲ್ಲಿ ತಲುಪಬಹುದಾಗಿದೆ’ ಎಂದು ಹೇಳಿದರು.

‘ಉದ್ಯೋಗ ಖಾತ್ರಿ ಯೋಜನೆಯಲ್ಲಿ 401 ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಈಗಾಗಲೇ 190 ಕೆರೆಗಳು ಅಭಿವೃದ್ಧಿಗೊಂಡಿವೆ. ಉಳಿದವುಗಳನ್ನು ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಸ್ವಚ್ಛ ಭಾರತ್ ಮಿಷನ್‌ನಲ್ಲಿ 3,95,807 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈ ವರ್ಷ 4,373 ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿದೆ’ ಎಂದರು.

‘2022-23 ನೇ ಸಾಲಿನಲ್ಲಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಗೆ 265 ವಿವೇಕ ಶಾಲಾ ಕೊಠಡಿಗಳು ಮಂಜೂರಾಗಿದ್ದು, ತಲಾ ₹ 15 ಲಕ್ಷದಂತೆ ಒಟ್ಟು ₹ 39.75 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. 232 ಶಾಲೆಗಳಿಗೆ ಶೌಚಾಲಯ ನಿರ್ಮಾಣಕ್ಕಾಗಿ ತಲಾ ₹5.20 ಲಕ್ಷ ಬಿಡುಗಡೆ ಮಾಡಿದ್ದು, ಕಾಮಗಾರಿ ಪ್ರಗತಿಯಲ್ಲಿವೆ’ ಎಂದು ಹೇಳಿದರು.

‘ಸಂವಿಧಾನಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದಂತೆ ನ್ಯಾಯವೆಂದರೆ ಸ್ವಾತಂತ್ರ‍್ಯ, ಸಮಾನತೆ ಮತ್ತು ಸೌಹಾರ್ದ. ಅವರ ಈ ನ್ಯಾಯದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಧ್ಯೇಯ ನಮ್ಮದು. ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರುಗಳು ದೃಢವಾಗುವುದು ಇದರಿಂದಲೇ ಎಂಬ ನಂಬಿಕೆಯೂ ನಮ್ಮದು’ ಎಂದು ತಿಳಿಸಿದರು.

ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ ಯೋಗೇಶ್, ವಿಧಾನಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಸಿ.ಎನ್.ಮಂಜೇಗೌಡ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ, ಮೈಲ್ಯಾಕ್ ಅಧ್ಯಕ್ಷ ಆರ್.ರಘು ಕೌಟಿಲ್ಯ, ‘ಮುಡಾ’ ಅಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್, ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಂ.ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ, ನಗರ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ, ಎಸ್ಪಿ ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಇದ್ದರು.

ಗಮನಸೆಳೆದ ಪಥಸಂಚಲನ

ಪೊಲೀಸ್ ತುಕಡಿಗಳು ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳ ತಂಡದ ಪಥಸಂಚಲನ ಗಮನಸೆಳೆಯಿತು. ಉಸ್ತುವಾರಿ ಸಚಿವರು ತೆರೆದ ಜೀಪಿನಲ್ಲಿ ಪಥಸಂಚಲನ ವೀಕ್ಷಿಸಿ, ಗೌರವವಂದನೆ ಸ್ವೀಕರಿಸಿದರು.

ಪ್ರಧಾನ ದಳಪತಿ ಅಶ್ವರೋಹಿದಳದ ಎಸಿಪಿ ಕೆ.ಎನ್.ಸುರೇಶ್ ನೇತೃತ್ವದಲ್ಲಿ ಪಥಸಂಚಲನ ನಡೆಯಿತು.

ಬಹುಮಾನ ವಿತರಣೆ: ಸಶಸ್ತ್ರ ಪಡೆ ವಿಭಾಗ- ಕೆಎಸ್‌ಆರ್‌ಪಿ ತಂಡ ರುದ್ರಮುನಿ (ಪ್ರಥಮ), ದೇವರಾಜ ಉಪ ವಿಭಾಗ ಪ್ರವೀಣ್‌ಕುಮಾರ್ (ದ್ವಿತೀಯ) ಹಾಗೂ ಕೆಎಸ್‌ಆರ್‌ಪಿ ಚೇತನ್ (ತೃತೀಯ). ಸಶಸ್ತ್ರರಹಿತ ವಿಭಾಗ- ಎನ್‌ಸಿಸಿ ವಾಯುಸೇನೆ ಟಿ.ವಿ. ಖುಷಿ (ಪ್ರಥಮ), ಎನ್‌ಸಿಸಿ ನೌಕದಳ ಕೆ.ಆರ್.ಅನಿರುದ್ಧ (ದ್ವಿತೀಯ) ಹಾಗೂ ಎನ್‌ಸಿಸಿ ಭೂಸೇನೆ ಲೇಖನ (ತೃತೀಯ). ಶಾಲಾ ವಿಭಾಗ- ಜವಾಹರ ನವೋದಯ ಬಾಲಕಿಯರ ತಂಡದ ಗೀತಾ (ಪ್ರಥಮ), ಭಾರತೀಯ ಸೇವಾ ದಳ ಬಾಲಕಿಯರ ತಂಡದ ಅಶ್ವಿನಿ(ದ್ವಿತೀಯ) ಹಾಗೂ ಅಮೃತ ವಿದ್ಯಾಲಯದ ಎಂ.ಪ್ರತೀಕ್ಷಾ (ತೃತೀಯ) ಬಹುಮಾನ ಗಳಿಸಿದರು.

ಡಿಎಆರ್, ಕೆಎಸ್‌ಆರ್‌ಪಿ ಮತ್ತು ಸಿಎಆರ್ ಪೊಲೀಸ್ ಬ್ಯಾಂಡ್‌ಗಳಿಗೆ ವಿಶೇಷ ಬಹುಮಾನ ನೀಡಲಾಯಿತು.

ಗಮನಸೆಳೆದ ನೃತ್ಯ ಪ್ರದರ್ಶನ

ಬಳಿಕ ವಿವಿಧ ಶಾಲೆಗಳ ನೂರಾರು ಮಕ್ಕಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು. ಸೇಂಟ್ ಥಾಮಸ್ ಶಾಲೆಯ 500 ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ‘ವೀರ ಯೋಧರಿಗೆ ಭಾವ ನಮನ’ ನೃತ್ಯ ಗಮನಸೆಳೆಯಿತು.

ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಮೈದಾನದ ಮುಕ್ಕಾಲು ಭಾಗ ಖಾಲಿ ಇತ್ತು. ಮಾಧ್ಯಮ ಪ್ರತಿನಿಧಿಗಳ ಗ್ಯಾಲರಿ ಇಲ್ಲದಿದ್ದರಿಂದ ಪತ್ರಕರ್ತರು ಬಿಸಿಲಿನಲ್ಲೇ ನಿಲ್ಲಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT