ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಒ: ಮಧ್ಯವರ್ತಿಗಳದ್ದೇ ಕಾರುಬಾರು

ವಾಹನ ಚಾಲನಾ ಪರವಾನಗಿ: ಲಂಚ ನೀಡದೇ ಸಿಗದು– ಅರ್ಜಿದಾರರ ಅಳಲು
Last Updated 22 ಮಾರ್ಚ್ 2023, 6:11 IST
ಅಕ್ಷರ ಗಾತ್ರ

ಮೈಸೂರು: ರಾಜೀವ್‌ನಗರದ ರಿಂಗ್ ರಸ್ತೆಯ ಪ್ರಾದೇಶಿಕ ಸಾರಿಗೆ ಕಚೇರಿ ಎದುರು ಮಧ್ಯವರ್ತಿಗಳದ್ದೇ ಕಾರುಬಾರು. ವಾಹನ ಓಡಿಸುವ ಕನಸು ಹೊಂದಿದವರು ಚಾಲನಾ ಪರವಾನಗಿ ಹೊಂದಲು ಅವರನ್ನೇ ಅವಲಂಬಿಸ ಬೇಕು. ಇಲ್ಲದಿದ್ದರೆ ಪರವಾನಗಿ ಸಿಗಲು ತಿಂಗಳುಗಟ್ಟಲೇ ಕಾಯಬೇಕು. ಸ್ವಂತ ವಾಹನ ಓಡಿಸುವ ಕನಸು ಕಮರುವುದೂ ಖಚಿತ!

ಕಚೇರಿಯ ಎದುರಿನ ಮರಗಳ ಕೆಳಗೆ ಟೇಬಲ್‌ ಹಾಕಿಕೊಂಡು, ಇಲ್ಲವೇ ಪೆಟ್ಟಿಗೆ ಅಂಗಡಿಗಳನ್ನು ತೆರೆದ ಹತ್ತಾರು ಮಧ್ಯವರ್ತಿಗಳು, ಅರ್ಜಿದಾರರಿಗಾಗಿಯೇ ಕಾದು ಕುಳಿತಿರುತ್ತಾರೆ.

ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ, ವಾಹನ ಚಾಲನೆ ಕಲಿಕಾ ಪರವಾನಗಿ (ಎಲ್‌ಎಲ್‌ಆರ್‌) ಪಡೆದು ಕಾದರೂ ಅರ್ಜಿದಾರರಿಗೆ ತಡವಾಗಿಯೇ ಪರೀಕ್ಷೆ ಸಮಯ (ಸ್ಲಾಟ್‌) ಸಿಗುತ್ತದೆ. ಅನುತ್ತೀರ್ಣಗೊಂಡರೆ, ಇಲ್ಲವೇ, ಎಲ್‌ಎಲ್‌ಆರ್‌ ಪಡೆದು 6 ತಿಂಗಳಾದರೆ ಮತ್ತೆ ಮರು ಅರ್ಜಿ ಹಾಕಲೇಬೇಕಾಗುತ್ತದೆ.

‘ಮಧ್ಯವರ್ತಿಗಳ ಮೂಲಕ ಹೋದರೆ ‘ಸ್ಲಾಟ್‌’ ಬೇಗನೆ ಸಿಗುತ್ತದೆ. ಪರೀಕ್ಷೆಯಲ್ಲಿ ನಿಯಮ ಉಲ್ಲಂಘಿಸಿ ದರೂ ಅದು ಲೈಸನ್ಸ್‌ ಹೊಂದಲು ಗಣನೆಗೆ ಬಾರದು’ ಎಂದು ಅರ್ಜಿದಾರರೊಬ್ಬರು ದೂರಿದರು.

ಪರವಾನಗಿ ಪರೀಕ್ಷೆಯಲ್ಲಿ ಪಾಸಾಗಲು ವಿವಿಧ ಲಂಚದ ಪ್ಯಾಕೇಜ್‌ಗಳು ಇವೆ. ಬೈಕ್‌ ಹಾಗೂ ಕಾರು ಚಾಲನಾ ಪರವಾನಗಿಗಳೆರಡನ್ನೂ ಪಡೆಯಲು ₹ 5 ಸಾವಿರ, ಕೇವಲ ಕಾರು ಚಾಲನಾ ಪರವಾನಗಿಗೆ ₹ 3,800ರಿಂದ ₹4 ಸಾವಿರ ನೀಡಬೇಕು.

ಮಧ್ಯವರ್ತಿಗಳು ನೇರವಾಗಿಯೇ ಹಣವನ್ನು ಕೇಳುತ್ತಿದ್ದು, ಪರೀಕ್ಷಾ ಅಂಗಳದ ಟ್ರ್ಯಾಕ್‌ನಲ್ಲಿ ಚಾಲನಾ ತರಬೇತಿ ನೀಡುವ ಶಾಲೆಗಳ (ಡ್ರೈವಿಂಗ್‌ ಸ್ಕೂಲ್) ತರಬೇತುದಾರರೇ ಇದ್ದು, ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ಸ್ಟೇರಿಂಗ್‌ ಮೇಲೆ ಕೈಹಾಕಿ ಚಾಲನೆ ಮಾಡುತ್ತಿರುವುದು ಕಂಡುಬಂತು. ನಿಯಮಾವಳಿಯಲ್ಲಿ ಇದಕ್ಕೆ ಅವಕಾಶವಿಲ್ಲ.

ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆನ್‌ಲೈನ್‌ ಮೂಲಕ ಚಾಲನಾ ಪರವಾನಗಿ ಪಡೆಯುವ ಸೇವೆಯನ್ನು ಆರಂಭಿಸಿದ್ದರೂ, ಹಾವಳಿ ತಪ್ಪಿಲ್ಲ. ಕಚೇರಿ ಎದುರೇ ವ್ಯವಹಾರ ಕುದುರಿಸುವ ದೃಶ್ಯಗಳು ಇಲ್ಲಿ ಸಾಮಾನ್ಯ. ಜೆರಾಕ್ಸ್‌ ಅಂಗಡಿಗಳು, ಸ್ಕ್ಯಾನಿಂಗ್ ಮಾಡುವ ಪರಿಕರ
ಇಟ್ಟುಕೊಂಡಿದ್ದರೂ ಅವರ ಕೆಲಸ, ಜನರಿಂದ ಹಣ ಪಡೆದು ಪರವಾನಗಿಯನ್ನು ಸುಲಭವಾಗಿ ದಕ್ಕಿಸಿಕೊಡುವುದು.

‘ಆನ್‌ಲೈನ್‌ನಲ್ಲೇ ಎಲ್‌ಎಲ್‌ಆರ್‌ ಪಡೆದು ಚಾಲನೆ ತರಬೇತಿ ಪಡೆದು ಪರೀಕ್ಷೆಗೆ ಹೋದಾಗ ಟ್ರ್ಯಾಕ್‌ನಲ್ಲಿ ಹಿಮ್ಮುಖ ಚಾಲನೆಗೆ 10 ಸೆಕೆಂಡ್‌ ತಡವಾಯಿತೆಂದು ಅನುತ್ತೀರ್ಣಗೊಂಡೆ. ಆದರೆ, ನನ್ನಂತೆಯೇ ತಪ್ಪು ಮಾಡಿದ ಕೆಲವರು ‍ಉತ್ತೀರ್ಣರಾಗಿದ್ದರು’ ಎಂದು ಅರ್ಜಿದಾರ ವೇಣುಗೋಪಾಲ್ ‘ಪ್ರಜಾವಾಣಿ’ಗೆ ಹೇಳಿದರು.

‘ಡ್ರೈವಿಂಗ್‌ ಸ್ಕೂಲ್‌ಗಳ ಮೂಲಕ ಪರೀಕ್ಷೆಗೆಂದು ಹೋದವರು ಸುಲಭವಾಗಿ ಪಾಸಾಗಿ ‘ಡಿಎಲ್’ ತೆಗೆದುಕೊಳ್ಳುತ್ತಾರೆ. ನನ್ನ ತಪ್ಪಿದ್ದರಿಂದ ಮರು ಪರೀಕ್ಷೆಗೆ ಅರ್ಜಿ ಸಲ್ಲಿಸಿದರೆ ಪರೀಕ್ಷೆಗೆ ಒಂದು ತಿಂಗಳು ಸ್ಲಾಟ್‌ ಸಿಗುತ್ತಿಲ್ಲ. ಅಲ್ಲಿಗೆ ಎಲ್‌ಎಲ್‌ಆರ್‌ ಅವಧಿಯೂ ಮುಗಿಯಲಿದ್ದು, ಮತ್ತೆ ಎಲ್ಲ ಪ್ರಕ್ರಿಯೆಯನ್ನು ಹೊಸದಾಗಿ ಆರಂಭಿಸಬೇಕು’ ಎಂದು ಅಳಲು ತೋಡಿಕೊಂಡರು.

‘ಈ ಬಗ್ಗೆ ಮಧ್ಯವರ್ತಿ ಕಡೆ ವಿಚಾರಿಸಿದಾಗ, ‘ತಲೆ ಕೆಡಿಸಿಕೊಳ್ಳಬೇಡಿ, ಒಂದು ತಿಂಗಳಲ್ಲೇ ನಿಮಗೆ ಡಿಎಲ್‌ ಸಿಗುತ್ತದೆ. ಎಲ್ಲ ಶುಲ್ಕ ಕಟ್ಟಿರುವುದರಿಂದ ₹ 2 ಸಾವಿರ ಕೊಡಿ’ ಎನ್ನುತ್ತಾರೆ. ಲಂಚ ಕೊಡುವುದಿಲ್ಲ ಎಂದು ನಿರ್ಧಾರ ಮಾಡಿದ್ದೇನೆ. ಮರು ಪರೀಕ್ಷೆಗೆ ₹ 300 ಶುಲ್ಕ ಕಟ್ಟಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT