ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗದದಲ್ಲೇ ಉಳಿದ ‘ಮುಡಾ’ ಯೋಜನೆ!

Published 29 ಫೆಬ್ರುವರಿ 2024, 6:20 IST
Last Updated 29 ಫೆಬ್ರುವರಿ 2024, 6:20 IST
ಅಕ್ಷರ ಗಾತ್ರ

ಮೈಸೂರು: ನಗರ ಯೋಜನೆಗಾಗಿಯೇ ಸ್ಥಾಪಿತವಾದ ದೇಶದ 2ನೇ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸಿರುವ ‘ಮುಡಾ’ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ)ದಿಂದ 2023–24ನೇ ಸಾಲಿನಲ್ಲಿ ಮಂಡಿಸಲಾಗಿದ್ದ ಬಜೆಟ್‌ ಕಾಗದದಲ್ಲೇ ಉಳಿದಿದೆ. ಹಲವು ಹಾಗೂ ಪ್ರಮುಖ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿಲ್ಲ.

ಹೋದ ವರ್ಷ ಮಾರ್ಚ್‌ 13ರಂದು ಆಗಿನ ಅಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್‌ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್‌ ₹ 4.58 ಕೋಟಿ ಉಳಿತಾಯ ಬಜೆಟ್‌ ಮಂಡಿಸಿದ್ದರು. ದೈನಂದಿನ ಆಡಳಿತ ನಿರ್ವಹಣೆಗೆ ಸಂಬಂಧಿಸಿದ ಕೆಲಸಗಳಷ್ಟೆ ನಡೆದಿವೆಯೇ ಹೊರತು, ವಿಶೇಷ ಘೋಷಣೆಗಳನ್ನು ಕಾರ್ಯಗತಗೊಳಿಸುವ ಕಾರ್ಯವಾಗಿಲ್ಲ.

ಹಳೆಯ ಜಿಲ್ಲಾಧಿಕಾರಿ ಕಚೇರಿ ಸಮೀಪ ಹಾಗೂ ಎನ್‌ಸಿಸಿ ಎದುರು ನಿರ್ಮಿಸುತ್ತಿರುವ ಯುದ್ಧ ಸ್ಮಾರಕದ ಸೌಂದರ್ಯೀಕರಣಕ್ಕೆ ₹ 1.50 ಕೋಟಿ ನೀಡಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಪೂರ್ಣಗೊಳಿಸುವ ಕೆಲಸ ಈವರೆಗೂ ನಡೆದಿಲ್ಲ!

ವಾಣಿಜ್ಯ ಸಂಕೀರ್ಣ ಏನಾಯಿತು?:

ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ₹ 10 ಕೋಟಿ ನಿಗದಿಪಡಿಸಲಾಗಿತ್ತು. ಇಂಥದೊಂದು ಕಾಮಗಾರಿ ಎಲ್ಲಿಯೂ ನಡೆದೇ ಇಲ್ಲ. ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ಹಾಗೂ ವ್ಯಾಪ್ತಿಯ ಬಡಾವಣೆಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣ ಘಟಕ ಅಭಿವೃದ್ಧಿಪಡಿಸಲು ಹಾಗೂ ಘಟಕಗಳ ಸಾಮರ್ಥ್ಯ ವೃದ್ಧಿಸಲು ಯೋಜನಾ ವರದಿ ಸಿದ್ಧಪಡಿಸಿ ಅನುಷ್ಠಾನಗೊಳಿಸಲು ₹ 10 ಕೋಟಿ ಕಾಯ್ದಿರಿಸಲಾಗಿತ್ತು. ಈ ವಿಷಯದಲ್ಲೂ ಯಾವುದೇ ಪ್ರಗತಿಯಾಗಿಲ್ಲ. ಉದ್ಯಾನಗಳ ಅಭಿವೃದ್ಧಿಗೆ ₹ 5 ಕೋಟಿ ಒದಗಿಸಲಾಗಿತ್ತು. ಆದರೆ, ಯಾವ ಉದ್ಯಾನ ಅಭಿವೃದ್ಧಿಪಡಿಸಲಾಗಿದೆ ಎಂಬುದರ ಮಾಹಿತಿಯೇ ಇಲ್ಲ.

ಮೈಸೂರು ತಾಲ್ಲೂಕಿನ ಬೊಮ್ಮೇನಹಳ್ಳಿ ಗ್ರಾಮದ ಸರ್ವೇ ನಂ.120/2, 121, 122, 123/2, 126, 127, 128/1,2, 130ರಿಂದ 158ರ ಪ್ರದೇಶದಲ್ಲಿ ಹಾಗೂ ಇತರ ಜಮೀನುಗಳ ಮಾಲೀಕರು ಪ್ರಾಧಿಕಾರದ ಯೋಜನೆಗೆ ಆಸಕ್ತಿ ತೋರಿದ್ದಾರೆ. ಸಹಭಾಗಿತ್ವದ ಯೋಜನೆಯಲ್ಲಿ 50:50 ಅನು‍ಪಾತದಡಿ ವಸತಿ ಬಡಾವಣೆ ರಚಿಸಲು ಉದ್ದೇಶಿಸಲಾಗಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿತ್ತು. ಇದು ಕೂಡ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಪ್ರಾಧಿಕಾರದಿಂದ ನಿವೇಶನ ಬಯಸಿ ಅರ್ಜಿ ಸಲ್ಲಿಸಿರುವ ಸಾವಿರಾರು ಮಂದಿ ಕಾಯುವುದು ಈ ವರ್ಷವೂ ಮುಂದುವರಿದಿದೆ. ಆರ್‌.ಟಿ.ನಗರದ ನಂತರ ಬಡಾವಣೆ ಅಭಿವೃದ್ಧಿಪಡಿಸಿ ನಿವೇಶನ ಹಂಚಿಕೆ ಮಾಡುವುದು ಮುಡಾದಿಂದ ಸಾಧ್ಯವಾಗಿಲ್ಲ. ಇದು ನಿವೇಶನ ಆಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ನಿವೇಶನ ವಿತರಣೆಗೆ ‘ಗ್ರಹಣ’:

‘ಮುಡಾದಿಂದ ನಿಗದಿತ ಕಾಲಾವಧಿಯಲ್ಲಿ ಬಡಾವಣೆ ನಿರ್ಮಾಣ ಕಾರ್ಯ ಮುಗಿಸಿದರೆ ಮಾತ್ರ ನಾವು ಜಮೀನು ನೀಡುತ್ತೇವೆ. ಇಲ್ಲದಿದ್ದರೆ ಹೆಚ್ಚುವರಿಯಾಗಿ ಪರಿಹಾರ ಕೊಡಬೇಕಾಗುತ್ತದೆ’ ಎಂದು ಬೊಮ್ಮೇನಹಳ್ಳಿಯ ರೈತರು ಪಟ್ಟು ಹಿಡಿದಿದ್ದಾರೆ. ‘ಕಳೆದ ಒಂದು ವರ್ಷದಿಂದ ಬಡಾವಣೆ ನಿರ್ಮಾಣಕ್ಕೆ ಜಮೀನು ಖರೀದಿಸಲಿದೆ ಎಂದು ಪ್ರಾಧಿಕಾರದಿಂದ ಹೇಳುತ್ತಲೇ ಬರಲಾಗಿದೆ. ಆದರೆ, ಈ ನಿಟ್ಟಿನಲ್ಲಿ ಯಾವುದೇ ಪ್ರಮುಖ ಬೆಳವಣಿಗೆ ನಡೆದಿಲ್ಲ. ಜಮೀನು ನೀಡುವ ನಮಗೆ, ಕೃಷಿ ಭೂಮಿಯಲ್ಲಿನ ಬೆಳೆ, ಮರ–ಗಿಡಗಳು, ಪಂಪ್‌ಸೆಟ್, ಬೋರ್‌ವೆಲ್‌ಗಳಿಗೂ ಸಮರ್ಪಕ ಪರಿಹಾರ ನೀಡಬೇಕು. ರೈತರಿಗೆ ಪರಿಹಾರವಾಗಿ ನೀಡುವ ನಿವೇಶನಗಳನ್ನು ಮುಡಾದವರೇ ಖರೀದಿಸಬೇಕು’ ಎನ್ನುವುದು ಅವರ ಒತ್ತಾಯವಾಗಿದೆ. ಇದನ್ನು ಹಿಂದಿನ ಮುಡಾ ಅಧ್ಯಕ್ಷರು–ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸ್ಪಷ್ಟಪಡಿಸಿದ್ದರು. ಈ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದರಿಂದಾಗಿ, ಬಡಾವಣೆ ನಿರ್ಮಾಣ ಕಾರ್ಯ ಕಗ್ಗಂಟಾಗಿ ಪರಿಣಮಿಸಿದೆ. ನಿವೇಶನ ವಿತರಣೆಗೆ ‘ಗ್ರಹಣ’ ಬಡಿದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್‌, ‘ಹೋದ ವರ್ಷ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಕೆಲವು ಯೋಜನೆಗಳು ಅನುಷ್ಠಾನಕ್ಕೆ ಬಂದಿವೆ. ಈ ಬಾರಿಯ ಬಜೆಟ್‌ ಮಂಡನೆಯನ್ನು ಫೆ.28ಕ್ಕೆ ನಿಗದಿಪಡಿಸಲಾಗಿತ್ತು. ಆದರೆ, ಬೆಂಗಳೂರಿನಲ್ಲಿ ವಿಧಾನಮಂಡಲ ಅಧಿವೇಶನ ಮುಂದುವರಿದಿದ್ದರಿಂದ ಮುಂದೂಡಲಾಗಿದೆ. ಶೀಘ್ರದಲ್ಲೇ ದಿನಾಂಕ ನಿಗದಿಪಡಿಸಲಾಗುವುದು’ ಎಂದು ತಿಳಿಸಿದರು.

ದೈನಂದಿನ ಆಡಳಿತವಷ್ಟೆ ನಿರ್ವಹಣೆ ನಿವೇಶನ ವಿತರಣೆಗೆ ಕ್ರಮವಾಗಿಲ್ಲ ಕೆಲವಷ್ಟೇ ಅನುಷ್ಠಾನ
ನಡೆಯದ ‘ಅದಾಲತ್‌’
ಬಿಜೆಪಿ ಸರ್ಕಾರವಿದ್ದಾಗ ಮುಡಾ ಅಧ್ಯಕ್ಷರಾಗಿ ನೇಮಕವಾಗಿದ್ದ ಯಶಸ್ವಿ ಎಸ್. ಸೋಮಶೇಖರ್‌ ಪ್ರಾಧಿಕಾರದ ಆವರಣದಲ್ಲಿ ‘ಅದಾಲತ್‌’ ನಡೆಸುವ ಕಾರ್ಯುಕ್ರಮವನ್ನು ಪ್ರತಿ ತಿಂಗಳೂ ನಡೆಸುತ್ತಿದ್ದರು. ಸಾರ್ವಜನಿಕರಿಂದ ಅಹವಾಲುಗಳ ಮಹಾಪೂರವೇ ಹರಿದುಬರುತ್ತಿತ್ತು. ಅವರು ಅಧಿಕಾರದಿಂದ ಕಳೆಗಿಳಿದ ಮೇಲೆ ಅದಾಲತ್‌ ನಿಂತು ಹೋಗಿದೆ. ಕಾಂಗ್ರೆಸ್‌ ಸರ್ಕಾರ ರಚನೆಯಾಗಿ ತಿಂಗಳುಗಳೇ ಉರುಳಿದ್ದರೂ ಈ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ನೇಮಿಸುವ ಕೆಲಸವಾಗಿಲ್ಲ. ಇದರಿಂದಾಗಿ ಅಧಿಕಾರಿಗಳದ್ದೇ ದರ್ಬಾರ್‌ ಮುಂದುವರಿದಿದೆ. ಈ ನಡುವೆ ಇನ್ನೊಂದು ಬಜೆಟ್‌ ಮಂಡನೆ ಕೆಲವೇ ದಿನಗಳಲ್ಲಿ ನಡೆಯಲಿದ್ದು ಆ ವೇಳೆಗೆ ಅಧ್ಯಕ್ಷರ ನೇಮಕದ ಸಾಧ್ಯತೆ ಇಲ್ಲ.
ಕೆಳಸೇತುವೆ ನಿರ್ಮಾಣವಾಗಲಿಲ್ಲ!
ವಿಜಯನಗರ 4ನೇ ಹಂತ 1ನೇ ಘಟ್ಟ ಹಾಗೂ 2ನೇ ಘಟ್ಟ ಬಡಾವಣೆಯಲ್ಲಿ ಮನೆ ಹಾಗೂ ಕಟ್ಟಡಗಳು ನಿರ್ಮಾಣವಾಗಿವೆ. ಅಲ್ಲಿ ವಾಹನಗಳ ಸಂಚಾರ ಹೆಚ್ಚುತ್ತಿದ್ದು ವರ್ತುಲ ರಸ್ತೆಯಲ್ಲಿ ಹಾದು ಹೋಗಲು ನಿವಾಸಿಗಳಿಗೆ ತೊಂದರೆ ಆಗುತ್ತಿದೆ; ಸುಗಮ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ. ಹೀಗಾಗಿ ಈ ಬಡಾವಣೆಯ ಸಂಪರ್ಕ ರಸ್ತೆಯಲ್ಲಿನ ಹೊರವರ್ತುಲ ರಸ್ತೆಗೆ ಕೆಳಸೇತುವೆ ನಿರ್ಮಿಸಲು ಯೋಜಿಸಲಾಗಿದ್ದು ₹ 2 ಕೋಟಿ ವಿನಿಯೋಗಿಸಲಾಗುವುದು ಎಂದು ಹೇಳಲಾಗಿತ್ತು. ಈ ಕಾಮಗಾರಿಯೂ ಕಾರ್ಯಗತಗೊಂಡಿಲ್ಲ. ಜೆ.‍‍ಪಿ.ನಗರ 3ನೇ ಹಂತ (ನಾಚನಹಳ್ಳಿ–ಕು‍ಪ್ಪಲೂರು 3ನೇ ಹಂತ) ಬಡಾವಣೆಯಿಂದ (ಅಕ್ಕಮಹಾದೇವಿ ರಸ್ತೆ ಮೂಲಕ) ಜೆ.ಪಿ. ನಗರ 3ನೇ ಹಂತದ ‘ಬಿ’ ವಲಯ ಮತ್ತು ಇತರ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸಲು ಕೆಳಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದ್ದು ಹೋದ ಸಾಲಿನಲ್ಲಿ ಯೋಜನಾ ವರದಿ ತಯಾರಿಸಲು ₹ 15 ಲಕ್ಷ ಕಾಯ್ದಿರಿಸಲಾಗಿತ್ತು. ಇದು ಪ್ರಗತಿಯಾಗಿರುವ ಮಾಹಿತಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT