ಭಾನುವಾರ, ನವೆಂಬರ್ 27, 2022
26 °C

ಭಾರತ ಜೋಡೊ ಯಾತ್ರೆಯಲ್ಲಿ ಕಾರ್ಯಕರ್ತರ ಗಮನ ಸೆಳೆದ ಕಂಟೇನರ್‌ಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಲೆ (ಮೈಸೂರು ಜಿಲ್ಲೆ): ಭಾರತ್‌ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಅವರ ತಂಡದವರಿಗೆ, ವಾಸ್ತವ್ಯಕ್ಕೆ, ಊಟ–ಉಪಾಹಾರಕ್ಕೆ, ವಿಶ್ರಾಂತಿ ಪಡೆಯುವುದಕ್ಕೆ ಮೊದಲಾದ ವ್ಯವಸ್ಥೆಯನ್ನು ಕಂಟೇನರ್‌ಗಳಲ್ಲೇ ಕಲ್ಪಿಸಿರುವುದು ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರ ಗಮನಸೆಳೆಯುತ್ತಿದೆ.

ರಸ್ತೆಯಲ್ಲಿ ಸಾಲಾಗಿ ಬರುತ್ತಿದ್ದ ಕಂಟೇನರ್‌ಗಳನ್ನು ನೋಡಲು ಅವರು ಮುಗಿಬಿದ್ದರು. ಒಳಗೇನಿದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಅವರದಾಗಿತ್ತು. ಆದರೆ, ಅದನ್ನು ನಿರ್ವಹಿಸುವವರು ಅವಕಾಶ ಕೊಡಲಿಲ್ಲ.

* ವಿವಿಧ ಕಡೆಗಳಿಂದ ನೂರಾರು ವಾಹನಗಳು ಬಂದಿದ್ದರಿಂದಾಗಿ ಟ್ರಾಫಿಕ್ ಜಾಮ್‌ ಉಂಟಾಯಿತು. ಸಂಚಾರ ಅಸ್ತವ್ಯಸ್ತವಾಯಿತು.

* ರಾಹುಲ್ ಮತ್ತು ನಾಯಕರ ಕೈಕುಲಕಲು ಮುಂದಾಗುತ್ತಿದ್ದ ಕಾರ್ಯಕರ್ತರನ್ನು ತಡೆಯಲು ಭದ್ರತಾ ಸಿಬ್ಬಂದಿ ಹರಸಾಹಸಪಟ್ಟರು.

* ಮಾರ್ಗದುದ್ದಕ್ಕೂ ‍ಪಕ್ಷದ ಹಾಗೂ ಪಾದಯಾತ್ರೆಯ ವಿಶೇಷ ಧ್ವಜಗಳು ರಾರಾಜಿಸಿದವು.

* ಇಡೀ ಯಾತ್ರೆಯುದ್ದಕ್ಕೂ ಸಾಗಲಿರುವ ‘ಭಾರತ ಯಾತ್ರಿ’ಗಳಿಗಾಗಿ ವಿಶ್ರಾಂತಿಗೆ ವಿಶೇಷ ಟೆಂಟ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಹಾಸಿಗೆಗಳಲ್ಲಿ ಮಲಗಿ ಅವರು ವಿರಮಿಸಿದರು. ವೈದ್ಯಕೀಯ ಸೌಲಭ್ಯವನ್ನು ಅಲ್ಲಿ ಕಲ್ಪಿಸಲಾಗಿತ್ತು.

* ಪಾಲ್ಗೊಂಡಿದ್ದ ಸಾವಿರಾರು ಮಂದಿಗೆ ಕಳಲೆ ಗೇಟ್ ಬಳಿ ಉಪಾಹಾರ–ಊಟದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಬಹಳ ಆಹಾರ ಪದಾರ್ಥ ವ್ಯರ್ಥವಾಯಿತು.

* ಪಾದಯಾತ್ರಿಗಳು ಹಾಗೂ ಮುಖಂಡರ ವಿಶ್ರಾಂತಿಗಾಗಿ ವಿಶೇಷವಾಗಿ ಟೆಂಟ್‌ಗಳ ಮಾಡಲಾಗಿತ್ತು. ಅಲ್ಲಿಗೆ ಕಾರ್ಯಕರ್ತರಿಗಾಗಲಿ ಅಥವಾ ಬೇರೆಯವರಿಗಾಗಲಿ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಬಿಗಿ ಭದ್ರತೆಯನ್ನು ಪೊಲೀಸರು ಒದಗಿಸಿದ್ದರು. ಶಾಸಕರು, ನಾಯಕರನ್ನೂ ಪೊಲೀಸರು ತಡೆದರು!

* ರಾಹುಲ್‌ ಜೊತೆ ಹೆಜ್ಜೆ ಹಾಕಲು ಹಾಗೂ ಫೋಟೊ ತೆಗೆಸಿಕೊಳ್ಳಲು ನಾಯಕರು ಮುಗಿಬಿದ್ದರು. ರಾಹುಲ್‌ ಭದ್ರತಾ ಸಿಬ್ಬಂದಿಯು, ಪ್ರತಿ ನಾಯಕರಿಗೆ ಕೆಲವೇ ನಿಮಿಷಗಳ ಅವಕಾಶ ಕೊಡುತ್ತಿದ್ದರು. ಹಿಂದೆ ಹೋಗುವಂತೆ ಸೂಚಿಸಿದ್ದರು! ಕೆಲವರನ್ನು ಅಲ್ಲಿಂದ ದೂಡುತ್ತಿದ್ದರು!

* ಮಾರ್ಗದುದ್ದಕ್ಕೂ ಅಲ್ಲಲ್ಲಿ ಕುಡಿಯುವ ನೀರು, ತಂಪು ಪಾನೀಯದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಈ ಜವಾಬ್ದಾರಿಯನ್ನು ಆ ಆಯಾ ಭಾಗದ ಮುಖಂಡರಿಗೆ ವಹಿಸಲಾಗಿತ್ತು.

* ಚಾಮರಾಜನಗರ ಜಿಲ್ಲೆಯಿಂದ ಮೈಸೂರು ಜಿಲ್ಲೆ ಪ್ರವೇಶಿಸುವ ಮಾರ್ಗ ಮಧ್ಯದಲ್ಲಿ ಮಳೆಯನ್ನೂ ಲೆಕ್ಕಿಸದೆ ಪಾದಯಾತ್ರಿಗಳು ಹೆಜ್ಜೆ ಹಾಕಿದರು.

* ಜಿಲ್ಲೆಯಲ್ಲಿ ವ್ಯವಸ್ಥೆಯ ನೇತೃತ್ವ ವಹಿಸಿದ್ದ ಮುಖಂಡ ಡಾ.ಎಚ್.ಸಿ.ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್‌ ಮೊದಲಾದವರು ಪಾದಯಾತ್ರೆಯಲ್ಲಿ ಭಾಗವಹಿಸುವ ಜೊತೆಗೆ, ಮೇಲ್ವಿಚಾರಣೆಯನ್ನೂ ನೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು