ನಂಜನಗೂಡು: ‘ಧರ್ಮಸ್ಥಳದ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆ ನಡೆಸುವುದು ಹಾಗೂ ದಲಿತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ನಟ ಉಪೇಂದ್ರ ಅವರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿ ತಾಲ್ಲೂಕು ಛಲವಾದಿ ಮಹಾಸಭಾ ಕಾರ್ಯಕರ್ತರು ನಗರದ ಹುಲ್ಲಹಳ್ಳಿ ವೃತ್ತದಲ್ಲಿ ಶನಿವಾರ ಪ್ರತಿಭಟಿಸಿದರು.
ಮೈಸೂರು– ಊಟಿ ಹೆದ್ದಾರಿ ತಡೆ ನಡೆಸಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಣ್ಣಿಗೆ ಕಪ್ಪುಬಟ್ಟೆ ಕಟ್ಟಿಕೊಂಡು ಹುಲ್ಲಹಳ್ಳಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪತ್ರಕರ್ತ ಕೆ.ದೀಪಕ್ ಮಾತನಾಡಿ, ‘ದಲಿತರ ಹಾಗೂ ಹಿಂದುಳಿದ ಜನಾಂಗದ ಮಹಿಳೆಯರ ಮೇಲಿನ ಶೋಷಣೆ, ಅಸಮಾನತೆ, ದೌರ್ಜನ್ಯ ನಿರಂತರವಾಗಿ ನಡೆಯುತ್ತಲೇ ಇವೆ. ಆದರೂ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಳು ಜಾಣ ಕುರುಡರಂತೆ ವರ್ತಿಸುತ್ತಿವೆ. ಸೌಜನ್ಯ ಪ್ರಕರಣಕ್ಕೆ ಯಾವುದೇ ನ್ಯಾಯ ಸಿಗುವ ನಂಬಿಕೆ ಇಲ್ಲ. ಆದ್ದರಿಂದ ಸೌಜನ್ಯ ಪ್ರಕರಣವನ್ನು ಮರುತನಿಖೆಗೆ ಒಳಪಡಿಸಬೇಕು. ದಲಿತರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಉಪೇಂದ್ರ ಮನೋರೋಗಿಯಾಗಿದ್ದು, ಅವರಿಗೆ ಶಿಕ್ಷೆ ನೀಡುವ ಬದಲು ಚಿಕಿತ್ಸೆ ನೀಡಬೇಕಾಗಿದೆ’ ಎಂದು ಹೇಳಿದರು.
ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಅಭಿ ನಾಗಭೂಷಣ್ ಮಾತನಾಡಿ, ‘ಸೌಜನ್ಯ ಮೇಲೆ ನಡೆದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ನ್ಯಾಯ ಸಿಗದಿರುವುದು ನೋವಿನ ಸಂಗತಿಯಾಗಿದೆ. ಸರ್ಕಾರ ಸೌಜನ್ಯ ಪ್ರಕರಣವನ್ನು ಮರುತನಿಖೆಗೆ ಆದೇಶ ಮಾಡಬೇಕು. ದಲಿತರನ್ನು ಅವಮಾನಿಸಿರುವ ನಟ ಉಪೇಂದ್ರ ಹಾಗೂ ಸಚಿವ ಎಸ್.ಎಸ್ .ಮಲ್ಲಿಕಾರ್ಜುನ್ ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆ ನಂತರ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಜನಸಂಗ್ರಾಮ ಪರಿಷತ್‌ನ ರಾಜ್ಯಾಧ್ಯಕ್ಷ ನಗರ್ಲೆ ವಿಜಯಕುಮಾರ್, ದಸಂಸ ಸಂಚಾಲಕ ಹಗಿನವಾಳು ಚಿಕ್ಕಣ್ಣ, ಉಮೇಶ್, ಮಲ್ಲಿಕಾರ್ಜುನ್, ರಾಜೇಂದ್ರ, ನಗರಸಭಾ ಸದಸ್ಯ ಯೋಗೀಶ್, ಸಿದ್ದು, ರಾಜೇಶ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.