ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಕ್ರಮ: ಇಲಾಖೆ ಮೌನ

ಕೆ.ನರಸಿಂಹಮೂರ್ತಿ
Published 1 ಫೆಬ್ರುವರಿ 2024, 6:22 IST
Last Updated 1 ಫೆಬ್ರುವರಿ 2024, 6:22 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರಿನಲ್ಲಿರುವ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ, 2022–23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ಎಸಗಿರುವುದು ಸ್ಪಷ್ಟವಾಗಿ ಗೊತ್ತಾಗಿದ್ದರೂ, ಮುಖ್ಯಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳದೆ, ಕೇವಲ ಎಚ್ಚರಿಕೆ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುಮ್ಮನಾಗಿದೆ.

ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಇಲಾಖೆಯ ಉಪನಿರ್ದೇಶಕರು ಶಾಲೆಗೆ ಭೇಟಿ ನೀಡಿದ ವೇಳೆಯೇ ಅಕ್ರಮಗಳು ಬೆಳಕಿಗೆ ಬಂದಿದ್ದರೂ ಕ್ರಮ ಕೈಗೊಂಡಿಲ್ಲ. ಈ ನಡುವೆ, ‘ಪ್ರಸಕ್ತ ವರ್ಷವೂ ಅದೇ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಅವರು ಪರೀಕ್ಷೆಯ ನೇತೃತ್ವ ವಹಿಸಲು ಅವಕಾಶ ನೀಡಬಾರದು’ ಎಂಬ ಆಗ್ರಹ ಕೇಳಿಬಂದಿದೆ. ಕರ್ತವ್ಯಲೋಪದ ಕುರಿತು ಡಿಡಿಪಿಐ ನೀಡಿದ್ದ ನೋಟಿಸ್‌ ಗಳು ಮತ್ತು ಮುಖ್ಯಶಿಕ್ಷಕರ ಉತ್ತರದ ಪ್ರತಿಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಅಧಿಕಾರಿಯ ಭೇಟಿ ವೇಳೆ, ಅನುಮಾನಾಸ್ಪದವಾಗಿ ಪರೀಕ್ಷಾ ಕೊಠಡಿ 8ರಿಂದ ಹೊರ ಬಂದ ವ್ಯಕ್ತಿಯು, ಶಾಲೆಯ ಪ್ರಥಮ ದರ್ಜೆ ಸಹಾಯಕ ಅಕ್ಷರ ಎಂದು ಮುಖ್ಯಶಿಕ್ಷಕ ಸುರೇಶ್‌ ಆರ್‌.ಸ್ಪಷ್ಟನೆ ನೀಡಿದ್ದರು. ಆದರೆ, ಪರೀಕ್ಷಾ ದಿನಗಳಲ್ಲಿ ಅವರ ಬದಲಿಗೆ, ಕಚೇರಿ ಸಹಾಯಕರಾಗಿ ಅದೇ ಶಾಲೆಯ ಶಿಕ್ಷಕ ಶೇಷಾದ್ರಿ ಕಾರ್ಯನಿರ್ವ ಹಿಸಿರುವುದನ್ನು ಅಧಿಕಾರಿಯು ಮರುಭೇಟಿಯ ವೇಳೆ ಪತ್ತೆ ಹಚ್ಚಿದ್ದರು. ಪ್ರಶ್ನೆ ಪತ್ರಿಕೆಯ ಅಭಿರಕ್ಷಕರಾಗಿದ್ದ ಅದೇ ಶಾಲೆಯ ಎಚ್‌.ಎ.ಮಹದೇವಯ್ಯ ನಿಯಮಾನುಸಾರ ದಾಖಲೆ ನಿರ್ವಹಿಸದಿ ರುವುದೂ ಕಂಡು ಬಂದಿತ್ತು. ಕೇಂದ್ರದ ಮುಖ್ಯ ಅಧೀಕ್ಷಕರೂ ಉತ್ತರ ಪತ್ರಿಕೆಗಳ ದಾಸ್ತಾನು, ದಿನಚ‌ರಿ ದಾಖಲೆಗಳನ್ನು ನಿರ್ವಹಿಸಿರಲಿಲ್ಲ.

ಕೇಂದ್ರದ ಮೊಬೈಲ್‌ ಫೋನ್‌ ಸ್ವಾಧೀನಾಧಿಕಾರಿಯಾಗಿ ರಾವಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಅಣ್ಣಯ್ಯ ಎಂಬುವವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಯ ಅನುಮೋದನೆ ಇಲ್ಲದೆ ಮುಖ್ಯಶಿಕ್ಷಕರು ನಿಯೋಜಿಸಿಕೊಂಡಿದ್ದು, ಅವರು ಎರಡು ದಿನ ಪರೀಕ್ಷಾ ಕರ್ತವ್ಯಕ್ಕೆ ಗೈರಾಗಿದ್ದ ಸಂಗತಿಯೂ ಬೆಳಕಿಗೆ ಬಂದಿತ್ತು.

19ರ ಬದಲು 25 ಶಿಕ್ಷಕರ ಸಹಿ!: ಕೇಂದ್ರದ ಕೊಠಡಿ ಮೇಲ್ವಿಚಾರಕ ರನ್ನಾಗಿ 19 ಶಿಕ್ಷಕರನ್ನು ಆ ವರ್ಷ ನಿಯೋಜಿಸಲಾಗಿತ್ತು. ಆದರೆ, ಹಾಜರಾತಿ ಪುಸ್ತಕದಲ್ಲಿ 25 ಮಂದಿ ಸಹಿ ಮಾಡಿದ್ದರು! ಹೆಚ್ಚುವರಿ ಯಾಗಿ 6 ಶಿಕ್ಷಕರನ್ನು ಮುಖ್ಯಶಿಕ್ಷಕರು ತಮ್ಮ ಹಂತದಲ್ಲೇ ನೇಮಕ ಮಾಡಿಕೊಂ ಡಿದ್ದರು. ಅಧಿಕಾರಿಯು ಏಪ್ರಿಲ್‌ 3ರಂದು ನಡೆದ ಪರೀಕ್ಷೆಯ ಸಿಸಿಟಿವಿ ಫುಟೇಜ್‌ ಕೇಳಿದಾಗ ಮುಖ್ಯಶಿಕ್ಷಕರು ‘ಪಾಸ್‌ವರ್ಡ್ ಗೊತ್ತಿಲ್ಲ’ ಎಂದು ಹೇಳಿ ವಾಪಸು ಕಳಿಸಿದ್ದರು. ‘ಪರೀಕ್ಷೆಯ ಪಾವಿತ್ರ್ಯ ಮತ್ತು ಗಾಂಭೀರ್ಯವನ್ನು ಅರಿತು ಪರೀಕ್ಷೆ ಕಾರ್ಯವನ್ನು ಪೂರ್ಣಗೊಳಿಸದ’ ಬಗ್ಗೆ ಏ.8ರಂದು ಮುಖ್ಯಶಿಕ್ಷಕರಿಗೆ ಡಿಡಿಪಿಐ ನೋಟಿಸ್‌ ನೀಡಿದ್ದರು. ಅದಕ್ಕೆ ಉತ್ತರಿಸಿದ್ದ ಮುಖ್ಯಶಿಕ್ಷಕರು, ‘ತಪ್ಪನ್ನು ತಿದ್ದಿಕೊಂಡು ಮುಂದಿನ ದಿನಗಳಲ್ಲಿ ಹೆಚ್ಚಿನ ಕಾಳಜಿ ವಹಿಸುವುದಾಗಿ ಪ್ರಮಾಣ ಮಾಡಿ, ವಿಷಯವನ್ನು ಮುಕ್ತಾಯಗೊಳಿಸಬೇಕು’ ಎಂದು ಕೋರಿದ್ದರು.

ಆಯುಕ್ತರಿಗೂ ದೂರು

‘‌ಪರೀಕ್ಷೆಯಲ್ಲಿ ಉತ್ತೀರ್ಣ ಮಾಡಿಸಿಕೊಡುವುದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಮುಖ್ಯಶಿಕ್ಷಕರು ಹಣ ವಸೂಲು ಮಾಡುತ್ತಿದ್ದಾರೆ. ಅದೇ ಶಾಲೆಯ ಶಿಕ್ಷಕರನ್ನು ಬೇರೆ ಶಾಲೆಯ ಹೆಸರಿನಲ್ಲಿ ಪರೀಕ್ಷೆಗೆ ನಿಯೋಜಿಸಿಕೊಂಡಿದ್ದಾರೆ’ ಎಂದು ಆರೋಪಿಸಿ ಇಲಾಖೆಯ ಆಯುಕ್ತರಿಗೆ ರಾವಂದೂರಿನ ಮಹದೇವು ಎಂಬುವವರು ಏಪ್ರಿಲ್‌ನಲ್ಲೇ ದೂರು ಸಲ್ಲಿಸಿದ್ದರು.

ನಂತರ, ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಲತಾ ಅವರು ತನಿಖೆ ಸಲುವಾಗಿ ಭೇಟಿ ನೀಡಿದಾಗಲೂ ಮುಖ್ಯಶಿಕ್ಷಕ ಸುರೇಶ್‌ ಸಂಬಂಧಿಸಿದ ದಾಖಲೆಗಳನ್ನು ನೀಡಿರಲಿಲ್ಲ. ಶಾಲೆಯ ಸಹಶಿಕ್ಷಕರು, ಅತಿಥಿ ಶಿಕ್ಷಕರು ಪರೀಕ್ಷಾ ಕರ್ತವ್ಯ ನಿರ್ವಹಿಸಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದರು. ಅವರ ವರದಿ ಆಧರಿಸಿ ನ.10ರಂದು ಮತ್ತೆ ಮುಖ್ಯಶಿಕ್ಷಕರಿಗೆ ನೋಟಿಸ್‌ ನೀಡಿದ್ದ ಡಿಡಿಪಿಐ, ದಾಖಲೆಗಳನ್ನು ಹಾಜರುಪಡಿಸಲು ಸೂಚಿಸಿ, ಮಂಡಳಿ ಸುತ್ತೋಲೆಯಂತೆ ಪರೀಕ್ಷೆ ನಡೆಸುವಂತೆ ಎಚ್ಚರಿಕೆ ನೀಡಿದ್ದರು.

ಬೆಳಕು ಚೆಲ್ಲಿದ ಮಾಹಿತಿ ಹಕ್ಕು!

ಕೆಲವು ವರ್ಷಗಳಿಂದ ಉತ್ತಮ ಫಲಿತಾಂಶದ ಕಾರಣಕ್ಕೂ ಗಮನ ಸೆಳೆದಿರುವ ಕೆಪಿಎಸ್‌ ಶಾಲೆಯ ಈ ಅಕ್ರಮ ಮತ್ತು ಮುಖ್ಯಶಿಕ್ಷಕರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂಬ ವಿಷಯ ಬೆಳಕಿಗೆ ಬರಲು ಕಾರಣ ಮಾಹಿತಿ ಹಕ್ಕು ಕಾಯ್ದೆ.

ರಾವಂದೂರಿನ ದಲಿತ ಸಂಘರ್ಷ ಸಮಿತಿ ಮುಖಂಡರಾದ ಆರ್‌.ಎಸ್‌.ದೊಡ್ಡಣ್ಣ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿ ಹಲವು ತಿಂಗಳು ಶ್ರಮ ವಹಿಸಿ ಮಾಹಿತಿಗಳನ್ನು ಕಲೆಹಾಕಿದ್ದಾರೆ. ‘ನಿಯಮ ಮೀರಿ, ಅದೇ ಶಾಲೆಯ ಅತಿಥಿ ಶಿಕ್ಷಕರನ್ನು ನಿಯೋಜಿಸಿದ ಪಟ್ಟಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅನುಮೋದನೆ ನೀಡಿದ್ದಾರೆ. ಕೆಲವು ಶಿಕ್ಷಕರಿಗೆ ಮಾಹಿತಿಯನ್ನೇ ನೀಡಿಲ್ಲ. ಆದರೆ ಅವರಿಗೆ ಪರೀಕ್ಷಾ ಕರ್ತವ್ಯ ನಿರ್ವಹಣೆ ಭತ್ಯೆ ನೀಡಿದಂತೆ ದಾಖಲೆ ಸೃಷ್ಟಿಸಲಾಗಿದೆ. ಕರ್ತವ್ಯ ನಿರ್ವಹಿಸಿದ್ದು ಯಾರೆಂಬ ಮಾಹಿತಿಯೂ ಇಲ್ಲ. ಮತ್ತೊಬ್ಬ ಶಿಕ್ಷಕರು ಎರಡು ದಿನ ಮಾತ್ರ ಪರೀಕ್ಷೆ ಕರ್ತವ್ಯ ನಿರ್ವಹಿಸಿದ್ದರೆ, ಆರು ದಿನದ ಭತ್ಯೆ ನೀಡಿದಂತೆ ದಾಖಲೆ ಸೃಷ್ಟಿಸಲಾಗಿದೆ. ಉಳಿದ ನಾಲ್ಕು ದಿನ ಕರ್ತವ್ಯ ನಿರ್ವಹಿಸಿದವರು ಯಾರೆಂಬ ಮಾಹಿತಿ ಇಲ್ಲ’ ಎನ್ನುತ್ತಾರೆ ದೊಡ್ಡಣ್ಣ.

ರಾವಂದೂರು ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ನಿಯಮ ಉಲ್ಲಂಘಿಸಿದರೂ ಕ್ರಮವಿಲ್ಲ. ಶಾಲೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸಬೇಕು. ಮುಖ್ಯಶಿಕ್ಷಕರಿಗೆ ಮತ್ತೆ ಅಲ್ಲಿಯೇ ಪರೀಕ್ಷೆಯ ಜವಾಬ್ದಾರಿ ನೀಡಬಾರದು.
–ಆರ್‌.ಎಸ್‌.ದೊಡ್ಡಣ್ಣ, ದಸಂಸ ಮುಖಂಡರು, ರಾವಂದೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT